ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್ ಪ್ರಕರಣಕ್ಕೆ (Hassan Pen Drive Case) ಹಾಗೂ ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಿದ ಕೇಸ್ ಅಡಿ ಎಸ್‌ಐಟಿ ವಶದಲ್ಲಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ (HD Revanna) ಅವರಿಗೆ ಹೊಟ್ಟೆನೋವು ಹಾಗೂ ಎದೆ ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಳ್ಳಲಾಗಿತ್ತು. ಬಳಿಕ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತಾದರೂ ಡಿಹೈಡ್ರೇಶನ್ ಆಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸಲೈನ್ ಹಾಕಿ ಕಳಿಸಲಾಗಿದೆ.
ಸಂಜೆ ವೇಳೆಗೆ ಎಚ್.ಡಿ. ರೇವಣ್ಣ ಅವರು ಹೊಟ್ಟೆ ನೋವು ಹಾಗೂ ಎದೆ ಉರಿ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಮೊದಲು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಲಾಗಿತ್ತು. ಅಲ್ಲಿ ಮೊದಲು ಬಿಪಿ, ಶುಗರ್ ಹಾಗೂ ಇಸಿಜಿ ತಪಾಸಣೆಯನ್ನು ನಡೆಸಲಾಗಿದೆ. ಇವು ನಾರ್ಮಲ್ ಇದ್ದ ಕಾರಣದಿಂದ ಅಲ್ಲಿಂದ ಹೆಚ್ಚಿನ ತಪಾಸಣೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆತರಲಾಗಿದೆ.
ಗ್ಯಾಸ್ಟ್ರಿಕ್ ಹಿನ್ನೆಲೆಯಲ್ಲಿ ಹೊಟ್ಟೆ ನೋವು ಬಂದಿರಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ. ಈ ಸಂಬಂಧ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗ್ಯಾಸ್ಟ್ರೋಎಂಟರಾಲಜಿಸ್ಟ್ ಅವರ ಬಳಿ ತಪಾಸಣೆಗೊಳಪಡಿಸಲಾಗುತ್ತದೆ. ಹೀಗಾಗಿ ರೇವಣ್ಣ ಅವರಿಗೆ ತಪಾಸಣೆ ಮಾಡಿ, ಆರೋಗ್ಯ ಸುಧಾರಿಸಿದೆ ಎಂದು ಆರಂಭದಲ್ಲಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ರೇವಣ್ಣ ಅವರನ್ನು ಕರೆದುಕೊಂಡು ಹೋಗಲು ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದರು. ಆದರೆ, ರೇವಣ್ಣ ತೀವ್ರ ಬಳಲಿದಂತೆ ಕಂಡ ಹಿನ್ನೆಲೆಯಲ್ಲಿ ಅವರಿಗೆ ಡ್ರಿಪ್ (ಸಲೈನ್) ಹಾಕಲಾಗಿತ್ತು.
ಆದರೆ, ಎಚ್.ಡಿ. ರೇವಣ್ಣ ಅವರಿಗೆ ಎದೆ ನೋವು ಹಾಗೂ ಹೊಟ್ಟೆ ಉರಿ ಹೆಚ್ಚಾದ ಹಿನ್ನೆಲೆಯಲ್ಲಿ ಅವರನ್ನು ಅಡ್ಮಿಟ್ ಮಾಡುವುದು ಸೂಕ್ತ ಎಂದು ವೈದ್ಯರು ಸೂಚನೆ ನೀಡಿದ್ದಾರೆ. ಹೀಗಾಗಿ ವೈದ್ಯರ ಸೂಚನೆ ಬೆನ್ನಲ್ಲೇ ಅಡ್ಮಿಟ್ ಮಾಡಲು ಎಸ್‌ಐಟಿ ಅಧಿಕಾರಿಗಳು ತೀರ್ಮಾನ ಮಾಡಿದ್ದರು. ಇದಕ್ಕೂ ಮೊದಲು ಡ್ರಿಪ್ ಮುಗಿದ ಬಳಿಕ ಅವರನ್ನು ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದರು. ಪುನಃ ಇದೇ ತೀರ್ಮಾನಕ್ಕೆ ವೈದ್ಯರು ಬಂದಿದ್ದಾರೆನ್ನಲಾಗಿದೆ.
ರೇವಣ್ಣ ಮೇಲೂ ಲುಕೌಟ್ ನೋಟಿಸ್
ಎಚ್.ಡಿ. ರೇವಣ್ಣ (HD Revanna) ವಿರುದ್ಧವೂ ಎಸ್‌ಐಟಿ ಲುಕ್‌ಔಟ್ ನೋಟಿಸ್ ಜಾರಿ ಮಾಡಿದೆ. ದೇಶ ಬಿಟ್ಟು ಹೋಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಲುಕ್‌ಔಟ್ ನೋಟಿಸ್ (Lookout Notice) ಜಾರಿ ಮಾಡಲಾಗಿದೆ ಎನ್ನಲಾಗಿದೆ. ಈಗಾಗಲೇ ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧವೂ ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಪ್ರಕರಣ ದಾಖಲಾಗಿದೆ. ಕಳೆದ ಎರಡು ದಿನಗಳಿಂದ ಎಚ್.ಡಿ. ರೇವಣ್ಣ ಕಾಣಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಲುಕ್‌ಔಟ್ ನೋಟಿಸ್ ಅನ್ನು ಜಾರಿ ಮಾಡಿದ್ದಾರೆ.
ಕೆ. ಆರ್. ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಡಿ ಲುಕ್ ಔಟ್ ನೋಟಿಸ್ ಅನ್ನು ಜಾರಿ ಮಾಡಲಾಗಿದೆ. ಈಗ ಎಚ್.ಡಿ. ರೇವಣ್ಣ ಸಹ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದ್ದು, ದೇಶ ಬಿಟ್ಟು ಹೋಗುವ ಸಾಧ್ಯತೆ ಇದೆ. ಒಂದು ವೇಳೆ ಅವರು ದೇಶ ಬಿಟ್ಟು ಹೋದರೆ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಲಿದೆ. ಇದೊಂದು ಹೈಪ್ರೊಫೈಲ್ ಕೇಸ್ ಆಗಿದ್ದು, ಸೂಕ್ಷ್ಮವಾಗಿ ತನಿಖೆ ನಡೆಸಬೇಕಿದೆ. ಹೀಗಾಗಿ ಎಸ್‌ಐಟಿ ಅಧಿಕಾರಿಗಳು ಎಲ್ಲ ಆಯಾಮಗಳಲ್ಲಿಯೂ ತನಿಖೆ ಮಾಡುತ್ತಿದ್ದಾರೆ.
ಇದರ ಜತೆಗೆ ರೇವಣ್ಣ ಅವರಿಗೆ ಈಗಾಗಲೇ ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ನೋಟಿಸ್ ನೀಡುತ್ತಲೇ ಬರಲಾಗಿದೆ. ಇಷ್ಟಾದರೂ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಎಸ್‌ಐಟಿ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದೆ.