ಹಾಸನ: ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಪರವಾಗಿರಲು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ತಮಗೆ 100 ಕೋಟಿ ರೂಪಾಯಿ ಆಫರ್ ನೀಡಿದ್ದಾರೆ ಎಂಬ ವಕೀಲ ದೇವರಾಜೇಗೌಡ (Devarajegowda) ಆರೋಪಕ್ಕೆ ಕಾಂಗ್ರೆಸ್ ಕಿಡಿಕಾರಿದೆ. ಪ್ರಕರಣದ ದಿಕ್ಕು ತಪ್ಪಿಸುವ ಪ್ರಯತ್ನದಲ್ಲಿದ್ದಾರೆ. ಅವರಿಗೆ ಮೆಂಟಲ್ ಟ್ರೀಟ್ಮೆಂಟ್ ಕೊಡಿಸುವುದು ಒಳ್ಳೆಯದು ಎಂದು ಹೇಳಿದೆ.
ದೇವರಾಜೇಗೌಡ ವಿರುದ್ಧ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ರಾಜ್ಯ ಕಾಂಗ್ರೆಸ್, ದೇವರಾಜೇಗೌಡರ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. ದಿನಕ್ಕೊಂದು ಮಾತನಾಡುವ ದೇವರಾಜೇಗೌಡ ಮಹಿಳೆಯರ ಮಾನ ಕಳೆದ ಪ್ರಕರಣವನ್ನು ಬೇರೆಡೆಗೆ ತಿರುಗಿಸಿ, ರಾಜಕೀಕರಣಗೊಳಿಸಿ ದಿಕ್ಕು ತಪ್ಪಿಸುವ ಪ್ರಯತ್ನದಲ್ಲಿದ್ದಾರೆ. ಎಸ್‌ಐಟಿ ಅಧಿಕಾರಿಗಳು ದೇವರಾಜೇಗೌಡರಿಗೆ ಮಾನಸಿಕ ಚಿಕಿತ್ಸೆ ಕೊಡಿಸುವುದು ಒಳ್ಳೆಯದು ಎಂದು ಆಕ್ರೋಶವನ್ನು ಹೊರಹಾಕಿದೆ.
ದೇವರಾಜೇಗೌಡನ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ,
— Karnataka Congress (@INCKarnataka) May 18, 2024
ದಿನಕ್ಕೊಂದು ಮಾತಾಡುವ ದೇವರಾಜೇಗೌಡ ಮಹಿಳೆಯರ ಮಾನ ಕಳೆದ ಪ್ರಕರಣವನ್ನು ಬೇರೆಡೆಗೆ ತಿರುಗಿಸಿ, ರಾಜಕೀಕರಣಗೊಳಿಸಿ ದಿಕ್ಕು ತಪ್ಪಿಸುವ ಪ್ರಯತ್ನದಲ್ಲಿದ್ದಾರೆ.
SIT ಅಧಿಕಾರಿಗಳು
ದೇವರಾಜೇಗೌಡರಿಗೆ ಮಾನಸಿಕ ಚಿಕೆತ್ಸೆ ಕೊಡಿಸುವುದು ಒಳ್ಳೆಯದು!
ಬ್ರದರ್ ಸ್ವಾಮಿಗಳು ಹೇಳಿಕೊಟ್ಟ ಮಾತನ್ನು…
ಬ್ರದರ್ ಸ್ವಾಮಿಗಳು ಹೇಳಿಕೊಟ್ಟ ಮಾತನ್ನು ದೇವರಾಜೇಗೌಡ ಆಡಿದ್ದಾರೆ. ಆತನ ಬಾಯಲ್ಲಿ ಬರುವ ಪ್ರತಿ ಮಾತುಗಳಲ್ಲೂ “ದೊಡ್ಡವರ“ ಚಿತಾವಣೆ ಇರುತ್ತದೆ. ಬಾಯಿ ದೇವರಾಜೇಗೌಡನದ್ದು, ಮಾತು ಬ್ರದರ್ ಸ್ವಾಮಿಗಳದ್ದು! ಇದನ್ನು ಸ್ವತಃ ದೇವರಾಜೇಗೌಡ ಒಪ್ಪಿಕೊಂಡಿರುವಾಗ ಅವರ ಮಾತುಗಳಿಗೆ ಗಾಂಭೀರ್ಯತೆಯನ್ನು, ಸತ್ಯವನ್ನು ಹುಡುಕುವುದು ಹಾಸ್ಯಾಸ್ಪದವಾಗುತ್ತದೆ” ಎಂದು ಕಾಂಗ್ರೆಸ್ ಕಿಡಿಕಾರಿದೆ.
100 ಕೋಟಿ ರೂ. ಆಫರ್ ಮಾಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಲಿ ಎಂದ ಡಿಕೆಶಿ
ಈ ಬಗ್ಗೆ ಮಾಧ್ಯಮದವರಿಗೆ ಶನಿವಾರ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ದೇವರಾಜೇಗೌಡ ಮೆಂಟಲ್ ಕೇಸ್. ಆತ ಏನು ಮಾತನಾಡುತ್ತಾನೋ, ಮಾತನಾಡಲಿ. ಏನು ಮಾಡುತ್ತಾನೋ ಮಾಡಲಿ ಎಂದು ಕಿಡಿಕಾರಿದ್ದಾರೆ. ಅಲ್ಲದೆ, ನಾನು ಆಫರ್ ಮಾಡಿದರೆ ದೇವರಾಜೇಗೌಡ ಲೋಕಾಯುಕ್ತಕ್ಕೆ ಹೋಗಿ ಕಂಪ್ಲೇಂಟ್ ಕೊಡಲಿ ಎಂದು ಸವಾಲು ಹಾಕಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ನೀವು ಬುದ್ಧಿವಂತರು, ಜಾಣರಿದ್ದೀರಿ. ಆ ದೇವರಾಜೇಗೌಡನಂಥವರು ಯಾರೋ ಏನೋ ಹೇಳುತ್ತಾರೆಂದರೆ ಅದನ್ನು ಹಾಕಿಬಿಡುವುದಾ? ನಮಗೆ ರೆಪ್ಯುಟೇಷನ್ ಇದೆ. ಏನಾದರೂ ಆಧಾರ ಇದ್ದರೆ ಹಾಕಬೇಕು. ತಲೆ ಕೆಟ್ಟ, ಆಸ್ಪತ್ರೆಗೆ ಸೇರಬೇಕಾದವರ ಬಗ್ಗೆ ಮಾತನಾಡುತ್ತೀರಾ ಎಂದು ಮಾಧ್ಯಮದವರನ್ನು ಪ್ರಶ್ನೆ ಮಾಡಿದರು.
ನಾನು ಆಫರ್ ಮಾಡಿದರೆ ದೇವರಾಜೇಗೌಡ ಅವರು ಲೋಕಾಯುಕ್ತಕ್ಕೆ ಹೋಗಿ ಕಂಪ್ಲೇಂಟ್ ಕೊಡಲಿ. ಎಲ್ಲ ಪೆನ್ ಡ್ರೈವ್ ಬಗ್ಗೆ ಮಾತನಾಡಿದ್ದಾರೆ. ಸಂತ್ರಸ್ತೆಯರ ಬಗ್ಗೆ ಯಾರೂ ಏನೂ ಮಾತನಾಡುತ್ತಿಲ್ಲ ಏಕೆ? ಈ ವಿಚಾರದಲ್ಲಿ ನಾನು ಹೆಚ್ಚು ಏನೂ ಮಾತನಾಡಲ್ಲ ಎಂದು ಡಿ.ಕೆ. ಶಿವಕುಮಾರ್ ಗರಂ ಆಗಿಯೇ ಹೇಳಿದರು.
ನನ್ನ ಹೆಸರನ್ನು ಕೆಲವರು ಉಪಯೋಗಿಸಿಕೊಳ್ಳುತ್ತಾರೆ. ನೀವು ನನ್ನ ಹೆಸರು ಬಳಸಿಕೊಳ್ಳುತ್ತೀರಾ? ನನ್ನ ಹೆಸರು ಬಳಸಿಕೊಂಡರೆ ನಾನು ಯಾಕೆ ತಲೆ ಕೆಡಿಸಿಕೊಳ್ಳಬೇಕು? ಎಂದು ಡಿ.ಕೆ. ಶಿವಕುಮಾರ್ ಪ್ರಶ್ನೆ ಮಾಡಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ತಮ್ಮ 93ನೇ ಹುಟ್ಟುಹಬ್ಬದ ಪ್ರಯುಕ್ತ ದೇವಸ್ಥಾನಕ್ಕೆ ಹೋಗಿದ್ದಾರೆ, ಇದು ಬಹಳ ಒಳ್ಳೆಯದು. ಅವರ ಹುಟ್ಟುಹಬ್ಬ, ಸಂತೋಷ ಕೊಡಲಿ, ದುಃಖವನ್ನು ದೂರ ಮಾಡಲಿ. ಆರೋಗ್ಯ ಆಯಸ್ಸನ್ನು ದೇವರು ಕರುಣಿಸಲಿ ಎಂದು ನಮ್ಮ ಸರ್ಕಾರದ ಪರವಾಗಿ ಹಾರೈಸುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಅಲ್ಲೋಲ ಕಲ್ಲೋಲ ಸೃಷ್ಟಿಸಿದ ದೇವರಾಜೇಗೌಡ ಬಾಂಬ್
ಹಾಸನ ಜೆಎಂಎಫ್‌ಸಿ ಕೋರ್ಟ್ ಹೊರಗೆ ಪೊಲೀಸ್ ವ್ಯಾನ್‌ನೊಳಗಿದ್ದ ವಕೀಲ ದೇವರಾಜೇಗೌಡ ಮಾಧ್ಯಮದವರೊಂದಿಗೆ ಮಾತನಾಡಿ, ಎಲ್.ಆರ್. ಶಿವರಾಮೇಗೌಡ ಮೂಲ 100 ಕೋಟಿ ರೂಪಾಯಿ ಆಫರ್ ಮಾಡಿದ್ದರು. ಡಿ.ಕೆ. ಶಿವಕುಮಾರ್ ನೇರವಾಗಿ ನನ್ನ ಜತೆಗೆ ಮಾತನಾಡಿದ್ದಲ್ಲ ಎಂದು ಡಿ.ಕೆ. ಶಿವಕುಮಾರ್ ಶುಕ್ರವಾರ ಹೇಳಿದ್ದರು.
ನಾಲ್ಕು ಜನ ಮಂತ್ರಿಗಳ ಕಮಿಟಿ ಎಂದು ನಾನು ಹೇಳಿದ್ದೆನಲ್ಲವೇ? ಅವರ ಬಗ್ಗೆ ಹೇಳುತ್ತೇನೆ. ಎನ್. ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ ಹಾಗೂ ಇನ್ನೊಬ್ಬ ಸಚಿವರನ್ನು ಈ ಪ್ರಕರಣವನ್ನು ಹ್ಯಾಂಡಲ್ ಮಾಡಲು ಬಿಟ್ಟಿದ್ದಾರೆ. ಈಗ ನನ್ನ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಿದ್ದಾರೆ. ಆದರೆ, ಅದ್ಯಾವುದಕ್ಕೂ ನಾನು ಒಪ್ಪಲಿಲ್ಲ ಎಂದು ದೇವರಾಜೇಗೌಡ ಹೇಳಿದ್ದರು.
ಇಷ್ಟೆಲ್ಲ ದೊಡ್ಡ ಹಗರಣವಾಗಿರುವುದರಿಂದ ಇದರ ಮೂಲಕ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕೆಟ್ಟ ಹೆಸರು ತರಲು ಹೋಗಿದ್ದರು. ನಮಗೆ ಸುಮಾರು 100 ಕೋಟಿ ರೂಪಾಯಿ ಆಫರ್ ಕೊಟ್ಟಿದ್ದರು. ಅದರಲ್ಲಿ 5 ಕೋಟಿ ರೂಪಾಯಿ ಅಡ್ವಾನ್ಸ್ ಅನ್ನು ಬೋರಿಂಗ್ ಕ್ಲಬ್‌ನ ರೂಂ ನಂಬರ್ 110ಕ್ಕೆ ಕಳಿಸಿದ್ದರು. ಆ ಮೀಟಿಂಗ್‌ಗೆ ಚನ್ನರಾಯಪಟ್ಟಣದ ಎಂ.ಎ. ಗೋಪಾಲಸ್ವಾಮಿಯನ್ನು ಕಳಿಸಿದ್ದರು. ಐದು ಕೋಟಿ ರೂಪಾಯಿ ಕ್ಯಾಶ್ ಅನ್ನೂ ಕೊಟ್ಟು ಕಳಿಸಿದ್ದರು. ಈ 100 ಕೋಟಿ ರೂಪಾಯಿ ಆಫರ್ ಮಾಡಿದ್ದು ಡಿ.ಕೆ. ಶಿವಕುಮಾರ್ ಎಂದು ದೇವರಾಜೇಗೌಡ ಆರೋಪಿಸಿದ್ದರು.
ಒಪ್ಪದೇ ಇದ್ದಾಗ ಅಟ್ರಾಸಿಟಿ ಕೇಸ್
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳಂಕ ತರಬೇಕು. ರಾಜ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ನಾಯಕತ್ವವನ್ನು ಹಾಳು ಮಾಡಬೇಕು ಎಂಬ ಕಾರಣಕ್ಕೆ ನನ್ನನ್ನು ಬಳಸಿಕೊಳ್ಳಲು ನೋಡಿದರು. ಅದಕ್ಕೆ ನಾನು ಒಪ್ಪದೇ ಇದ್ದಾಗ ಮೊದಲಿಗೆ ಅಟ್ರಾಸಿಟಿ ಕೇಸ್ ದಾಖಲು ಮಾಡಿದರು. ಅದರಲ್ಲಿ ಡಾಕ್ಯುಮೆಂಟ್ ಸಿಗಲಿಲ್ಲ ಎಂದು ದೇವರಾಜೇಗೌಡ ಹೇಳಿದ್ದರು.
ಇದನ್ನೂ ಓದಿ: HD Revanna Case: ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ ಕೇಸ್; ರೇವಣ್ಣ ವಿರುದ್ಧ ಸಂತ್ರಸ್ತೆ ಹೇಳಿಕೆಯಲ್ಲಿ ಭಾರಿ ಗೊಂದಲ!
ನನ್ನ ಮೇಲೆ ಸುಳ್ಳು ಕೇಸ್
ನನ್ನ ಮೇಲೆ ಹಾಕಲಾದ ಅಟ್ರಾಸಿಟಿ ಕೇಸ್‌ನಲ್ಲಿ ಯಾವುದೇ ಪ್ರಯೋಜನ ಆಗಿಲ್ಲವೆಂದು ಮತ್ತೊಬ್ಬಳ ಕೈಯಲ್ಲಿ 354a ಕೇಸ್ ಹಾಕಿಸಿದರು. ಅದೂ ವಿಫಲವಾದ ಮೇಲೆ ರೇಪ್ ಕೇಸ್ ಹಾಕಿಸಿದರು. ಈ ಅತ್ಯಾಚಾರ ಪ್ರಕರಣದಲ್ಲಿಯೂ ಅವರಿಗೆ ಯಾವುದೇ ದಾಖಲೆಗಳು ಸಿಗಲಿಲ್ಲ. ನಾಲ್ಕು ದಿನಗಳ ಕಾಲ ನಿರಂತರವಾಗಿ ವಿಚಾರಣೆ ನಡೆಸಿದ್ದಾರೆ. ಪೆನ್‌ಡ್ರೈವ್ ಸಿಕ್ಕಿದ್ದನ್ನು ಕೋರ್ಟ್‌ನಲ್ಲಿ ಸೀಜ್ ಮಾಡಿದ್ದಾರೆ ಎಂದು ದೇವರಾಜೇಗೌಡ ಆರೋಪ ಮಾಡಿದ್ದರು.