ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ (Parliament Election 2024) ರಾಜ್ಯದಲ್ಲಿ ಮಿತ್ರ ಪಕ್ಷವಾಗಿರುವ ಜೆಡಿಎಸ್‌ಗೆ (BJP-JDS Coalition) ಮಂಡ್ಯ, ಹಾಸನ ಮತ್ತು ಕೋಲಾರ ಕ್ಷೇತ್ರಗಳನ್ನು ಬಿಟ್ಟುಕೊಡಲು ಬಿಜೆಪಿ ಸಮ್ಮತಿಸಿದೆ ಎಂದು ತಿಳಿದುಬಂದಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ (HD Kumaraswamy) ಮತ್ತು ಬಿಜೆಪಿ ಹಿರಿಯ ನಾಯಕ, ಕೇಂದ್ರ ಸಚಿವ ಅಮಿತ್ ಶಾ (Amit Shah) ಅವರ ನಡುವೆ ಗುರುವಾರ ನಡೆದ ಮಹತ್ವದ ಮಾತುಕತೆಯಲ್ಲಿ ಈ ಸೀಟು ಹಂಚಿಕೆ ಫೈನಲ್ (Seat Sharing final) ಆಗಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರೂ ಸೀಟು ಹಂಚಿಕೆ ಆಗಿರಲಿಲ್ಲ. ಜೆಡಿಎಸ್ ಹಾಸನ, ಮಂಡ್ಯ, ಕೋಲಾರ ಸೇರಿದಂತೆ ಆರು ಕ್ಷೇತ್ರಗಳ ಬೇಡಿಕೆ ಇಟ್ಟಿತ್ತು. ಇದರಲ್ಲಿ ಬಿಜೆಪಿ ಐದು ಕ್ಷೇತ್ರಗಳನ್ನು ಬಿಟ್ಟುಕೊಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಜೆಡಿಎಸ್‌ನ ಪ್ರಮುಖ ಕಣಗಳೆಂದೇ ಹೆಸರಾದ ಹಾಸನ ಮತ್ತು ಮಂಡ್ಯದ ವಿಚಾರದಲ್ಲೇ ಸಾಕಷ್ಟು ಗೊಂದಲಗಳು ಮೂಡಿದ್ದವು. ಅಲ್ಲಿನ ಸ್ಥಳೀಯ ನಾಯಕರು ಯಾವ ಕಾರಣಕ್ಕೂ ಈ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡಬಾರದು ಎಂದು ಸಾರ್ವಜನಿಕವಾಗಿಯೇ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಿದ್ದರು. ಇದು ಜೆಡಿಎಸ್‌ಗೆ ಭಾರಿ ಮುಜುಗರ ಉಂಟು ಮಾಡಿತ್ತು.
ಈ ಹಿನ್ನೆಲೆಯಲ್ಲಿ ಇದನ್ನು ಉನ್ನತ ಮಟ್ಟದಲ್ಲೇ ಫೈನಲ್ ಮಾಡಿಕೊಳ್ಳಲು ಎಚ್.ಡಿ ಕುಮಾರಸ್ವಾಮಿ ಬಯಸಿದ್ದರು. ಅದರಂತೆ ಬಿಜೆಪಿ-ಜೆಡಿಎಸ್ ಮೈತ್ರಿ ಕುದುರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಮಿತ್ ಶಾ ಅವರ ಬಳಿಯೇ ಇದರ ಚರ್ಚೆಗೆ ನಿರ್ಧರಿಸಿದ್ದರು. ಅಂತೆಯೇ ಅಮಿತ್ ಶಾ ಅವರ ಜತೆ ಮಾತುಕತೆ ಫಿಕ್ಸ್ ಮಾಡಿಕೊಂಡ ಕುಮಾರಸ್ವಾಮಿ ಬುಧವಾರ ದೆಹಲಿಗೆ ತೆರಳಿದ್ದರು. ಗುರುವಾರ ಬೆಳಗ್ಗೆ ಅಮಿತ್ ಶಾ ಮತ್ತು ಎಚ್.ಡಿ ಕುಮಾರಸ್ವಾಮಿ ಅವರು ಸುಮಾರು 20 ನಿಮಿಷಗಳ ಮಾತುಕತೆ ನಡೆಸಿ ಮೂರು ಕ್ಷೇತ್ರಗಳನ್ನು ಫೈನಲ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅವರ ಮಾತುಕತೆಯ ಸಂದರ್ಭದಲ್ಲಿ ಎಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡಾ ಇದ್ದರು.
ಇದನ್ನೂ ಓದಿ : Sumalatha Ambarish : ಬಿಜೆಪಿ ಟಿಕೆಟ್ ಸಿಗದಿದ್ರೆ ಪ್ಲ್ಯಾನ್ ಬಿ ರೆಡಿ ಎಂದ ಸುಮಲತಾ ಅಂಬರೀಷ್
ಮಂಡ್ಯ ವಿಚಾರದಲ್ಲಿ ಮೇಲುಗೈ ಸಾಧಿಸಿದ ಕುಮಾರಸ್ವಾಮಿ
ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪ್ರಾಬಲ್ಯದ ಕ್ಷೇತ್ರವಾಗಿದ್ದರೂ ಹಾಲಿ ಸಂಸದರಾಗಿರುವ ಸುಮಲತಾ ಅವರು ಬಿಜೆಪಿಯ ಬೆಂಬಲಿಗರಾಗಿರುವುದರಿಂದ ಈ ಕ್ಷೇತ್ರವನ್ನು ಬಿಜೆಪಿಗೇ ಬಿಟ್ಟು ಕೊಡಬೇಕು ಎಂಬ ಬೇಡಿಕೆ ಜೋರಾಗಿತ್ತು. ಸ್ವತಃ ಸುಮಲತಾ, ಮಾಜಿ ಶಾಸಕರಾದ ಕೆ.ಸಿ. ನಾರಾಯಣ ಗೌಡ ಮೊದಲಾದವರು ನೇರವಾಗಿಯೇ ಇದನ್ನು ಪ್ರತಿಪಾದಿಸಿದ್ದರು. ಹೀಗಾಗಿ ಜೆಡಿಎಸ್‌ಗೆ ಇದು ಸಿಗುತ್ತದೆಯೇ ಇಲ್ಲವೇ ಎನ್ನುವ ಗೊಂದಲ ಮೂಡಿತ್ತು. ಇದೀಗ ಕುಮಾರಸ್ವಾಮಿ ಅವರು ಹೈಕಮಾಂಡ್ ಮಟ್ಟದಲ್ಲಿ ಈ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಮೇಲುಗೈ ಸಾಧಿಸಿದ್ದಾರೆ.
ಉಳಿದ ಕ್ಷೇತ್ರಗಳು ಯಾವುವು? ಮುಂದೆ ನಿರ್ಧಾರ
ಸದ್ಯ ಮಂಡ್ಯ, ಹಾಸನ, ಕೋಲಾರ ಟಿಕೆಟ್‌ನ್ನು ಜೆಡಿಎಸ್ ಗೆ ನೀಡಲು ನಿರ್ಧರಿಸಲಾಗಿದೆ. ಆದರೆ, ಜೆಡಿಎಸ್ ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಕ್ಷೇತ್ರವನ್ನೂ ಕೇಳಿದೆ. ಅದರ ಬಗ್ಗೆ ಮತ್ತೊಮ್ಮೆ ಚರ್ಚೆ ಮಾಡೋಣ ಎಂದು ಎಚ್.ಡಿಕೆಗೆ ಬಿಜೆಪಿ ಹೈಕಮಾಂಡ್ ಸಲಹೆ ನೀಡಿದೆ. ಇದರ ಬಗ್ಗೆ ಹೈಕಮಾಂಡ್ ರಾಜ್ಯದ ನಾಯಕರ ಜತೆ ಇನ್ನೊಂದು ಸುತ್ತಿನ ಚರ್ಚೆ ನಡೆಸಲಿದೆ.
ಈ ನಡುವೆ, ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸುತ್ತಿರುವ ಹಾಸನದ ಪ್ರೀತಂ ಗೌಡ, ಮಂಡ್ಯದ ಕೆ.ಸಿ. ನಾರಾಯಣ ಗೌಡ ಸೇರಿದಂತೆ ಇತರ ನಾಯಕರಿಗೆ ಸುಮ್ಮನಿರುವಂತೆ ಸೂಚಿಸುವಂತೆಯೂ ಎಚ್.ಡಿಕೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.