ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಹಿತಿಗಳು, ಮಹಿಳಾ ಸಂಘಟನೆಗಳವರು ಬಹಿರಂಗ ಪತ್ರ ಬರೆದಿದ್ದಾರೆ. ಈ ಕೇಸ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಜತೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದ ಬಗ್ಗೆಯೂ ಅಸಮಾಧಾನವನ್ನು ಹೊರಹಾಕಿದ್ದಾರೆ. ಇನ್ನು ಈ ಸಂಬಂಧ 16 ಬೇಡಿಕೆಗಳನ್ನು ಮುಂದಿಡಲಾಗಿದೆ.
ಹಿರಿಯ ಲೇಖಕರಾದ ಡಾ. ವಿಜಯಾ, ಸಾಹಿತಿಗಳಾದ ಡಾ. ಜಿ. ರಾಮಕೃಷ್ಣ, ವಸುಂಧರಾ ಭೂಪತಿ, ಮೀನಾಕ್ಷಿ ಬಾಳಿ, ಕೆ, ನೀಲಾ, ಕೆ.ಎಸ್ ವಿಮಲಾ, ಕುಂ ವೀರಭದ್ರಪ್ಪ, ಮುಜಫರ್ ಅಸ್ಸಾದಿ ಸೇರಿದಂತೆ ಒಟ್ಟು 107 ಜನರಿಂದ ಈ ಪತ್ರವನ್ನು ಬರೆಯಲಾಗಿದೆ. ಪಜ್ಞಾವಂತ ನಾಗರಿಕರ ಬಹಿರಂಗ ಪತ್ರ ಎಂದು ಬರೆದುಕೊಳ್ಳಲಾಗಿದೆ.
ಸಂತ್ರಸ್ತರ ಪೋಟೊ, ವಿಡಿಯೊ ದಾಖಲಿಸಿ ಇಟ್ಟುಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ? ಇದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಹಗರಣವೆಂದು ತಿಳಿಯುತ್ತದೆ. ಅಲ್ಲದೆ, ದೂರು ಕೊಡದಂತೆ ಬೆದರಿಕೆ ಹಾಕುವುದು, ಕಿಡ್ನ್ಯಾಪ್ ಮಾಡುವುದನ್ನೂ ಮಾಡಲಾಗಿದೆ. ರಾಜಕೀಯ ನಾಯಕರು ತಮ್ಮ ಹಿತಾಸಕ್ತಿಗಾಗಿ ಹಾಗೂ ಚುನಾವಣೆಯ ಲಾಭಕ್ಕಾಗಿ ಇದನ್ನೆಲ್ಲ ಬಳಸಿಕೊಳ್ಳುತ್ತಿರುವುದು ಸಹ ಆಘಾತಕಾರಿ ಅಂಶವಾಗಿದೆ ಎಂದು ಪತ್ರದಲ್ಲಿ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ದೇವೇಗೌಡರ ಕುಟುಂಬದ ಬಗ್ಗೆ ಬೇಸರ
ಪ್ರಜಲ್ ರೇವಣ್ಣ ಅವರ ತಾತ, ತಂದೆ, ತಾಯಿ, ಚಿಕ್ಕಪ್ಪ, ಚಿಕ್ಕಮ್ಮ, ಅಣ್ಣ, ತಮ್ಮ ಎಲ್ಲರೂ ಪ್ರಜಾಪ್ರಭುತ್ವದ ಎಲ್ಲ ಹುದ್ದೆಗಳನ್ನು, ಸವಲತ್ತುಗಳನ್ನು ಪಡೆದುಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣ ಮತ್ತು ಅವರ ಕುಟುಂಬವು ಪ್ರಜಾಪ್ರಭುತ್ವದ ಮುಸುಕಿನೊಳಗೆ ಪ್ರಜಾಪ್ರತಿನಿಧಿಗಳೆಂಬ ಧಿರಿಸು ಧರಿಸಿಕೊಂಡಿದ್ದಾರೆ. ಪ್ರಕರಣ ಹೊರ ಬಂದ ತಕ್ಷಣ ಚುನಾವಣಾ ಸ್ಪರ್ಧೆಗೆ ಅವಕಾಶ ನೀಡಬಾರದಾಗಿತ್ತು. ಹಗರಣ ಬಯಲಾಗಿ ಐದು ದಿನಗಳು ಆರೋಪಿಯನ್ನು ಸ್ವತಂತ್ರವಾಗಿ ಬಿಡಲಾಗಿದೆ. ಆತನ ಮೇಲೆ ಕಣ್ಗಾವಲನ್ನು ಹಾಕಿಲ್ಲ. ಸರ್ಕಾರದ ಮೇಲೆ ವಿಶ್ವಾಸವಿಟ್ಟು ಮಹಿಳೆಯರು ಸುರಕ್ಷಿತವಾಗಿರಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ. ಸಂತ್ರಸ್ತರ ಕುಟುಂಬಗಳು ಮಾನಸಿಕ ಯಾತನೆಗಳಿಗೆ ಗುರಿಯಾಗಿವೆ. ಅಲ್ಲದೆ, ವಿಡಿಯೊಗಳು ಲಕ್ಷಾಂತರ ಜನರಿಗೆ ತಲುಪಿವೆ. ಇದರಿಂದ ಯುವಜನರು, ಕಾಮುಕರು, ಮಕ್ಕಳ ಮೇಲೆ ಪರಿಣಾಮ ಬೀರಬಹುದಾಗಿದೆ ಎಂದು ಸಾಹಿತಿಗಳು ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಸರ್ಕಾರಕ್ಕೆ ಸಲ್ಲಿಸಿದ ಪ್ರಮುಖ ಬೇಡಿಕೆಗಳು ಏನು?
- ಆರೋಪಿಯನ್ನು ಕೂಡಲೇ ಬಂಧಿಸಬೇಕು,ಐಟಿ, ಐಪಿಸಿ ಕಾಯ್ದೆಗಳ ಅಡ್ಡಿಯಲ್ಲಿ ಮೊಕದ್ದಮೆ ಹೂಡಬೇಕು
- ಸಂತ್ರಸ್ತ ಮಹಿಳೆಯರು ಭೀತಿಯಿಲ್ಲದೆ ದೂರು ನೀಡುವ ವಾತಾವರಣ ನಿರ್ಮಾಣ ಮಾಡಬೇಕು
- ತನಿಖೆ ಪೂರ್ಣಗೊಳ್ಳುವವರೆಗೆ ಎಚ್.ಡಿ. ರೇವಣ್ಣ ವಿಧಾನಸಭೆ ಸದಸ್ಯತ್ವ ತಾತ್ಕಾಲಿಕವಾಗಿ ರದ್ದು ಮಾಡಬೇಕು
- ಆರೋಪ- ಪ್ರತ್ಯಾರೋಪಗಳಲ್ಲಿ ತೊಡಗಿರುವ ರಾಜಕೀಯ ನಾಯಕ ನಡವಳಿಕೆಗೆ ಕಡಿವಾಣ ಹಾಕಬೇಕು
- ಎಸ್ಐಟಿ ತನಿಖೆಯು ಕಾಯ್ದೆ ಅನುಸಾರ ಕಾಲಮಿತಿಯೊಳಗೆ ನಡೆಯಬೇಕು
- ಪ್ರಜ್ವಲ್ ಚಾಲಕ ಕಾರ್ತಿಕ್ ನನ್ನ ಕೂಡಲೇ ಬಂಧಿಸಬೇಕು
- ಬಿಜೆಪಿ ಮುಖಂಡ ದೇವರಾಜೇಗೌಡ ವಿರುದ್ಧವೂ ಗಂಭೀರ ಪ್ರಕರಣಗಳು ದಾಖಲು ಮಾಡಬೇಕು
- ವಿಡಿಯೊಗಳನ್ನು ಹಂಚಿದವರ ವಿರುದ್ಧ ಮಾನವ ಹಕ್ಕುಗಳಿಗೆ ಧಕ್ಕೆ, ಎಲೆಕ್ಷನ್ ಸ್ಯಾಬೊಟೇಜ್ ಮಾಡಲು ಸಂಚು ಮಾಡಿರುವ ಆರೋಪಗಳ ಮೇಲೆ ಕೇಸ್ ಹೂಡಬೇಕು
- ಹಳೇ ವಿಡಿಯೊ ಎಂದು ರೇವಣ್ಣ ಹೇಳಿದ್ದಾರೆ, ವಿಕೃತಿ ಮುಂದುವರೆಯಲು ಬಿಟ್ಟಿರುವ ಕುಟುಂಬದ ಎಲ್ಲ ಸದಸ್ಯರನ್ನು Accomplice ಗಳೆಂದು ಪರಿಗಣಿಸಿ
- ಅವರ ಕುಟುಂಬ ಸದಸ್ಯರ ವಿರುದ್ಧವೂ ಮೊಕದ್ದಮೆ ಹೂಡಬೇಕು
- ಪ್ರಜ್ವಲ್ ದೇಶ ಬಿಟ್ಟು ಪರಾರಿಯಾಗಿರುವುದು ಗೃಹ ಇಲಾಖೆ ಮತ್ತು ಗುಪ್ತಚರ ಇಲಾಖೆಯ ವೈಫಲ್ಯ
- ಗೃಹ ಇಲಾಖೆ, ಗುಪ್ತಚರ ಇಲಾಖೆ ಅಧಿಕಾರಿಗಳನ್ನು ವಜಾ ಮಾಡಬೇಕು