Site icon Vistara News

Parliament Session: ವಕ್ಫ್ ಕಾಯ್ದೆ 1995ರ ತಿದ್ದುಪಡಿ ಮಸೂದೆ ಇಂದು ಮಂಡನೆ ಸಾಧ್ಯತೆ; ಅಧಿವೇಶನದ Live ಇಲ್ಲಿ ನೋಡಿ

Parliament Session

ನವದೆಹಲಿ: ಸಂಸತ್‌ನಲ್ಲಿ ನಡೆಯುತ್ತಿರುವ ಬಜೆಟ್‌ ಅಧಿವೇಶನ (Parliament Session) ಎರಡು ದಿನಗಳ ಬಿಡುವಿನ ಬಳಿಕ ಇಂದು ಪುನರಾರಂಭವಾಗಲಿದ್ದು, ಕಾವೇರಿದ ಚರ್ಚೆಗೆ ಉಭಯ ಸದನಗಳು ಸಾಕ್ಷಿಯಾಗಲಿವೆ. ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರವು ವಕ್ಫ್‌ ಕಾಯ್ದೆಗೆ (Waqf Act) ತಿದ್ದುಪಡಿ ತರಲು ಮುಂದಾಗಿದ್ದು, ಇಂದು ಸಂಸತ್‌ನಲ್ಲಿ ವಿಧೇಯಕ ಮಂಡಿಸುವ ಸಾಧ್ಯತೆ ಇದೆ. ಈಗಾಗಲೇ ಇದಕ್ಕೆ ವಿರೋಧ ವ್ಯಕ್ತವಾಗಿದ್ದು, ಸಂಸತ್‌ನಲ್ಲಿ ಕೋಲಾಹಲ ನಡೆಯಲಿದೆ.

ಜತೆಗೆ ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಧನವಿನಿಯೋಗ ಮಸೂದೆ ಮತ್ತು ಹಣಕಾಸು ಮಸೂದೆಯನ್ನು ಮಂಡಿಸಲಿದ್ದಾರೆ. ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಗೋವಾ ವಿಧಾನಸಭೆಯಲ್ಲಿ ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಮೀಸಲಾತಿ ನೀಡುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಪ್ರಸ್ತುತ ಗೋವಾ ವಿಧಾನಸಭೆಯಲ್ಲಿ ಎಸ್‌ಟಿ ಸಮುದಾಯಕ್ಕೆ ಯಾವುದೇ ಸ್ಥಾನಗಳನ್ನು ಕಾಯ್ದಿರಿಸಲಾಗಿಲ್ಲ.

ರಾಜ್ಯಸಭೆಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ತೈಲ ಕ್ಷೇತ್ರಗಳು (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಮಸೂದೆಯನ್ನು ಪರಿಚಯಿಸಲಿದ್ದಾರೆ.

ಚರ್ಚೆ ಹುಟ್ಟು ಹಾಕಿದ ವಕ್ಫ್‌ ಕಾಯ್ದೆ ತಿದ್ದುಪಡಿ ಪ್ರಸ್ತಾವ

ಸದ್ಯ ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರಲು ಮುಂದಾದ ಕೇಂದ್ರ ಸರ್ಕಾರದ ನಿರ್ಧಾರ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ. ʼʼಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತರಲು ಕಾನೂನನ್ನು ತಿದ್ದುಪಡಿ ಮಾಡಬೇಕೆಂದು ಮುಸ್ಲಿಂ ಸಮುದಾಯದಿಂದ ಬೇಡಿಕೆಗಳು ಬಂದಿವೆ. ಪ್ರಸ್ತುತ ವಕ್ಫ್ ಮಂಡಳಿಗಳು ತೆಗೆದುಕೊಂಡ ನಿರ್ಧಾರವನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ ಎನ್ನುವ ನಿಯಮವಿದೆ. ಈಗ ತಿದ್ದುಪಡಿ ಮಸೂದೆಯು ಅದನ್ನು ಸರಿಪಡಿಸಲು ಪ್ರಯತ್ನಿಸುತ್ತದೆ” ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಕಾಯ್ದೆಗೆ ಏನೆಲ್ಲ ತಿದ್ದುಪಡಿ?

ಯಾವುದಾದರೂ ಒಂದು ಆಸ್ತಿಯನ್ನು ವಕ್ಫ್‌ ಮಂಡಳಿಗೆ ಸೇರಿಸಲು ಪಾರದರ್ಶಕ ನಿಯಮಗಳ ಪಾಲನೆಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅದರಲ್ಲೂ, ಯಾವುದಾದರೂ ಒಂದು ಆಸ್ತಿಯನ್ನು ವಕ್ಫ್‌ ಆಸ್ತಿ ಎಂದು ಘೋಷಿಸುವ ಪರಮಾಧಿಕಾರ ತೆಗೆಯಲಿದೆ. ಇನ್ನು, ವಕ್ಫ್‌ ಆಸ್ತಿಗಳ ಮೇಲೆ ನಿಗಾ ಇರಿಸುವ ಅಧಿಕಾರವನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಇದುವರೆಗೆ ವಕ್ಫ್‌ ಮಂಡಳಿಯಲ್ಲಿ ಹೆಣ್ಣುಮಕ್ಕಳ ಸಹಭಾಗಿತ್ವವೇ ಇರಲಿಲ್ಲ. ಹಾಗಾಗಿ, ಪ್ರತಿಯೊಂದು ರಾಜ್ಯಗಳ ವಕ್ಫ್‌ ಮಂಡಳಿಗಳಲ್ಲಿ ಹೆಣ್ಣುಮಕ್ಕಳಿಗೂ ಸ್ಥಾನ ನೀಡುವುದು. ರಾಜ್ಯಗಳ ಮಂಡಳಿಗಳಲ್ಲಿ ಕನಿಷ್ಠ ಇಬ್ಬರು ಮಹಿಳೆಯರಿಗೆ ಸ್ಥಾನ ನೀಡುವುದು. ಕೇಂದ್ರ ಸಮಿತಿಗಳಲ್ಲೂ ಇಬ್ಬರೂ ಹೆಣ್ಣುಮಕ್ಕಳು ಇರಬೇಕು ಎಂಬ ನಿಯಮ ಜಾರಿಗೆ ತರುವುದು. ಮುಸ್ಲಿಮರು ಕೂಡ ವಕ್ಫ್‌ ಆಸ್ತಿಯನ್ನು ಸೃಷ್ಟಿಸಬಹುದು ಎಂಬ ನಿಯಮ ಜಾರಿಗೊಳಿಸುವುದು ಸೇರಿ ಹಲವು ತಿದ್ದುಪಡಿಗಳಿಗೆ ಪ್ರಸ್ತಾವನೆ ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಾರ್ವಜನಿಕ ಲೆಕ್ಕಪತ್ರ ಸಮಿತಿ ರಚನೆ

ಅದೇ ರೀತಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ (Public Accounts Committee) ಸೇರಿದಂತೆ ಪ್ರಮುಖ ಸಂಸದೀಯ ಸಮಿತಿಗಳು ರಚಿಸಲಾಗುತ್ತಿದೆ. ಕಾಂಗ್ರೆಸ್‌ನ ಹಿರಿಯ ನಾಯಕ ಕೆ.ಸಿ.ವೇಣುಗೋಪಾಲ್, ಡಿಎಂಕೆ ನಾಯಕ ಟಿ.ಆರ್.ಬಾಲು, ಬಿಜೆಪಿ ಮುಖಂಡರಾದ ಅನುರಾಗ್ ಠಾಕೂರ್, ರವಿಶಂಕರ್ ಪ್ರಸಾದ್, ತೇಜಸ್ವಿ ಸೂರ್ಯ, ಟಿಎಂಸಿ ನಾಯಕ ಸೌಗತ ರೇ ಮತ್ತು ಎಸ್‌ಪಿ ಮುಖಂಡ ಧರ್ಮೇಂದ್ರ ಯಾದವ್ ಪಿಎಸಿಯ ಸದಸ್ಯರಾಗಿದ್ದಾರೆ.

ಪಿಎಸಿ ಹೊರತುಪಡಿಸಿ ಸಾರ್ವಜನಿಕ ಉದ್ಯಮಗಳ ಸಮಿತಿ, ಅಂದಾಜುಗಳ ಸಮಿತಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿ, ಲಾಭದಾಯಕ ಹುದ್ದೆಯ ಜಂಟಿ ಸಮಿತಿ ಮತ್ತು ಇತರ ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿಯನ್ನು ಚುನಾವಣೆ ಇಲ್ಲದೆ ರಚಿಸಲಾಗಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಶೀಘ್ರದಲ್ಲೇ ಸಮಿತಿಗಳ ಅಧ್ಯಕ್ಷರನ್ನು ನಾಮನಿರ್ದೇಶನ ಮಾಡುವ ನಿರೀಕ್ಷೆಯಿದೆ.

ಇದನ್ನೂ ಓದಿ: Waqf Act: ವಕ್ಫ್‌ ಮಂಡಳಿ ಪರಮಾಧಿಕಾರಕ್ಕೆ ಮೋದಿ ಮೂಗುದಾರ; ಏನೆಲ್ಲ ತಿದ್ದುಪಡಿ? 9.4 ಲಕ್ಷ ಎಕರೆ ಯಾರ ಪಾಲು?

Exit mobile version