ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳಲ್ಲಿ ಹನುಮಾನ್ ಚಾಲೀಸಾ ಹೇಳುವುದೂ ಮಹಾ ಅಪರಾಧ. ಶೋಭಾ ಯಾತ್ರೆ ನಡೆಸಲೂ ಅಲ್ಲಿ ಅವಕಾಶ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಜಸ್ಥಾನದಲ್ಲಿ ತಮ್ಮ ಚುನಾವಣಾ ಪ್ರಚಾರದ (Lok Sabha Election 2024) ವೇಳೆ ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ಎಂದೂ ಅಭಿವೃದ್ಧಿ ರಾಜಕಾರಣವನ್ನು ಮಾಡಿಯೇ ಇಲ್ಲ. ಅದು ಮಾಡುತ್ತಿರುವುದು ವೋಟ್ ಬ್ಯಾಂಕ್ ಪಾಲಿಟಿಕ್ಸ್, ಒಂದು ಸಮುದಾಯದ ಓಲೈಕೆ ರಾಜಕಾರಣ ಎಂದೂ ಮೋದಿ ಟೀಕಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ಮುಸಲ್ಮಾನರಿಗೆ ಮೊದಲ ಆದ್ಯತೆಯಾಗಿ ಹಂಚುತ್ತದೆ ಎಂಬ ಆರೋಪವನ್ನು ಮತ್ತೊಮ್ಮೆ ಪ್ರಸ್ತಾಪ ಮಾಡಿದ ಮೋದಿ, ನಾನು ಸತ್ಯ ಹೇಳಿದರೆ ಕಾಂಗ್ರೆಸ್‌ಗೆ ಮೆಣಸಿನ ಉರಿ ಬಿದ್ದಂತಾಗುತ್ತದೆ. ಈ ದೇಶದ ಸಂಪತ್ತಿನಲ್ಲಿ ಮುಸಲ್ಮಾನರಿಗೆ ಮೊದಲ ಪಾಲು ಸಿಗಬೇಕು ಎಂದು ಮನಮೋಹನ್ ಸಿಂಗ್ ತಾವು ಪ್ರಧಾನಿಯಾಗಿದ್ದ ಹೇಳಿದ್ದನ್ನು ನೀವು ಮರೆಯಬೇಡಿ. ನಿಮ್ಮ ಕೊರಳಿನ ಮಂಗಳಸೂತ್ರವನ್ನೂ ಅವರು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ದಲಿತರ ಮೀಸಲು ಮುಸಲ್ಮಾನರಿಗೆ
ದಲಿತರು ಮತ್ತು ಆದಿವಾಸಿಗಳ ಮೀಸಲ ಪಾಲನ್ನು ಕಿತ್ತು ಕಾಂಗ್ರೆಸ್ ಮುಸಲ್ಮಾನರಿಗೆ ನೀಡಲು ಸದಾ ಪ್ರಯತ್ನಿಸುತ್ತಿರುತ್ತದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟರ ಮೀಸಲಿನ ಪಾಲನ್ನು ಕಿತ್ತು ಮುಸಲ್ಮಾನರಿಗೆ ನೀಡಿತ್ತು. ಮುಂದೆ ಅಲ್ಲಿ ಬಿಜೆಪಿ ಸರ್ಕಾರ ಬಂದಾಗ ಅದನ್ನು ರದ್ದುಪಡಿಸಿ ಎಸ್‌ಸಿ, ಎಸ್‌ಟಿಯವರಿಗೆ ನ್ಯಾಯ ದೊರಕಿಸಲಾಯಿತು. ಆಂಧ್ರ ಪ್ರದೇಶದ ಕಾಂಗ್ರೆಸ್ ಸರ್ಕಾರ ಕೂಡ ಎಸ್‌ಸಿ, ಎಸ್‌ಟಿ ಮೀಸಲು ಕಡಿಮೆ ಮಾಡಿ ಮುಸಲ್ಮಾನರ ಮೀಸಲು ಹೆಚ್ಚಿಸಲು ನಾಲ್ಕು ಬಾರಿ ವಿಧೇಯಕ ಮಂಡಿಸಿ ಕಾಯಿದೆ ರೂಪಿಸಿತ್ತು. ಆದರೆ ಕೋರ್ಟ್ ಮಧ್ಯಪ್ರವೇಶದ ಕಾರಣ ಅದು ಸಾಧ್ಯವಾಗಲಿಲ್ಲ. 2012ರಲ್ಲಿ ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರ್ಕಾರ ಹೀಗೆಯೇ ಮಾಡಲು ಹೊರಟಿತ್ತು. ಎಸ್‌ಸಿ-ಎಸ್‌ಟಿ ಮತ್ತು ಆಸಿವಾಸಿಗಳಿಗೆ ನಾನು ಯಾವ ಕಾರಣಕ್ಕೂ ಮೀಸಲಿನಲ್ಲಿ ನಷ್ಟ ಮಾಡಲು ಬಿಡುವುದಿಲ್ಲ. ಇದು ಮೋದಿ ಗ್ಯಾರಂಟಿ ಎಂದು ಮೋದಿ ಘೋಷಿಸಿದರು.
ನುಸುಳುಕೋರರಿಗೆ ಸೌಲಭ್ಯ ಕೊಡಬೇಕೆ?
ನುಸುಳುಕೋರರಿಗೆ, ದೇಶದ್ರೋಹಿಗಳಿಗೆ ಕಾಂಗ್ರೆಸ್ ಈ ದೇಶದ ಸಂಪತ್ತು ಹಂಚಲು ಬಯಸುತ್ತದೆ ಎಂದು ತೀವ್ರ ವಾಗ್ದಾಳಿ ನಡೆಸಿದ ಮೋದಿ, ನೆರೆಯ ದೇಶದಿಂದ ಪದೇಪದೆ ದಾಳಿಗೆ ಒಳಗಾಗುವ ನಮ್ಮ ವೀರ ಸೈನಿಕರಿಗೆ ಯಾವುದೇ ನೆರವು ನೀಡುತ್ತಿರಲಿಲ್ಲ. ಆದರೆ ನಾವು ನಮ್ಮ ಯೋಧರಿಗೆ ಎಲ್ಲ ರೀತಿಯ ನೆರವು ನೀಡುತ್ತಿದ್ದೇವೆ. ಅವರ ಆತ್ಮಸ್ಥೈರ್ಯ ಹೆಚ್ಚಿಸುತ್ತಿದ್ದೇವೆ ಎಂದರು.
ಕಾಂಗ್ರೆಸ್ ಪ್ರಣಾಳಿಕೆಯನ್ನು ನೀವು ಎಚ್ಚರಿಕೆಯಿಂದ ಓದಿ. ಅವರು ಅಧಿಕಾರಕ್ಕೆ ಬಂದರೆ ನಿಮ್ಮ ಸಂಪತ್ತಿನ ಸರ್ವೆ ನಡೆಸುತ್ತಾರಂತೆ. ಆ ಬಳಿಕ ಅದನ್ನು ಅಗತ್ಯ ಇದ್ದವರಿಗೆ ಹಂಚುತ್ತಾರಂತೆ. ಆ ಅಗತ್ಯ ಇದ್ದವರು ಯಾರು ಎಂಬುದು ನಿಮಗೆ ಗೊತ್ತಿರಲಿ ಎಂದು ಮೋದಿ ಹೇಳಿದರು.
ಉತ್ತರ ಪ್ರದೇಶದಲ್ಲೂ ಮೋದಿ ಗುಡುಗಿದ್ದರು
ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನೀಡಿದ್ದ ಸಂಪತ್ತು ಮರುಹಂಚಿಕೆಯ ವಿಚಾರದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಉತ್ತರ ಪ್ರದೇಶದ ಅಲಗಢದಲ್ಲೂ ಗುಡುಗಿದ್ದರು. ಕಾಂಗ್ರೆಸ್‌ನವರಿಗೆ ಮಹಿಳೆಯರ ಮಂಗಳಸೂತ್ರದ ಮೇಲೂ ಕಣ್ಣು ಬಿದ್ದಿದೆ. ಮಾತೆಯರು, ಭಗಿನಿಯರ ಚಿನ್ನವನ್ನು ದೋಚುವ ದುರುದ್ದೇಶ ಇವರದ್ದು ಎಂದು ವಾಗ್ದಾಳಿ ನಡೆಸಿದ್ದರು.
“ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ನಿಮ್ಮ ಆದಾಯ ಮತ್ತು ಆಸ್ತಿಯ ಮೇಲೆ ಕಣ್ಣಿಟ್ಟಿವೆ. ಕಾಂಗ್ರೆಸ್ ತನ್ನಪ್ರಣಾಳಿಕೆಯಲ್ಲಿ ಇದನ್ನು ಉಲ್ಲೇಖಿಸಿದೆ. ಮಹಿಳೆಯರು ಚಿನ್ನವನ್ನು ಆಭರಣಗಳ ರೂಪದಲ್ಲಿ ಧರಿಸಲು ಮಾತ್ರವಲ್ಲ, ಅದನ್ನು ರಸಕ್ಷಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಈಗ ಅವರ ಕಣ್ಣು ಮಹಿಳೆಯರ ಮಂಗಳಸೂತ್ರದ ಮೇಲೆ ನೆಟ್ಟಿದೆ. ತಾಯಿ ಮತ್ತು ಸಹೋದರಿಯರ ಚಿನ್ನವನ್ನು ದೋಚುವುದು ಇವರ ಉದ್ದೇಶ. ಹೀಗಾಗಿ ಅವರು ಅಧಿಕಾರಕ್ಕೆ ಬಂದರೆ ನಿಮ್ಮ ಮಂಗಳಸೂತ್ರವೂ ಸುರಕ್ಷಿತವಲ್ಲʼʼ ಎಂದು ಮೋದಿ ಹೇಳಿದ್ದರು.
ʼʼಒಂದು ವೇಳೆ ನೀವು ಹಳ್ಳಿಯಲ್ಲಿ ಪಿತ್ರಾರ್ಜಿತ ಮನೆಯನ್ನು ಹೊಂದಿದ್ದು, ನಗರದಲ್ಲಿ ಮಕ್ಕಳಿಗಾಗಿ ಚಿಕ್ಕ ಫ್ಲ್ಯಾಟ್ ಖರೀದಿಸಿದ್ದೀರಿ ಎಂದಿಟ್ಟುಕೊಳ್ಳೋಣ. ಆಗ ಅವರು ಎರಡರ ಪೈಕಿ ಒಂದನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲಿದ್ದಾರೆ. ಇದು ಮಾವೋವಾದಿ ಮತ್ತು ಕಮ್ಯೂನಿಷ್ಟ್ ಮನೋಭಾವದ ಯೋಚನಾ ಲಹರಿ. ಹೀಗೆ ಮಾಡಿಯೇ ಅವರು ಹಲವು ದೇಶಗಳನ್ನು ನಾಶಪಡಿಸಿದ್ದಾರೆ. ಈಗ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ʼಒಂಡಿಯಾʼ ಒಕ್ಕೂಟ ಆ ನಿಯಮವನ್ನು ಭಾರತದಲ್ಲಿ ಜಾರಿಗೊಳಿಸಲು ಮುಂದಾಗಿದೆʼʼ ಎಂದು ಪ್ರಧಾನಮಂತ್ರಿ ದೂರಿದ್ದರು. ದೇಶದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದು ಕಾಂಗ್ರೆಸ್ ಈ ಹಿಂದೆ ಹೇಳಿತ್ತು. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ದೇಶದ ಆಸ್ತಿಯನ್ನು ವಿತರಿಸುವುದಾಗಿ ತಿಳಿಸಿತ್ತು. “”ಕಾಂಗ್ರೆಸ್ ಅಧಿಕಾರ ಬಂದರೆ, ಈ ದೇಶದಲ್ಲಿ ಯಾರು ಎಷ್ಟು ಆಸ್ತಿ ಹೊಂದಿದ್ದಾರೆ ಎಂದು ಸಮೀಕ್ಷೆ ಕೈಗೊಳ್ಳಲಾಗುವುದು. ಬಳಿಕ ಈ ಆಸ್ತಿಯನ್ನು ಮರು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದುʼʼ ಎಂದು ರಾಹುಲ್ ಗಾಂಧಿ ಹೇಳಿದ್ದರು. ಈ ಬಗ್ಗೆ ಮೋದಿ ತಮ್ಮ ಚುನಾವಣಾ ಭಾಷಣದಲ್ಲಿ ಪ್ರಸ್ತಾಪಿಸಿ ಕಾಂಗ್ರೆಸನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Lok Sabha Election 2024: ವಿಧಾನ ಪರಿಷತ್ ಸ್ಥಾನಕ್ಕೆ ಕೆ.ಪಿ. ನಂಜುಂಡಿ ರಾಜೀನಾಮೆ; ಕಾಂಗ್ರೆಸ್ ಸೇರ್ಪಡೆ?