ಗದಗ/ರಾಮನಗರ: ರಾಜ್ಯದಲ್ಲಿ ಆಪರೇಷನ್ ಹಸ್ತ (Operation Hasta) ಬಿರುಸುಗೊಂಡ ಲಕ್ಷಣ ಕಾಣಿಸುತ್ತಿದೆ. ಕಾಂಗ್ರೆಸ್ ಪಕ್ಷವು ಹಾಲಿ ಶಾಸಕರನ್ನು ಬಿಟ್ಟು ಮಾಜಿ ಶಾಸಕರನ್ನು ಟಾರ್ಗೆಟ್ (Former MLAs Target) ಮಾಡಿದಂತೆ ಕಂಡುಬರುತ್ತಿದ್ದು, ಅದಕ್ಕೆ ಪೂರಕ ಎಂಬಂತೆ ಬಿಜೆಪಿ ಹಾಗೂ ಜೆಡಿಎಸ್‌ನ ಇಬ್ಬರು ಮಾಜಿ ಶಾಸಕರು (BJP and JDS Ex MLAs) ಕೈವಶವಾಗಿದ್ದಾರೆ. ಶಿರಹಟ್ಟಿಯ ಮಾಜಿ ಶಾಸಕ (Shirahatti Ex BJP MLA) ಬಿಜೆಪಿಯ ರಾಮಣ್ಣ ಲಮಾಣಿ (Ramanna Lamani) ಅವರು ಆಗಸ್ಟ್ 10ರಂದು ಕಾಂಗ್ರೆಸ್ ಸೇರುತ್ತಿದ್ದರೆ, ಚನ್ನಪಟ್ಟಣದ ಮಾಜಿ ಶಾಸಕ (Channapatna Ex JDS MLA) ಜೆಡಿಎಸ್‌ನ ಎಂ.ಸಿ. ಅಶ್ವತ್ಥ್ (MC Ashwath) ಅವರು ಅಕ್ಟೋಬರ್ 2ರಂದು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪ್ರವೇಶ ಮಾಡುತ್ತಿದ್ದಾರೆ.
ಎಂ.ಸಿ. ಅಶ್ವತ್ಥ್ ಸೇರ್ಪಡೆಗೆ ಸಂಸದ ಡಿ.ಕೆ. ಸುರೇಶ್ ಸಾರಥ್ಯ
ಚನ್ನಪಟ್ಟಣ ಜೆಡಿಎಸ್ ಮಾಜಿ ಶಾಸಕ ಎಂ.ಸಿ. ಅಶ್ವತ್ಥ್ ಅವರು ಅಕ್ಟೋಬರ್ 2 ರಂದು ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆಯಾಗುವುದನ್ನು ಅವರೇ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಕಾರ್ಯಕರ್ತರ ಜೊತೆಗೆ ಸಭೆ ನಡೆಸಿ ತೀರ್ಮಾನ ಮಾಡಲಾಗಿದೆ ಎಂದು ಅವರು ಪ್ರಕಟಿಸಿದರು.
ಅಧಿಕೃತ ಘೋಷಣೆ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಹೇಳಿಕೆ ನೀಡಿದ ಅಶ್ವತ್ಥ್ ಅವರು, ʻʻಬಿಜೆಪಿ-ಜೆಡಿಎಸ್ ಹೊಂದಾಣಿಕೆ ಅವರ ವಯಕ್ತಿಕವಾದ ವಿಷಯ. ಇಲ್ಲಿಯವರೆಗೆ ಜಾತ್ಯತೀತ ಅಂತ ಹೋರಾಟ ಮಾಡಿಕೊಂಡು ಬಂದಿದ್ದರು. ದೇವೇಗೌಡರು ಇರೋವರೆಗೂ ಈ ಪಕ್ಷಕ್ಕೆ ಗೌರವ ಇರುತ್ತದೆ ಅಂತ ತಿಳಿದುಕೊಂಡಿದ್ದೆವು. ದೇವೇಗೌಡರಿಗೆ ಅದೇನ್ ಮಾಡಿದರೋ ಗೊತ್ತಿಲ್ಲ. ಜಾತ್ಯತೀತತೆ ಬಿಟ್ಟು ಹೋಗ್ತಿರಲಿಲ್ಲ ಅಂತ ತಿಳಿದಿದ್ದೆವು. ಆದರೆ ಈಗ ಹೀಗಾಗಿದೆʼʼ ಎಂದರು. ʻʻಚನ್ನಪಟ್ಟಣ, ಹಾಸನದಲ್ಲಿ ಅಲ್ಪಸಂಖ್ಯಾತರು ದೊಡ್ಡ ಮಟ್ಟದಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿದ್ದರು. ಅವರಿಗೆ ಈಗ ಪಕ್ಷ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದು ಬೇಸರ ಉಂಟು ಮಾಡಿದೆʼʼ ಎಂದು ಹೇಳಿದರು.
ʻʻವೈಯಕ್ತಿಕವಾಗಿ ನನಗೆ ಬೇಸರವಾಗಿದ್ದು ಕುಟುಂಬ ರಾಜಕಾರಣ. ನಾವು 25-30 ವರ್ಷಗಳಿಂದ ಹೋರಾಟ ಮಾಡ್ತಿದ್ದೇವೆ. ನಮಗೆ ನಾಯಕರಾಗಿ ಅವರು ಸಹಕಾರ ಕೊಡಬೇಕಲ್ವಾ..? ಕಾಂಗ್ರೆಸ್ ನವರಾದ್ರೂ ಡಿ.ಕೆ ಬ್ರದರ್ಸ್ ನಮಗೆ ಸಹಕಾರ ಕೊಡ್ತಿದ್ದಾರೆ. ಎಲ್ಲೇ ಇದ್ರೂ ನಮ್ಮ ಫೋನ್ ತೆಗೆದು ಮಾತಾಡ್ತಾರೆʼʼ ಎಂದು ಹೇಳುವ ಮೂಲಕ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ರಾಮಣ್ಣ ಲಮಾಣಿ ಸೇರ್ಪಡೆಗೆ ಶೆಟ್ಟರ್ ಪೌರೋಹಿತ್ಯ
ಗದಗ ಜಿಲ್ಲೆ ಶಿರಹಟ್ಟಿ ಕ್ಷೇತ್ರದಿಂದ ಕಳೆದ ಬಾರಿ ಬಿಜೆಪಿ ಟಿಕೆಟ್ ವಂಚಿತರಾಗಿದ್ದ ರಾಮಣ್ಣ ಲಮಾಣಿ ಅವರು ಅಕ್ಟೋಬರ್ 10ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ. ಇವರ ಆಪರೇಷನ್ ಪೌರೋಹಿತ್ಯ ವಹಿಸಿದವರು ಮಾಜಿ ಸಿಎಂ ಜಗದೀಶ್ ಶೆಟ್ಟರ್.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸ್ವಗ್ರಾಮ ಕುಂದ್ರಳ್ಳಿ ನಿವಾಸದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಮಣ್ಣ ಲಮಾಣಿ ಅವರು, ʻʻಬಿಜೆಪಿಯಲ್ಲಿ ಎರಡು ಬಾರಿ ಶಾಸಕನಾಗಿ ಅಭಿವೃದ್ಧಿ ಕೈಗೊಂಡಿದ್ದೇನೆ. ಶಿರಹಟ್ಟಿ ಮುಂಡರಗಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳಲ್ಲಿ ಹೆಚ್ಚಿನ ಅಭಿವೃದ್ಧಿ ಮಾಡಿದ್ದೇನೆ. ಮೂರನೇ ಬಾರಿಗೆ ಕೊನೆಯ ಹಂತವರೆಗೂ ಎಲ್ಲಾ ಕಡೆ ಕಾರ್ಯಕ್ರಮ ಮಾಡಿಸಿದರು. ಇದಕ್ಕೆ ಎಲ್ಲ ಖರ್ಚು ವೆಚ್ಚಗಳನ್ನು ಮಾಡಿದ್ದೆ. ಆದರೆ ಕೊನೆ ಹಂತದಲ್ಲಿ ಬಿಜೆಪಿಯಿಂದ ನನಗೆ ಟಿಕೆಟ್ ಕೊಡಲಿಲ್ಲʼʼ ಎಂದು ಬೇಸರ ವ್ಯಕ್ತಪಡಿಸಿದರು.
ಇಷ್ಟೆಲ್ಲ ಆದರೂ ನಾನು ನಿಷ್ಠಾವಂತನಾಗಿ ಬಿಜೆಪಿಯಲ್ಲಿ ದುಡಿಯುತ್ತಿದ್ದೆ. ಆದರೆ ಈಗಿನ ಶಾಸಕ ಡಾ. ಚಂದ್ರು ಲಮಾಣಿ ಅವರು ನಮ್ಮವರನ್ನು ಹತ್ತಿರಕ್ಕೆ ಸೇರಿಸುತ್ತಿಲ್ಲ.. ನೀನು ರಾಮಣ್ಣ ಲಮಾಣಿ ಅಭಿಮಾನಿ ನಮ್ಮ ಹತ್ತಿರ ಬರಬೇಡ ಅನ್ನುತ್ತಾರಂತೆ.. ಇದರಿಂದ ಮನಸ್ಸಿಗೆ ಬೇಜಾರು ಆಗಿ ಜಗದೀಶ್ ಶೆಟ್ಟರ್ ಜೊತೆ ಮಾತುಕತೆ ಮಾಡಿದ್ದೆ.. ಡಿ.ಕೆ.ಶಿವಕುಮಾರನ್ನು ಭೇಟಿಯಾಗಿ ಬಂದಿದ್ದೇನೆ ಎಂದು ರಾಮಣ್ಣ ಲಮಾಣಿ ಹೇಳಿದರು.
ʻʻಅಕ್ಟೋಬರ್ 10ಕ್ಕೆ ಬಹಳಷ್ಟು ಮಾಜಿ ಶಾಸಕರು ಬರುತ್ತಿದ್ದಾರೆ ಅಂತ ಡಿಕೆಶಿ ಹೇಳಿದ್ದಾರೆ. ಅಂದು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿ ಎಂದು ತಿಳಿಸಿದ್ದಾರೆʼʼ ಎಂದು ಹೇಳಿದರು.