Site icon Vistara News

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case Hasanambe is going to destroy this government HD Kumaraswamy curse

ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪ್ರಕರಣ ಹಾಗೂ ಪೆನ್ ಡ್ರೈವ್ ಹಂಚಿಕೆ ಬಗ್ಗೆ ಆರೋಪ – ಪ್ರತ್ಯಾರೋಪಗಳು ತಾರಕಕ್ಕೇರುತ್ತಿವೆ. ಈ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಮಾತಿನ ಸಮರಕ್ಕೆ ಬಿದ್ದಿದ್ದಾರೆ. ಇದರ ಜತೆಗೆ ಎಚ್‌ಡಿಕೆ ರಾಜ್ಯ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ. ಅಲ್ಲದೆ, ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ ಎಂದು ಎಚ್‌ಡಿಕೆ ಶಾಪ ಹಾಕಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಲೈಂಗಿಕ ಹಗರಣ ಆಗಿರುವುದನ್ನು ನಾನು ಒಪ್ಪುತ್ತೇನೆ. ಆದರೆ, ಕೃಷ್ಣಬೈರೇಗೌಡ ಸಂತ್ರಸ್ತರಿಗೆ ನ್ಯಾಯ ಹರಣ ಅಂದಿದ್ದಾರೆ. ನಾವು ಯಾರಿಗೆ ನ್ಯಾಯ ಹರಣ ಮಾಡಿದ್ದೇವೆ? ನೀವು ಸಂತ್ರಸ್ತರಿಗೆ ಯಾವ ನ್ಯಾಯ ಕೊಡಿಸಿದ್ದೀರಿ ಹೇಳಿ? ಹೆಣ್ಣು ಮಕ್ಕಳನ್ನು ಹೆದರಿಸಿ ಹೇಳಿಕೆ ಪಡೆಯಲು ಸಜ್ಜಾಗಿದ್ದಾರೆ. ತನಿಖೆ ಸರಿಯಾಗಿ ನಡೆದಿದ್ದರೆ ಇನ್ನೂ ಎಲ್ಲೆಲ್ಲಿಗೋ ಹೋಗಲಿದೆ. ಕೇಸ್‌ನಲ್ಲಿ ಕುಮಾರಸ್ವಾಮಿ ಸೇರಿಕೊಂಡಿದ್ದಾರೆ ಅಂತಾರೆ. ಪೆನ್‌ಡ್ರೈವ್‌ ಎ.ಡಿ. ಕುಮಾರಸ್ವಾಮಿ ಜೇಬಲ್ಲಿದೆ ಅಂತಾರೆ. ನನ್ನ ಬಳಿ ಇರೋದು ಅಶ್ಲೀಲ ಪೆನ್‌ಡ್ರೈವ್‌ ಅಲ್ಲ. ನನ್ನ ಬಳಿಯಿರುವ ಪೆನ್‌ಡ್ರೈವ್‌ ಕೂಡ ಬಿಡುಗಡೆ ಮಾಡುತ್ತೇನೆ. ಒಂದು ಪೆನ್‌ಡ್ರೈವ್‌ ಇಟ್ಟುಕೊಂಡು ರಸ್ತೆಯಲ್ಲಿ ಮಹಿಳೆಯರ ಮಾನ ಹರಾಜು ಹಾಕಿದ್ದಾರೆ ಎಂದು ಕಿಡಿಕಾರಿದರು.

ಕಾರ್ತಿಕ್ ಗೌಡ ನಿರೀಕ್ಷಣಾ ಜಾಮೀನು ರಿಜೆಕ್ಟ್ ಆಗಿದೆ. ಎಸ್‌ಐಟಿ ಇನ್ನೂ ಯಾಕೆ ಕಾರ್ತಿಕ್ ಗೌಡನನ್ನು ಬಂಧನ ಮಾಡಿಲ್ಲ? ರಾಮನಗರ ಶಾಸಕರ ತುಣುಕುವೊಂದನ್ನು ಬಿಟ್ಟಿದ್ದರು. ಶಾಸಕರ ತುಣುಕನ್ನು ಬಿಟ್ಟರು ಎಂದು ಮೂವರನ್ನು ಬಂಧಿಸಿದ್ದಾರೆ. ಈ ಪೆನ್‌ಡ್ರೈವ್ ಪ್ರಕರಣದಲ್ಲಿ ಯಾಕಪ್ಪ ಏನೂ ಆಗಿಲ್ಲ? ಡಿಸಿಎಂ ಡಿ.ಕೆ. ಶಿವಕುಮಾರ್ ಬಗ್ಗೆ ವಕೀಲ ದೇವರಾಜೇಗೌಡ ಮಾತಾಡಿದ್ದಾರೆ. ಸಂಬಂಧ ಇಲ್ಲ ಅಂದ್ಮೇಲೆ ಡಿಕೆಶಿ ಹೆಸರು ಏಕೆ ಬಂತು?‌ ಮಾಡೋದೆಲ್ಲ ಮಾಡಿ, ನನಗೆ ಒರೆಸಲು ಹೊರಟಿದ್ದೀರಾ? ಇದಕ್ಕೆಲ್ಲಾ ಸಿದ್ದರಾಮಯ್ಯ ಮಂತ್ರಿ ಮಂಡಲ‌ವೇ ಕಾರಣ. ಮಂತ್ರಿ ಮಂಡಲದಲ್ಲಿ ತಾವೂ ಇದ್ದೀರಿ ಕೃಷ್ಣಬೈರೇಗೌಡರೇ. ನಿಮ್ಮಲ್ಲಿ ಅಲ್ಪ ಸ್ವಲ್ಪ ಇದ್ದಿದ್ದರೆ ಇದೆನ್ನೆಲ್ಲ ಮಾಡೋಕೆ‌ ಬಿಡುತ್ತಿರಲಿಲ್ಲ. ನಮಗೆ ವಿಷ ಹಾಕಿದ್ದಾರೆ ಅಂತ‌ ಕೃಷ್ಣಬೈರೇಗೌಡ ಹೇಳಿದ್ದಾರೆ. ಅವರು ಹಾಸನಾಂಬೆ ಮುಂದೆ ಬರಲಿ ಎಂಬುದಾಗಿ ಎಚ್‌‌ಡಿಕೆ ಸವಾಲು ಹಾಕಿದರು. ಸರ್ಕಾರವನ್ನು ಹಾಸನಾಂಬೆ ಕೆಲವೇ ದಿನಗಳಲ್ಲಿ ಧ್ವಂಸ ಮಾಡಳಿದ್ದಾಳೆ ಎಂದು ಎಚ್.ಡಿ. ಕುಮಾರಸ್ವಾಮಿ ಶಾಪ ಹಾಕಿದರು.

ಪೆನ್‌ಡ್ರೈವ್ ಪ್ರಕರಣವನ್ನು ಸಿಬಿಐಗೆ ನೀಡಲು ಆಗ್ರಹ

ಪ್ರಕರಣ ಸಂಬಂಧ ರಾಜ್ಯಪಾಲರಿಗೆ ದೂರು ನೀಡಿದ್ದೇವೆ. ಸಿಬಿಐ ತನಿಖೆಗೆ ನೀಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಮನವಿ ಮಾಡಿದ್ದೇನೆ. ಇದನ್ನು ರಾಜ್ಯಪಾಲರು ಅಥವಾ ಕೇಂದ್ರ ಮಾಡಲು ಸಾಧ್ಯವಿಲ್ಲ. ರಾಜ್ಯ ಸರ್ಕಾರವೇ ಸಿಬಿಐ ತನಿಖೆಗೆ ಒಪ್ಪಿಸಬೇಕು. ನ್ಯಾಯಯುತವಾಗಿ ಈ ಪ್ರಕರಣದ ತನಿಖೆ ನಡೆಯಬೇಕು. ನಮ್ಮ ವಕೀಲರ ಮೂಲಕ ನಾವು ವಾದ ಮಾಡುತ್ತೇವೆ. ಎಲ್ಲವನ್ನೂ ಹೈಕೋರ್ಟ್ ತೀರ್ಮಾನ ಮಾಡಬೇಕು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

4 ಗೋಡೆ ಮಧ್ಯೆ ಇರುವುದನ್ನು ವಿಶ್ವಕ್ಕೆ ಹಬ್ಬಿಸಿರುವುದು ನೀವು

ಮಾನ ಹರಣ, ಶೀಲ ಹರಣ ಎಂದೆಲ್ಲ ದೊಡ್ಡದಾಗಿ ಹೇಳಿದ್ದೀರಿ. ಪ್ರಜ್ವಲ್ ಕೇಸ್‌ನಲ್ಲಿ ಸರ್ಕಾರದ ನಡಾವಳಿಗಳು ಏನು ಇದೆಯೋ ಗೊತ್ತಾ? ಹಾಸನದಲ್ಲಿ ಮಹಿಳೆ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಿ ಆದೇಶ ಮಾಡಿದ್ದೀರಿ. ಮಹಿಳೆಯರ ಮಾನಹರಣ ಆಗಿದ್ದು ನಾಲ್ಕು ಗೋಡೆ ಮಧ್ಯೆ ಇತ್ತು. ಅದನ್ನು ವಿಶ್ವಕ್ಕೆ ಹಬ್ಬುವಂತೆ ಮಾಡಿದ್ದು ಯಾರಪ್ಪ ಕೃಷ್ಣಬೈರೇಗೌಡ? 4 ಗೋಡೆ ಮಧ್ಯೆ ಇರುವುದನ್ನು ವಿಶ್ವಕ್ಕೆ ಹಬ್ಬಿಸಿರುವುದು ನೀವು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಲೈಂಗಿಕ ದೌರ್ಜನ್ಯವೆಸಗಿದವರನ್ನು ಬಚಾವ್‌ ಮಾಡಲು ಯತ್ನ ಅಂದಿದ್ದೀರಿ. ನಿಮ್ಮ ಸರ್ಕಾರ ಏನು ಮಾಡುತ್ತಿದೆಯಪ್ಪಾ? ಸರ್ಜಿಕಲ್ ಸ್ಟ್ರೈಕ್ ಮಾಡುತ್ತಿದ್ದರೆ ನೀವು ಏನು ಮಾಡುತ್ತಿದ್ದೀರಿ? ನಿಮ್ಮ ಸರ್ಕಾರದಲ್ಲಿರುವುದು ಘಟಾನುಘಟಿ ನಾಯಕರಲ್ಲವಾ? ನಿಮ್ಮ ಮುಖ್ಯಮಂತ್ರಿ ಲಾಯರ್ ಆಗಿದ್ದಾರೆ. ಹೊಳೆನರಸೀಪುರ ಪ್ರಕರಣದಲ್ಲಿ ಬೇಲಬಲ್ ಸೆಕ್ಷನ್ ಹಾಕಿದ್ದೀರಿ. ನಂತರ ಎಚ್.ಡಿ.ರೇವಣ್ಣ ವಿರುದ್ಧ ಕಿಡ್ನ್ಯಾಪ್ ಕೇಸ್ ಹಾಕಿದ್ದಾರೆ. ಕಿಡ್ನ್ಯಾಪ್ ಆಗಿದ್ದಾಳೆ ಎನ್ನಲಾದ ಸಂತ್ರಸ್ತೆ ಸರ್ಕಾರದ ಸುಪರ್ದಿಯಲ್ಲೇ ಇದ್ದಾರೆ. ಎಸ್‌ಐಟಿ ವಶದಲ್ಲಿದ್ದರೂ 5 ದಿನದಿಂದ ಏನು ಮಾಡುತ್ತಿದ್ದೀರಿ? ಸಂತ್ರಸ್ತೆ ಕುಟುಂಬಸ್ಥರನ್ನು ಕೂಡ ಕರೆತಂದಿದ್ದೀರಿ. ಬೇಲ್ ಕೊಡಿಸಲು ಹೋದ ಲಾಯರ್‌ರನ್ನು ಕೂಡ ವಶಕ್ಕೆ ಪಡೆದಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಪೆನ್‌ಡ್ರೈವ್ ಪ್ರಕರಣದಲ್ಲಿ ಸತ್ಯಾಸತ್ಯತೆ ಹೊರಗೆ ಬರಲೇಬೇಕು. ಸತ್ಯ ಹೊರಬರಬೇಕೆಂದು ನಿಮಗಿಂದ ನಾನೇ ಹೆಚ್ಚಿನ ಧ್ವನಿ ಎತ್ತುತ್ತೇನೆ. ಡಿಕೆಶಿಯವರೇ ನಾನು ಡೈರೆಕ್ಟರೂ ಇದ್ದೇನೆ, ನಿರ್ಮಾಪಕ ಇದ್ದೇನೆ. ನಾನು ಎಂದಿಗೂ ಆ್ಯಕ್ಟ್ ಮಾಡಿಲ್ಲ. ಆದರೆ, ಆ್ಯಕ್ಟ್ ಮಾಡಿಸಿದ್ದೇನೆ. ನನ್ನನ್ನು ಕಥಾನಾಯಕನನ್ನಾಗಿ ಮಾಡಿದ್ದೀರಿ ಎಂದ ಕುಮಾರಸ್ವಾಮಿ ಆಕ್ರೋಶವನ್ನ ಹೊರಹಾಕಿದರು.

‘ಪ್ರಪಂಚದ ಅತಿ ದೊಡ್ಡ ಲೈಂಗಿಕ ಹಗರಣ’ ಎಂದು ಸಚಿವ ಕೃಷ್ಣ ಬೈರೇಗೌಡರು ನಿನ್ನೆ ಈ ಮಾತನ್ನು ಹೇಳಿದ್ದಾರೆ. ಈ ಪ್ರಕರಣದ ಪ್ರಾಮುಖ್ಯತೆಯನ್ನು ಹಾಳು ಮಾಡುತ್ತಿರುವುದು ಯಾರು? ಚುನಾವಣೆಗೂ ಮುನ್ನ ಪೆನ್‌ಡ್ರೈವ್ ರಿಲೀಸ್ ಮಾಡಿದ್ದು ಯಾರಪ್ಪ? ದೇಶಾದ್ಯಂತ ಸುದ್ದಿಯಾಗುವಂತೆ ಮಾಡಿದವರು ಯಾರಪ್ಪ? ಪೆನ್‌ಡ್ರೈವ್ ಸಂಬಂಧ ಅಮಿತ್ ಶಾ ಅವರನ್ನು ಪ್ರಶ್ನಿಸಿದ್ರಲ್ಲಪ್ಪಾ? ಬಿಜೆಪಿ, ಜೆಡಿಎಸ್ ಮೈತ್ರಿಯ ಬಗ್ಗೆ ಪ್ರಶ್ನಿಸಿ ನಿಲುವು ಕೇಳಿದಿರಿ? ನಿಮಗೆ ಸಂತ್ರಸ್ತರಿಗೆ ನ್ಯಾಯ ಕೊಡಿಸುವುದು ಬೇಕಾಗಿಲ್ಲ. ನಿಮಗೆ ಬೇಕಾಗಿರುವುದು ಬಿಜೆಪಿ, ಜೆಡಿಎಸ್ ಪಕ್ಷದ ವಿಚಾರವಾಗಿದೆ. ಜೆಡಿಎಸ್ ಪಕ್ಷ ಯಾರ ದಯೆಯೂ ಇಲ್ಲ. ನಿಮ್ಮಂತೆ ನಾವು ಎಲ್ಲಿಯೂ ಹೋಗಿ ಕೇಳಿಕೊಂಡಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಪೆನ್‌ಡ್ರೈವ್ ಬಿಡುಗಡೆಯಿಂದ ಯಾರಿಗೆ ಅನ್ಯಾಯವಾಗಿದೆ ಗೊತ್ತಾ? ಕೃಷ್ಣ ಬೈರೇಗೌಡರೇ ನಿಮಗೆ ನಮಸ್ಕಾರ. ನೀವು ರಾಹುಲ್‌ರಂತೆ 400 ಎಂಬ ಸಂಖ್ಯೆಯನ್ನು ಹೇಳಿಲ್ಲ. ಭಾರಿ ಸಂಖ್ಯೆಯಲ್ಲಿ ಎಂಬ ಪದವನ್ನು ಬಳಕೆ ಮಾಡಿದ್ದೀರಿ. ಮೈಸೂರು ಕಾಂಗ್ರೆಸ್‌ ಅಭ್ಯರ್ಥಿ 2,900 ಎಂದು ಮಾತನಾಡಿದ್ದಾನೆ ಎಂದು ಎಚ್.ಡಿ. ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದರು.

ಮಾಧ್ಯಮಗಳ ಮೂಲಕ ಸರ್ಕಾರಕ್ಕೆ ಸಂದೇಶ ಕಳಿಸುವಂತಾಗಿದೆ. ನಿನ್ನೆ ಹಲವು ನಾಯಕರು ಒಕ್ಕಲಿಗ ‘ಕೈ’ ನಾಯಕರಿಂದ ಸುದ್ದಿಗೋಷ್ಠಿ ನಡೆಸಲಾಗಿದೆ. ನಾವು ದಾರಿ ತಪ್ಪಿಸುತ್ತಿದ್ದೇವೆ ಎಂಬಂತೆ ಮಾತನಾಡಿದ್ದಾರೆ. ಈ ಘಟನೆಗೆ ನಾನು ಜಾತಿಯ ರಕ್ಷಣೆ ಪಡೆಯುವುದಕ್ಕೆ ಹೋಗಲ್ಲ. ಪ್ರಜ್ವಲ್‌ ಕೇಸಲ್ಲಿ ನಾನು ಜಾತಿ ರಕ್ಷಣೆ ಪಡೆಯುವುದಕ್ಕೆ ಹೋಗಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ನಾನು ಒಕ್ಕಲಿಗ ನಾಯಕನೆಂದು ಎಲ್ಲೂ ಹೇಳಿಕೊಂಡಿಲ್ಲ. ಒಕ್ಕಲಿಗ ನಾಯಕತ್ವಕ್ಕಾಗಿ ನಾನು ಪೈಪೋಟಿಯನ್ನು ಮಾಡಿಲ್ಲ. ಏನೋ ಡಿ.ಕೆ. ಶಿವಕುಮಾರ್‌ ಜತೆ ಪೈಪೋಟಿ ಎಂದು ಹೇಳಿದ್ದಾರೆ. ನನ್ನ ವಿರುದ್ಧ 150 ಕೋಟಿ ರೂಪಾಯಿಯ ಹಗರಣದ ಆರೋಪ ಮಾಡಿದ್ದರು. ನನ್ನ ವಿರುದ್ಧ ಆರೋಪ ಬಂದಾಗಲೂ ನಾನು ಸದನದಲ್ಲೇ ಹೇಳಿದ್ದೆ. ಶಾಸಕರ ಸಂಖ್ಯಾಬಲವನ್ನು ಬಳಸಿಕೊಳ್ಳುವುದಿಲ್ಲ ಎಂದು ಹೇಳಿದ್ದೆ. ನಾನು ಏಕಾಂಗಿಯಾಗಿ ಹೋರಾಡುವುದಾಗಿ ಹೇಳಿದ್ದೆ. ನಾನು ಹಿಟ್ ಆ್ಯಂಡ್ ರನ್ ಮಾಡುವ ವ್ಯಕ್ತಿಯಲ್ಲ. ಆಗ ಎಲ್ಲರೂ ನನ್ನ ದಾಖಲೆಗಾಗಿ ಕಾಯುತ್ತಿದ್ದರು. ನಾನು ದಾಖಲೆ ಬಿಟ್ಟಾಗ ನನ್ನ ಮೇಲೆ ಒಕ್ಕಲಿಗರನ್ನು ಬಿಟ್ಟಿದ್ದರು. ನಾನು ಆ ದಿನವೂ ಏಕಾಂಗಿಯಾಗಿಯೇ ಹೋರಾಟ ಮಾಡಿದ್ದೇನೆ. ಈಗಲೂ ನಾನು ಏಕಾಂಗಿಯಾಗಿಯೇ ಹೋರಾಟ ಮಾಡುತ್ತೇನೆ ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಇದನ್ನೂ ಓದಿ: Prajwal Revanna Case: ಪೆನ್‌ಡ್ರೈವ್ ಹಂಚಿಕೆದಾರರ ಬಂಧಿಸಿ; ಸಿಎಂ, ಡಿಸಿಎಂ ವಿರುದ್ಧ ಮಹಿಳಾ ಜೆಡಿಎಸ್‌ ಗರಂ!

ಹಾಸನ ರಾಜಕೀಯದಲ್ಲಿ ಇನ್ವಾಲ್ವ್ ಆಗಿಲ್ಲ

ಪ್ರಜ್ವಲ್ ಪ್ರಕರಣದಲ್ಲಿ ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ಈ ನೆಲದ ಕಾನೂನಿಗೆ ಪ್ರತಿಯೊಬ್ಬರೂ ತಲೆಬಾಗಲೇಬೇಕು. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಹೇಳಿದ್ದೇನೆ. ನನ್ನ ಹೇಳಿಕೆಯ ಬಗ್ಗೆ ಡಿ.ಕೆ. ಶಿವಕುಮಾರ್‌ ಅವರು ಕೂಡ ಮಾತನಾಡಿದ್ದಾರೆ. ರೇವಣ್ಣ ಕುಟುಂಬ ಬೇರೆ, ಎಚ್‌ಡಿಕೆ ಕುಟುಂಬ ಬೇರೆ ಅಂದಿದ್ದಾರೆ. ನಾನು ಹೇಳಿಕೆ ನೀಡಿದಂತೆ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ. ದೇವೇಗೌಡರ ಮಕ್ಕಳು ಎಲ್ಲರೂ ಬೇರೆ ಬೇರೆಯಾಗಿ ಇದ್ದೇವೆ. ನಾನು ಎಂದಿಗೂ ಹಾಸನ ರಾಜಕೀಯದಲ್ಲಿ ಇನ್ವಾಲ್ವ್ ಆಗಿಲ್ಲ. ಒಮ್ಮೆ ಮಾತ್ರ ಹಾಸನ ಚುನಾವಣೆ ವೇಳೆ ಇನ್ವಾಲ್ವ್ ಆಗಿದ್ದೆ. ನಮ್ಮ ಕಾರ್ಯಕರ್ತನಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ಆ ದಿನವೂ ನನ್ನ ಮೇಲೆಯೇ ಗೂಬೆ ಕೂರಿಸಿದ್ದರು. ರೇವಣ್ಣ ಕುಟುಂಬ ಮುಗಿಸಲು ಕುಮಾರಣ್ಣ ಹೊರಟಿದ್ದಾರೆಂದಿದ್ದಾರೆ ಎಂದು ಎಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದರು.

Exit mobile version