ಬೆಂಗಳೂರು: ರಂಗಶಂಕರದಲ್ಲಿ ಬುಧವಾರ (ನ. 29) ಆಯೋಜನೆಯಾಗಿದ್ದ ಪ್ಯಾಲೆಸ್ತೀನ್ ಪರವಾದ ಕಿರು ನಾಟಕ, ಕವನ ವಾಚನ ಕಾರ್ಯಕ್ರಮಕ್ಕೆ ಪೊಲೀಸರು ನಿರಾಕರಣೆ ಮಾಡಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ತಾವು ಯಾವುದೇ ರೀತಿಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವುದಿಲ್ಲ. ರಾಜ್ಯ ಸರ್ಕಾರವು ಸಂವಿಧಾನದ ಮೂಲ ಆಶಯಗಳಡಿ ನಡೆಸುವ ಚಟುವಟಿಕೆಯನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಈ ಸಂಬಂಧ ಗೃಹ ಸಚಿವ ಡಾ. ಜಿ. ಪರಮೇಶ್ವರ್ (Home Minister Dr G Parameshwara) ಅವರನ್ನೂ ಸಹ ಕರೆದು ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಪೊಲೀಸರ ಕ್ರಮಕ್ಕೆ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ. ಈ ಕಾರ್ಯಕ್ರಮಕ್ಕೆ ಎಂ.ಡಿ. ಪಲ್ಲವಿ (MD Pallavi) ಸೇರಿ ಹಲವು ಕಲಾವಿದರು ಭಾಗಿಯಾಗಬೇಕಿತ್ತು.
ಈ ಸಂಬಂಧ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿರುವ ಸಿಎಂ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಸಂವಿಧಾನದ ಮೂಲ ಆಶಯಗಳಡಿ ನಡೆಸುವ ಚಟುವಟಿಕೆಯನ್ನು ನಿಲ್ಲಿಸುವುದಿಲ್ಲ. ಅಂತಹ ಚಟುವಟಿಕೆಯನ್ನು ತಡೆಯುವ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಕಥೆ, ಕಾವ್ಯ ನಾಟಕ ಮತ್ತು ಸಂಗೀತ ಮುಂತಾದ ಸೃಜನಶೀಲ ಅಭಿವ್ಯಕ್ತಿಯನ್ನು ತಡೆಯುವುದಿಲ್ಲ. ಸಂವಿಧಾನದ ಮೂಲಸ್ಫೂರ್ತಿಗೆ ವಿರುದ್ಧವಾಗದಂತೆ ನಡೆಯುವ ಎಲ್ಲ ಅಭಿವ್ಯಕ್ತಿ ಪರವಾಗಿ ಸರ್ಕಾರವಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: DK Shivakumar : ಡಿಕೆಶಿಯನ್ನು ಗೇಟ್ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!
ಜನರಿಗೆ ಆತಂಕ ಬೇಡ
ಕೆಳಹಂತದ ಪೊಲೀಸ್ ಅಧಿಕಾರಿಗಳ ತಪ್ಪು ತಿಳಿವಳಿಕೆಯ ಕಾರಣಕ್ಕೆ ಈ ರೀತಿಯಾಗಿದೆ. ಒಂದೆರಡು ಅನಾವಶ್ಯಕವಾದ ಗೊಂದಲಗಳು ನಿರ್ಮಾಣವಾಗಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಯಾವುದೇ ಗೊಂದಲ ಸೃಷ್ಟಿ ಆಗದಂತೆ ನೋಡಿಕೊಳ್ಳಬೇಕೆಂದು ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಸಂವಿಧಾನದ ಆಶಯವನ್ನು ಎತ್ತಿ ಹಿಡಿಯುವ ಕೆಲಸಗಳ ಜತೆಗೆ ಸರ್ಕಾರ ನಿಲ್ಲುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರದಲ್ಲಿ ರಾಜ್ಯದ ಜನರು ಆತಂಕಿತರಾಗಬಾರದೆಂಬುದು ನನ್ನ ವಿನಂತಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.