Site icon Vistara News

Prajwal Revanna Case: ವಿಡಿಯೊ ವೈರಲ್ ಅಪರಾಧದ ಸೆಕ್ಷನ್ ಹೇಳಿದ ಎಚ್‌ಡಿಕೆ; ಸಿಎಂ ಕುರ್ಚಿಯಲ್ಲಿ ಊಸರವಳ್ಳಿ ಎಂದು ಕಿಡಿ

Union Minister HD Kumaraswamy meeting with high officials of HMT Company in Bengaluru

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಕೇಸ್‌ಗೆ (Prajwal Revanna Case) ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಎಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದರು. ನೊಂದ ಮಹಿಳೆಯರ ವಿಡಿಯೊಗಳನ್ನು ಜಾಲತಾಣಗಳಲ್ಲಿ ಹಂಚುವುದು ಮುಖ್ಯವಲ್ಲ. ಅದು ಅಪರಾಧವೂ ಅಲ್ಲ! ಅಶ್ಲೀಲ ವಿಡಿಯೊಗಳನ್ನು ವೈರಲ್ ಮಾಡಿದ್ದು ದೊಡ್ಡ ಅಪರಾಧ ಎನ್ನುವುದು ಯಾವ ಸೆಕ್ಷನ್‌ನಲ್ಲಿದೆ? ಅದನ್ನು ಯಾವ ಸೆಕ್ಷನ್‌ನಲ್ಲಿ ಉಲ್ಲೇಖಿಸಿದ್ದಾರೆ? ಕುಮಾರಸ್ವಾಮಿ ಪ್ರಕಾರ ಯಾವುದಾದರೂ ಹೊಸ ಸೆಕ್ಷನ್ ಇದ್ದರೆ ಹೇಳಲಿ ಎಂದು ಪ್ರಶ್ನಿಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಸೆಕ್ಷನ್‌ಗಳ ಸಮೇತ ತಿರುಗೇಟು ಕೊಟ್ಟಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಎಚ್.ಡಿ. ಕುಮಾರಸ್ವಾಮಿ, ಸೆಕ್ಷನ್‌ಗಳ ಮಾಹಿತಿಯುಳ್ಳ ಎಸ್‌ಐಟಿ ಪತ್ರಿಕಾ ಹೇಳಿಕೆಯನ್ನು ಟ್ಯಾಗ್ ಮಾಡಿ ಸಿಎಂ ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ.

ಸಿಎಂ ಕುರ್ಚಿಯಲ್ಲಿ ಊಸರವಳ್ಳಿ!!

ಕ್ಷಣಕ್ಕೊಂದು ಮಾತು, ಘಳಿಗೆಗೊಂದು ಹೇಳಿಕೆ! ಕರ್ನಾಟಕದ ಮುಖ್ಯಮಂತ್ರಿ ಕುರ್ಚಿಯ ಮೇಲೆ ನೀವು ಕೂತಿದ್ದಿರೋ ಅಥವಾ ಊಸರವಳ್ಳಿ ಏನಾದರೂ ಕೂತಿದೆಯೋ? ನನಗಂತೂ ಅನುಮಾನ!! ಇಷ್ಟು ಬಣ್ಣಗೇಡಿ ವರ್ತನೆಯನ್ನು ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ ನಾನು. ಅತೀವ ವಿಷಾದ ಮತ್ತು ನೋವಿನಿಂದಲೇ ಈ ಮಾತು ಹೇಳುತ್ತಿದ್ದೇನೆ ಸಿದ್ದರಾಮಯ್ಯನವರೇ ಎಂದು ಕುಮಾರಸ್ವಾಮಿ ಕೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದೀರಿ. “ನೊಂದ ಮಹಿಳೆಯರ ವಿಡಿಯೊಗಳನ್ನು ಜಾಲತಾಣಗಳಲ್ಲಿ ಹಂಚುವುದು, ಹರಡುವುದು ಮುಖ್ಯವಲ್ಲ. ಅದು ಅಪರಾಧವೂ ಅಲ್ಲ! ಅಶ್ಲೀಲ ವಿಡಿಯೊಗಳನ್ನು ವೈರಲ್ ಮಾಡಿದ್ದು ದೊಡ್ಡ ಅಪರಾಧ ಎನ್ನುವುದು ಯಾವ ಸೆಕ್ಷನ್‌ನಲ್ಲಿದೆ? ಅದನ್ನು ಯಾವ ಸೆಕ್ಷನ್‌ನಲ್ಲಿ ಉಲ್ಲೇಖಿಸಿದ್ದಾರೆ? ಕುಮಾರಸ್ವಾಮಿ ಪ್ರಕಾರ ಯಾವುದಾದರೂ ಹೊಸ ಸೆಕ್ಷನ್ ಇದ್ದರೆ ಹೇಳಲಿ” ಎಂದು ನನಗೆ ಪ್ರಶ್ನೆ ಮಾಡಿದ್ದೀರಿ ಎಂದು ಸಿಎಂಗೆ ಎಚ್.ಡಿ. ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

ಎಸ್‌ಐಟಿ ನೀಡಿದ್ದ ಮಾಧ್ಯಮ ಪ್ರಕಟಣೆಯನ್ನು ಪೋಸ್ಟ್‌ ಮಾಡಿದ ಎಚ್‌ಡಿಕೆ

ದಯಮಾಡಿ ವಕೀಲಿಕೆ ಮಾಡಬೇಡಿ

ನಿಜ, ನೀವು ಸ್ವಯಂಘೋಷಿತ ಸಂವಿಧಾನ ತಜ್ಞರು! ಪ್ರ(ಕು)ಖ್ಯಾತ ಮಾಜಿ ವಕೀಲರು!! ಹಾಲಿ ಮುಖ್ಯಮಂತ್ರಿಗಳು. ಆದರೂ ನಿಮ್ಮ ಪ್ರಶ್ನೆಗೆ ಉತ್ತರ ಕೊಡುವುದು ನನ್ನ ಧರ್ಮ. ಆದರೆ, ನಿಮಗೆ ಈ ಪರಿ ಅಜ್ಞಾನವೇ ಎನ್ನುವುದು ನನಗೆ ಸೋಜಿಗ. ಮಾತೆತ್ತಿದರೆ, ‘ನಾನು ಲಾಯರ್ ಗಿರಿ ಮಾಡ್ತಾ ಇದ್ದೆ. ಸುಮ್ಕೆ ಕೂತ್ಕಳಿ’ ಎಂದು ಎಲ್ಲರ ಬಾಯಿ ಮುಚ್ಚಿಸುತ್ತಿದ್ದ ನೀವು, ಈಗ ನೀವೇ ಬಾಯಿ ಮುಚ್ಚಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಇದೇ ಕಾರಣಕ್ಕೆ ನಾನು ನಿಮ್ಮನ್ನು ಅತ್ಯಂತ ವಿನಮ್ರತೆಯಿಂದ ವಿನಂತಿ ಮಾಡಿಕೊಂಡಿದ್ದು, ‘ದಯಮಾಡಿ ವಕೀಲಿಕೆ ಮಾಡಬೇಡಿ’ ಎಂದು. ಕಾನೂನಿನ ಬಗ್ಗೆ ಸಾಸಿವೆ ಕಾಳಿನಷ್ಟು ತಿಳಿವಳಿಕೆ ಇಲ್ಲದವರೊಬ್ಬರು ‘ನಾನೂ ವಕೀಲ.. ನಾನೂ ವಕೀಲಿಕೆ ಮಾಡ್ತಾ ಇದ್ದೆ’ ಎಂದು ಹೇಳಿಕೊಳ್ಳುವುದು ಗೌರವಾನ್ವಿತ ವಕೀಲ ಸಮುದಾಯಕ್ಕೆ ಮಾಡುವ
ಅಪಚಾರ. ತಮಗೆ ಇನ್ನಾದರೂ ಇರಲಿ ಶಿಷ್ಟಾಚಾರ ಎಂದು ಸಿಎಂಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಿವಿಮಾತು ಹೇಳಿದ್ದಾರೆ.

ಎಸ್‌ಐಟಿ ರೂಲ್ಸ್ ಗೊತ್ತಿಲ್ಲವೇ?

“ನೊಂದ ಮಹಿಳೆಯರ ವಿಡಿಯೊಗಳನ್ನು ಹಂಚುವುದು ಅಪರಾಧ ಎಂದು ಯಾವ ಸೆಕ್ಷನ್‌ನಲ್ಲಿ ಹೇಳಿದ್ದಾರೆ” ಎಂದು ಒಂದನೇ ಕ್ಲಾಸು ಮಗುವಿನಂತೆ ಕೇಳಿದ್ದೀರಿ! ನಿಮ್ಮ ಸರ್ಕಾರದ ಅಧೀನದಲ್ಲಿರುವ, ನೀವೇ ಆದೇಶಿಸಿ ರಚನೆ ಮಾಡಿಸಿರುವ ವಿಶೇಷ ತನಿಖಾ ತಂಡ (SIT) ಹೊರಡಿಸಿರುವ ಪತ್ರಿಕಾ ಪ್ರಕಟಣೆ, ರೂಪಿಸಿರುವ ಕಾನೂನುಬದ್ಧ ನಿಯಮಗಳು ‘ಸಾಕ್ಷಾತ್ ಸಿಎಂ’ ಆಗಿರುವ ನಿಮ್ಮ ಗಮನಕ್ಕೇ ಬಂದಿಲ್ಲವೆಂದರೆ!!??‌ ತಾವು ಸರ್ಕಾರ ನಡೆಸುತ್ತಿರುವಿರೋ ಅಥವಾ ವಿಧಾನಸೌಧವನ್ನು ಟೈಮ್ ಪಾಸ್ ಕ್ಲಬ್ ಮಾಡಿಕೊಂಡಿರುವಿರೋ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ನಿಮ್ಮ ಘನತವೆತ್ತ ಅವಗಾಹನೆಗೆ ಎಸ್‌ಐಟಿ ಹೊರಡಿಸಿರುವ ಪ್ರತಿಕಾ ಪ್ರಕಟಣೆಯನ್ನು ಇಲ್ಲಿ ಲಗತ್ತಿಸಿದ್ದೇನೆ. ದಯಮಾಡಿ ಓದಿಕೊಳ್ಳಿ, ಅರ್ಥ ಮಾಡಿಕೊಳ್ಳಿ.. ನೀವು ಕೇಳಿದ ಎಲ್ಲ ಸೆಕ್ಷನ್‌ಗಳು ಅದರಲ್ಲಿಯೇ ಇವೆ. ಒಂದಲ್ಲ, ಹತ್ತಾರು ಸಲ ಓದಿ ಮನನ ಮಾಡಿಕೊಳ್ಳಿ ಎಂದು ಎಚ್.ಡಿ. ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: PSI Exam: ಪಿಎಸ್‌ಐ ಸೇರಿ 4 ಸಾವಿರ ಹುದ್ದೆಗಳ ನೇಮಕಾತಿಗೆ ಪರೀಕ್ಷಾ ದಿನಾಂಕ ಅನೌನ್ಸ್‌; ಯಾವ ದಿನಕ್ಕೆ ಯಾವ ಪರೀಕ್ಷೆ?

ಮಾನವನ್ನು ವೋಟಿಗೆ ಒತ್ತೆ ಇಟ್ಟ ಕ್ರಿಮಿನಲ್!

ನಿಮ್ಮನ್ನು ಅಪಮಾನಿಸುತ್ತಿದ್ದೇನೆ ಎಂದು ಅನ್ಯತಾ ಭಾವಿಸಬೇಡಿ. ವಯಸ್ಸಿನಲ್ಲಿ ಹಿರಿಯರು, ಹೆಚ್ಚು ಅನುಭಸ್ಥರು ನೀವು. ಆದರೆ, ಪೆನ್ ಡ್ರೈವ್ ಪ್ರಕರಣದಲ್ಲಿ ನಿಮ್ಮ ನಡವಳಿಕೆ ಪ್ರಶ್ನಾರ್ಹ. ಅಮಾಯಕ ಹೆಣ್ಮಕ್ಕಳ ಮಾನವನ್ನು ವೋಟಿಗೆ ಒತ್ತೆ ಇಟ್ಟ ಕ್ರಿಮಿನಲ್ ಅನ್ನು ಪಕ್ಕದಲ್ಲೇ ಕೂರಿಸಿಕೊಂಡು ಮಾತನಾಡುತ್ತಿದ್ದೀರಿ. ಸಂವಿಧಾನಬದ್ಧವಾಗಿ ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿ ಸಂವಿಧಾನ ದ್ರೋಹಿ ಕೃತ್ಯ ಎಸಗಿರುವ ವ್ಯಕ್ತಿ ನಿಮ್ಮ ಸಂಪುಟದಲ್ಲಿ ಉಪ ಮುಖ್ಯಮಂತ್ರಿ!! ಇದಕ್ಕಿಂತ ನಿರ್ಲಜ್ಜತೆ ಉಂಟೇ? ಎಂದು ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀವು, ನಿಮ್ಮ ಇಡೀ ಕಾಂಗ್ರೆಸ್ ಪಕ್ಷ CD ಶಿವು (ಡಿ.ಕೆ. ಶಿವಕುಮಾರ್) ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದೀರಿ. ನಿಮ್ಮ ಇಡೀ ಕ್ಯಾಬಿನೆಟ್ ಆ ವ್ಯಕ್ತಿಯ ಹಿತಾಸಕ್ತಿಗಾಗಿ, ಆತ ರೂಪಿಸಿರುವ ಒಳಸಂಚಿನಲ್ಲಿ ಭಾಗಿಯಾಗಿದೆ. ನಿಮ್ಮದು CABINET OF KARNATAKA (ಕ್ಯಾಬಿನೆಟ್ ಆಫ್ ಕರ್ನಾಟಕ) ಅಲ್ಲ, ಅದು CABINET OF CONSPIRACY!! (ಕ್ಯಾಬಿನೆಟ್ ಆಫ್ ಕಾ‌ನ್ಸ್‌ಪಿರಸಿ) ಎಂದು ಬಹಳ ನೊಂದು ಹೇಳುತ್ತಿದ್ದೇನೆ ಎಂಬುದಾಗಿ ಎಚ್‌.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

Exit mobile version