Site icon Vistara News

ದೇಶದಲ್ಲಿ ಕಾಂಗ್ರೆಸ್ ಮರು ಜೀವಕ್ಕೆ ಕರ್ನಾಟಕದಲ್ಲಿನ ರಾಹುಲ್ ಪಾದಯಾತ್ರೆ ನಿರ್ಣಾಯಕ

bharat jodo

ವಿಸ್ತಾರ ವಿಶ್ಲೇಷಣೆ

ಮಾರುತಿ ಪಾವಗಡ, ಬೆಂಗಳೂರು

ರಾಹುಲ್ ಗಾಂಧಿ ನೇತೃತ್ವದ ಕನ್ಯಾಕುಮಾರಿ ಟು ಕಾಶ್ಮೀರ ಪಾದಯಾತ್ರೆಯಲ್ಲಿ ಕರ್ನಾಟಕವನ್ನು ಹೆಚ್ಚು ಫೋಕಸ್ ಮಾಡಲಾಗಿದೆ. ಸುಮಾರು 3500 ಕಿ.ಮೀ ದೂರದ 150 ದಿನಗಳ ಭಾರತ್ ಜೋಡೊದಲ್ಲಿ ಅತಿಹೆಚ್ಚು ಗಮನ ಸೆಳೆಯುತ್ತಿರುವುದು ಕರ್ನಾಟಕದಲ್ಲಿ ನಡೆಯುತ್ತಿರುವ 21 ದಿನಗಳ ಪಾದಯಾತ್ರೆ. ರಾಹುಲ್‌ ಪಾದಯಾತ್ರೆಯಿಂದ ಕರ್ನಾಟಕ ರಾಜಕಾರಣದಲ್ಲಿ ಮಹತ್ವದ ಬದಲಾವಣೆಗಳಾಗುತ್ತಾ, 2023ರಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿಯಲು ಇದು ಸಹಾಯವಾಗುತ್ತಾ, 2024ಕ್ಕೆ ಕೇಂದ್ರದಲ್ಲಿ ಅಧಿಕಾರ ಪಡೆಯಲು ಕಾಂಗ್ರೆಸ್‌ ಗೆ ಈ ಯಾತ್ರೆ ಹೇಗೆ ಸಹಕಾರಿ ಆಗಬಹುದು ಎಂಬ ಲೆಕ್ಕಾಚಾರ ಈಗ ನಡೆಯುತ್ತಿದೆ.

ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಯಾವಾಗಲೂ ಹಾಟ್‌ ಫೇವರಿಟ್‌ ರಾಜ್ಯ. ಹೈಕಮಾಂಡ್ ಪಾಲಿಗಂತೂ ಕರ್ನಾಟಕ ಒಂದು ರೀತಿಯ ಮರುಭೂಮಿಯ ಓಯಸಿಸ್ ಇದ್ದಂತೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರನ್ನು ರಾಜ್ಯದಿಂದ ಗೆಲ್ಲಿಸಿ ಲೋಕಸಭೆಗೆ ಕಳುಹಿಸಲಾಗಿತ್ತು. 2014ರಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲೂ ಕಾಂಗ್ರೆಸ್ ನೆಲೆಕಚ್ಚಿದಾಗಲೂ ಒಂಬತ್ತು ಸ್ಥಾನಗಳನ್ನ ಗೆಲ್ಲಿಸುವ ಮೂಲಕ ಮತ್ತೊಮ್ಮೆ ಕಾಂಗ್ರೆಸ್ ಗೆ ಕರ್ನಾಟಕವೇ ಓಯಸಿಸ್ ಎಂಬುದನ್ನು ಸಾಬೀತು ಮಾಡಿತ್ತು. ಇದೀಗ ಮತ್ತೊಮ್ಮೆ ಕಾಂಗ್ರೆಸ್‌ ಅಧಿಕಾರಕ್ಕೇರಬೇಕಾದರೆ, ಭವಿಷ್ಯದ ಭರವಸೆ ಮೂಡಬೇಕಾದರೆ ಅದು ಕರ್ನಾಟಕದಿಂದಲೇ ಆಗಬೇಕಿದೆ. ಕರ್ನಾಟಕದಲ್ಲಿ ಅಧಿಕಾರಕ್ಕೇರಿದರೆ ದೇಶದ ಚುಕ್ಕಾಣಿ ಹಿಡಿಯಲು ಸಲೀಸಾಗಬಹುದು ಅನ್ನೋ ಲೆಕ್ಕಾಚಾರ ಕಾಂಗ್ರೆಸ್‌ ಪಾಳಯದಲ್ಲಿದೆ. ಇದೇ ಕಾರಣಕ್ಕೆ ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಹುಲ್ ಗಾಂಧಿ ರಾಜ್ಯದಲ್ಲಿ ಹೆಚ್ಚು ದಿನ ಪಾದಯಾತ್ರೆ ಮಾಡಲು ತೀರ್ಮಾನ ಮಾಡಿದ್ದಾರೆ. ಬಿಜೆಪಿ ಆಡಳಿತದ ವಿರುದ್ಧ ಜನಾಕ್ರೋಶ, ಕಾಂಗ್ರೆಸ್ ನಾಯಕರ ಅಂತರಿಕ ಜಗಳಕ್ಕೆ ತೆರೆ ಎಳೆದು 2023ರಲ್ಲಿ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲೆಕ್ಷನ್ ಟ್ರೆಂಡ್ ಸೃಷ್ಟಿ ಮಾಡಲು ರಾಜ್ಯದ ಮೇಲೆ ರಾಹುಲ್ ಗಾಂಧಿಯವರು ಹೆಚ್ಚು ಫೋಕಸ್ ಮಾಡಿದ್ದಾರೆ.

ಇನ್ನೆರಡು ವರ್ಷಗಳ ಬಳಿಕ ದೇಶದಲ್ಲಿ ನಡೆಯಲಿರುವ ಲೋಕಸಭಾ ಮಹಾಸಂಗ್ರಮ ಕಾಂಗ್ರೆಸ್ ಪಾಲಿಗೆ ಮಾಡು ಇಲ್ಲವೇ ಮಡಿ ಅನ್ನುವಷ್ಟರ ಮಟ್ಟಿಗೆ ಮಹತ್ವದಾಗಿದೆ. 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ಬಳಿಕ ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡು ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿ ಮಾತ್ರ ಅಧಿಕಾರ ಉಳಿಸಿಕೊಂಡಿದೆ. ಹೀಗಾಗಿ ಆರು ತಿಂಗಳ ಹಿಂದೆ ರಾಜಸ್ಥಾನದಲ್ಲಿ ನಡೆದ ಹಿರಿಯ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಪಕ್ಷವನ್ನು ಪುನರ್ ಸಂಘಟನೆ ಮಾಡದಿದ್ದರೆ ಚುನಾವಣೆ ಗೆಲುವು ಅಸಾಧ್ಯ ಅನ್ನೋ ಅಭಿಪ್ರಾಯ ವ್ಯಕ್ತವಾಗಿತ್ತು. ಇದಕ್ಕೆ ಅವರು ಆಯ್ಕೆ ಮಾಡಿಕೊಂಡ ದಾರಿ ಕಾಶ್ಮೀರದಿಂದ ಕನ್ಯಾಕುಮಾರಿವರೆ ಪಾದಯಾತ್ರೆ. ಈ ಮೂಲಕ ಪಕ್ಷವನ್ನು ಪುನರ್ ಸಂಘಟಿಸುವುದು. ರಾಹುಲ್ ಪ್ರವಾಸದ ವೇಳಾಪಟ್ಟಿಯಲ್ಲಿ, ಕಾಂಗ್ರೆಸ್ ಗೆ ಪೂರಕ ವಾತಾವರಣ ಇರುವ ಕೇರಳ ಮತ್ತು ಕರ್ನಾಟಕದಲ್ಲಿ ಮಾತ್ರ ಹೆಚ್ಚು ದಿನ ಮೀಸಲಿಡಲಾಗಿದೆ. ಕೇರಳದಲ್ಲಿ 18 ದಿನ ಮತ್ತು ಕರ್ನಾಟಕದಲ್ಲಿ 21 ದಿನ. ಯಾತ್ರೆ 22 ರಾಜ್ಯಗಳನ್ನು ಹಾದು ಹೋಗಲಿದೆ.

ಕಳೆದ ಬಾರಿ ಸ್ಥಾನ ಕಳೆದುಕೊಂಡ ಜಿಲ್ಲೆಗಳಲ್ಲಿ ಹೆಚ್ಚು ಪಾದಯಾತ್ರೆ ಮಾಡಲಾಗುತ್ತದೆ.ಮೊದಲಿನಿಂದಲೂ ಈ ಕ್ಷೇತ್ರಗಳು ಕಾಂಗ್ರೆಸ್ ಗೆದ್ದ ಕ್ಷೇತ್ರಗಳು. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವುದಕ್ಕೆ ಸಂಘಟನೆ ದುರ್ಬಲ ಆಗುವುದರ ಜತೆಗೆ ನಾಯಕರಲ್ಲಿ ಇದ್ದ ಭಿನ್ನಾಭಿಪ್ರಾಯ, ಲಿಂಗಾಯುತ ಮತ್ತು ಒಕ್ಕಲಿಗ ಸಮುದಾಯ ವಿರೋಧ ಕಟ್ಟಿಕೊಂಡಿದ್ದು ಮುಖ್ಯ ಕಾರಣವಾಯಿತು. ಹೀಗಾಗಿ ಈ ಬಾರಿ ರಾಹುಲ್ ಗಾಂಧಿ ಪಾದಯಾತ್ರೆಯಿಂದ ಆ ಭಾಗದ ನಾಯಕರ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸುವುದರ ಜತೆಗೆ 2023ಕ್ಕೆ ಒಗ್ಗಟ್ಟಿನಿಂದ ಮುಂದೆ ಸಾಗಿ ಅನ್ನೋ ಸಂದೇಶ ರವಾನೆ ಮಾಡಲಿದ್ದಾರೆ.

2014ರಲ್ಲಿ ಚಾಮರಾಜನಗರ, ತುಮಕೂರು, ಚಿತ್ರದುರ್ಗ, ರಾಯಚೂರು ಜಿಲ್ಲೆಗಳಲ್ಲಿ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಆದರೆ 2019ರಲ್ಲಿ ಈ ಸ್ಥಾನಗಳನ್ನ ಕಳೆದುಕೊಂಡಿತ್ತು. ಹೀಗಾಗಿ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಕಳೆದ ಬಾರಿ ಕೈ ತಪ್ಪಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಮತ್ತೆ ಕಾಂಗ್ರೆಸ್ ಬಾವುಟ ಹಾರಿಸಲು ಹಳೆ ಮೈಸೂರು ಭಾಗ, ಮಧ್ಯ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕದಲ್ಲಿ ಸುದೀರ್ಘ ಪಾದಯಾತ್ರೆಯನ್ನು ರಾಹುಲ್ ಮಾಡಲಿದ್ದಾರೆ. ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಜಿಲ್ಲೆಗಳ ಮೂಲಕ ರಾಹುಲ್ ತೆಲಂಗಾಣ ಪ್ರವೇಶ ಮಾಡಲಿದ್ದಾರೆ. 30ಕ್ಕೂ ಅಧಿಕ ವಿಧಾನಸಭಾ ಕ್ಷೇತ್ರಗಳಲ್ಲಿ ರಾಹುಲ್ ಯಾತ್ರೆ ನಡೆಯಲಿದೆ.

30 ಕ್ಷೇತ್ರಗಳಲ್ಲಿ ಹವಾ ಎಬ್ಬಿಸಲು ಪ್ಲ್ಯಾನ್

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ-ನಂಜನಗೂಡು, ಮೈಸೂರು ಜಿಲ್ಲೆಯ ವರುಣಾ, ಚಾಮುಂಡೇಶ್ವರಿ, ಕೃಷ್ಣಾರಾಜ, ಚಾಮರಾಜ, ನರಸಿಂಹರಾಜ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ, ಮೇಲುಕೋಟೆ, ನಾಗಮಂಗಲ. ತುಮಕೂರು ಜಿಲ್ಲೆಯ ತುರುವೇಕೆರೆ, ಗುಬ್ಬಿ, ಚಿಕ್ಕನಾಯಕನಹಳ್ಳಿ, ಶಿರಾ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೊರು. ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ಬಳಿಕ ರಾಯಚೂರು ಹಾಗೂ ರಾಯಚೂರು ಜಿಲ್ಲೆಯ ಗ್ರಾಮಾಂತರದ ಮೂಲಕ ತೆಲಂಗಾಣ ರಾಜ್ಯಕ್ಕೆ ಯಾತ್ರೆ ಪ್ರವೇಶ ಪಡೆಯುತ್ತದೆ. ರಾಹುಲ್ ಗಾಂಧಿ ಪಾದಯಾತ್ರೆ ಮಾಡುತ್ತಿರುವ ಬಹುತೇಕ ಕ್ಷೇತ್ರಗಳು 2013 ಮತ್ತು 2008ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದ ಕ್ಷೇತ್ರಗಳು. 2023ರಲ್ಲಿ ಈ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಕಾಂಗ್ರೆಸ್ ಕಾರ್ಯತಂತ್ರವಾಗಿದೆ.

ಇದನ್ನೂ ಓದಿ | ಇಂದು ಭಾರತ್‌ ಜೋಡೋ ಯಾತ್ರೆ ರಾಜ್ಯ ಪ್ರವೇಶ, 21 ದಿನ ಹೆಜ್ಜೆ ಹಾಕಲಿರುವ ರಾಹುಲ್‌ ಗಾಂಧಿ

ರಾಹುಲ್ ಯಾತ್ರೆಯಿಂದಲೇ ಎಲೆಕ್ಷನ್ ಟ್ರೆಂಡ್ ಸೃಷ್ಟಿಗೆ ಯತ್ನ

ಯಾತ್ರೆ ಯಶಸ್ವಿ ಮಾಡಲು ರಾಜ್ಯ ಕಾಂಗ್ರೆಸ್ ನಾಯಕರು ಒಂದು ತಿಂಗಳಿಂದ ಭಾರೀ ಸಿದ್ಧತೆ ಮಾಡಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಂತೂ ಕಳೆದ ಒಂದು ತಿಂಗಳಿಂದ ನಿದ್ದೆ ಬಿಟ್ಟು ತಯಾರಿಯಲ್ಲಿ ತೊಡಗಿದ್ದಾರೆ. ಪಾದಯಾತ್ರೆ ಹಾದು ಹೋಗುವುದು ಕೇವಲ ಏಳು ಜಿಲ್ಲೆಗಳಲ್ಲಿ ಮಾತ್ರವಾದರೂ, ಜನ ಸೇರಿಸಲು ಎಲ್ಲ ಜಿಲ್ಲೆಗಳ ಮುಖಂಡರಿಗೆ ಟಾಸ್ಕ್ ನೀಡಲಾಗಿದೆ. 224 ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರು ಈ ಪಾದಯಾತ್ರೆಯಲ್ಲಿ ಭಾಗಿಯಾಗುವಂತೆ ಸೂಚಿಸಲಾಗಿದೆ.

ಡಿಕೆಶಿ-ಸಿದ್ದು ಸಂಘರ್ಷವನ್ನು ಯಾತ್ರೆ ತಣಿಸೀತೆ?

ಬಿಜೆಪಿ ವಿರುದ್ಧ ಏನೇ ಆರೋಪಗಳು ಇದ್ದರೂ ಕಾಂಗ್ರೆಸ್ ನ ಅಂತರಿಕ ಕಚ್ಚಾಟವೇ ಪಕ್ಷದ ಹಿನ್ನಡೆಗೆ ಕಾರಣವಾಗುತ್ತದೆ ಎಂಬ ಸ್ಪಷ್ಟ ಚಿತ್ರಣ ಪಕ್ಷದ ನಾಯಕರಿಗಿದೆ. ಕುಟುಂಬದಲ್ಲಿ ಅಣ್ಣ ತಮ್ಮಂದಿರ ಜಗಳ ಪಕ್ಕದ ಮನೆಯವರಿಗೆ ಲಾಭ ಆದಂತೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಭಿನ್ನಾಭಿಪ್ರಾಯ ಬಿಜೆಪಿಗೆ ಲಾಭವಾಗುತ್ತದೆ ಎನ್ನುವುದು ಸ್ಪಷ್ಟ. ಮುಂದಿನ ಸಿಎಂ, ಸಿದ್ದರಾಮೋತ್ಸವ ಸೇರಿದಂತೆ ಹಲವು ವಿಚಾರಗಳಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯಗಳು ಬಹಿರಂಗವಾಗಿವೆ. ಬಿಜೆಪಿ ನಾಯಕರು ಇದನ್ನೇ ಕಾಂಗ್ರೆಸ್ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸಿದ್ದರಾಮೋತ್ಸವದ ಬಳಿಕ ಭರ್ಜರಿ ಉತ್ಸಾಹದಲ್ಲಿದ್ದ ಕಾಂಗ್ರೆಸ್ ಗೆ ಶಿವಕುಮಾರ್ ಕೊಟ್ಟ ರಿವರ್ಸ್ ಹೇಳಿಕೆಗಳು ಕೆಲವೇ ದಿನಗಳಲ್ಲಿ ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಬಹಿರಂಗವಾಗಿಸಿತು. ಇದೀಗ ಈ ಪಾದಯತ್ರೆಯಲ್ಲಿ ರಾಹುಲ್ ಗಾಂಧಿ ಜತೆ ಇಬ್ಬರನ್ನೂ ಜೊತೆಯಾಗಿ ಹೆಜ್ಜೆ ಹಾಕಿಸುವ ಮೂಲಕ ಪಕ್ಷದ ನಾಯಕರಲ್ಲಿ ಯಾವುದೇ ಗೊಂದಲ ಇಲ್ಲ ಅನ್ನೋ ಸಂದೇಶವನ್ನು ರವಾನೆ ಮಾಡಿ ಆ ಮೂಲಕ ಚುನಾವಣೆಗಳಲ್ಲಿ ಗೆಲುವಿನ ಲಾಭ ಪಡೆಯಲು ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ ಯೋಜನೆ ರೂಪಿಸಿದ್ದಾರೆ.

ಇದನ್ನೂ ಓದಿ | Bharat jodo | ರಾಹುಲ್‌ ಗಾಂಧಿ ಬದಲು ನರೇಂದ್ರ ಮೋದಿ ಪಾದಯಾತ್ರೆ ಮಾಡ್ತಿದಾರೆ ಎಂದ ಸಿದ್ದರಾಮಯ್ಯ!

ಬಿಜೆಪಿ ಸರ್ಕಾರದ ವಿರುದ್ಧದ ಅಲೆಯನ್ನು ಬಳಸಿಕೊಳ್ಳಲು ತಂತ್ರ

ಮೂರು ವರ್ಷ ಆಡಳಿತ ಮಾಡಿರುವ ರಾಜ್ಯ ಬಿಜೆಪಿ ಸರ್ಕಾರದ ಕಾರ್ಯವೈಖರಿ ವಿರುದ್ಧ ಕಾಂಗ್ರೆಸ್ ಆಕ್ರಮಣಕಾರಿಯಾಗಿ ಪ್ರಚಾರ ಮಾಡುತ್ತಿದೆ‌. ಪಿಎಸ್‌ಐ ನೇಮಕಾತಿ ಹಗರಣ, ಟೆಂಡರ್ ಗೋಲ್ಮಾಲ್ ಮತ್ತು 40% ಕಮಿಷನ್ ಆರೋಪದಲ್ಲಿ ಬಿಜೆಪಿ ಸರ್ಕಾರ ಈಗಾಗಲೇ ಮುಜುಗರಕ್ಕೆ ಈಡಾಗಿದೆ. ಇದನ್ನು ರಾಹುಲ್ ಗಾಂಧಿ ಪಾದಯಾತ್ರೆ ಸಂದರ್ಭದಲ್ಲಿ ಹೆಚ್ಚು ಫೋಕಸ್ ಮಾಡಲಿದ್ದಾರೆ.

ಒಟ್ಟಾರೆ, ರಾಹುಲ್ ಗಾಂಧಿ ನೇತೃತ್ವದ ಪಾದಯಾತ್ರೆ ರಾಜ್ಯ ಮತ್ತು ದೇಶದಲ್ಲಿ ಪಕ್ಷದ ಚೇತರಿಕೆಗೆ ನಿರ್ಣಾಯಕವಾಗಿದೆ.

Exit mobile version