Site icon Vistara News

Parliament Session: ಇಂದೂ ಲೋಕಸಭೆಯಲ್ಲಿ ಕೋಲಾಹಲ ಎಬ್ಬಿಸುತ್ತ ಜಾತಿ ವಿವಾದ? ಅಧಿವೇಶನದ Live ಇಲ್ಲಿ ನೋಡಿ

Parliament Session

ನವದೆಹಲಿ: ಸಂಸತ್‌ನಲ್ಲಿ ಬಜೆಟ್‌ ಅಧಿವೇಶನ (Parliament Session) ನಡೆಯುತ್ತಿದ್ದು, ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ವಾಗ್ವಾದಕ್ಕೆ ಕಾರಣವಾಗುತ್ತಿದೆ. ಇಂದು ಕೂಡ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿವಿಧ ಕಾವೇರಿದ ಚರ್ಚೆ ನಡೆಯುವ ಸಾಧ್ಯತೆ ಇದೆ. ಜುಲೈ 23ರಂದು ಮಂಡಿಸಲಾದ 2024-25ರ ಕೇಂದ್ರ ಬಜೆಟ್ ಮತ್ತು ಕೇರಳದ ವಯನಾಡಿನಲ್ಲಿ ನಡೆದ ಭೀಕರ ಭೂಕುಸಿತದ ಬಗ್ಗೆಯೂ ಚರ್ಚೆ ನಡೆಯಲಿದೆ ಎನ್ನಲಾಗಿದೆ.

ಈ ಮಧ್ಯೆ ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮೇಲಿನ ಚರ್ಚೆಯ ವೇಳೆ ಮಂಗಳವಾರ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ರಾಹುಲ್ ಗಾಂಧಿ ಅವರ ಜಾತಿಯ ಬಗ್ಗೆ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಈ ಬಗ್ಗೆ ಇಂದು ಪ್ರತಿಪಕ್ಷಗಳು ಧ್ವನಿ ಎತ್ತುವ ಸಾಧ್ಯತೆ ಇದೆ.

ಏನಿದು ವಿವಾದ?

ಸಂಸತ್‌ನಲ್ಲಿ ಜಾತಿಗಣತಿ (Caste Census) ಕುರಿತು ರಾಹುಲ್‌ ಗಾಂಧಿ ಪ್ರಸ್ತಾಪಿಸಿದ್ದು, ಲೋಕಸಭೆಯಲ್ಲಿ ನಾವು ಜಾತಿಗಣತಿ ಮಂಡಿಸುತ್ತೇವೆ ಎಂದಿದ್ದರು.  ಇದಕ್ಕೆ ಅನುರಾಗ್‌ ಠಾಕೂರ್‌ ತಿರುಗೇಟು ನೀಡಿ, “ತಮ್ಮ ಜಾತಿಯೇ ಯಾವುದೆಂದು ಗೊತ್ತಿರದವರು ಜಾತಿ ಗಣತಿ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ಹೇಳಿದ್ದರು. ಇದು ಪ್ರತಿಪಕ್ಷ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.

ಅನುರಾಗ್‌ ಠಾಕೂರ್‌ ಹೇಳಿಕೆಗೆ ರಾಹುಲ್‌ ಗಾಂಧಿ ಪ್ರತ್ಯುತ್ತರ ನೀಡಿ, “ನೀವು ನನ್ನನ್ನು ಎಷ್ಟು ಅವಮಾನಿಸುತ್ತೀರೋ ಅವಮಾನಿಸಿ. ಆದರೆ ನಾವು ಸಂಸತ್‌ನಲ್ಲಿ ಜಾತಿಗಣತಿ ವಿಧೇಯಕ ಮಂಡಿಸುತ್ತೇವೆ ಎಂಬುದನ್ನು ನೀವು ಮರೆಯದಿರಿ” ಎಂದು ವಾಗ್ದಾಳಿ ನಡೆಸಿದ್ದರು. “ಅನುರಾಗ್‌ ಠಾಕೂರ್‌ ಅವರು ನನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ನನ್ನನ್ನು ಅವಮಾನಿಸಿದ್ದಾರೆ. ಆದರೆ ನಾನು ಅವರು ಕ್ಷಮೆ ಕೇಳಿ ಎಂಬುದಾಗಿ ಆಗ್ರಹಿಸುವುದಿಲ್ಲ. ಎಷ್ಟು ಬೇಕಾದರೂ ಅವಮಾನ ಮಾಡಲಿ” ಎಂದು ಹೇಳಿದ್ದರು. ಹೀಗಾಗಿ ಈ ವಿಚಾರವಾಗಿ ಸಂತತ್ತಿನಲ್ಲಿ ಇಂದೂ ಕೋಲಾಹಲ ಉಂಟಾಗುವ ಸಾಧ್ಯತೆ ಇದೆ.

18ನೇ ಲೋಕಸಭೆ ತನ್ನ ಮೊದಲ ಬಜೆಟ್ ಅಧಿವೇಶನವನ್ನು ಜುಲೈ 22ರಂದು ಪ್ರಾರಂಭಿಸಿದೆ. ಆಗಸ್ಟ್ 12ರವರೆಗೆ 16 ಅಧಿವೇಶನಗಳನ್ನು ನಿಗದಿಪಡಿಸಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 23ರಂದು ಈ ಅವಧಿಯ ಎನ್‌ಡಿಎ ಸರ್ಕಾರದ ಮೊದಲ ಬಜೆಟ್ ಮಂಡಿಸಿದ್ದು, ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಬಜೆಟ್ ಬಗ್ಗೆ ಪ್ರತಿಪಕ್ಷ ಆಕ್ಷೇಪ ವ್ಯಕ್ತಪಡಿಸಿದ್ದು, ಬಿಜೆಪಿಯೇತರ ರಾಜ್ಯಗಳಿಗೆ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದೆ. ಬಜೆಟ್‌ನಲ್ಲಿ ಕೇವಲ ಬಿಹಾರ ಮತ್ತು ಆಂಧ್ರ ಪ್ರದೇಶವನ್ನು ಮಾತ್ರ ಉಲ್ಲೇಖಿಸಲಾಗಿದೆ ಕಾಂಗ್ರೆಸ್‌ ಹೇಳಿದೆ.

ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಂಗಳವಾರ ರಾಜ್ಯಸಭೆಯಲ್ಲಿ ಬಜೆಟ್ ವಿರುದ್ಧ ಕಿಡಿಕಾರಿದ್ದರು. ಇದಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಮಂಡಿಸಲಾದ ಯಾವುದೇ ಬಜೆಟ್​ನಲ್ಲಿ ಎಲ್ಲ ರಾಜ್ಯಗಳ ಹೆಸರು ಎತ್ತಲಾಗಿದ್ದರೆ ತೋರಿಸಿ ಎಂದು ಸವಾಲು ಹಾಕಿದ್ದಾರೆ.

ಸಾಮಾಜಿಕ ವಲಯಕ್ಕೆ ಕಡಿಮೆ ಹಣ ಕೊಡಲಾಗಿದೆ ಎನ್ನುವ ಆರೋಪವನ್ನೂ ತಳ್ಳಿ ಹಾಕಿದ ಅವರು ಕೃಷಿ, ಶಿಕ್ಷಣ ಮತ್ತು ಉದ್ಯೋಗ ಸೇರಿದಂತೆ ವಿವಿಧ ಸಾಮಾಜಿಕ ವಲಯಗಳಿಗೆ ಫಂಡಿಂಗ್ ಅನ್ನು ಈ ಬಜೆಟ್​ನಲ್ಲಿ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಹೀಗಾಗಿ ಇಂದು ಉಭಯ ಸದನಗಳಲ್ಲಿಯೂ ಕಾವೇರಿದ ಚರ್ಚೆ ನಡೆಯುವ ಎಲ್ಲ ಸಾಧ್ಯತೆಯೂ ದಟ್ಟವಾಗಿದೆ.

ಇದನ್ನೂ ಓದಿ: Anurag Thakur: ತಮ್ಮ ಜಾತಿಯೇ ಗೊತ್ತಿರದ ರಾಹುಲ್‌ ಗಾಂಧಿಯಿಂದ ಜಾತಿಗಣತಿ ಪ್ರಸ್ತಾಪ ಎಂದ ಅನುರಾಗ್‌ ಠಾಕೂರ್‌!

Exit mobile version