Site icon Vistara News

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case Government work against Revanna HD Kumaraswamy gives details of the case

ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ (Hassan Pen Drive Case) ಅನ್ನು ನಾನು ವೀಕ್ಷಣೆ ಮಾಡಿಲ್ಲ. ಆ ಪೆನ್‌ಡ್ರೈವ್‌ಗಳಲ್ಲಿರುವ ಅಶ್ಲೀಲ ವಿಡಿಯೊಗಳನ್ನು ನಾನು ನೋಡಿಲ್ಲ. ಈ ವಿಷಯ ಗೊತ್ತಿದ್ದರೆ ನಾನು ಪ್ರಜ್ವಲ್‌ಗೆ ಎಂಪಿ ಟಿಕೆಟ್‌ ಕೊಡುತ್ತಿರಲಿಲ್ಲ. ಇದು ದೇವೇಗೌಡರ ಕುಟುಂಬ ಸರ್ವನಾಶ ಮಾಡಬೇಕೆಂದು ವ್ಯವಸ್ಥಿತ ಸಂಚಾಗಿದೆ. ಈ ಇಡೀ ಪ್ರಕರಣದಲ್ಲಿ ಸರ್ಕಾರ ವ್ಯವಸ್ಥಿತವಾಗಿ ಸಂಚು ರೂಪಿಸಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಜೆಡಿಎಸ್ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಪೆನ್‌ಡ್ರೈವ್‌ ವಿಷಯ ನನ್ನ ಮುಂದೆ ಬಂದಿದ್ದರೆ ನಾನು ಟಿಕೆಟ್‌ ಕೊಡುತ್ತಿರಲಿಲ್ಲ. ಪ್ರಜ್ವಲ್‌ ರೇವಣ್ಣನಿಗೆ ಟಿಕೆಟ್‌ ಕೊಡುವ ಪ್ರಶ್ನೆಯೇ ಉದ್ಭವ ಆಗುತ್ತಿರಲಿಲ್ಲ. ಆಗ ನಾನು ಟಿಕೆಟ್‌ ನಿರಾಕರಣೆ ಮಾಡಿದ್ದು, ಸ್ಥಳೀಯ ಕಾರ್ಯಕರ್ತರಿಗೆ ಪ್ರಜ್ವಲ್‌ ಸ್ಪಂದಿಸುತ್ತಿರಲಿಲ್ಲ ಎಂಬ ದೂರು ಬಂದಿತ್ತು. ಹಾಗಾಗಿ ಅಭ್ಯರ್ಥಿಯನ್ನು ಬದಲಾವಣೆ ಮಾಡಿ ಎಂದು ಹೇಳಿದ್ದೆ ಎಂಬುದಾಗಿ ಸ್ಪಷ್ಟನೆ ನೀಡಿದರು.

ಪೆನ್‌ಡ್ರೈವ್‌ಗಳು ಮಾರ್ಫಿಂಗ್ ಮಾಡಿರೋದಾ? ನಕಲಿಯೋ ನನಗೆ ಗೊತ್ತಿಲ್ಲ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬವನ್ನು ಸರ್ವನಾಶ ಮಾಡಬೇಕೆಂಬ ವ್ಯವಸ್ಥಿತ ಸಂಚು ಇಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಎಚ್.ಡಿ.ಕುಮಾರಸ್ವಾಮಿ ಗುಡುಗಿದರು.

ನರೇಂದ್ರ ಮೋದಿ ಆಡಳಿತ ತೆಗೆದು ದೆಹಲಿ ಗದ್ದುಗೆ ಹಿಡಿಯಲು ಷಡ್ಯಂತ್ರ ಮಾಡಲಾಗುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಸಂಚಾಗಿದೆ. ಎಸ್‌ಐಟಿಯು ಕಾಂಗ್ರೆಸ್‌ ಪರವಾಗಿ ಕೆಲಸ ಮಾಡುತ್ತಿದೆ. ಈಗಲೂ ಹೇಳುತ್ತೇನೆ, ಇಲ್ಲಿ ಯಾರೇ ತಪ್ಪು ಮಾಡಿದರೂ ಶಿಕ್ಷೆ ಆಗಲೇಬೇಕು. ಇದೇ ನಮ್ಮ ಪಕ್ಷದ ನಿರ್ಧಾರವಾಗಿದೆ. ವಕೀಲ ದೇವರಾಜೇಗೌಡ ಏನೆಲ್ಲ ಹೇಳಿದರು. ಏನು ನಡೆಯುತ್ತಾ ಇದೆ ಇಲ್ಲಿ. ಆ ಬಗ್ಗೆ ತನಿಖೆ ಆಗಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.

ಎಸ್‌ಐಟಿಗೆ ಎಚ್‌ಡಿಕೆ ವಾರ್ನಿಂಗ್‌

ಎಸ್‌ಐಟಿ ತನಿಖೆ ಹಾಗೂ ಕಾರ್ಯವೈಖರಿ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ವಾರ್ನಿಂಗ್ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಕಾಂಗ್ರೆಸ್ ನಡೆಗೆ ಎಚ್‌ಡಿಕೆ ಗರಂ ಆಗಿದ್ದಾರೆ. ಕಾಲ ಚಕ್ರ ಉರುಳುತ್ತದೆ, ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ವಾರ್ನ್‌ ಮಾಡಿದ್ದಾರೆ.

ಡಿಕೆಶಿಯನ್ನು ವಜಾ ಮಾಡಿ

ಮಹಾನುಭಾವ ಡಿ.ಕೆ.ಶಿವಕುಮಾರ್ ಹಿಸ್ಟರಿ ತೆಗೆದರೆ ಈ ರೀತಿ ಕೇಸಲ್ಲಿ ಎಕ್ಸ್‌ಪರ್ಟ್ ಎಂಬುದು ಗೊತ್ತಾಗುತ್ತದೆ. ಇಂತಹವರನ್ನು ಇಟ್ಕೊಂಡು ಎಸ್‌ಐಟಿ ಮೂಲಕ ಯಾವ ಪಾರದರ್ಶಕ ತನಿಖೆ ಆಗುತ್ತದೆ? ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಿ, ಸಂತ್ರಸ್ತೆಯರಿಗೂ ನ್ಯಾಯ ಕೊಡಬೇಕು, ಸತ್ಯ ಗೊತ್ತಾಗಬೇಕು. ಈ ಕೇಸ್‌ನಲ್ಲಿ ಡಿ.ಕೆ. ಶಿವಕುಮಾರ್‌ ಸಂಚು ಕಾಣುತ್ತಿದೆ. ಮೊದಲು ಅವರನ್ನು ಕ್ಯಾಬಿನೆಟ್‌ನಿಂದ ಸಸ್ಪೆಂಡ್ ಮಾಡಬೇಕು. ಈ ಪ್ರಕರಣದಲ್ಲಿ ಡಿಕೆಶಿ ಸಂಚು ಏನಿದೆ? ಆ ಬಗ್ಗೆ ತನಿಖೆ ಆಗಲೇಬೇಕು. ಸಿಎಂ ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ಡಿಕೆಶಿಯನ್ನು ಸಂಪುಟದಿಂದ ವಜಾ ಮಾಡಲಿ ಎಂದು ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು. ಅಲ್ಲದೆ, ಡಿಸಿಎಂ ಡಿಕೆಶಿ ಮುಖ ನೋಡಿದರೆ ಬಾಲ ಸುಟ್ಟ ಬೆಕ್ಕಿನಂತೆಯೇ ಆಗಿದೆ. ದೇವರಾಜೇಗೌಡ ಸ್ಫೋಟಕ ಸುದ್ದಿಗೋಷ್ಠಿ ನಂತರ ಅವರ ಮುಖ ನೋಡಿ ಎಂದು ವ್ಯಂಗ್ಯವಾಡಿದರು.

ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ತನಿಖೆಯಾಗಲಿ ಎಂದು ಬಿಜೆಪಿ ಮುಖಂಡ ವಿವೇಕ್ ರೆಡ್ಡಿ ಆಗ್ರಹಿಸಿದ್ದಾರೆ. ನ್ಯಾಯಯುತ ತನಿಖೆ ನಡೆಯಬೇಕಾದರೆ ನ್ಯಾಯಾಂಗ ತನಿಖೆಗೆ ಈ ಪ್ರಕರಣವನ್ನು ವಹಿಸಿ ಎಂದು ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.

ಬೆಳಗಾವಿ ಸಾಹುಕಾರ್ ರಮೇಶ್‌ ಜಾರಕಿಹೊಳಿ ಪ್ರಕರಣ ಏನಾಯಿತು ಈಗ ಎಂಬುದು ಗೊತ್ತಾ? ಮೂವತ್ತು, ನಲವತ್ತು ಕೋಟಿ ರೂಪಾಯಿ ಖರ್ಚು ಮಾಡಿ ಜಾರಕಿಹೊಳಿ ಅವರ ಹೆಸರನ್ನು ಹಾಳು ಮಾಡಿದರು. ಆ ಆಡಿಯೊ ಈಗಲೂ ಓಡಾಡುತ್ತಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

16 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಅಂತಾ ನಿಮ್ಮ ನಾಯಕ ರಾಹುಲ್‌ ಗಾಂಧಿ ಹೇಳಿಕೆ ನೀಡುತ್ತಾರೆ. ಇಷ್ಟೆಲ್ಲ ಹೇಳಿಕೆ ನೀಡಿರುವ ರಾಹುಲ್‌ ಗಾಂಧಿಗೆ ಎಸ್‌ಐಟಿಯಿಂದ ನೋಟಿಸ್‌ ಕೊಡಲಾಯಿತೇ? 400 ಮಹಿಳೆಯರ ಮೇಲೆ ಪ್ರಜ್ವಲ್ ಅತ್ಯಾಚಾರ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಸ್ಪೆಸಿಫಿಕ್ ಆಗಿ ಚಾರ್ಜ್‌ ಮಾಡುತ್ತಿರುವ ರಾಹುಲ್‌ ಗಾಂಧಿಯನ್ನು ಎಸ್‌ಐಟಿಯವರು ಕರೆಯಬೇಕಲ್ವಾ? ಈಗ ಪೋಕ್ಸೋ ಕೇಸ್ ಹಾಕಲು 16 ವರ್ಷದ ಸಂತ್ರಸ್ತೆಯನ್ನು ಎಸ್‌ಐಟಿಯವರು ಹುಡುಕುತ್ತಿದ್ದಾರೆ. 2900 ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ ಎಂಬುದಾಗಿ ಸಿಂಗಾಪುರದಲ್ಲೂ ಸುದ್ದಿ ಅಂತೆ ಎಂದು ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಹಾಸನ ಡಿಸಿ ವಿರುದ್ಧ ಎಚ್‌ಡಿಕೆ ಗರಂ

ಇದೇ ವೇಳೆ ಶಿಶುಪಾಲ ಹಾಗೂ ಪಾಪದ ಕಥೆ ಹೇಳಿದ್ದ ಹಾಸನ ಡಿಸಿ ಎಚ್.ಡಿ. ಕುಮಾರಸ್ವಾಮಿ ಗರಂ ಆಗಿದ್ದಾರೆ. ಕೋಲಾರದಲ್ಲಿದ್ದಾಗ ಗಂಡ, ಹೆಂಡತಿ ಏನ್ ಮಾಡಿದ್ದೀರಾ ಅಂತಾ ಗೊತ್ತಿದೆ. ಯಾವುದೋ ಸಮಿತಿಯವರ ಮನವಿ ಪಡೆದು ವ್ಯಂಗ್ಯ ಮಾಡ್ತೀರಾ ಡಿಸಿ ಅವರೇ? ನಿಮ್ಮ ಯೋಗ್ಯತೆ ನನಗೆ ಚೆನ್ನಾಗಿ ಗೊತ್ತು ಕಿಡಿಕಾರಿದರು.

15 ದಿನಗಳಿಂದ ತಲೆಮರೆಸಿಕೊಂಡಿದ್ದಾನಲ್ಲ ಆ ಕಾರ್ತಿಕ್‌ಗೆ ಯಾವ ನೋಟಿಸ್ ಕೊಟ್ಟಿರಿ? ಬ್ಲೂ ಕಾರ್ನರ್ ನೋಟಿಸ್ ಕೊಟ್ಟಿದ್ದೀರಾ? ಲುಕ್‌ ಔಟ್‌ ನೋಟಿಸ್‌ ಕೊಟ್ಟಿರಾ? ಏನು ನಡೆಯುತ್ತಿದೆ ಇಲ್ಲಿ ಎಂದು ಕಿಡಿಕಾರಿದರು.

ಎಚ್.ಡಿ.ರೇವಣ್ಣ ಎಲ್ಲಿಗೂ ಓಡಿ ಹೋಗಿರಲಿಲ್ಲ. ದೇವರಿಗೆ ಕೈಮುಗಿದುಕೊಂಡು ಓಡಾಡಿಕೊಂಡಿದ್ದ. ಅಯ್ಯೋ ದೇವರೇ ಕಾಪಾಡಪ್ಪ ಅಂತಿದ್ದ. ಆದರೆ, ಬೇಕೆಂದೇ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಕಂಪ್ಲೇಂಟ್ ತೆಗೆದುಕೊಳ್ಳಲು ಸಂತ್ರಸ್ತೆಯರನ್ನು ಹುಡುಕುತ್ತಿದ್ದೇವೆ ಎಂದು ಎಸ್‌ಐಟಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಯಾರಿಗೆಲ್ಲ ಹೇಗೆ ಹೆದರಿಸಿ ಕಂಪ್ಲೇಂಟ್ ತೆಗೆದುಕೊಳ್ಳುವುದಕ್ಕೆ ಪ್ರಯತ್ನ ಮಾಡಲಾಗುತ್ತಿದೆ ಎಂಬ ವಿಷಯ ನಮಗೆ ಗೊತ್ತಾಗಿದೆ ಎಂದು ಎಚ್‌.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರೇವಣ್ಣ ಪಾತ್ರ ಎಷ್ಟಿದೆ?

ಯಾರೂ ನೇರವಾಗಿ ಎಚ್.ಡಿ.ರೇವಣ್ಣ ಮೇಲೆ ಕಂಪ್ಲೇಂಟ್‌ ಕೊಟ್ಟಿಲ್ಲ. ಕಿಡ್ನ್ಯಾಪ್ ಪ್ರಕರಣದಲ್ಲಿ ಎಚ್.ಡಿ.ರೇವಣ್ಣ ಪಾತ್ರ ಎಷ್ಟಿದೆ ಗೊತ್ತಿದೆಯಾ? ಬೇಲ್ ವಿಚಾರಣೆ ವೇಳೆ ಆ ಹೆಣ್ಣು ಮಗಳ ಕುರಿತು ಎಸ್‌ಪಿಪಿಯ ಮಾತು ಏನು? ಕಿಡ್ನ್ಯಾಪ್ ಆಗಿದ್ದ ಹೆಣ್ಣು ಮಗಳು ಬದುಕಿದ್ದಾಳೆ, ಸತ್ತಿದ್ದಾಳಾ ಅಂದಿದ್ದರು. ಕೊನೆಗೆ ಮೈಸೂರಿನ ಕಾಳೇನಹಳ್ಳಿ ತೋಟದ ಮನೆಯಿಂದ ಕರೆತಂದಿದ್ದರು. ಆ ತೋಟದ ಮನೆಗೆ ಹೋಗಿ ಕರೆತಂದದ್ರಲ್ಲ, ಮಹಜರು ಮಾಡಿದ್ರಾ? ಒಂದೂವರೆ ದಿವಸ ಆದರೂ ಆ ಹೆಣ್ಣು ಮಗಳು ಹೇಳಿಕೆ ಕೊಟ್ಟಿಲ್ಲವಾ? 2 ದಿನವಾದರೂ ಆ ಹೆಣ್ಣು ಮಗಳನ್ನು ಜಡ್ಜ್ ಮುಂದೆ ಹಾಜರು ಪಡಿಸಿಲ್ಲ ಏಕೆ? ಒಬ್ಬ ಜವಾಬ್ದಾರಿಯುತ ಮಂತ್ರಿಯಾಗಿ ಕೆಲಸ ಮಾಡಿದವರು ರೇವಣ್ಣ. ನೀವು ಬರೆಸಿಕೊಂಡ ಹೇಳಿಕೆಗೆ ಎಚ್.ಡಿ.ರೇವಣ್ಣ ಸೈನ್‌ ಮಾಡಬೇಕಾ? ಇದೇನು ಡಿಸಿಎಂ ಡಿ.ಕೆ. ಶಿವಕುಮಾರ್ ಇನ್ವೆಸ್ಟಿಗೇಷನ್‌ ಟೀಂ? ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಮಹಿಳಾ ಆಯೋಗ ಬರೆದಿದ್ದ ಪತ್ರದಲ್ಲಿ ಎಲ್ಲಿಯೂ ಪ್ರಜ್ವಲ್ ರೇವಣ್ಣ ಅವರ ಹೆಸರು ಇಲ್ಲ. ಪ್ರಜ್ವಲ್ ಆಗಲಿ, ರೇವಣ್ಣ ಹೆಸರಾಗಲಿ ಆಯೋಗದ ಪತ್ರದಲ್ಲಿ ಇರಲಿಲ್ಲ. ಆದರೆ, ಸಿಎಂ ತಮ್ಮ ಪತ್ರದಲ್ಲಿ ಪ್ರಜ್ವಲ್ ಹೆಸರನ್ನು ಉಲ್ಲೇಖಿಸುತ್ತಾರೆ. ಏಪ್ರಿಲ್ 28ಕ್ಕೆ ಪೆನ್‌ಡ್ರೈವ್ ಪ್ರಕರಣ ತನಿಖೆಗೆ SIT ರಚನೆ ಮಾಡಿದ್ದರು. ಏಪ್ರಿಲ್ 28ರಂದು ಬೆಂಗಳೂರಿನಲ್ಲಿ ಸಂತ್ರಸ್ತೆಯಿಂದ ಕಂಪ್ಲೇಂಟ್ ಬರೆಸಿದ್ದರು. ಗಣಕಯಂತ್ರದಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ದೂರು ಬರೆಸಿದರು. ಹೊಳೆನರಸೀಪುರದ ಪೊಲೀಸ್‌ ಠಾಣೆಗೆ ಬೆಂಗಳೂರಿನಿಂದ ಕಂಪ್ಲೇಂಟ್ ಬರೆಸಿ ನೀಡಿದರು. ರಾಜ್ಯದ ಗೌರವವನ್ನು ಉಳಿಸಲು SIT ಮಾಡಿದ್ರು ಅಂತ ಖುಷಿ ಇತ್ತು. ಆದರೆ, ಕೊನೆಗೆ ಮಾಡಿದ್ದೇನು? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಇದನ್ನೂ ಓದಿ: Prajwal Revanna Case: ಪೆನ್‌ಡ್ರೈವ್‌ ಸೂತ್ರಧಾರಿ ಕಾರ್ತಿಕ್‌ ಹಿಂದೆ ಯಾರಿದ್ದಾರೆ? ಎಲ್ಲಿದ್ದಾನೆ? ಅವನನ್ನೇಕೆ ಹಿಡಿಯಲಿಲ್ಲ? ಎಚ್‌ಡಿಕೆ ಪ್ರಶ್ನೆ

ಪತ್ರದಲ್ಲಿ ಪ್ರಜ್ವಲ್‌, ರೇವಣ್ಣ ಹೆಸರೇ ಇಲ್ಲ

ಏಪ್ರಿಲ್ 25ರಂದು ಮಹಿಳಾ ಆಯೋಗದ ಅಧ್ಯಕ್ಷರಿಂದಲೇ ಸಿಎಂಗೆ ಪತ್ರ ಬರೆಯಲಾಗಿದೆ. ಪೆನ್‌ಡ್ರೈವ್ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ರಚಿಸುವಂತೆ ಮನವಿ ಮಾಡಲಾಗಿತ್ತು. ಪ್ರಭಾವಿ ರಾಜಕಾರಣಿಗಳಿಂದ ಲೈಂಗಿಕ ದೌರ್ಜನ್ಯ ಅಂತಾ ಬರೆದಿದ್ದರು. ಮಹಿಳಾ ಆಯೋಗದ ಪತ್ರದಲ್ಲಿ ರಾಜಕಾರಣಿ ಯಾರೆಂದು ಹೇಳಿರಲಿಲ್ಲ. ಒಬ್ಬ ಅಲ್ಲ ಎಷ್ಟೋ ರಾಜಕಾರಣಿಗಳು ಎನ್ನುವ ಅರ್ಥದಲ್ಲಿತ್ತು ಆ ಪತ್ರ. ಆ ಬಳಿಕ ಏಪ್ರಿಲ್ 27ರಂದು ಮುಖ್ಯಮಂತ್ರಿಗಳಿಂದ ತನಿಖಾ ತಂಡ ರಚನೆ ಆಗುತ್ತದೆ. ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿ ತನಿಖಾ ತಂಡ ರಚಿಸುತ್ತೇನೆ ಎಂಬುದಾಗಿ ಹೇಳಿದ್ದನ್ನು ಎಚ್.ಡಿ. ಕುಮಾರಸ್ವಾಮಿ ಪ್ರಸ್ತಾಪಿಸಿದರು.

Exit mobile version