ನವ ದೆಹಲಿ: ಜೂನ್ 23ರಂದು ವಿಚಾರಣೆಗಾಗಿ ತನ್ನ ಮುಂದೆ ಹಾಜರಾಗುವಂತೆ ಕಾಂಗ್ರೆಸ್ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಹೊಸದಾಗಿ ನೋಟಿಸ್ ಜಾರಿ ಮಾಡಿದೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಹೆಸರಿನಲ್ಲಿ ನಡೆದ ಹಣದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಈ ತನಿಖೆ ನಡೆಯುತ್ತಿದೆ. ಇಡಿ ಮುಂದೆ ಜೂನ್ 8ರಂದು ಅವರು ಹಾಜರಾಗಬೇಕಿತ್ತು. ಆದರೆ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಮೂರು ವಾರಗಳ ಕಾಲಾವಕಾಶವನ್ನು ಕೋರಿದ್ದರು.
ಈದೇ ವೇಳೆ, ಈ ಕುರಿತು ಪ್ರತಿಭಟನೆ ನಡೆಸಲು ಕಾಂಗ್ರೆಸ್ ಪಕ್ಷ ಚಿಂತನೆ ನಡೆಸಿದೆ. ಬಿಜೆಪಿ ಸೇಡಿನ ರಾಜಕೀಯ ನಡೆಸುತ್ತಿದೆ ಎಂದು ಅದು ಆರೋಪಿಸಿದೆ. ರಾಜಧಾನಿಯಲ್ಲಿರುವ ಇಡಿ ಕಚೇರಿಯ ವರೆಗೆ ಪಾದಯಾತ್ರೆ ನಡೆಸಲು ಚಿಂತಿಸಿದೆ. ಇದು ರಾಹುಲ್ ಗಾಂಧಿ ಅವರು ಇಡಿ ಮುಂದೆ ವಿಚಾರಣೆಗೆ ಹಾಜರಾಗಲಿರುವ ದಿನಗಳ ಮೊದಲು ನಡೆಯಲಿದೆ.
ಈ ಕುರಿತು ಕಾಂಗ್ರೆಸ್ ತನ್ನ ಎಲ್ಲಾ ಸಂಸದರು ಮತ್ತು ಹಿರಿಯ ಪದಾಧಿಕಾರಿಗಳನ್ನು ಸೋಮವಾರ ಬೆಳಗ್ಗೆ ಅಕ್ಬರ್ ರಸ್ತೆಯ ಪ್ರಧಾನ ಕಚೇರಿಯಲ್ಲಿ ಸಭೆ ಸೇರಲು ಕರೆದಿದೆ. ರಾಜ್ಯ ಉಸ್ತುವಾರಿಗಳ ಸಭೆಯನ್ನೂ ಕರೆದು, ದೇಶಾದ್ಯಂತ ಪ್ರತಿಭಟನೆಗಳನ್ನು ಆಯೋಜಿಸಲೂ ನಿರ್ಧರಿಸಿದೆ.
ನ್ಯಾಷನಲ್ ಹೆರಾಲ್ಡ್- ಎಜೆಎಲ್‌ನ ಸಾಲದ ಹಣದ ಅವ್ಯವಹಾರದ ಕುರಿತು ತನಿಖೆ ನಡೆಸಲು ಇಡಿ ಉದ್ದೇಶಿಸಿದೆ. ಆದರೆ ಇಂಥ ಯಾವುದೇ ಅವ್ಯವಹಾರವನ್ನು ಪಕ್ಷ ನಿರಾಕರಿಸಿದ್ದಲ್ಲದೆ, ಬಿಜೆಪಿ ರಾಜಕೀಯ ಸೇಡು ತೀರಿಸಿಕೊಳ್ಳಲು ಆಧಾರ ರಹಿತ ಆರೋಪ ಮಾಡಿದೆ ಎಂದು ದೂರಿದೆ.
ಇದನ್ನೂ ಓದಿ: ಸೋನಿಯಾ ಗಾಂಧಿಗೆ ಕೊರೊನಾ ಸೋಂಕು; ಇ.ಡಿ ವಿಚಾರಣೆಗೆ ಹಾಜರಾಗೋದು ಡೌಟ್