Site icon Vistara News

ನನ್ನನ್ನು ದೇಶದ್ರೋಹಿಯಂತೆ ಕಾಂಗ್ರೆಸ್‌ ಚಿತ್ರಿಸಿದೆ; ಎಲೆಕ್ಷನ್‌ನಲ್ಲಿ ಜನ ಉತ್ತರ ಕೊಡ್ತಾರೆ: ಪ್ರತಾಪ್‌ ಸಿಂಹ

MP Pratap Simha react on Security breach in Parliament

ಕೊಡಗು/ಮೈಸೂರು: ಸಂಸತ್‌ ಭದ್ರತಾ ಲೋಪ (Security breach in Lok Sabha) ಪ್ರಕರಣಕ್ಕೆ ಸಂಬಂಧಪಟ್ಟಂತೆ ನನ್ನನ್ನು ದೇಶದ್ರೋಹಿ ಅಂತ ಚಿತ್ರಿಸುವಂತಹ ಕೆಲಸವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. ನನ್ನ ತಲೆಗೆ ಮುಸಲ್ಮಾನರ ಟರ್ಬನ್ ಇಟ್ಟು, ಅವರ ಶಾಲು ಇಟ್ಟು, ಕೈಗೆ ಬಾಂಬ್ ಕೊಟ್ಟು ಚಿತ್ರಿಸಿದ್ದಾರೆ. ಆದರೆ, ಮೈಸೂರಿನ ಬೆಟ್ಟದಲ್ಲಿ ತಾಯಿ ಚಾಮುಂಡಿ ಇದ್ದಾಳೆ. ಕೊಡಗಿನ ಬ್ರಹ್ಮಗಿರಿಯಲ್ಲಿ ತಾಯಿ ಕಾವೇರಿ ಇದ್ದಾಳೆ. ಕಳೆದ 9.5 ವರ್ಷದಿಂದ ನಾನು ಮಾಡಿದಂತಹ ಕೆಲಸವನ್ನು ನೋಡಿದ ಕೊಡಗು, ಮೈಸೂರು ಜನರಿದ್ದಾರೆ. ಕಳೆದ 20 ವರ್ಷಗಳಿಂದ ನನ್ನ ಬರವಣಿಗೆ ಓದಿರುವಂತಹ ಅಸಂಖ್ಯಾತ ಓದುಗರು ಕರ್ನಾಟಕದಲ್ಲಿ ಇದ್ದಾರೆ. ಅವರು 2024 ಏಪ್ರಿಲ್ – ಮೇ ತಿಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ತೀರ್ಪನ್ನು ಕೊಡುತ್ತಾರೆ ಎಂದು ಸಂಸದ ಪ್ರತಾಪ್‌ ಸಿಂಹ (MP Pratap Simha) ಹೇಳಿದ್ದಾರೆ.

ಸಂಸತ್‌ ಭವನದಲ್ಲಿ ಭದ್ರತಾ ಲೋಪ ಎಸಗಿದ್ದ ಆರೋಪಿಗಳಿಗೆ ಪಾಸ್‌ ಕೊಟ್ಟ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ್‌ ಸಿಂಹ, ಇಲ್ಲಿ ಜನರೇ ಅಲ್ಟಿಮೇಟ್‌ ಆಗಿದ್ದಾರೆ. ನಮಗೆ ಸರ್ಟಿಫಿಕೇಟ್ ಕೊಡಬೇಕಾದವರು ಜನರೇ ಆಗಿದ್ದಾರೆ. ಆ ಜನ ನನಗೆ ಏನು ಸರ್ಟಿಫಿಕೇಟ್ ಕೊಡುತ್ತಾರೆ ಅನ್ನೋದು ಏಪ್ರಿಲ್ – ಮೇ ತಿಂಗಳಿನಲ್ಲಿ ಗೊತ್ತಾಗುತ್ತದೆ ಎಂದು ಹೇಳಿದರು.

ಸಂಸತ್‌ ಭವನ ಭದ್ರತಾ ಲೋಪ ವಿಚಾರ ಎಂಪಿ ಎಲೆಕ್ಷನ್‌ಗೆ ಎಫೆಕ್ಟ್ ಆಗುತ್ತದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ್‌ ಸಿಂಹ, ಎರಡು ಬಾರಿ ಜನ ನನ್ನ ಕೈ ಹಿಡಿದಿದ್ದಾರೆ. ಮೂರನೇ ಬಾರಿಯೂ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸ ನನಗೆ ಇದೆ. ಕಾಂಗ್ರೆಸ್‌ನವರು ಏನೇ ಪ್ರಯತ್ನ ಮಾಡಲಿ, ನನ್ನನ್ನು ಏನೇ ಚಿತ್ರಿಸಲಿ. ದೇಶದ್ರೋಹಿಗಳು ಯಾರು? ಟಿಪ್ಪು ಜಯಂತಿ ಮಾಡಿದ್ದು ಯಾರು? ಹಿಂದು ವಿರೋಧಿಗಳು ಯಾರು? ಅನ್ನೋದು ರಾಜ್ಯದ ಜನಕ್ಕೆ ಗೊತ್ತಿದೆ. ನಾನು ಏನು ಅನ್ನೋದನ್ನು ಜನ ತೀರ್ಮಾನ ಮಾಡುತ್ತಾರೆ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದರು.

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಲು ಕಾಂಗ್ರೆಸ್‌ ಚಿಂತನೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ್‌ ಸಿಂಹ, 2004ರಲ್ಲಿ ಕಾಂಗ್ರೆಸ್‌ ಆಡಳಿತ ಇತ್ತು. ಈ ವೇಳೆ‌ ಅಲ್ಪಸಂಖ್ಯಾತರಿಗೆ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಯೂನಿವರ್ಸಿಟಿ‌ ನಿರ್ಮಾಣ ಮಾಡಲು ಮುಂದಾಗಿದ್ದರು. ದೇವರಾಜ ಮಾರ್ಕೆಟ್ ವಿಚಾರ ಬಂದಾಗ ಸಿದ್ದರಾಮಯ್ಯ ಅವರು ಮಹಾರಾಜ ಏನ್ ಅವನ ದೊಡ್ಡು ಕೊಟ್ಟು ತಂದಿದ್ನಾ ಅಂತ ಕೇಳಿದ್ದರು. ಸಿದ್ದರಾಮಯ್ಯ ಅವರಿಗೆ ಅಭಿಮಾನ ಇರುವುದು ಟಿಪ್ಪುಗೆ ಹೊರತು, ರಾಜ ಮನೆತನಕ್ಕಲ್ಲ. ನಮಗೂ ಆ ವಿಚಾರ ಮನವರಿಕೆ ಆಗಿದೆ. ನಾನು 2000 ರೂಪಾಯಿ ಕೊಟ್ಟೆ, ಕರೆಂಟ್ ಕೊಟ್ಟೆ ಎಂದು ಹೇಳುತ್ತೀರಿ. ನಿಮ್ಮ ದುಡಿಮೆ ಹಣದಲ್ಲಿ ಕೊಟ್ಟಿದ್ದೀರಾ? ನಾನ್ ಮಾಡಿದೆ, ಮಾಡಿದೆ ಅಂತೀರಲ್ಲ, ನಿಮ್ ಮನೆಯಿಂದ ದುಡ್ಡು ತಂದು ಕೊಟ್ಟಿದ್ದೀರಾ? ಅವರ ಮಾತಿಗೆ ಅರ್ಥವೇ ಇಲ್ಲ. ಸಿದ್ದರಾಮಯ್ಯ ವಿವೇಚನಾರಹಿತವಾಗಿ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

ಮೈಸೂರು ಏರ್‌ಪೋರ್ಟ್‌ಗೆ ಟಿಪ್ಪು ಹೆಸರಿಡಲು ಆಗಲ್ಲ

ಮೈಸೂರು ವಿಮಾನ ನಿಲ್ದಾಣ‌ವನ್ನು ಮೇಲ್ದರ್ಜೆಗೆ ಏರಿಸುವ ಸಂದರ್ಭ ನಾಲ್ವಡಿ‌ ಕೃಷ್ಣರಾಜ ಒಡೆಯರ್ ಹೆಸರು ಪ್ರಸ್ತಾಪ‌ ಮಾಡಲಾಗಿದೆ. ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಆ‌ ಹೆಸರನ್ನು ಎಂದಿಗೂ ಬದಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ: BY Vijayendra: ಲೋಕಸಭೆ ಎಲೆಕ್ಷನ್‌ವರೆಗೂ ಮನೆಗೆ ಹೋಗುವಂತಿಲ್ಲ: ಅವಿರತ ದುಡಿಮೆಗೆ ವಿಜಯೇಂದ್ರ ಕರೆ

ಸಿದ್ದರಾಮಯ್ಯ ಅವರು ಪ್ರೈವೇಟ್ ಜೆಟ್‌ನಲ್ಲಿ ಓಡಾಡಿದ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿಯವರ ವಿಮಾನ ಸಂಚಾರಕ್ಕೆ ಹೋಲಿಕೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರತಾಪ್‌ ಸಿಂಹ, ಪ್ರಧಾನಿ ನರೇಂದ್ರ ಮೋದಿ, ಭದ್ರತೆ ವಿಚಾರವನ್ನು ಪಾರ್ಲಿಮೆಂಟ್‌ನಲ್ಲಿ‌‌ ತೀರ್ಮಾನಿಸಲಾಗಿದೆ. ಏರ್‌ಫೋರ್ಸ್ ವಿಮಾನದಲ್ಲಿ ಅವರು ಓಡಾಡುತ್ತಾರೆ. ಸರ್ಕಾರದ ವಿಮಾನದಲ್ಲಿ ಅವರು ಓಡಾಡುತ್ತಾರೆ. ಪ್ರೈವೇಟ್ ಜೆಟ್‌ನಲ್ಲಿ ಚೇಲಾಗಳನ್ನು, ದುಡ್ಡು ಫೀಡ್ ಮಾಡುವವರನ್ನು ಕೂರಿಸಿಕೊಂಡು ಓಡಾಡಲ್ಲ. ಅವರು ಸರ್ಕಾರದ ವಿಮಾನದಲ್ಲೇ ಓಡಾಡುವುದು. ದೇಶದಲ್ಲಿ 29 ಮಂದಿ ಮುಖ್ಯಮಂತ್ರಿ, 7 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಿಎಂ ಇದ್ದಾರೆ. ನಿಮ್ಮನ್ನು ನೀವು ಪ್ರಧಾನಿ ಎತ್ತರಕ್ಕೆ ಹೋಲಿಸಿಕೊಳ್ಳಬೇಡಿ ಎಂದು ಪ್ರತಿಕ್ರಿಯೆ ನೀಡಿದರು.

Exit mobile version