Site icon Vistara News

Neha Murder Case: ಕಾಂಗ್ರೆಸ್‌ನಿಂದ ಜಿಹಾದಿ ಕರ್ನಾಟಕ ಸೃಷ್ಟಿ, ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಆರ್. ಅಶೋಕ್‌ ಗುಡುಗು

Neha Murder case Congress creates jihadi Karnataka R Ashok

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದ ಸರ್ಕಾರ ಬಂದ ನಂತರ ಜಿಹಾದಿ ಕರ್ನಾಟಕ ಸೃಷ್ಟಿಯಾಗಿದೆ. ಹಿಂದೂಗಳ ರಕ್ತಕ್ಕೆ ಬೆಲೆಯೇ ಇಲ್ಲ. ಹುಬ್ಬಳ್ಳಿಯಲ್ಲಿ ನಡೆದ ಲವ್‌ ಜಿಹಾದ್‌ನಲ್ಲಿ ಹಿಂದೂ ಯುವತಿ ನೇಹಾಳನ್ನು ಬರ್ಬರವಾಗಿ ಕೊಲೆ (Neha Murder Case) ಮಾಡಿರುವುದನ್ನು ಬಿಜೆಪಿ ಉಗ್ರವಾಗಿ ವಿರೋಧಿಸುತ್ತದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್‌ (R Ashok) ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಆರ್. ಅಶೋಕ್‌ ಅವರು ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಹಿಂದೂಗಳ ಕಗ್ಗೊಲೆ, ಲವ್‌ ಜಿಹಾದ್‌, ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ. ಲವ್‌ ಜಿಹಾದ್‌ಗೆ ಕಾಂಗ್ರೆಸ್‌ನವರು ಕೂಡ ಒಳಗಾಗಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಲವ್‌ ಜಿಹಾದ್‌ನಲ್ಲಿ ಹಿಂದೂ ಯುವತಿ ಬರ್ಬರ ಕೊಲೆಗೀಡಾಗಿರುವುದನ್ನು ಬಿಜೆಪಿ ಉಗ್ರವಾಗಿ ವಿರೋಧಿಸುತ್ತದೆ. ಕರ್ನಾಟಕವನ್ನು ಡಾನ್‌ಗಳು ನಡೆಸುತ್ತಿರುವಂತಹ ಪರಿಸ್ಥಿತಿ ಇದ್ದು, ಸರ್ಕಾರ ಕಾನೂನನ್ನು ಗೂಂಡಾಗಳಿಗೆ ನೀಡಿದೆ ಎಂದರು.

ಇದನ್ನು ಲವ್‌ ಪ್ರಕರಣ, ಕುಟುಂಬದ ಸಮಸ್ಯೆ ಎಂದು ಹೇಳುವ ಕಾಂಗ್ರೆಸ್‌ ನಾಯಕರಿಗೆ ನಾಚಿಕೆಯಾಗಬೇಕು. ಇದು ಲವ್‌ ಜಿಹಾದ್‌ ಎಂದು ಯುವತಿಯ ತಂದೆ, ಕಾಂಗ್ರೆಸ್‌ ಕಾರ್ಪೊರೇಟರ್‌ ಹೇಳುತ್ತಿದ್ದಾರೆ. ಕುಟುಂಬದವರು ಕಣ್ಣೀರು ಹರಿಸುವಾಗ ಕೊಲೆಯಾದ ಯುವತಿಯ ಬಗ್ಗೆ ಹೀನಾಯವಾಗಿ ಮಾತನಾಡುತ್ತಿದ್ದಾರೆ. ಚುನಾವಣೆಯಲ್ಲಿ ಇದು ಚರ್ಚೆಯಾದರೆ ಕಾಂಗ್ರೆಸ್‌ ಮುಖಕ್ಕೆ ಮಂಗಳಾರತಿಯಾಗಲಿದೆ ಎಂಬ ಕಾರಣಕ್ಕೆ ಸಿದ್ದರಾಮಯ್ಯನವರೇ ಈ ರೀತಿ ಮಾತನಾಡುತ್ತಿದ್ದಾರೆ. ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲದಂತೆ ಸರ್ಕಾರ ನಡೆದುಕೊಳ್ಳುತ್ತಿದೆ ಎಂದರು.

ಲವ್‌ ಜಿಹಾದ್‌ ಮಾಡುವವರಿಗೆ ಪಾಸ್‌ಪೋರ್ಟ್‌

ಲವ್‌ ಜಿಹಾದ್‌, ಕೊಲೆ, ಗಲಭೆ ಮಾಡುವವರಿಗೆ ಮಾಡುವವರಿಗೆ ಪಾಸ್‌ಪೋರ್ಟ್‌ ಹಾಗೂ ವೀಸಾ ನೀಡಲಾಗಿದೆ. ಬೆಳಗಾವಿಯಲ್ಲಿ ದಲಿತ ಮಹಿಳೆಯನ್ನು ಬೆತ್ತಲೆ ಮಾಡಿದ್ದಕ್ಕೆ ಆ ಪ್ರಕರಣವನ್ನೇ ಮುಚ್ಚಿಹಾಕುವ ಪ್ರಯತ್ನ ನಡೆದಿತ್ತು. ಶಿವಮೊಗ್ಗದಲ್ಲಿ ಕೋಮು ಗಲಭೆ ನಡೆದಾಗ ಪೊಲೀಸರು ಏನೂ ಮಾಡಲಿಲ್ಲ. ಬಾಂಬ್‌ ಸ್ಪೋಟವನ್ನು ಸಚಿವರೇ ವ್ಯಾಪಾರದ ವ್ಯಾಜ್ಯ ಎಂದರು. ರಾಮೋತ್ಸವದಲ್ಲಿ ಜೈ ಶ್ರೀರಾಮ್‌ ಎಂದಾಗ ಮುಸ್ಲಿಮರು ಹಲ್ಲೆ ಮಾಡಿದ್ದರು. ಹನುಮಾನ್‌ ಚಾಲೀಸಾ ಹಾಕಿದ್ದಕ್ಕೆ ಮುಸ್ಲಿಮರು ಥಳಿಸಿದ್ದಾರೆ. ಗದಗದಲ್ಲಿ ಒಂದೇ ಕುಟುಂಬದ ಕೊಲೆಯಾಗಿದೆ. ಕುಣಿಗಲ್‌ನಲ್ಲಿ ಬಿಜೆಪಿ ಬೆಂಬಲಿಗನ ತೋಟಕ್ಕೆ ಬೆಂಕಿ ಹಚ್ಚಲಾಗಿದೆ. ಚಿತ್ರನಟಿಗೆ ಹಲ್ಲೆ ಮಾಡಲಾಗಿದೆ. ಕೋಲಾರದಲ್ಲಿ ಶ್ರೀರಾಮನ ಫ್ಲೆಕ್ಸ್‌ ಕಿತ್ತುಹಾಕುವ ಕೆಲಸ ನಡೆದಿದೆ. ಇಷ್ಟಾದರೂ ಸಿಎಂ ಸಿದ್ದರಾಮಯ್ಯ ಏನೂ ಮಾಡಿಲ್ಲ. ಓಲೈಕೆ ರಾಜಕಾರಣ ಪರಾಕಾಷ್ಠೆಗೆ ತಲುಪಿದೆ ಎಂದು ದೂರಿದರು.

ಕಾಂಗ್ರೆಸ್‌ನ ಹೊಸ ತೆರಿಗೆ

ಮಾರ್ಗಸೂಚಿ ದರ ಹೆಚ್ಚಳ ಮಾಡಿದ್ದು, ಒಬ್ಬ ಬಿಲ್ಡರ್‌ 7-8 ಕೋಟಿ ರೂ. ಕಾಂಗ್ರೆಸ್‌ಗೆ ಕೊಡಬೇಕಿದೆ. ಇದೇ ಕಾಂಗ್ರೆಸ್‌ನ ಹೊಸ ತೆರಿಗೆ. ಸರ್ಕಾರ ನೀಡುತ್ತಿರುವ ಗ್ಯಾರಂಟಿಗಳನ್ನು ತೆರಿಗೆಯ ಮೂಲಕವೇ ನೀಡಲಾಗುತ್ತಿದೆ. ಯಾವುದೇ ಯೋಜನೆಯನ್ನು ಜೇಬಿನಿಂದ ನೀಡುತ್ತಿಲ್ಲ. ಇದರಿಂದ ಸಂಗ್ರಹವಾದ ಹಣವನ್ನು ಬೇರೆ ರಾಜ್ಯಗಳಿಗೆ ಕಳುಹಿಸಲಾಗುತ್ತಿದೆ. ಜೆಸಿಬಿಯಲ್ಲಿ ಅಗೆಯುವಂತೆ ಹಣ ಲೂಟಿ ಮಾಡಲಾಗುತ್ತಿದೆ ಎಂದು ಆರ್.‌ ಅಶೋಕ್‌ ಕಿಡಿಕಾರಿದರು.

ಕಾಂಗ್ರೆಸ್‌ ಕೋಟ್ಯಂತರ ಜನರಿಗೆ ಚೊಂಬು ನೀಡಿದೆ. 10 ಕೆಜಿ ಅಕ್ಕಿ ಎಂದು ಹೇಳಿ ಒಂದು ಕೆಜಿ ಕೂಡ ನೀಡಿಲ್ಲ. ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳಿ ಕೊಲೆ, ಸುಲಿಗೆ ಅರಾಜಕತೆ ನಡೆಯುತ್ತಿದೆ. ಇವೆಲ್ಲದರಲ್ಲೂ ಜನರಿಗೆ ಚೊಂಬು ನೀಡಲಾಗಿದೆ. ಕೃಷ್ಣೆಯ ಕಣ್ಣೀರು ಒರೆಸಲು 50 ಸಾವಿರ ಕೋಟಿ ರೂ. ಎಂದು 5 ರೂಪಾಯಿ ನೀಡಿಲ್ಲ. ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯಲ್ಲೂ ಹಗರಣ ಮಾಡಲಾಗಿದೆ. ಭೂಮಿ, ಆಕಾಶ, ಪತ್ರಿಕಾ ರಂಗದಲ್ಲೂ ಕಾಂಗ್ರೆಸ್‌ ಲೂಟಿ ಮಾಡಿದೆ. ಜನರಿಗೆ ಒಂದು ಚೊಂಬು ನೀರು ಕೂಡ ನೀಡಿಲ್ಲ ಎಂದರು.

ಕಾಂಗ್ರೆಸ್‌ಗೆ ಸವಾಲು

ದೇಶ ಆಳಿದ ಹಾಗೂ ರಾಜ್ಯವನ್ನು ಆಳುತ್ತಿರುವ ಕಾಂಗ್ರೆಸ್‌ ಸರ್ಕಾರ ಏನು ಕೊಡುಗೆ ನೀಡಿದೆ ಎನ್ನುವುದನ್ನು ತಿಳಿಸಲಿ. ಈ ಬಾರಿ ಕರ್ನಾಟಕದ ಜಿಡಿಪಿ ದೇಶದ ಜಿಡಿಪಿಗಿಂತ ಕಡಿಮೆಯಾಗಿದೆ. ರಾಜ್ಯದ ಆರ್ಥಿಕ ಸ್ಥಿತಿ ಏನು ಎನ್ನುವುದನ್ನು ಬಜೆಟ್‌ನಲ್ಲಿ ತಿಳಿಸಿಲ್ಲ. ಈ ಬಾರಿಯ ಆದಾಯ ತೀವ್ರವಾಗಿ ಇಳಿಕೆಯಾಗಿದೆ. ಅಭಿವೃದ್ಧಿ ಕಾರ್ಯಗಳು ಇಲ್ಲವಾಗಿರುವುದರಿಂದ ಜಿಡಿಪಿ ಬೆಳೆಯುವುದಿಲ್ಲ ಎಂದು ಆರ್.‌ ಅಶೋಕ್‌ ಹೇಳಿದರು.

Exit mobile version