Site icon Vistara News

Party Symbols: ವಿವಿಧ ಪಕ್ಷಗಳ ಚುನಾವಣಾ ಚಿಹ್ನೆ ಹಿಂದೆ ಹೇಗಿತ್ತು, ಈಗ ಏನಾಗಿದೆ? ಸಂಗ್ರಹಯೋಗ್ಯ ಮಾಹಿತಿ

Party symbols

ಚುನಾವಣೆ (election) ವೇಳೆ ಎಲ್ಲರ ಗಮನ ಸೆಳೆಯುವುದು ಚುನಾವಣಾ ಚಿಹ್ನೆಗಳು. ಈ ಬಾರಿಯೂ ಲೋಕಸಭಾ ಚುನಾವಣೆ- 2024ರಲ್ಲಿ (loksabha election-2024) ಕಣಕ್ಕೆ ಇಳಿದಿರುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗವು ನೀಡಿದ್ದ ಚುನಾವಣಾ ಚಿಹ್ನೆಗಳು ಎಲ್ಲರ ಗಮನ ಸೆಳೆದಿತ್ತು. ಚುನಾವಣಾ ಚಿಹ್ನೆಯ (Party symbols) ಬಳಕೆ ಹೊಸದೇನಲ್ಲ 1951ರ ಮೊದಲ ಚುನಾವಣೆಯಿಂದಲೇ ಅಭ್ಯರ್ಥಿಯನ್ನು (candidate) ಗುರುತಿಸಲು ಚುನಾವಣಾ ಚಿಹ್ನೆಗಳನ್ನು ಬಳಸಲಾಗುತ್ತಿದೆ.

ಚುನಾವಣಾ ಪ್ರಚಾರದ ವೇಳೆ ಜನರ ಗಮನಸೆಳೆಯುವ ಚುನಾವಣಾ ಚಿಹ್ನೆಗಳು ಒಂದೇ ಹೆಸರಿನ ಅಭ್ಯರ್ಥಿಗಳು ಕಣದಲ್ಲಿ ಇದ್ದರೆ ತಮ್ಮ ನೆಚ್ಚಿನ ಅಭ್ಯರ್ಥಿಯನ್ನು ಗುರುತಿಸಲು ಇದು ಸಹಾಯ ಮಾಡುತ್ತದೆ. ಚಿತ್ರಗಳು ಸಾಮಾನ್ಯವಾಗಿ ಎಲ್ಲರಿಗೂ ನೆನಪಿನಲ್ಲಿ ಉಳಿಯುತ್ತದೆ. ದೇಶದಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾದಾಗ ಸಾಕ್ಷರರ ಪ್ರಮಾಣ ಕಡಿಮೆ ಇತ್ತು. ಹೀಗಾಗಿಯೇ ಚುನಾವಣಾ ಆಯೋಗ ಚಿಹ್ನೆಗಳನ್ನು ಬಳಸಲು ಪ್ರಾರಂಭಿಸಿತ್ತು.

ಅಕ್ಷರಗಳಿಗಿಂತ ಹೆಚ್ಚು ವೇಗವಾಗಿ ಮನ ಮುಟ್ಟುವ ಚುನಾವಣಾ ಚಿಹ್ನೆಗಳು ಮತ್ತು ಅವುಗಳ ಸೃಜನಾತ್ಮಕ ಬಳಕೆಯ ಕುರಿತು ಭಾರತದಲ್ಲಿ ಹಿನ್ನೆಲೆ ಹೇಗಿತ್ತು ಗೊತ್ತೇ ?

ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್‌-ಬಿಜೆಪಿ ಮಧ್ಯೆ ʼಚೆಂಬುʼ ವಾರ್; ಗ್ಯಾರಂಟಿಗಳಿಂದ ಜನರಿಗೆ ಕಾಂಗ್ರೆಸ್‌ ಟೋಪಿ ಎಂದ ವಿಜಯೇಂದ್ರ

ಯಾವಾಗ ಆರಂಭ?

1951ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಸೇರಿ 53 ಪಕ್ಷಗಳ ಅಭ್ಯರ್ಥಿಗಳು ಸುಮಾರು 4,500 ಸ್ಥಾನಗಳಿಗೆ ಸ್ಪರ್ಧಿಸಿದ್ದರು. ಈ ಸಂದರ್ಭದಲ್ಲಿ ಚುನಾವಣಾ ಆಯೋಗವು ಅಭ್ಯರ್ಥಿಗಳು ಸ್ಪರ್ಧಿಸಬಹುದಾದ ಪಕ್ಷಗಳಿಗೆ ಚಿಹ್ನೆಗಳನ್ನು ನಿಗದಿಪಡಿಸಿತ್ತು. ಈ ಪ್ರಕ್ರಿಯೆಯು ಚುನಾವಣಾ ಚಿಹ್ನೆಗಳ ಮೀಸಲಾತಿ ಮತ್ತು ಹಂಚಿಕೆ ಆದೇಶ 1968ರಲ್ಲಿ ಹೊರಬಂದು ಇದು ಹೆಚ್ಚು ಸುವ್ಯವಸ್ಥಿತವಾಯಿತು. ಇದರ ಪ್ರಕಾರ ರಾಷ್ಟ್ರೀಯ, ರಾಜ್ಯ ಮಟ್ಟದಲ್ಲಿ ಪಕ್ಷಗಳಿಗೆ ಮತ್ತು ಸ್ವತಂತ್ರ ಅಭ್ಯರ್ಥಿಗಳಿಗೆ ಚಿಹ್ನೆಗಳ ಹಂಚಿಕೆಯನ್ನು ಮಾಡಲಾಗುತ್ತದೆ. ಇದು ಎರಡು ಅಥವಾ ಹೆಚ್ಚಿನ ಪಕ್ಷಗಳ ವಿಲೀನದ ಸಂದರ್ಭದಲ್ಲಿ ಅಥವಾ ಪಕ್ಷದಲ್ಲಿ ವಿಭಜನೆಯ ಸಂದರ್ಭದಲ್ಲಿ ಅನ್ವಯಿಸಬಹುದಾದ ನಿಯಮಗಳನ್ನೂ ಹೊಂದಿದೆ.

ವಿಲೀನ, ವಿಭಜನೆಯಾದ ಸಂದರ್ಭದಲ್ಲಿ ಕೆಲವು ಚಿಹ್ನೆಗಳು ಹೊಸದಾಗಿ ಬರುತ್ತದೆ, ಇನ್ನು ಕೆಲವು ಅಳಿಸಿ ಹೋಗುತ್ತದೆ. ಪ್ರಸ್ತುತ ಇರುವ ಚಿಹ್ನೆಗಳು ಹುಟ್ಟಿಕೊಳ್ಳುವುದರ ಹಿಂದೆ ಬಹು ದೊಡ್ಡ ಕಥೆಯೇ ಇದೆ.


ಕಾಂಗ್ರೆಸ್ ನ ಕೈ

ಕಾಂಗ್ರೆಸ್ ಪ್ರಾರಂಭದಲ್ಲಿ ಚುನಾವಣಾ ಚಿಹ್ನೆಯಾಗಿ ನೊಗ ಹಿಡಿದ ಎತ್ತುಗಳನ್ನು ಹೊಂದಿತ್ತು. ಜವಾಹರಲಾಲ್ ನೆಹರು, 1969ರಲ್ಲಿ ಇಂದಿರಾ ಗಾಂಧಿ ಅವರೂ ಜೋಡಿ ಎತ್ತಿನ ಚಿಹ್ನೆಯನ್ನು ಹೊಂದಿದ್ದರು. 1969ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಎಸ್. ನಿಜಲಿಂಗಪ್ಪ ಅವರು ಪಕ್ಷದಿಂದ ಹೊರಹೋದಾಗ ಕಾಂಗ್ರೆಸ್ ವಿಭಜನೆಯಾಯಿತು. ಈ ಸಂದರ್ಭದಲ್ಲಿ ಚುನಾವಣಾ ಚಿನ್ಹೆಯಾಗಿದ್ದ ಜೋಡಿ ಎತ್ತುಗಳ ಬಗ್ಗೆ ವಿವಾದ ಉಂಟಾಯಿತು. ಇಂದಿರಾ ಗಾಂಧಿಯವರ ಬಣಕ್ಕೆ ಹಸು, ಕರು ಚಿಹ್ನೆಯನ್ನು ನೀಡಲಾಯಿತು. ಇದಕ್ಕೂ ಆಕ್ಷೇಪಣೆ ವ್ಯಕ್ತವಾಗಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಲಾಗಿತ್ತು.

ತುರ್ತುಪರಿಸ್ಥಿತಿಯ ಬಳಿಕ ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಪಕ್ಷದ ಕೈಯಲ್ಲಿ ಸೋಲು ಅನುಭವಿಸಿದ ಇಂದಿರಾ ಗಾಂಧಿ ಅವರು ಮರಳಿ ಅಧಿಕಾರಕ್ಕೆ ಬರಲು ಪ್ರಯತ್ನಿಸಿದರು. ತಮ್ಮ ಅಧೀನದಲ್ಲಿರುವ ಪಕ್ಷ ನಿಜವಾದ ಕಾಂಗ್ರೆಸ್ ಎಂದು ಹೇಳಿ ಕಾಂಗ್ರೆಸ್ (ಇಂದಿರಾ) ರಚನೆಯನ್ನು ಘೋಷಿಸಿದರು. 1979ರವರೆಗೆ ಇದ್ದ ಹಸುಕರು ಚಿಹ್ನೆಯನ್ನು ಫ್ರೀಜ್ ಮಾಡಲಾಯಿತು. ಚುನಾವಣಾ ಆಯೋಗವು ಹಲವಾರು ಚಿಹ್ನೆಗಳ ನಡುವೆ ಆಯ್ಕೆಯನ್ನು ನೀಡಿತು. ಅದರಲ್ಲಿ ಕಲ್ಲೇಕುಳಂಗರದ ಕೈಪತಿ ದೇವಸ್ಥಾನ ಅಥವಾ ಕೈ ದೇವಸ್ಥಾನದ ಕಥೆಯು ಇಂದಿರಾ ಗಾಂಧಿಯವರಿಗೆ ‘ಕೈ’ ಚಿಹ್ನೆಯನ್ನು ಪಡೆಯಲು ಪ್ರೇರೇಪಿಸಿತು ಎನ್ನಲಾಗಿದೆ.

ಭಾರತೀಯ ಜನತಾ ಪಕ್ಷ

1980ರಲ್ಲಿ ಬಿಜೆಪಿ ಜನಸಂಘದಿಂದ ಹುಟ್ಟಿಕೊಂಡಿತ್ತು. 1977ರಲ್ಲಿ ಜನ ಸಂಘವು ಜನತಾ ಪಕ್ಷದೊಂದಿಗೆ ವಿಲೀನಗೊಂಡು ಕೇಂದ್ರ ಸರ್ಕಾರವನ್ನು ರಚಿಸಿತ್ತು. ಭಾರತದ ಮೊದಲ ಸಾರ್ವತ್ರಿಕ ಚುನಾವಣೆ ವೇಳೆ ಭಾರತೀಯ ಜನಸಂಘದ ಚುನಾವಣಾ ಚಿಹ್ನೆ 1977ರ ತನಕ ಎಣ್ಣೆ ದೀಪವಾಗಿತ್ತು. ಬಳಿಕ ಅದು ನೊಗ ಹಿಡಿದ ರೈತನನ್ನು ತನ್ನ ಚಿಹ್ನೆಯಾಗಿ ಬಳಸಿತ್ತು. 1980ರಲ್ಲಿ ಜನತಾ ಪಕ್ಷ ದಿಂದ ಹೊರಬಂದ ಜನಸಂಘ ನಾಯಕರು ಭಾರತೀಯ ಜನತಾ ಪಾರ್ಟಿ ಎಂಬ ಹೊಸ ಪಕ್ಷ ಕಟ್ಟಿ ಅದಕ್ಕೆ ಕಮಲದ ಹೂವು ಚುನಾವಣಾ ಚಿಹ್ನೆಯಾಗಿ ಪಡೆದರು.

ಇದಕ್ಕೆ ಸ್ಫೂರ್ತಿಯಾಗಿದ್ದು 1980ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಮುಂಬಯಿಯಲ್ಲಿ ರ್ಯಾಲಿ ನಡೆಸುತ್ತಿದ್ದಾಗ ಕಾಂಗ್ರೆಸ್ ವಿರುದ್ಧ ಮಾತನಾಡುತ್ತ “ಅಂಧೇರಾ ಚಟೇಗಾ, ಸೂರಜ್ ನಿಕ್ಲೇಗಾ, ಕಮಲ ಖಿಲೇಗಾ” ಎಂದು ಹೇಳಿದ್ದರು. 1980ರ ಏಪ್ರಿಲ್ 6ರಂದು ಭಾರತೀಯ ಜನತಾ ಪಕ್ಷದ ರಚನೆಯ ವೇಳೆ ವಾಜಪೇಯಿಯವರ ಕಮಲದ ಚಿಹ್ನೆಯ ಆಯ್ಕೆಯು ಹೊಸ ಪಕ್ಷದ ರಾಷ್ಟ್ರೀಯತಾವಾದಿ ಸಿದ್ಧಾಂತಗಳಿಗೆ ಹೊಂದಿಕೆಯಾಯಿತು. ಹೀಗಾಗಿ ಕಮಲ ಬಿಜೆಪಿಯ ಚಿಹ್ನೆಯಾಯಿತು.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ

ಪ್ರಾರಂಭದಲ್ಲಿ ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ)ಯು ಕತ್ತಿ (ಕುಡುಗೋಲು) ಸುತ್ತಿಗೆ ನಕ್ಷತ್ರಗಳನ್ನು ಚುನಾವಣಾ ಚಿಹ್ನೆಯಾಗಿ ಬಳಸಿಕೊಂಡಿತ್ತು. 1964ರ ಬಳಿಕ ಐದು-ಬಿಂದುಗಳ ನಕ್ಷತ್ರವನ್ನು ಸೇರಿಸಲಾಯಿತು. ಬಳಿಕ ವಿಭಜನೆಯಾಗಿ ಸಿಪಿಐ (ಎಂ), ಸಿಪಿಐ (ಎಡ) ಪಕ್ಷಗಳು ಹುಟ್ಟಿಕೊಂಡವು. ಆಂಧ್ರಪ್ರದೇಶ, ಕೇರಳ ಮತ್ತು ಪಶ್ಚಿಮ ಬಂಗಾಳದ ಲ್ಲಿ ಮಾತ್ರ ಸ್ಥಾನಗಳನ್ನು ಪಡೆದಿರುವ ಸಿಪಿಐ ಪಕ್ಷಕ್ಕೆ 1964ರಲ್ಲಿ ರಾಷ್ಟ್ರೀಯ ಪಕ್ಷದ ಮಾನ್ಯತೆ ನೀಡಲಾಯಿತು. ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಸಿಪಿಐ (ಮಾರ್ಕ್ಸ್‌ವಾದಿ)ಯ ಚುನಾವಣಾ ಚಿಹ್ನೆ ಕತ್ತಿ ಮತ್ತು ಜೋಳದ ತೆನೆಯಾಗಿತ್ತು.


ಬಹುಜನ ಸಮಾಜ ಪಕ್ಷ

1984ರಲ್ಲಿ ಹುಟ್ಟಿಕೊಂಡ ಬಹುಜನ ಸಮಾಜ ಪಕ್ಷ (BSP) 1988ರ ಅಲಹಾಬಾದ್ ಉಪ ಚುನಾವಣೆಯಲ್ಲಿ ತನ್ನ ಛಾಪು ಮೂಡಿಸಿತ್ತು. ಬಿಎಸ್‌ಪಿಯ ಸಂಸ್ಥಾಪಕ ಕಾನ್ಶಿ ರಾಮ್ ಅವರು ಪ್ರಚಾರದ ವೇಳೆ ಆನೆಯ ಮೇಲೆ ನೀಲಿ ಧ್ವಜದ ಚಿಹ್ನೆಯನ್ನು ಬಳಸಿಕೊಂಡರು. ಹಿಂದೂ ಮತ್ತು ಬೌದ್ಧ ಧರ್ಮದಲ್ಲಿ ಪ್ರಾಮುಖ್ಯತೆಯನ್ನು ಹೊಂದಿರುವ ‘ಆನೆ’ ಚಿಹ್ನೆಯು ಕಾನ್ಶಿರಾಮ್‌ಗೆ ಹೆಚ್ಚಿನ ಬಲ ತುಂಬಿತ್ತು. ಬಿಎಸ್ಪಿಯ ‘ಆನೆ’ ಭಾರತದಲ್ಲಿ ಕೆಲವು ಪ್ರಾಣಿ ಆಧಾರಿತ ಚುನಾವಣಾ ಚಿಹ್ನೆಗಳಲ್ಲಿ ಒಂದಾಗಿದೆ. ಯಾಕೆಂದರೆ ಚುನಾವಣಾ ಆಯೋಗವು ಈಗ ಹೊಸದಾಗಿ ಪ್ರಾಣಿಗಳ ಚಿಹ್ನೆಗಳನ್ನು ನೀಡುವುದನ್ನು ನಿಲ್ಲಿಸಿದೆ.

ಆಮ್ ಆದ್ಮಿ ಪಕ್ಷ

2011ರಲ್ಲಿ ಅಣ್ಣಾ ಹಜಾರೆ ನೇತೃತ್ವದಲ್ಲಿ ಭ್ರಷ್ಟಾಚಾರದ ವಿರುದ್ಧ ಹುಟ್ಟಿಕೊಂಡ ಸಂಘಟನೆ ಇದು. ಅರವಿಂದ್ ಕೇಜ್ರಿವಾಲ್ ಅವರು 2012ರಲ್ಲಿ ಆಮ್ ಆದ್ಮಿ ಪಕ್ಷವನ್ನು ರಚಿಸಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದರು. ‘ಪೊರಕೆ’ಯ ಇದರ ಚುನಾವಣಾ ಚಿಹ್ನೆಯಾಗಿದೆ. ಚುನಾವಣಾ ಆಯೋಗಕ್ಕೆ ಪಕ್ಷವು ಸಲ್ಲಿಸಿದ ಮೂರು ಚಿಹ್ನೆಗಳಲ್ಲಿ ‘ಮೇಣದಬತ್ತಿ’ ಮತ್ತು ‘ಟ್ಯಾಪ್’ ಕೂಡ ಇತ್ತು.

ಪೊರಕೆಯ ಚಿಹ್ನೆ ಕಾರ್ಮಿಕರ ಘನತೆಗಾಗಿ ಮಾತ್ರವಲ್ಲ, ನಮ್ಮ ಸರ್ಕಾರ ಮತ್ತು ನಮ್ಮ ಶಾಸಕಾಂಗವನ್ನು ವ್ಯಾಪಿಸಿರುವ ಕೊಳೆಯನ್ನು ಸ್ವಚ್ಛಗೊಳಿಸುವ ಪಕ್ಷದ ಆಶಯವನ್ನು ಪ್ರತಿನಿಧಿಸುತ್ತದೆ ಎನ್ನುತ್ತಾರೆ ಪಕ್ಷದ ಮುಖಂಡರು.

ನ್ಯಾಷನಲ್ ಪೀಪಲ್ಸ್ ಪಾರ್ಟಿ

ಭಾರತದಲ್ಲಿನ ಆರು ರಾಷ್ಟ್ರೀಯ ಪಕ್ಷಗಳಲ್ಲಿ ಒಂದಾದ ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP) ಅನ್ನು 2013ರಲ್ಲಿ ಸ್ಥಾಪಿಸಲಾಯಿತು. ಅದರ ಸಂಸ್ಥಾಪಕ ಮಾಜಿ ಮೇಘಾಲಯ ಮುಖ್ಯಮಂತ್ರಿ ಪಿ.ಎ. ಸಂಗ್ಮಾ ಅವರನ್ನು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿತ್ತು.

ಪುಸ್ತಕವನ್ನು ಪಕ್ಷದ ಚಿಹ್ನೆಯಾಗಿ ಮಾಡಿಕೊಂಡ ಅವರು ಸಾಕ್ಷರತೆ ಮತ್ತು ಶಿಕ್ಷಣವು ದುರ್ಬಲ ವರ್ಗದವರನ್ನು ಸಬಲೀಕರಣಗೊಳಿಸುತ್ತದೆ ಎಂದು ನಂಬುವುದಾಗಿ ಹೇಳಿ ಶಿಕ್ಷಣಕ್ಕೆ ಒತ್ತು ನೀಡುವ ಭರವಸೆ ನೀಡಿದ್ದರು.

ವಿವಿಧ ಪಕ್ಷಗಳಿಗೆ ಒಂದೇ ಚಿಹ್ನೆಗಳು

ಇನ್ನು ರಾಜ್ಯ ಮಟ್ಟದಲ್ಲಿ ಒಂದೇ ಚುನಾವಣಾ ಚಿಹ್ನೆಯನ್ನು ಪಡೆದು ಬೇರೆಬೇರೆ ಪಕ್ಷಗಳಿಂದಲೂ ಅಭ್ಯರ್ಥಿಗಳು ಕಣಕ್ಕೆ ಇಳಿದಿರುವ ಇತಿಹಾಸವೂ ಇದೆ. ಒಂದೇ ಕ್ಷೇತ್ರದಿಂದ ಪರಸ್ಪರರ ವಿರುದ್ಧ ಸ್ಪರ್ಧಿಸುವುದಿಲ್ಲವೋ ಅಲ್ಲಿಯವರೆಗೆ ಅದು ಸಾಮಾನ್ಯವಾಗಿ ಸಮಸ್ಯೆಯನ್ನು ಉಂಟು ಮಾಡುವುದಿಲ್ಲ. ಆದರೆ ಪಕ್ಷಗಳು ತನ್ನ ಕಾಯ್ದಿರಿಸಿದ ಚಿಹ್ನೆಯಡಿ ಬೇರೆಯವರಿಗೆ ಸ್ಪರ್ಧಿಸಲು ಅನುಮತಿಸುವುದಿಲ್ಲ ಎಂಬ ಷರತ್ತು ವಿಧಿಸುತ್ತದೆ.

ಬೈಸಿಕಲ್ ಗಾಗಿ ಸ್ಪರ್ಧೆ

ಭಾರತೀಯ ರಾಜಕೀಯ ಇತಿಹಾಸದಲ್ಲಿ ಬೈಸಿಕಲ್ ತೀವ್ರ ಪೈಪೋಟಿಯ ಸಂಕೇತವಾಗಿದೆ. ಎನ್.ಟಿ. ರಾಮರಾವ್ ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷದ ನಡುವೆ ಬೈಸಿಕಲ್ ಗಾಗಿ ಪೈಪೋಟಿ ಏರ್ಪಟ್ಟಿತ್ತು.

1982ರಲ್ಲಿ ಸ್ಥಾಪನೆಯಾದ ಟಿಡಿಪಿಯಿಂದ 1995ರಲ್ಲಿ ಎನ್. ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದಲ್ಲಿ ಅಧಿಕಾರ ವಹಿಸಿಕೊಂಡಾಗ ಟಿಡಿಪಿಯನ್ನು ಅದರ ‘ಬೈಸಿಕಲ್ ಚಿಹ್ನೆ’ಯೊಂದಿಗೆ ಪಡೆದರು.
ಸುಮಾರು ಒಂದು ದಶಕದ ಅನಂತರ ಸಮಾಜವಾದಿ ಪಕ್ಷದ ರಚನೆಯಾಗಿ ಮುಲಾಯಂ ಸಿಂಗ್ ಯಾದವ್ ಅವರ ಮಗ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಮುಲಾಯಂ ಅವರ ಸಹೋದರ ಶಿವಪಾಲ್ ಯಾದವ್ ನಡುವೆ ಕಲಹ ಉಂಟಾಗಿ ಪಕ್ಷ ಮತ್ತು ಅದರ ಚಿಹ್ನೆಯ ಮೇಲೆ ಅಧಿಕಾರವನ್ನು 2017ರಲ್ಲಿ ಅಖಿಲೇಶ್‌ಗೆ ನೀಡಲಾಯಿತು.


ಬಿಲ್ಲು ಮತ್ತು ಬಾಣ

ಪ್ರಸ್ತುತ ಸ್ಪರ್ಧೆಯಲ್ಲಿರುವ ಮತ್ತೊಂದು ಚಿಹ್ನೆ ಮಹಾರಾಷ್ಟ್ರದಲ್ಲಿ ‘ಬಿಲ್ಲು ಮತ್ತು ಬಾಣ’. ಏಕನಾಥ್ ಶಿಂಧೆ ನೇತೃತ್ವದ “ನೈಜ” ಶಿವಸೇನೆಗೆ ಹಂಚಲ್ಪಟ್ಟ ಈ ಚಿಹ್ನೆಯನ್ನು ಮೊದಲು 1989ರಲ್ಲಿ ಬಾಳ್ ಠಾಕ್ರೆ ಅವರು ಬಳಸಿದ್ದರು.

1972ರಲ್ಲಿ ರಚಿಸಲಾದ ಜಾರ್ಖಂಡ್ ಮುಕ್ತಿ ಮೋರ್ಚಾ ಜಾರ್ಖಂಡ್‌ನಲ್ಲಿ ಅದೇ ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನು ಬಳಸುತ್ತದೆ. ಬಿಹಾರದ ಜನತಾ ದಳ (ಯುನೈಟೆಡ್) ಪಕ್ಷದ ಚಿಹ್ನೆಯು ‘ಬಾಣ’ವಾಗಿದೆ. 2019 ರಲ್ಲಿ ಚುನಾವಣಾ ಆಯೋಗವು ಮಹಾರಾಷ್ಟ್ರ ಅಥವಾ ಜಾರ್ಖಂಡ್‌ನಲ್ಲಿ ಈ ಚಿಹ್ನೆಯನ್ನು ಬಳಸಲು ಅನುಮತಿಸುವುದಿಲ್ಲ ಎಂದು ಘೋಷಿಸಿತು. .

Exit mobile version