Site icon Vistara News

Parliament Session: ಸಂಸತ್‌ನ ಬಜೆಟ್‌ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜು; Live ಇಲ್ಲಿ ವೀಕ್ಷಿಸಿ

Parliament Session

ನವದೆಹಲಿ: ಸಂಸತ್‌ನ ಬಜೆಟ್‌ ಅಧಿವೇಶನ (Parliament Session) ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಭಾರಿ ಚರ್ಚೆಗೆ ಸಾಕ್ಷಿಯಾಗುತ್ತಿದೆ. ಇಂದು ಕೂಡ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕೋಲಾಹಲ ನಡೆಯುವ ನಿರೀಕ್ಷೆ ಇದೆ. ಜುಲೈ 23ರಂದು ಮಂಡಿಸಲಾದ 2024-25ರ ಕೇಂದ್ರ ಬಜೆಟ್ ಮತ್ತು ದೆಹಲಿಯ ಕೋಚಿಂಗ್ ಸೆಂಟರ್‌ನಲ್ಲಿ ನಡೆದ ಯುಪಿಎಸ್‌ಸಿ ಆಕಾಂಕ್ಷಿಗಳ ಸಾವಿನ ಪ್ರಕರಣ ಉಭಯ ಸದನಗಳಲ್ಲಿ ಇಂದು ಕೂಡ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ.

ಬೆಳಿಗ್ಗೆ 11 ಗಂಟೆಗೆ ಸಂಸತ್ತಿನ ಕಲಾಪಗಳು ಪುನರಾರಂಭಗೊಳ್ಳಲಿದ್ದು, ಉಭಯ ಸದನಗಳು 2024-25ರ ಬಜೆಟ್ ಮೇಲಿನ ಚರ್ಚೆಗಳನ್ನು ಮುಂದುವರಿಸಲಿವೆ. ಸಂಸತ್ತಿನ ಆವರಣದಲ್ಲಿ ಮಾಧ್ಯಮಗಳನ್ನು ನಿರ್ಬಂಧಿಸುವ ಆದೇಶವನ್ನು ತೆಗೆದುಹಾಕುವಂತೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಸೋಮವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ (Om Birla) ಅವರಿಗೆ ಮನವಿ ಸಲ್ಲಿಸಿದ್ದಾರೆ.

ಇದಕ್ಕೆ ಉತ್ತರಿಸಿದ್ದ ಸ್ಪೀಕರ್‌ ಅವರು ಸಂಸತ್ತಿನ ಕಾರ್ಯವಿಧಾನದ ನಿಯಮಗಳ ಬಗ್ಗೆ ರಾಹುಲ್‌ ಗಾಂಧಿಗೆ ನೆನಪಿಸಿದ್ದರು. ಅಂತಹ ವಿಷಯಗಳನ್ನು ಸದನದಲ್ಲಿ ಚರ್ಚಿಸುವ ಬದಲು ಖಾಸಗಿಯಾಗಿ ಚರ್ಚಿಸಬೇಕೆಂದು ಸಲಹೆ ನೀಡಿದ್ದರು. ಬಳಿಕ ರಾಹುಲ್ ಗಾಂಧಿ ಅವರು ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒ’ಬ್ರಿಯಾನ್, ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಮತ್ತು ಶಿವಸೇನೆ-ಯುಬಿಟಿ ಸಂಸದೆ ಪ್ರಿಯಾಂಕಾ ಚತುರ್ವೇದಿ ಮತ್ತಿತತ ಪ್ರತಿಪಕ್ಷದ ನಾಯಕರೊಂದಿಗೆ ಮಾಧ್ಯಮ ಸಿಬ್ಬಂದಿಯನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು.

ನಂತರ ಓಂ ಬಿರ್ಲಾ ಅವರು ಪತ್ರಕರ್ತರ ಗುಂಪನ್ನು ಭೇಟಿಯಾಗಿ, ಅವರ ಕುಂದುಕೊರತೆಗಳನ್ನು ಪರಿಹರಿಸಲಾಗುವುದು ಮತ್ತು ಅವರ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಉತ್ತಮ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದರು.

ಲೋಕಸಭೆಯಲ್ಲಿ ಅಬ್ಬರಿಸಿದ ರಾಹುಲ್‌ ಗಾಂಧಿ

ಇನ್ನು ಸೋಮವಾರ ಬಜೆಟ್‌ ಮೇಲಿನ ಚರ್ಚೆ ವೇಳೆ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅದರಲ್ಲೂ, ಮಹಾಭಾರತದ ಚಕ್ರವ್ಯೂಹವನ್ನು ಉಲ್ಲೇಖಿಸಿದ ರಾಹುಲ್‌ ಗಾಂಧಿ ಅವರು ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ಬಾಣ ಪ್ರಯೋಗಿಸಿದ್ದರು. “ಮಹಾಭಾರತದ ಚಕ್ರವ್ಯೂಹದಂತೆ  ಈಗಲೂ ಒಂದು ಚಕ್ರವ್ಯೂಹ ರಚಿಸಲಾಗಿದೆ. ದೇಶದ ಜನರು ಆ ಚಕ್ರವ್ಯೂಹಕ್ಕೆ ಸಿಲುಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿ 6 ಮಂದಿಯು ಈ ಚಕ್ರವ್ಯೂಹವನ್ನು ನಿಯಂತ್ರಿಸುತ್ತಿದ್ದಾರೆ” ಎಂದು ಹೇಳಿದ್ದರು.

“ಚಕ್ರವ್ಯೂಹದಲ್ಲಿ ತುಂಬ ಜನ ಇರುತ್ತಾರೆ. ಆದರೆ, ಚಕ್ರವ್ಯೂಹದ ಮಧ್ಯದಲ್ಲಿ 6 ಜನ ಇರುತ್ತಾರೆ ಹಾಗೂ ಅವರು ಇಡೀ ಚಕ್ರವ್ಯೂಹವನ್ನು ನಿಯಂತ್ರಿಸುತ್ತಾರೆ. ಆಧುನಿಕ ಕಾಲದ ಚಕ್ರವ್ಯೂಹವನ್ನು ಕೂಡ ಆರು ಜನ ನಿಯಂತ್ರಿಸುತ್ತಿದ್ದಾರೆ. ನರೇಂದ್ರ ಮೋದಿ, ಅಮಿತ್‌ ಶಾ, ಮೋಹನ್‌ ಭಾಗವತ್‌, ಅಜಿತ್‌ ದೋವಲ್‌, ಮುಕೇಶ್‌ ಅಂಬಾನಿ ಹಾಗೂ ಗೌತಮ್‌ ಅದಾನಿಯೇ ಈಗ ಕಮಲದ ಆಕಾರದ ಚಕ್ರವ್ಯೂಹವನ್ನು ನಿಯಂತ್ರಿಸುತ್ತಿದ್ದಾರೆ” ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದರು.

ಅಗ್ನಿಪಥ್‌ ಯೋಜನೆಗೆ ವಿರೋಧ

ಇದರ ಜತೆಗೆ ರಾಹುಲ್‌ ಗಾಂಧಿ ಅಗ್ನಿಪಥ್‌ ಯೋಜನೆ ಬಗ್ಗೆಯೂ ಪ್ರಸ್ತಾವಿಸಿ ವಿರೋಧ ವ್ಯಕ್ತಪಡಿಸಿದ್ದರು. ʼʼಸೇನೆಯ ಸೈನಿಕರನ್ನು ಅಗ್ನಿವೀರ್ ಹೆಸರಿನ ಚಕ್ರವ್ಯೂಹದಲ್ಲಿ ಸಿಲುಕಿಸಲಾಯ್ತು. ಈ ಬಜೆಟ್‌ನಲ್ಲಿ ಅಗ್ನಿವೀರರ ಪಿಂಚಣಿಗಾಗಿ ಒಂದು ರೂಪಾಯಿಯನ್ನು ತೆಗೆದಿರಿಸಿಲ್ಲ. ನಿಮ್ಮನ್ನು ದೇಶಭಕ್ತರೆಂದು ಕರೆದುಕೊಳ್ಳುವ ನೀವು ಅಗ್ನಿವೀರರ ಪಿಂಚಣಿಗಾಗಿ ಅನುದಾನ ಘೋಷಣೆ ಮಾಡಿಲ್ಲ. ನಿಮ್ಮ ಚಕ್ರವ್ಯೂಹದಿಂದ ಹೊರಬರಲು ರೈತರು ಎಂಎಸ್‌ಪಿ ಲೀಗಲ್ ಗ್ಯಾರಂಟಿಯನ್ನು ಕೇಳಿದ್ದರು. ಆದ್ರೆ ನೀವು ರೈತರ ಜತೆ ಮಾತನಾಡಲು ಸಿದ್ಧವಿಲ್ಲʼʼ ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: Rahul Gandhi: ರಾಹುಲ್‌ ಮಾತಿಗೆ ಹಣೆ ಚಚ್ಚಿಕೊಂಡು, ಮುಖ ಮುಚ್ಚಿಕೊಂಡ ಸಚಿವೆ ನಿರ್ಮಲಾ: ಭಾರೀ ವೈರಲಾಗ್ತಿದೆ ಈ ವಿಡಿಯೋ

ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಅವರು, ʼʼಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅಗ್ನಿಪಥ್ ಯೋಜನೆಯ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆʼʼ ಎಂದು ಹೇಳಿದ್ದರು. ಜತೆಗೆ ಯೋಜನೆ ಬಗ್ಗೆ ಚರ್ಚೆಗೆ ಸಿದ್ದ ಎಂದು ಸವಾಲು ಸ್ವೀಕರಿಸಿದ್ದರು. ಹೀಗಾಗಿ ಇಂದು ಕೂಡ ಸದನದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುವ ಸಾಧ್ಯತೆ ದಟ್ಟವಾಗಿದೆ.

Exit mobile version