ನವದೆಹಲಿ: ಸಂಸತ್‌ನಲ್ಲಿ ನಡೆಯುತ್ತಿರುವ ಅಧಿವೇಶನ (Parliament Session)ದಲ್ಲಿ ಇಂದು ವಕ್ಫ್ ಮಸೂದೆ (Waqf Act) ಮಂಡನೆಯಾಗಲಿದ್ದು, ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ. ವಕ್ಫ್ ಕಾಯ್ದೆ 1995ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ವಕ್ಫ್ (ತಿದ್ದುಪಡಿ) ಮಸೂದೆ 2024 ಅನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಪರಿಚಯಿಸಲು ಸಜ್ಜಾಗಿರುವುದರಿಂದ ಸಂಸತ್ತಿನ ಕಲಾಪಗಳು ಗುರುವಾರ ಕೋಲಾಹಲದಿಂದ ಕೂಡಿರಲಿದೆ.
ಮಸೂದೆಯನ್ನು ಪರಿಚಯಿಸಿದ ನಂತರ ಪರಿಶೀಲನೆಗಾಗಿ ಸಂಸತ್ತಿನ ಸ್ಥಾಯಿ ಸಮಿತಿಗೆ ಕಳುಹಿಸಬೇಕೆಂದು ಪ್ರತಿಪಕ್ಷಗಳು ಬುಧವಾರ ಆಗ್ರಹಿಸಿವೆ. ಈ ಬಗ್ಗೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಸರ್ಕಾರವು ವ್ಯವಹಾರ ಸಲಹಾ ಸಮಿತಿಗೆ ಈಗಾಗಲೇ ತಿಳಿಸಿದೆ.
ಮಸೂದೆ ಬಗ್ಗೆ ಮಾತನಾಡಿದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮತ್ತು ತೃಣಮೂಲ ಕಾಂಗ್ರೆಸ್ ಸಂಸದ ಸುದೀಪ್ ಬಂಡೋಪಾಧ್ಯಾಯ ಅವರು ಮಸೂದೆ ಮಂಡಿಸಿದ ನಂತರ ಪರಿಶೀಲನೆಗಾಗಿ ಸಂಸತ್ತಿನ ಸಮಿತಿಗೆ ಕಳುಹಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮಾತ್ರವಲ್ಲ ಇಂದು ಸಂಸತ್ತಿನಲ್ಲಿ ಈ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತಲು ಪ್ರತಿಪಕ್ಷಗಳು ಸಜ್ಜಾಗಿವೆ.
ಸರ್ಕಾರ V/S ಪ್ರತಿಪಕ್ಷಗಳ ವಾಗ್ವಾದ
ಮಸೂದೆ ವಿಚಾರದಲ್ಲಿ ಈಗಾಗಲೇ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ ಆರಂಭವಾಗಿದೆ. ದೇಶಾದ್ಯಂತ ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ತರಲು ಇಂತಹ ಮಸೂದೆ ಅಗತ್ಯ ಎಂದು ಬಿಜೆಪಿ ಪ್ರತಿಪಾದಿಸಿದೆ. ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಯು ಅವರು, ʼʼವಕ್ಫ್ ಆಸ್ತಿಗಳ ನಿಯಂತ್ರಣವನ್ನು ಹೆಚ್ಚು ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿಸಲು ಮುಸ್ಲಿಮರು ಈ ಬಗ್ಗೆ ನಿರಂತರ ಬೇಡಿಕೆ ಸಲ್ಲಿಸಿದ್ದಾರೆʼʼ ಎಂದು ಸಮರ್ಥಿಸಿಕೊಂಡಿದ್ದಾರೆ.
ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ ಹಲವು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಕಿಡಿಕಾರಿ ಕೆಲವು ಮುಸ್ಲಿಂ ಸಂಘಟನೆಗಳು ವಿರೋಧಿಸುತ್ತಿರುವ ಮಸೂದೆಯನ್ನು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದೊಂದಿಗೆ ವ್ಯವಹರಿಸುವ ಸ್ಥಾಯಿ ಸಮಿತಿಗೆ ಕಳುಹಿಸಬೇಕು ಎಂದು ಹೇಳಿವೆ. ಇನ್ನೂ ಸಮಿತಿಯನ್ನು ರಚಿಸಲಾಗಿಲ್ಲ ಎಂದು ಹೇಳಿವೆ.
ಏನೆಲ್ಲ ತಿದ್ದುಪಡಿ?
ಯಾವುದಾದರೂ ಒಂದು ಆಸ್ತಿಯನ್ನು ವಕ್ಫ್ ಮಂಡಳಿಗೆ ಸೇರಿಸಲು ಪಾರದರ್ಶಕ ನಿಯಮಗಳ ಪಾಲನೆಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅದರಲ್ಲೂ, ಯಾವುದಾದರೂ ಒಂದು ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸುವ ಪರಮಾಧಿಕಾರ ತೆಗೆಯಲಿದೆ. ಇನ್ನು, ವಕ್ಫ್ ಆಸ್ತಿಗಳ ಮೇಲೆ ನಿಗಾ ಇರಿಸುವ ಅಧಿಕಾರವನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಇದುವರೆಗೆ ವಕ್ಫ್ ಮಂಡಳಿಯಲ್ಲಿ ಹೆಣ್ಣುಮಕ್ಕಳ ಸಹಭಾಗಿತ್ವವೇ ಇರಲಿಲ್ಲ. ಹಾಗಾಗಿ, ಪ್ರತಿಯೊಂದು ರಾಜ್ಯಗಳ ವಕ್ಫ್ ಮಂಡಳಿಗಳಲ್ಲಿ ಹೆಣ್ಣುಮಕ್ಕಳಿಗೂ ಸ್ಥಾನ ನೀಡುವುದು. ರಾಜ್ಯಗಳ ಮಂಡಳಿಗಳಲ್ಲಿ ಕನಿಷ್ಠ ಇಬ್ಬರು ಮಹಿಳೆಯರಿಗೆ ಸ್ಥಾನ ನೀಡುವುದು. ಕೇಂದ್ರ ಸಮಿತಿಗಳಲ್ಲೂ ಇಬ್ಬರೂ ಹೆಣ್ಣುಮಕ್ಕಳು ಇರಬೇಕು ಎಂಬ ನಿಯಮ ಜಾರಿಗೆ ತರುವುದು. ಮುಸ್ಲಿಮರು ಕೂಡ ವಕ್ಫ್ ಆಸ್ತಿಯನ್ನು ಸೃಷ್ಟಿಸಬಹುದು ಎಂಬ ನಿಯಮ ಜಾರಿಗೊಳಿಸುವುದು ಸೇರಿ ಹಲವು ತಿದ್ದುಪಡಿಗಳಿಗೆ ಪ್ರಸ್ತಾವನೆ ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Pralhad Joshi: ಪಿಎಂ ಕುಸುಮ್ ಯೋಜನೆಗೆ ಕರ್ನಾಟಕದಿಂದಲೇ 1.79 ಲಕ್ಷ ರೈತರ ಬೇಡಿಕೆ
ಹಣಕಾಸು ಮಸೂದೆ ಅಂಗೀಕಾರ
ಲೋಕಸಭೆಯಲ್ಲಿ ಬುಧವಾರ ಹನಕಾಸು ಮಸೂದೆ 2024 ಅನ್ನು ಅಂಗೀಕರಿಸಲಾಯಿರು. ರಿಯಲ್ ಎಸ್ಟೇಟ್ ಮೇಲೆ ಇತ್ತೀಚೆಗೆ ಪರಿಚಯಿಸಲಾದ ಹೊಸ ಬಂಡವಾಳ ಲಾಭ ತೆರಿಗೆಯನ್ನು ಸರ್ಕಾರ ಸಡಿಲಿಸಿದ ನಂತರ ಮಂಡಿಸಿದ ಈ ಮಸೂದೆಯನ್ನು ಲೋಕಸಭೆ ಅಂಗೀಕರಿಸಿತು. ಲೋಕಸಭೆ 45 ಅಧಿಕೃತ ತಿದ್ದುಪಡಿಗಳೊಂದಿಗೆ ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಿದೆ ಎಂದು ಮೂಲಗಳು ತಿಳಿಸಿವೆ. ಇದರ ಜತೆಗೆ ಒಲಿಂಪಿಕ್ಸ್‌ನ 50 ಕೆಜಿ ವಿಭಾಗದ ಕುಸ್ತಿ ಫೈನಲ್ ಪಂದ್ಯದಿಂದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹಗೊಂಡಿರುವ ಬಗ್ಗೆಯೂ ಸರ್ಕಾರ ಮಾಹಿತಿ ನೀಡಿದೆ.