Site icon Vistara News

Parliament Session: ಸಂಸತ್ ಅಧಿವೇಶನದಲ್ಲಿ ಪ್ರತಿಧ್ವನಿಸಲಿದೆ ವಯನಾಡು ದುರಂತ; ಕ್ಷಣ ಕ್ಷಣದ ಮಾಹಿತಿಗಾಗಿ Live ನೋಡಿ

Parliament Session

ನವದೆಹಲಿ: ಸಂಸತ್‌ನಲ್ಲಿ ಬಜೆಟ್‌ ಅಧಿವೇಶನ (Parliament Session) ನಡೆಯುತ್ತಿದ್ದು, ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದಕ್ಕೆ ರಾಜ್ಯಸಭೆ ಮತ್ಯಯ ಲೋಕಸಭೆ ಸಾಕ್ಷಿಯಾಗುತ್ತಿದೆ. ಇಂದು ಕೂಡ ಉಭಯ ಸದನಗಳಲ್ಲಿ ಕಾವೇರಿದ ಚರ್ಚೆ ನಡೆಯುವ ಸಾಧ್ಯತೆ ಇದೆ. ಜುಲೈ 23ರಂದು ಮಂಡಿಸಲಾದ 2024-25ರ ಕೇಂದ್ರ ಬಜೆಟ್ ಮತ್ತು ಕೇರಳದ ವಯನಾಡಿನಲ್ಲಿ ನಡೆದ ಭೀಕರ ಭೂಕುಸಿತದ ಬಗ್ಗೆ ಇಂದು ಸಂಸದರು ಧ್ವನಿ ಎತ್ತಲಿದ್ದಾರೆ.

18ನೇ ಲೋಕಸಭೆಯ ಮೊದಲ ಬಜೆಟ್ ಅಧಿವೇಶನದ ಜುಲೈ 22ರಂದು ಸಂಸತ್ತಿನಲ್ಲಿ ಪ್ರಾರಂಭವಾಗಿದ್ದು, ಆಗಸ್ಟ್ 12ರವರೆಗೆ ನಡೆಯಲಿದೆ. ಅಧಿವೇಶನ ಆರಂಭವಾದಾಗಿನಿಂದ ಪ್ರತಿಪಕ್ಷಗಳು ವಿವಿಧ ವಿಷಯಗಳನ್ನು ಪ್ರಸ್ತಾವಿಸಿ ಕೋಲಾಹಲ ಎಬ್ಬಿಸುತ್ತಿವೆ. ಬಜೆಟ್‌ನಲ್ಲಿ ರಾಜ್ಯಗಳಿಗೆ ಅನ್ಯಾಯವಾಗಿದೆ ಎಂದು ವಾದಿಸಿರುವ ಪ್ರತಿಪಕ್ಷಗಳು ನೀಟ್‌ ಹಗರಣ, ದೆಹಲಿ ಕೋಚಿಂಗ್‌ ಸೆಂಟರ್‌ನಲ್ಲಿ ವಿದ್ಯಾರ್ಥಿಗಳ ಸಾವಿನ ಪ್ರಕರಣಗಳನ್ನು ಮುಂದಿಟ್ಟು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.

ವಯನಾಡು ದುರಂತದ ಚರ್ಚೆ

ಇಂದು ಉಭಯ ಸದನಗಳಲ್ಲಿ ವಯನಾಡಿನಲ್ಲಿ ನಡೆದ ಭೀಕರ ಭೂಕುಸಿತದ ಬಗ್ಗೆ ವ್ಯಾಪಕ ಚರ್ಚೆ ನಡೆಯುವ ಸಾಧ್ಯತೆ ಇದೆ. ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ ವಿಚಾರ ಬುಧವಾರ ಸಂಸತ್‌ನಲ್ಲೂ ಪ್ರತಿಧ್ವನಿಸಿತ್ತು. ಭೀಕರ ದುರ್ಘಟನೆ ಬಗ್ಗೆ ಸಂತಾಪ ಸೂಚಿಸಿದ ಕೇಂದ್ರ ಗೃಹಸಚಿವ ಅಮಿತ್‌ ಶಾ ಈ ವಿಚಾರದಲ್ಲಿ ರಾಜಕೀಯ ಬೇಡ ಎಂದು ಮನವಿ ಮಾಡಿದ್ದರು. ರಾಜ್ಯಸಭೆಯಲ್ಲಿ ಮಾತನಾಡಿದ ಶಾ, ಗುಡ್ಡಗಾಡು ಜಿಲ್ಲೆಗೆ ಭೂಕುಸಿತ ಸಂಭವಿಸುವ ಒಂದು ವಾರದ ಮೊದಲು ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರಕ್ಕೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿತ್ತು ಎಂದು ಹೇಳಿದ್ದರು. ಭಾರೀ ಮಳೆಯಾಗುವ ಮುನ್ಸೂಚನೆಯ ನಂತರ ಕೇಂದ್ರವು ಒಂಬತ್ತು ಎನ್‌ಡಿಆರ್‌ಎಫ್ ತಂಡಗಳನ್ನು ಕೇರಳಕ್ಕೆ ಕಳುಹಿಸಿತ್ತು ಎಂದಿದ್ದರು.

ʼʼಜುಲೈ 23ರಂದು ನನ್ನ ನಿರ್ದೇಶನದ ಮೇರೆಗೆ, ಭೂಕುಸಿತಗಳು ಸಂಭವಿಸಬಹುದು ಎಂದು ಪರಿಗಣಿಸಿ 9 ಎನ್‌ಡಿಆರ್‌ಎಫ್‌ ತಂಡಗಳನ್ನು ಕೇರಳಕ್ಕೆ ಕಳುಹಿಸಲಾಯಿತು. ಕೇರಳ ಸರ್ಕಾರ ಏನು ಮಾಡಿದೆ? ಜನರನ್ನು ಸ್ಥಳಾಂತರಿಸಲಾಗಿದೆಯೇ? ಅವರು ಸ್ಥಳಾಂತರಗೊಂಡರೆ ಹೇಗೆ ಸತ್ತರು? ಪೂರ್ವ ಎಚ್ಚರಿಕೆಯ ಯೋಜನೆಯು 2016ರಲ್ಲಿ ಪ್ರಾರಂಭವಾಯಿತು ಮತ್ತು 2023ರ ಹೊತ್ತಿಗೆ ಭಾರತವು ಅತ್ಯಾಧುನಿಕ ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಹೊಂದಿತ್ತು. ಇದೀಗ ಪ್ರಕೃತಿ ವಿಕೋಪಗಳನ್ನು 7 ದಿನಗಳ ಮುಂಚಿತವಾಗಿ ಊಹಿಸಲು ಸಾಮರ್ಥ್ಯವಿರುವ ಕೇವಲ 4 ದೇಶಗಳಲ್ಲಿ ಭಾರತವು ಒಂದುʼʼ ಎಂದು ಅವರು ಹೇಳಿದ್ದರು. ಇದು ಭಾರಿ ಚರ್ಚೆಗೆ ಕಾರಣವಾಗಿದೆ.

ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ

ವಯನಾಡು ದುರಂತದ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿದ ಬೆಂಗಳೂರು ಸಂಸದ ಪೇಜಸ್ವಿ ಸೂರ್ಯ ವಯನಾಡಿನ ಮಾಜಿ ಸಂಸದ ರಾಹುಲ್‌ ಗಾಂಧ ವಿರುದ್ಧ ವಾಗ್ದಾಳಿ ನಡೆಸಿದ್ದರು. “ರಾಹುಲ್ ಗಾಂಧಿ ವಯನಾಡು ಸಂಸದರಾಗಿದ್ದಾಗಿನಿಂದ ಕಳೆದ 1,800 ದಿನಗಳಲ್ಲಿ ಅವರು ಸಂಸತ್ತಿನಲ್ಲಿ ಒಮ್ಮೆಯೂ ಭೂಕುಸಿತ ಮತ್ತು ಪ್ರವಾಹದ ವಿಷಯವನ್ನು ಎತ್ತಲಿಲ್ಲ” ಎಂದು ಹೇಳಿದ್ದರು.

ʼʼಕೇರಳ ವಿಪತ್ತು ನಿರ್ವಹಣಾ ಮಂಡಳಿಯ ಶಿಫಾರಸುಗಳ ಹೊರತಾಗಿಯೂ ವಯನಾಡಿನಲ್ಲಿ ಅಕ್ರಮ ಒತ್ತುವರಿಯನ್ನು ತೆಗೆದುಹಾಕಲಾಗಿಲ್ಲ. ಕೇರಳದ ಅರಣ್ಯ ಸಚಿವರು ಕೂಡ, ವಿವಿಧ ಧಾರ್ಮಿಕ ಸಂಘಟನೆಗಳ ಒತ್ತಡದಿಂದಾಗಿ ಅಕ್ರಮ ಒತ್ತುವರಿಯನ್ನು ತೆಗೆದುಹಾಕಲು ಅವರಿಗೆ ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ವಿಧಾನಸಭೆಯಲ್ಲಿ ಒಪ್ಪಿಕೊಳ್ಳುತ್ತಾರೆʼʼ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದರು. ಈ ವಿಚಾರ ಇಂದು ಉಭಯ ಸದನಗಳನ್ನು ಪ್ರತಿಧ್ವನಿಸಲಿದೆ.

ಇದನ್ನೂ ಓದಿ: Parliament Session: RSS ಬಗ್ಗೆ ದೋಷಾರೋಪಣೆ ಸಲ್ಲದು; ಜಗದೀಪ್ ಧನ್‌ಕರ್ ಹೇಳಿಕೆ- ಪ್ರತಿಪಕ್ಷಗಳು ವಾಕ್‌ಔಟ್‌!

Exit mobile version