ಮಾರುತಿ ಪಾವಗಡ, ಬೆಂಗಳೂರು
2023ರ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ವಿಧಾನ ಸಭೆಯ ಸಾರ್ವತ್ರಿಕ ಚುನಾವಣೆ ರಾಜ್ಯ ರಾಜಕಾರಣದಲ್ಲಿ ಹಲವು ಲೆಕ್ಕಾಚಾರಗಳನ್ನು ಹಾಕಲು ಕಾರಣವಾಗಿದೆ. ಹೀಗಾಗಿ ಚುನಾವಣೆ ದೃಷ್ಟಿಯಿಂದ ಪ್ರತಿಯೊಂದು ಬೆಳವಣಿಗೆಗೂ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ ನಡೆಯುತ್ತಿದೆ. ಸೆಪ್ಟೆಂಬರ್ 13ರಿಂದ 24ರವರೆಗೆ ಬೆಂಗಳೂರಿನ ಅಧಿವೇಶನ ನಡೆಯಿತಲ್ಲ, ಅದರ ಸಂದರ್ಭದಲ್ಲೆ ವಿಧಾನಸೌಧದ ಪಡಸಾಲೆ, ಮೊಗಸಾಲೆಗಳಲ್ಲಿ ಅನೇಕ ಬೆಳವಣಿಗೆಗಳು ನಡೆದವು. ಇವು ಒಂದಕ್ಕೊಂದು ವಿಭಿನ್ನವಾಗಿದ್ದರೂ, ಒಟ್ಟಾರೆ ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದವು ಹಾಗೂ ಭವಿಷ್ಯದ ರಾಜಕಾರಣವನ್ನು ಪ್ರಭಾವಿಸಬಲ್ಲವು.
1. ಸಿದ್ದರಾಮಯ್ಯ-HDK ಪ್ಯಾಚ್‌ಅಪ್ ಆಯ್ತ?
ಸಮ್ಮಿಶ್ರ ಸರ್ಕಾರ ಪತನದ ಹಿಂದೆ ಸಿದ್ದರಾಮಯ್ಯ ಕೈವಾಡ ಇದೆ ಎಂಬ ಕುಮಾರಸ್ವಾಮಿ ಹೇಳಿಕೆಯಿಂದ ಶುರುವಾಗಿದ್ದ ಉಭಯ ನಾಯಕರ ನಡುವಿನ ಹಾವು ಮುಂಗುಸಿ ಜಿದ್ದಾಜಿದ್ದಿನ ಪಾಲಿಟಿಕ್ಸ್ ಹಲವು ಬಾರಿ ಸದನದಲ್ಲಿಯೇ ವಿಭಿನ್ನ ಅಭಿಪ್ರಾಯಗಳು ಮೂಡಿ ಗದ್ದಲ ಜೋರಾಗಿತ್ತು. ಆದರೆ ಈ ಅಧಿವೇಶನ ಸಮಯದಲ್ಲಿ ಉಭಯ ನಾಯಕರು ಎಲ್ಲವನ್ನೂ ಮರೆತು ಒಂದಾಗಲು ಮುಂದಾದರೇ ಎಂಬ ಕುತೂಹಲ ಮೂಡಿದೆ. ಅಥವಾ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದರೆ ನನಗೆ ನೀನು-ನಿನಗೆ ನಾನು ಎನ್ನುವ ಮಾತುಕತೆಗೆ ವೇದಿಕೆ ಕಲ್ಪಿಸುವ ಮೊದಲ ಪ್ರಯತ್ನವೇ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣ ಇದೆ.
ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಬಿಎಂಎಸ್ ಕಾಲೇಜನಿನಲ್ಲಿ ನಡೆದಿದೆ ಎನ್ನಲಾದ ಹಗರಣವನ್ನು ಕುಮಾರಸ್ವಾಮಿ ಸದನದಲ್ಲಿ ಪ್ರಸ್ತಾಪ ಮಾಡಿದರು. ಕುಮಾರಸ್ವಾಮಿ ಜತೆ ಕುಶಲೋಪರಿ ವಿಚಾರಿಸಿದ ನಂತರ ಈ ವಿಷಯವನ್ನು ಪ್ರಸ್ತಾಪ ಮಾಡಿದ ಸಿದ್ದರಾಮಯ್ಯ, ಪ್ರಕರಣವನ್ನು ತನಿಖೆಗೆ ಒಪ್ಪಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದರು.
ಇದನ್ನೂ ಓದಿ | ಮೊಗಸಾಲೆ ಅಂಕಣ | ಬಸವರಾಜ ಹೊರಟ್ಟಿಯವರ ಮುಂದಿನ ನಡೆ?
ಆರು ವರ್ಷಗಳ ಬಳಿಕ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದ ಸಿದ್ದರಾಮಯ್ಯ, ಇಬ್ಬರ ನಡುವೆ ಯಾವುದೇ ಅಸಮಾಧಾನ, ಭಿನ್ನಾಭಿಪ್ರಾಯ ಇಲ್ಲ ಎಂಬ ಸಂದೇಶ ನೀಡಲು ಮುಂದಾಗಿದ್ದಾರೆ.ತಮ್ಮ ವಿರುದ್ಧ ಅಸಮಾಧಾನಗೊಂಡಿದ್ದ ಒಕ್ಕಲಿಗ ಸಮುದಾಯದ ಮನವೊಲಿಸಲು ಮುಂದಾಗಿದ್ದಾರೆ ಎಂಬ ಮಾತುಗಳು ವಿಧಾನಸೌಧದ ಮೊಗಸಾಲೆಯಲ್ಲಿ ಶಾಸಕರ ನಡುವಿನ ಸಾಮಾನ್ಯ ಚರ್ಚೆಗೆ ಕಾರಣವಾಯಿತು. ಡಿ.ಕೆ. ಶಿವಕುಮಾರ್ ಸಹ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವುದರಿಂದ ಸಿದ್ದರಾಮಯ್ಯ ಈ ರೀತಿ ರಾಜಕೀಯ ತಂತ್ರಗಾರಿಕೆ ಮಾಡಲು ಮುಂದಾಗಿದ್ದಾರೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಲೇ ಇದ್ದವು.
2. ಮೊಗಸಾಲೆಯಲ್ಲಿ ರೇವಣ್ಣ ಜತೆ ಸಿದ್ದರಾಮಯ್ಯ ಮಾತುಕತೆ
ದೇವೇಗೌಡರನ್ನು ನಿವಾಸದಲ್ಲಿ ಭೇಟಿ ಮಾಡಿ ಬಂದ ಮಾರನೇ ದಿನ ಎದುರಿಗೆ ಕಾಣಸಿದ ರೇವಣ್ಣ ನೋಡಿ ಸಿದ್ದರಾಮಯ್ಯ ಮಾತು ಶುರು ಮಾಡಿದರು. “ಏಯ್ ರೇವಣ್ಣ ಯಾಕೆ ನಾನು ಬಂದಾಗ ಇರಲಿಲ್ಲ?” ಎಂದು ಕೇಳಿದರು. “ಬೇರೆ ಕೆಲಸದ ಮೇಲೆ ಹೊರಗೆ ಇದ್ದೆ” ಎಂದ ರೇವಣ್ಣ, “ನಾನು ಯಾವಾಗಲೂ ನಿಮ್ಮ ಜತೆ ಇರ್ತೀನಿ ಸಿದ್ದರಾಮಣ್ಣ. ನಿಮಗೆ ಯಾವಾಗಲೂ ನನ್ನ ಸಪೋರ್ಟ್ ಇರುತ್ತೆ” ಎಂದವರೇ ಪತ್ರಕರ್ತರ ಕಡೆ ನೋಡಿ “ಹೌದಣ್ಣಾ” ಎಂದು ತಲೆಯಾಡಿಸಿದರು. “ನಿನ್ನನ್ನು 2004ರಲ್ಲಿ ಸಿಎಂ ಮಾಡಬೇಕು ಅಂತ ದೇವೇಗೌಡರ ಮುಂದೆ ಹೇಳಿದೆ. ಆದರೆ ಕೊನೆಗೆ ಧರ್ಮಸಿಂಗ್ ಹೆಸರು ಘೋಷಣೆ ಮಾಡಿದಾಗ ಕಣ್ಣೀರು ಹಾಕಿದೆ. ಇದೆಲ್ಲ ನಿನಗೆ ಗೊತ್ತಲ್ಲ ಸಿದ್ದರಾಮಣ್ಣ?” ಎಂದು ಹೇಳಿ ಮತ್ತೆ ಪತ್ರಕರ್ತರ ಕಡೆ ನೋಡಿದರು. “ಹೌದು. ಇದು ನನಗೆ ಗೊತ್ತು ಹಲವು ಬಾರಿ ಇದನ್ನು ನಾನು ಹೇಳಿದ್ದೇನೆ ರೇವಣ್ಣ” ಎಂದು ಸಿದ್ದರಾಮಯ್ಯ ಸಹ ಹೇಳಿದರು. ಇದನ್ನು ಕೇಳುತ್ತಲೇ ಇದ್ದ, ಪಕ್ಕದಲ್ಲಿದ್ದ ಮಂಡ್ಯ ಜಿಲ್ಲೆಯ ಪಾಂಡವಪುರ ಶಾಸಕ ಪುಟ್ಟರಾಜು, “ಅಣ್ಣಾ ನಾನೂ ಕಣ್ಣೀರು ಹಾಕಿದ್ದೆ” ಎಂದರು. “ಹೌದು. ಅವತ್ತು ಹಲವು ಶಾಸಕರು ಕಣ್ಣೀರು ಹಾಕಿದರು” ಎಂದ ಸಿದ್ದರಾಮಯ್ಯ ನಗುತ್ತಲೇ ವಿಧಾನಸಭೆ ಒಳಕ್ಕೆ ಹೊರಟರು.
3. ಔತಣಕೂಟಕ್ಕೆ ಇಬ್ರಾಹಿಮ್‌ಗೆ ಅಹ್ವಾನ ನೀಡಿದ ಸಿದ್ದರಾಮಯ್ಯ!
ಕಲಾಪ ಅನಿರ್ದಿಷ್ಟ ಕಾಲವಾದಿಗೆ ಮುಂದೂಡಿಕೆಯಾದ ಬಳಿಕ ಸಿದ್ದರಾಮಯ್ಯ ಹೊರ ಬರುತ್ತಿರುವಾಗ ವಿಧಾನಸಭೆ ಮೊಗಸಾಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಮ್ ಎದುರಿಗೆ ಬಂದರು. ಸಿದ್ದರಾಮಯ್ಯ ಅವರನ್ನು ನೋಡಿಯೂ ನೋಡದಂತೆ ಹೋಗುತ್ತಿದ್ದ ಇಬ್ರಾಹಿಮ್‌ರನ್ನು ನೋಡಿದ ಸಿದ್ದರಾಮಯ್ಯ, “ಏಯ್ ಇಬ್ರಾಹಿಮ್” ಎಂದು ಜೋರಾಗಿ ಕೂಗಿ ಸಮೀಪಕ್ಕೆ ಕರೆದರು. “ಮಧ್ಯಾಹ್ನ ಊಟ ಇದೆ ಬಾ. ನಾನೇ ಶಾಸಕರಿಗೆ ಊಟ ಹಾಕಿಸುತ್ತಿದ್ದೇನೆ” ಎಂದದ್ದಕ್ಕೆ, “ನಿಮ್ಮ ಪಕ್ಷದ ಶಾಸಕರ ಊಟಕ್ಕೆ ನಾನೇಕೆ ಬರಲಿ?” ಎಂದು ಇಬ್ರಾಹಿಂ ಪ್ರಶ್ನಿಸಿದರು. “ನೀನೂ ನಮ್ಮಲ್ಲಿ ಒಬ್ಬ ಬಾ” ಎಂದು ಸಿದ್ದರಾಮಯ್ಯ ಮತ್ತೆ ಆಹ್ವಾನಿಸಿದರು. ಇಬ್ರಾಹಿಮ್ ಕಾಂಗ್ರೆಸ್‌ನಿಂದ ದೂರವಾದರೂ ಮುಂದೆ ದೇವೇಗೌಡರು ಮತ್ತು ಕುಮಾರಸ್ವಾಮಿ ಜತೆ ಮಾತುಕತೆ ಅನಿವಾರ್ಯವಾದಾಗ ಇಬ್ರಾಹಿಮ್ ಅವರನ್ನು ಮಧ್ಯಸ್ಥಿಕೆಗೆ ಬಳಸಿಕೊಳ್ಳಲು ಸಿದ್ದರಾಮಯ್ಯ ಪ್ಲಾನ್ ಮಾಡುತ್ತಿದಂತಿದೆ ಎಂಬ ಗುಸುಗುಸು ಇತ್ತ ನಡೆಯುತ್ತಿತ್ತು.
4. ಜೆಡಿಎಸ್ ಬಗ್ಗೆ ಬಿಜೆಪಿ ಸಾಫ್ಟ್ ಕಾರ್ನರ್
10 ದಿನ ನಡೆದ ಅಧಿವೇಶನದಲ್ಲಿ ಬಿಜೆಪಿಯ ಯಾವ ಒಬ್ಬ ಶಾಸಕರೂ ಜೆಡಿಎಸ್ ವಿರುದ್ಧ ಮಾತನಾಡಲಿಲ್ಲ ಎನ್ನುವುದು ವಿಶೇಷ. ವಕ್ಫ್ ಆಸ್ತಿ ಕಬಳಿಕೆ ಪ್ರಕರಣವನ್ನು ಸದನದಲ್ಲಿ ಬಿಜೆಪಿ ಪ್ರಸ್ತಾಪ ಮಾಡಿದರೂ, ಕಾಂಗ್ರೆಸ್ ವಿರುದ್ಧ ಅಸ್ತ್ರವಾಗಿ ಬಳಸಲು ಮುಂದಾಯಿತು. ಕೆಲ ಕೈ ನಾಯಕರ ಹೆಸರನ್ನು ಪ್ರಸ್ತಾಪ ಮಾಡಿದ್ದು ಬಿಟ್ಟರೆ ಜೆಡಿಎಸ್‌ನ ಇಬ್ರಾಹಿಮ್ ಹೆಸರು ಯಾರೂ ಪ್ರಸ್ತಾಪ ಮಾಡಲಿಲ್ಲ. ಕುಮಾರಸ್ವಾಮಿ ಮತ್ತು ಅಶ್ವತ್ಥನಾರಾಯಣ ನಡುವೆ ಬಿಎಂಎಸ್ ಕಾಲೇಜು ಆಸ್ತಿ ಗಳಿಕೆ ಮತ್ತು ನಿರ್ದೇಶಕರ ನೇಮಕದ ಕುರಿತು ಜುಗಲ್‌ಬಂದಿಯಲ್ಲಿ ಅಶ್ವತ್ಥನಾರಾಯಣ ಏಕಾಂಗಿ ಹೋರಾಟ ನಡೆಸಿದರು. ಯಾವ ಸಚಿವರೂ ಜೆಡಿಎಸ್ ವಿರುದ್ಧ ಮಾತನಾಡಲಿಲ್ಲ. ಸ್ವತಃ ಸಿಎಂ ಮತ್ತು ಕಂದಾಯ ಸಚಿವ ಆರ್. ಆಶೋಕ್ ಸಹ ಮೌನ ವಹಿಸಿದರು. 2023ಕ್ಕೆ ಯಾವ ರೀತಿ ಫಲಿತಾಂಶ ಬರುತ್ತದೊ, ಯಾರಿಗೆ ಯಾರು ಅನಿವಾರ್ಯಾಗುತ್ತರೋ ಎನ್ನುವ ಚರ್ಚೆ ವಿಧಾನಸೌಧ ಮೊಗಸಾಲೆಯಲ್ಲಿ ಸಹಜವಾಗಿ ನಡೆಯುತ್ತಿತ್ತು.
ಇದನ್ನೂ ಓದಿ | ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಇಬ್ಬರೂ ನರಿಗಳು; ಕುರಿಗಳ ಥರ ವೇಷ ಹಾಕ್ಕೊಂಡು ಬರ್ತಾರೆ ಅಷ್ಟೆ ಎಂದ ಶ್ರೀರಾಮುಲು