Site icon Vistara News

Prajwal Revanna Case: ಪೆನ್‌ಡ್ರೈವ್‌ ಸಂಚಿನ ಹಿಂದಿರುವ ಡಿ.ಕೆ. ಶಿವಕುಮಾರ್‌ ವಜಾಗೆ ಕುಮಾರಸ್ವಾಮಿ ಆಗ್ರಹ

Prajwal Revanna Case Kumaraswamy demands DK Shivakumar dismissal behind pen drive conspiracy

ಬೆಂಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣದಲ್ಲಿ (Hassan Pen Drive Case) ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪದ ಮೇಲೆ ವಿನಾಕರಣ ಮಾಜಿ ಸಚಿವ ಎಚ್.ಡಿ. ರೇವಣ್ಣ (HD Revanna) ಅವರನ್ನು ಸಿಲುಕಿಸಲಾಗಿದೆ. ಇನ್ನು ಈ ಪೆನ್‌ಡ್ರೈವ್‌ ಹಂಚಿಕೆ ಸಂಚಿನ ಹಿಂದೆ ಇರುವ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಸಂಪುಟದಿಂದ ಕೂಡಲೇ ವಜಾ ಮಾಡಿ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಈ ಬಗ್ಗೆ ದಿಢೀರ್‌ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಈ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ಒಳಸಂಚಿದೆ. ಕ್ಯಾಬಿನೆಟ್‌ನಿಂದ ಮೊದಲು ಅವರನ್ನು ಕಿತ್ತುಹಾಕಿ. ಈ ಪ್ರಕರಣವನ್ನು ಅಷ್ಟು ಸುಲಭವಾಗಿ ನಾನು ಬಿಡಲ್ಲ. ಈ ಸಿಎಂ ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ಮೊದಲು ಡಿಕೆಶಿಯನ್ನು ಕೈಬಿಡಲಿ ಎಂದು ಆಗ್ರಹಿಸಿದರು.

ಎಸ್ಐಟಿ ಅಧಿಕಾರಿಗಳು ಸಿಎಂ, ಡಿಸಿಎಂಗೆ ಏಜೆಂಟ್‌

ಎಸ್ಐಟಿ ಅಧಿಕಾರಿಗಳು ಸಿಎಂ, ಡಿಸಿಎಂಗೆ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ದೇವರಾಜೇಗೌಡನನ್ನು ಯಾಕೆ ಕರೆಸಿಕೊಂಡರು? ಯಾಕೆ ಅವರ ಹೇಳಿಕೆಯಲ್ಲಿನ ಒಂದು ಪ್ಯಾರಾವನ್ನು ಡಿಲಿಟ್ ಮಾಡಿ ಎಂದು ಹೇಳಿದರು? ಡಿಕೆಶಿ ಇತಿಹಾಸ ಎಲ್ಲರಿಗೂ ಗೊತ್ತು. ಮೊದಲು ಈ ಒಳಸಂಚು ಮಾಡಿದ್ದರಿಂದ ಅವರ ಮೇಲೆ ಕ್ರಮವಾಗಲಿ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದರು.

ಸಿಎಂ, ಡಿಕೆಶಿ ಇನ್ವೆಸ್ಟಿಗೇಷನ್‌ ಟೀಮ್

ಪ್ರಜ್ವಲ್‌ ಮೇಲಿನ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ದೂರು ಸಿದ್ಧಪಡಿಸಿ ಹೊಳೆನರಸೀಪುರಕ್ಕೆ ಕಳಿಸಿದ್ದರು. ಬಳಿಕ ಎಸ್ಐಟಿ ತನಿಖೆಗೆ ಆದೇಶಿಸಿ ದೂರು ದಾಖಲು ಮಾಡಿಕೊಂಡಿದ್ದಾರೆ. ಇದನ್ನು ಒಪ್ಪೋಣ. ಆದರೆ ನಿಷ್ಪಕ್ಷಪಾತ ತನಿಖೆ ಆಗುತ್ತದೆ ಎಂದು ನಾನು ಭಾವಿಸಿದೆ. ಇಲ್ಲಾಗಿದ್ದೇನು? ಸಿಎಂ ಸಿದ್ದರಾಮಯ್ಯ ಇನ್ವೆಸ್ಟಿಗೇಷನ್‌ ಟೀಂ, ಡಿ.ಕೆ. ಶಿವಕುಮಾರ್ ಇನ್ವೆಸ್ಟಿಗೇಷನ್‌ ಟೀಮ್ ಎಂದು ಮಾಡಿಕೊಂಡಿದ್ದಾರೆ. ಈ ಕೇಸ್‌ಗೆ ಸಂಬಂಧಪಟ್ಟಂತೆ ನಡೆದ ಕಾಲ್ ರೆಕಾರ್ಡಿಂಗ್ ಹೊರಗೆ ಬರಬೇಕು. ಯಾರು ಯಾರು? ಯಾರ ಜತೆ ಮಾತನಾಡಿದ್ದಾರೆ ಎಂಬುದೆಲ್ಲವೂ ಹೊರಬರಬೇಕು ಎಂದು ಆಗ್ರಹಿಸಿದರು.

ಕೆಲವರ ತೇಜೋವಧೆಗೆ ಈ ಪ್ರಕರಣವನ್ನು ಬಳಸಿಕೊಂಡಿರಿ

ನಾನು ಪ್ರಜ್ವಲ್ ರೇವಣ್ಣ ಅವರನ್ನು ವಹಿಸಿಕೊಂಡು ಮಾತನಾಡುವುದಿಲ್ಲ. ಎಫ್ಐಆರ್ ದಾಖಲು ಮಾಡಿದಾಗ ಜಾಮೀನು ಸಹಿತ ಪ್ರಕರಣವನ್ನು ದಾಖಲು ಮಾಡಿದೆವು. ಎರಡನೇ ದಿನ ಮತ್ತೆ ಇನ್ನೊಂದು ಪ್ರಕರಣವನ್ನು ದಾಖಲು ಮಾಡಿದೆವು. ಗನ್ ಪಾಯಿಂಟ್‌ ಅಡಿ ಬೆದರಿಕೆಯೊಡ್ಡಿ ಅತ್ಯಾಚಾರ ಆಗಿದೆ ಅಂತ ದೂರು ಕೊಟ್ಟರು. ಮಾಧ್ಯಮಗಳ ಮುಂದೆ ಕಥೆ ಕಟ್ಟಿದವರು ಯಾರು? ಸುಪ್ರೀಂ ಕೋರ್ಟ್ ಏನು ಹೇಳಿದೆ? ಇಂಥ ಪ್ರಕರಣದಲ್ಲಿ ಗೌಪ್ಯತೆಯನ್ನು ಉಳಿಸಿಕೊಂಡಿರಾ? ಕೆಲವರ ತೇಜೋವಧೆಗೆ ಈ ಪ್ರಕರಣವನ್ನು ಬಳಸಿಕೊಂಡಿರಿ. ಇದು ಆಘಾತಕಾರಿ ಪ್ರಕರಣವಾಗಿದೆ. 2022ರಲ್ಲಿ ಈ ಘಟನೆ ಆಗಿದೆ ಎಂದು ಹೇಳಿದ್ದೀರಿ. ಮತ್ಯಾಕೆ ಸುಮ್ಮನಿದ್ದಿರಿ? ಎಂದು ಎಚ್‌.ಡಿ. ಕುಮಾರಸ್ವಾಮಿ ಆಗ್ರಹಿಸಿದರು.

ಆಕೆಯ ಹಿಂದೆ ಯಾರಿದ್ದಾರೆ?

22ನೇ ತಾರೀಖು ಪ್ರಜ್ವಲ್ ಪಕ್ಕಾ ಕೂತಿದ್ದ ಹೆಣ್ಣು ಮಗಳು ಯಾರು? ಮೊದಲ ವಿಡಿಯೊದಲ್ಲಿ ಬಂದ ಹೆಣ್ಣು ಮಗಳು 22ನೇ ತಾರೀಖು ಪ್ರಜ್ವಲ್ ಜತೆ ವೇದಿಕೆ ಹಂಚಿಕೆ ಮಾಡಿಕೊಂಡಿದ್ದಾರೆ. ಆಕೆಯ ಹಿಂದೆ ಯಾರಿದ್ದಾರೆ? ಸಿಎಂ ಸಿದ್ದರಾಮಯ್ಯ ಅವರೇ, ಡಿ.ಕೆ. ಶಿವಕುಮಾರ್ ಅವರೇ ಏನಿದು? ಎಂದು ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಮಹಿಳೆಯ ಕಿಡ್ನ್ಯಾಪ್‌ ಕೇಸ್‌ ಕತೆ ಏನು?

ರೇವಣ್ಣ ವಿರುದ್ಧ ಇಂದಿಗೂ ಸಹ ಯಾರೂ ದೂರು ಕೊಟ್ಟಿಲ್ಲ. ಬಳಿಕ ಕಿಡ್ನ್ಯಾಪ್ ಕೇಸ್ ದಾಖಲು ಮಾಡಿಕೊಂಡಿರಿ. ಆ ಹೆಣ್ಣು ಮಗಳು ಬದುಕಿದ್ದಾಳೋ, ಮೃತಪಟ್ಟಿದ್ದಾಳೋ ಗೊತ್ತಿಲ್ಲ ಎಂದು ನಿಮ್ಮ ವಕೀಲರು ನ್ಯಾಯಾಧೀಶರ ಮುಂದೆ ಹೇಳುತ್ತಾರೆ. ಆ ಮೇಲೆ ಆಕೆಯನ್ನು ಕರೆದುಕೊಂಡು ಬಂದಿರಿ. ಎಲ್ಲಿಂದ ಕರೆದುಕೊಂಡು ಬಂದಿರಿ? ಏನು ಮಹಜರು ಮಾಡಿದಿರಿ? ಈ ದಿನದವರೆಗೂ ಜಡ್ಜ್ ಮುಂದೆ ಆ ಹೆಣ್ಣು ಮಗಳನ್ನು ಏಕೆ ಹಾಜರುಪಡಿಸಲಿಲ್ಲ? ಎಂದು ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಇದನ್ನೂ ಓದಿ: Prajwal Revanna Case: ಎಚ್‌.ಡಿ. ರೇವಣ್ಣಗೆ ಇಂದು ಸಿಗದ ಜಾಮೀನು; ಅವಕಾಶ ಇದೆಯೇ ಎಂದು ಕೋರ್ಟ್‌ ಪ್ರಶ್ನೆ; ನಾಳೆಗೆ ವಿಚಾರಣೆ ಮುಂದೂಡಿಕೆ

ಎಚ್.ಡಿ. ರೇವಣ್ಣ ಅವರು ತನಿಖೆಗೆ ಸಹಕಾರ ಕೊಡುತ್ತಿಲ್ಲ ಎಂದು ಹೇಳಿದ್ದೀರಿ. ನೀವು ಹೇಳಿದಂತೆ ಮಾಜಿ‌ ಮಂತ್ರಿ ಹೇಳಿಕೆ ಕೊಡಬೇಕಾ? ಇದು ಯಾವ ಇನ್ವೆಸ್ಟಿಗೇಷನ್ ಎಂದು ಎಚ್‌.ಡಿ. ಕುಮಾರಸ್ವಾಮಿ ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

Exit mobile version