ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಕಿಡ್ನ್ಯಾಪ್ ಕೇಸ್‌ನಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಬಂಧನ ಕ್ರಮ ಸರಿ ಇದೆ ಎಂದು ವಿಧಾನಸಭಾ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್. ಅಶೋಕ್, ಎಚ್.ಡಿ. ರೇವಣ್ಣ ಅವರ ಬಂಧನ ಕ್ರಮ ಸರಿಯಾಗಿಯೇ ಇದೆ. ಪೊಲೀಸರು ಅವರ ಕೆಲಸವನ್ನು ಮಾಡುತ್ತಿದ್ದಾರೆ. ರೇವಣ್ಣ ಮೇಲೆ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು. ಈಗಾಗಲೇ ಈ ಬಗ್ಗೆ ಮಾಜಿ ಸಿಎಂ, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರೂ ಹೇಳಿದ್ದಾರೆ. ಇದು ತಮ್ಮ ಕುಟುಂಬ ಹಾಗೂ ಜೆಡಿಎಸ್ ಪಕ್ಷದ ವಿಚಾರವಾಗಿದೆ. ಇದಕ್ಕೂ ಬಿಜೆಪಿಗೂ ಸಂಬಂಧ ಇಲ್ಲ ಅಂತ ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಪ್ರಜ್ವಲ್ ರೇವಣ್ಣ ಪಾತಾಳದಲ್ಲಿದ್ದರೂ ಹುಡುಕಿಕೊಂಡು ತರುತ್ತೇವೆ ಎಂದು ಸಚಿವ ಎಂ.ಬಿ. ಪಾಟೀಲ್ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಆರ್. ಅಶೋಕ್, ಪ್ರಜ್ವಲ್ ರೇವಣ್ಣ ಭೂಮಿ ಮೇಲೆ ಇದ್ದಾಗಲೇ ವಿದೇಶಕ್ಕೆ ಹೋಗಲು ಇವರು ಬಿಟ್ಟಿದ್ದಾರೆ. ಇನ್ನು ಪಾತಾಳಕ್ಕೆ ಹೋಗಬೇಕಾದರೆ ಸಬ್ ಮೆರಿನ್‌ನಲ್ಲಿ ಹೋಗಬೇಕು ಎಂದು ವ್ಯಂಗ್ಯವಾಡಿದರು.
ರಾಜ್ಯ ಇಂಟೆಲಿಜೆನ್ಸ್ ವಿಫಲ
ಪ್ರಜ್ವಲ್ ರೇವಣ್ಣ ಅವರು ಡಿಪ್ಲೊಮ್ಯಾಟಿಕ್ ವೀಸಾ ಮೇಲೆ ವಿದೇಶಕ್ಕೆ ಹೋಗಿದ್ದಾರೆ. ಆದರೆ, ಈಗ ಕೇಂದ್ರ ಸರ್ಕಾರದ ಮೇಲೆ ಕಾಂಗ್ರೆಸ್‌ನವರು ಬೊಟ್ಟು ಮಾಡುತ್ತಿದ್ದಾರೆ. ಡಿಪ್ಲೊಮ್ಯಾಟಿಕ್ ವೀಸಾವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೊಡುವುದಿಲ್ಲ. ಇನ್ನು ನಮ್ಮ ರಾಜ್ಯ ಸರ್ಕಾರದ ಇಂಟಲಿಜೆನ್ಸ್ ಈ ಪ್ರಕರಣದಲ್ಲಿ ವಿಫಲವಾಗಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಇಲ್ಲಿಂದ ವರದಿ ನೀಡಿದ್ದರೆ ಏರ್‌ಪೋರ್ಟ್‌ನಲ್ಲಿಯೇ ತಡೆಯುತ್ತಿದ್ದರು ಎಂದು ರಾಜ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ಗುಡುಗಿದರು.
ಅಮಿತ್ ಶಾ – ಎಚ್‌ಡಿಕೆ ಮಧ್ಯೆ ಮಾತುಕತೆ
ಬಿಜೆಪಿ – ಜೆಡಿಎಸ್ ಮೈತ್ರಿಯು ಹೈಕಮಾಂಡ್ ಮಟ್ಟದಲ್ಲಿ ಹೊಂದಾಣಿಕೆ ಆಗಿದೆ. ಅವರೇ ನಿರ್ಧಾರ ತೆಗೆದುಕೊಳ್ಳಬೇಕು. ಅವರ ಯಾವುದೇ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಗೃಹ ಸಚಿವ ಅಮಿತ್ ಶಾ ಮತ್ತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ನಿನ್ನೆ (ಶನಿವಾರ – ಮೇ 4) ರಾತ್ರಿ ಮಾತನಾಡಿದ್ದಾರೆ. ಅವರು ಏನು ಮಾತನಾಡಿದ್ದಾರೆ ಎಂಬ ಮಾಹಿತಿ ನನಗೆ ಇಲ್ಲ ಎಂದು ಆರ್. ಅಶೋಕ್ ಹೇಳಿದರು.
ಕಪಾಳಕ್ಕೆ ಹೊಡೆಯುವುದು ಡಿಕೆಶಿ ಸ್ಟೈಲ್
ಕಾಂಗ್ರೆಸ್ ಕಾರ್ಯಕರ್ತನಿಗೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ಕಪಾಳಮೋಕ್ಷ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಆರ್. ಅಶೋಕ್, ಅದು ಅವರ ಸ್ಟೈಲ್. ಇದು ಮೊದಲ ಬಾರಿ ಏನಲ್ಲ. ಅನೇಕ ಬಾರಿ ಕಾರ್ಯಕರ್ತರಿಗೆ ಹೀಗೆ ಹೊಡೆದಿದ್ದಾರೆ ಎಂದು ಹೇಳಿದರು.
ಪ್ರಜ್ವಲ್‌ಗೆ ವೋಟ್ ಹಾಕಿ ಎಂಬ ಸಿದ್ದರಾಮಯ್ಯ ಟ್ವೀಟ್; ಬಿಜೆಪಿಯಿಂದ ಫುಲ್ ಕ್ಲಾಸ್!
ಪ್ರಜ್ವಲ್ ಪರ ಪ್ರಧಾನಿ ನರೇಂದ್ರ ಮೋದಿ ಅವರು ಮತಯಾಚನೆ ಮಾಡಿದ್ದಾರೆ. ಅವರು ಅತ್ಯಾಚಾರಿ ಆರೋಪಿಯನ್ನು ಬೆಂಬಲಿಸುತ್ತಿದ್ದಾರೆ ಎಂಬ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಈಗ ಬಿಜೆಪಿ ತಿರುಗೇಟು ನೀಡಿದೆ. ವಿಧಾನಸಭಾ ಪ್ರತಿಪಕ್ಷ ನಾಯಕ ಆರ್. ಅಶೋಕ್, ಈ ಬಗ್ಗೆ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಅವರ ಪರ ಸಿದ್ದರಾಮಯ್ಯ ಮತಯಾಚನೆ ಮಾಡಿದ್ದಾರೆ. ಈಗ ಇದಕ್ಕೆ ಸಿಎಂ ಉತ್ತರ ಕೊಡಲಿ ಎಂದು ಸವಾಲು ಹಾಕಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್. ಅಶೋಕ್, 2019ರ ಚುನಾವಣೆ ವೇಳೆ ಸಿದ್ದರಾಮಯ್ಯ ಅವರ ಭಾಷಣದ ವಿಡಿಯೊವನ್ನು ಪ್ಲೇ ಮಾಡಿದ್ದಾರೆ. 2019ರ ಏಪ್ರಿಲ್ 17ರಂದು ಕಡೂರಿನ ಎಪಿಎಂಸಿಯಲ್ಲಿ ಸ್ವತಃ ಪ್ರಜ್ವಲ್ ರೇವಣ್ಣ ಅವರನ್ನು ಸಿದ್ದರಾಮಯ್ಯ ಪಕ್ಕದಲ್ಲಿ ಕೂರಿಸಿಕೊಂಡು ಪ್ರಚಾರ ಮಾಡಿದ್ದರು.
ಪ್ರಜ್ವಲ್ ರೇವಣ್ಣ ಯಂಗ್ ಸ್ಟಾರ್ ಇದ್ದಾನೆ. ಪ್ರತಿಭಾವಂತ ಇದ್ದಾನೆ. ಹಾಗಾಗಿ ನಮ್ಮ ಮೈತ್ರಿ ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ ಗೆಲ್ಲಿಸಿಕೊಡಿ. ಹಾಸನದ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ. ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕೆ ಶಕ್ತಿ ನೀಡಿ, ತೆನೆ ಹೊತ್ತ ಮಹಿಳೆಗೆ ಮತ ನೀಡಿ ಅಂತ ಮನವಿ ಮಾಡಿ (17-4-2019ರಲ್ಲಿ) ಟ್ವೀಟ್ ಮಾಡಿದ್ದರು. ನಾನು ಹೇಳಿದರೆ ಸುಳ್ಳು ಎಂದು ಹೇಳುತ್ತಾರೆ. ಇಲ್ಲಿ ನೋಡಿ ಅವರದ್ದೇ ಟ್ವೀಟ್ ಇದೆ ಎಂದು ವಿಧಾನಸಭಾ ಪ್ರತಿಪಕ್ಷ ನಾಯಕ ಆರ್. ಅಶೋಕ್ ಪ್ರದರ್ಶನ ಮಾಡಿದರು.
ಈಗ ಹೇಳಿ ಸಿದ್ದರಾಮಯ್ಯ ಅವರೇ!
ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿಧಾನಸಭಾ ಪ್ರತಿಪಕ್ಷ ನಾಯಕ ಆರ್. ಅಶೋಕ್, ಈ ಹಿಂದಿನ ಭಾಷಣವನ್ನು ಸಹ ಮಾಧ್ಯಮದವರ ಮುಂದೆ ಪ್ಲೇ ಮಾಡಿದರು. ಈಗ ದಾಖಲೆ ಬಿಡುಗಡೆ ಮಾಡಿದ್ದೇನೆ. ಈಗ ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಉತ್ತರ ಕೊಡಬೇಕು. ಯಂಗ್ ಮತ್ತು ವಿಷನ್ ಲೀಡರ್ ಅಂತ ಹೇಳಿದ್ದೀರಿ. ನಮ್ಮದು ಮುಂದಿನ ಐದು ವರ್ಷಗಳ ವಿಷನ್ ಇದೆ. ಪ್ರಜ್ವಲ್ ಗೆದ್ದರೆ ಅದನ್ನು ಜಾರಿಗೊಳಿಸುತ್ತೇವೆ ಎಂದು ಹೇಳಿದ್ದಿರಲ್ಲವೇ? ಪ್ರಜ್ವಲ್ ಅವರನ್ನು ಜೆಡಿಎಸ್‌ನಿಂದ ಈಗಾಗಲೇ ಅಮಾನತು ಮಾಡಲಾಗಿದೆ. ಅವರು ಕಳೆದ ಬಾರಿ ನಮ್ಮ ಹೊಂದಾಣಿಕೆಯಿಂದ ಗೆದ್ದಿಲ್ಲ. ನಿಮ್ಮ ಮೈತ್ರಿ ಅಭ್ಯರ್ಥಿಯಾಗಿ ಗೆದ್ದಿದ್ದಾರೆ ಎಂದು ಕಿಡಿಕಾರಿದರು.
ಎಚ್.ಡಿ. ರೇವಣ್ಣ ಮೊಬೈಲ್ ವಶಕ್ಕೆ? ಟೆಕ್ನಿಕಲ್ ಎವಿಡೆನ್ಸ್ ಕಲೆ ಹಾಕಲು ಮುಂದಾದ ಎಸ್‌ಐಟಿ!
ಅಶ್ಲೀಲ ವಿಡಿಯೊ ಪೆನ್‌ಡ್ರೈವ್ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಈಗಾಗಲೇ ಬಂಧನದಲ್ಲಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ವಿಚಾರಣೆಯನ್ನು ತೀವ್ರಗೊಳಿಸಲಾಗಿದೆ. ಅಲ್ಲದೆ, ಅವರ ಮೊಬೈಲ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.
ಇದೊಂದು ಹೈಪ್ರೊಫೈಲ್ ಕೇಸ್ ಆಗಿರುವುದರಿಂದ ಎಸ್‌ಐಟಿ ಅಧಿಕಾರಿಗಳು ಸಾಕಷ್ಟು ಮುಂಜಾಗ್ರತೆಯನ್ನು ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧವಾಗಲೀ ಅಥವಾ ಎಸ್‌ಐಟಿ ವಿರುದ್ಧವಾಗಲೀ ಯಾರೂ ಬೊಟ್ಟು ಮಾಡಬಾರದು ಎಂಬ ನಿಟ್ಟಿನಲ್ಲಿ ತನಿಖೆಯ ಜತೆ ಜತಗೆ ಸಾಕ್ಷ್ಯಗಳ ಸಂಗ್ರಹಕ್ಕೂ ಮುಂದಾಗಲಾಗಿದೆ.
ಈ ಸಂಬಂಧ ಈಗ ಎಸ್.ಐ.ಟಿ ಅಧಿಕಾರಿಗಳಿಂದ ಎಚ್.ಡಿ. ರೇವಣ್ಣ ಅವರ ಮೊಬೈಲ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಎಚ್.ಡಿ. ರೇವಣ್ಣ ಅವರ ಮೊಬೈಲ್ ಸೀಜ್ ಮಾಡಿ ಡೇಟಾ ಪರಿಶೀಲನೆ ಮಾಡಲಾಗುತ್ತಿದೆ. ರೇವಣ್ಣ ಮೊಬೈಲ್ ಚಾಟಿಂಗ್, ಕಾಲ್ ಸಿಡಿಆರ್ ಪರಿಶೀಲನೆಗೆ ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಈಗ ಎಚ್.ಡಿ. ರೇವಣ್ಣ ಅವರನ್ನು ಕಿಡ್ನ್ಯಾಪ್ ಕೇಸ್ ಅಡಿ ಬಂಧಿಸಿರುವುದರಿಂದ ಟೆಕ್ನಿಕಲ್ ಎವಿಡೆನ್ಸ್ ಅನ್ನು ಸಂಗ್ರಹ ಮಾಡಬೇಕಾಗುತ್ತದೆ. ಹೀಗಾಗಿ ಮೊಬೈಲ್ ಅನ್ನು ವಶಕ್ಕೆ ಪಡೆಯಲಾಗಿದೆ.
ಈ ಮೊಬೈಲ್‌ನಲ್ಲಿ ಡಿಲಿಟ್ ಆಗಿರುವ ಡೇಟಾಗಳನ್ನೂ ರಿಟ್ರೀವ್ ಮಾಡಿ ಅವುಗಳನ್ನು ಸಾಕ್ಷ್ಯವೆಂದು ಪರಿಗಣಿಸಲು ನಿರ್ಧಾರ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮೊಬೈಲ್ ಪರಿಶೀಲನೆಯಲ್ಲಿ ಈಗ ಎಸ್‌ಐಟಿ ತಂಡವಿದೆ.
ವಿಡಿಯೊದಲ್ಲಿರುವ ಮಹಿಳಾ ಅಧಿಕಾರಿಗಳಿಗೆ SIT ನೋಟಿಸ್: ‘ನಾನವಳಲ್ಲ’ ಎಂದು ಹೇಳಿಕೆ!
ಅಶ್ಲೀಲ ವಿಡಿಯೊ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆ ವಿಡಿಯೊದಲ್ಲಿ ಇದ್ದಾರೆ ಎನ್ನಲಾದ ಮೂವರು ಮಹಿಳಾ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗಲು ಎಸ್‌ಐಟಿ ಅಧಿಕಾರಿಗಳು ನೋಟಿಸ್ ಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಒಬ್ಬೊಬ್ಬರೂ, “ನಾನವಳಲ್ಲ” ಎಂಬ ಉತ್ತರವನ್ನು ನೀಡಿದ್ದಾರೆ ಎನ್ನಲಾಗಿದೆ.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೆನ್‌ಡ್ರೈವ್ ವಿಡಿಯೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಈಗಾಗಲೇ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ನಡುವೆ ವಿಡಿಯೊದಲ್ಲಿ ಸಾಕಷ್ಟು ಮಹಿಳಾ ಅಧಿಕಾರಿಗಳೂ ಇದ್ದಾರೆ ಎಂಬ ಬಗ್ಗೆ ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಡಿಯೊಗಳಲ್ಲಿ ಕಂಡ ಮುಖವನ್ನಾಧರಿಸಿ ಅವರ ಗುರುತನ್ನು ಪತ್ತೆ ಹಚ್ಚಿರುವ ಎಸ್‌ಐಟಿ ಅಧಿಕಾರಿಗಳು ಆ ಸಂತ್ರಸ್ತ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಆದರೆ, ಈಗಾಗಲೇ ಈ ಪ್ರಕರಣದಲ್ಲಿ ಸಂಪೂರ್ಣ ಮುಜುಗರವನ್ನು ಅನುಭವಿಸಿರುವ ಮಹಿಳಾ ಅಧಿಕಾರಿಗಳು ವಿಚಾರಣೆಗೆ ಹಾಜರಾಗಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಪೊಲೀಸ್ ಅಧಿಕಾರಿಗಳ ವಿಡಿಯೊ ಹಾಗೂ ಫೋಟೊಗಳು ಸಹ ವೈರಲ್ ಆಗಿದ್ದವು. ಇದರಿಂದ ಅವರು ತೀವ್ರ ಆಘಾತವನ್ನು ಎದುರಿಸಿದ್ದಾರೆ.
ಈಗ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದರಿಂದ ಮತ್ತಷ್ಟು ಕಂಗೆಟ್ಟಿರುವ ಮಹಿಳಾ ಅಧಿಕಾರಿಗಳು, ಆ ವಿಡಿಯೊ ಹಾಗೂ ಫೋಟೊಗಳು ನಮ್ಮದಲ್ಲ. ಅದನ್ನು ಮಾರ್ಫ್ ಮಾಡಲಾಗಿದೆ ಎಂದು ನೋಟಿಸ್‌ಗೆ ಉತ್ತರ ಕೊಟ್ಟಿದ್ದಾರೆ ಎನ್ನಲಾಗಿದೆ.
ವಿಚಾರಣೆಗೆ ಹಾಜರಾಗುವ ಸಾಧ್ಯತೆ ಕಡಿಮೆ
ಒಂದು ವೇಳೆ ಈ ಮಹಿಳಾ ಅಧಿಕಾರಿಗಳು ಎಸ್‌ಐಟಿ ಮುಂದೆ ಬಂದು ತಮ್ಮ ಮೇಲೆ ಪ್ರಜ್ವಲ್ ದೌರ್ಜನ್ಯ ಮಾಡಿದ್ದಾರೆ. ಆಮಿಷವೊಡ್ಡುವ ಮೂಲಕ ಇಲ್ಲವೇ ಕಿರುಕುಳ ನೀಡುವ ಮೂಲಕ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದರೆ, ಈ ಕೇಸ್ ಮತ್ತಷ್ಟು ಬಲಿಷ್ಠವಾಗುತ್ತಿತ್ತು. ಆದರೆ, ಈಗ ಈ ಮಹಿಳಾ ಅಧಿಕಾರಿಗಳು ಆ ವಿಡಿಯೊ ಹಾಗೂ ಫೋಟೊದಲ್ಲಿರುವುದು ನಾವೇ ಅಲ್ಲ ಎಂದು ಹೇಳಿಬಿಟ್ಟಿದ್ದಾರೆ. ಹಾಗಾಗಿ ಅವರು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಕಡಿಮೆ ಇದೆ. ಒಂದು ವೇಳೆ ಎಸ್‌ಐಟಿ ಅಧಿಕಾರಿಗಳು ಅವರ ಮನವೊಲಿಕೆ ಮಾಡಿದಲ್ಲಿ ಗೌಪ್ಯ ಸ್ಥಳದಲ್ಲಿ ಹೇಳಿಕೆ ಪಡೆಯಲಿದ್ದಾರೆ ಎನ್ನಲಾಗಿದೆ.
ವಿದೇಶದಿಂದ ಮಧ್ಯಾಹ್ನ 3 ಗಂಟೆಗೆ ಪ್ರಜ್ವಲ್ ರೇವಣ್ಣ ಆಗಮನ? ಬಂದ ಕೂಡಲೇ ಅರೆಸ್ಟ್!
ಇಂದು (ಭಾನುವಾರ – ಮೇ 5) ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ಗೆ ಪ್ರಜ್ವಲ್ ರೇವಣ್ಣ ಆಗಮಿಸುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಏರ್‌ಪೋರ್ಟ್ ಬಳಿ ಬೀಡು ಬಿಟ್ಟಿರುವ ಎಸ್‌ಐಟಿ ತಂಡವು ಪ್ರಜ್ವಲ್ ಆಗಮಿಸುತ್ತಿದ್ದಂತೆ ವಶಕ್ಕೆ ಪಡೆಯುವ ಸಾಧ್ಯತೆ ದಟ್ಟವಾಗಿದೆ.
ಇಂದು ಮಧ್ಯಾಹ್ನ ಮೂರು ಗಂಟೆಗೆ ಪ್ರಜ್ವಲ್ ರೇವಣ್ಣ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಜ್ವಲ್ ಯಾವುದೇ ಸಮಯದಲ್ಲಿ ಬೇಕಿದ್ದರೂ ಭಾರತಕ್ಕೆ ಬರಬಹುದು ಎಂಬ ನಿಟ್ಟಿನಲ್ಲಿ ಶನಿವಾರ ರಾತ್ರಿಯಿಂದಲೇ ಏರ್‌ಪೋರ್ಟ್‌ನಲ್ಲಿ ಎಸ್‌ಐಟಿ ಟೀಂ ಬೀಡುಬಿಟ್ಟಿದೆ. ಆದರೆ, ಪ್ರಜ್ವಲ್ ರೇವಣ್ಣ ಈವರೆಗೂ ಆಗಮಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗಾಗಿ ಕಾದು ಕಾದು ಅಧಿಕಾರಿಗಳು ಸುಸ್ತಾಗಿದ್ದಾರೆ.
ಆದರೆ, ಈಗಿನ ಮಾಹಿತಿ ಪ್ರಕಾರ, ಪ್ರಜ್ವಲ್ ರೇವಣ್ಣ ಅವರು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಬೆಂಗಳೂರಿಗೆ ಬಂದಿಳಿಯಲಿದ್ದಾರೆ ಎನ್ನಲಾಗಿದೆ. ಪ್ರಜ್ವಲ್‌ಗಾಗಿ ಎಸ್ಐಟಿ, ಗುಪ್ತಚರ ತಂಡಗಳು ಕಾದು ಕುಳಿತಿದ್ದು, ವಿದೇಶಿ ವಿಮಾನಗಳ ಪ್ಯಾಸೆಂಜರ್ ಲಿಸ್ಟ್ ಅನ್ನು ಪರಿಶೀಲನೆ ನಡೆಸಲಾಗುತ್ತಿದೆ. ದುಬೈ, ಮಸ್ಕಟ್, ಪ್ರಾಂಕ್ ಫರ್ಟ್ ವಿಮಾನಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ.
ಹಾಸನ ಸಂಸದರ ನಿವಾಸವನ್ನು ವಶಕ್ಕೆ ಪಡೆದ ಎಸ್‌ಐಟಿ ಅಧಿಕಾರಿಗಳು
ಸಂಸದ ಪ್ರಜ್ವಲ್ ರೇವಣ್ಣ ಅವರು ಹಾಸನದ ತಮ್ಮ ನಿವಾಸದಲ್ಲೇ ಅತ್ಯಾಚಾರ (Physical abuse) ನಡೆಸಿರುವ ಬಗ್ಗೆ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಸಂಸದರ ನಿವಾಸವನ್ನು ಲಾಕ್ ಮಾಡಲಾಗಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ಸರ್ಕಾರ ನೀಡಿದ್ದ ಈ ನಿವಾಸವನ್ನು ಪ್ರಜ್ವಲ್ ಬಳಸಿಕೊಳ್ಳುತ್ತಿದ್ದರು.
ಎಸ್‌ಐಟಿ ಅಧಿಕಾರಿಗಳು ಇದೀಗ ಈ ನಿವಾಸವನ್ನು ವಶಕ್ಕೆ ಪಡೆದಿದ್ದಾರೆ. ಸಂಸದರ ನಿವಾಸದ ರೂಮ್‌ನಲ್ಲಿ ಅತ್ಯಾಚಾರ ನಡೆಸಲಾಗಿದೆ ಎಂದು ಪ್ರಜ್ವಲ್ ರೇವಣ್ಣ ವಿರುದ್ಧ ಆರೋಪ ಹೊರಿಸಿದ್ದ ಮಹಿಳೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಮಾಜಿ ಪ್ರಧಾನಿ ಎಂಬ ಕಾರಣಕ್ಕೆ ದೇವೇಗೌಡ ಅವರಿಗೆ ಸರ್ಕಾರ ಈ ಬಂಗಲೆಯನ್ನು ನೀಡಿತ್ತು. ಇಂದಿಗೂ ದೇವೇಗೌಡರಿಗೆ ಮೀಸಲಾಗಿರುವ ಸಂಸದರ ನಿವಾಸವನ್ನು ಸದ್ಯ ಪ್ರಜ್ವಲ್ ರೇವಣ್ಣ ಬಳಸಿಕೊಳ್ಳುತ್ತಿದ್ದಾರೆ.
2019ರಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರಿಗಾಗಿಯೇ ಈ ನಿವಾಸವನ್ನು ನಿರ್ಮಾಣ ಮಾಡಲಾಗಿತ್ತು. ಹಾಸನಕ್ಕೆ ಬಂದಾಗ ತಂಗಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ನಿವಾಸವನ್ನು ನಿರ್ಮಿಸಲಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ದೇವೇಗೌಡರಿಗೆ ನೀಡಿದ್ದ ನಿವಾಸವನ್ನು ಪ್ರಜ್ವಲ್ ರೇವಣ್ಣ ಬಳಸಿಕೊಳ್ಳುತ್ತಿದ್ದರು.
ದೇವೇಗೌಡರು ಹಾಸನ ನಗರಕ್ಕೆ ಬಂದಾಗ ತಂಗುತ್ತಿದ್ದ ಇದೇ ನಿವಾಸದಲ್ಲಿ ವಾರದಲ್ಲಿ ನಾಲ್ಕು ದಿನ ಪ್ರಜ್ವಲ್ ವಾಸ್ತವ್ಯ ಹೂಡುತ್ತಿದ್ದರು. ಸದ್ಯ ಈ ನಿವಾಸದಲ್ಲೇ ಅತ್ಯಾಚಾರ ಎಸಗಲಾಗಿದೆ ಎಂದು ಮಹಿಳೆ ದೂರು ನೀಡಿದ್ದಾರೆ. ಅಶ್ಲೀಲ ವಿಡಿಯೊ ರೆಕಾರ್ಡ್ ಕೂಡ ಇದೇ ನಿವಾಸದ ರೂಮ್‌ನಲ್ಲಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ನಿವಾಸ ಹಾಸನದ ಆರ್.ಸಿ. ರಸ್ತೆಯಲ್ಲಿದೆ.
ಹೊಳೆನರಸೀಪುರದಲ್ಲಿ ನೀರವ ಮೌನ
ಮಾಜಿ ಸಚಿವ ರೇವಣ್ಣ ಬಂಧನದ ಬಳಿಕ ಹೊಳೆನರಸೀಪುರದಲ್ಲಿ ನೀರವ ಮೌನ ಆವರಿಸಿದೆ. ಸದಾ ಜನರಿಂದ ತುಂಬಿರುತ್ತಿದ್ದ ರೇವಣ್ಣರ ಹೊಳೆನರಸೀಪುರದ ಮನೆ ಖಾಲಿ ಖಾಲಿ ಎನಿಸಿದೆ. ಸದ್ಯ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಮನೆಯಲ್ಲಿಯೇ ಇದ್ದಾರೆ. ಶನಿವಾರ ರೇವಣ್ಣ ಅವರ ಮನೆಯಲ್ಲಿ ಮಹಜರು ನಡೆಸಿದ್ದ ಎಸ್‌ಐಟಿ ತಂಡ ವಶಕ್ಕೆ ಪಡೆದಿತ್ತು. ಹಾಸನ ರಸ್ತೆಯಲ್ಲಿ ರೇವಣ್ಣ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಒಂದು ಕೆಎಸ್ಆರ್‌ಪಿ ತುಕಡಿಯನ್ನ ಮನೆ ಬಳಿ ನಿಯೋಜನೆ ಮಾಡಿ ಭದ್ರತೆ ಖಚಿತಪಡಿಸಲಾಗಿದೆ.
ಇದನ್ನೂ ಓದಿ: Prajwal Revanna Case: ವಿದೇಶದಿಂದ ಮಧ್ಯಾಹ್ನ 3 ಗಂಟೆಗೆ ಪ್ರಜ್ವಲ್ ರೇವಣ್ಣ ಆಗಮನ? ಬಂದ ಕೂಡಲೇ ಅರೆಸ್ಟ್!
ಈ ಮಧ್ಯೆ ರೇವಣ್ಣ ಅವರನ್ನು ವಶಕ್ಕೆ ಪಡೆದಿರುವ ಎಸ್‌ಐಟಿ ತಂಡ ಮತ್ತೆ ಇಂದು ವಿಚಾರಣೆಗೆ ಒಳಪಡಿಸಲಿದೆ. ಶನಿವಾರ ರಾತ್ರಿ ತಡರಾತ್ರಿವರೆಗೆ ವಿಚಾರಣೆ ನಡೆಸಿದ್ದ ಅಧಿಕಾರಿಗಳು ಮತ್ತೆ ತನಿಖೆ ಕೈಗೆತ್ತಿಕೊಳ್ಳಲಿದ್ದಾರೆ. ಮಹಿಳೆಯ ಅಪಹರಣ ಪ್ರಕರಣದ ಬಗ್ಗೆ ಕೂಲಂಕಷ ವಿಚಾರಣೆ ನಡೆಸಲಿದ್ದಾರೆ. ಇಂದು ಸಂಜೆ ಕೋರಮಂಗಲದ ಎನ್‌ಜಿವಿಯಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ರೇವಣ್ಣ ಅವರನ್ನು ಹಾಜರುಪಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರ ನಿವಾಸದ ಎದುರು ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.