Site icon Vistara News

Prajwal Revanna Case: ಪೆನ್‌ಡ್ರೈವ್‌ ಕೇಸ್‌ ವೈಯಕ್ತಿಕ ಜಗಳ; ಬಿಜೆಪಿ – ಜೆಡಿಎಸ್‌ ಮೈತ್ರಿಗೆ ಧಕ್ಕೆ ಇಲ್ಲ: ಆರ್.‌ ಅಶೋಕ್‌

Government has no money to clean tankers no ability to provide clean drinking water says R Ashok

ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಧಾನಸಭಾ ವಿಪಕ್ಷ ನಾಯಕ ಆರ್. ಅಶೋಕ್ ಅಂತರ ಕಾಯ್ದುಕೊಂಡಿದ್ದಾರೆ. ಪೆನ್ ಡ್ರೈವ್ ಪ್ರಕರಣ ಎರಡು ಕುಟುಂಬಗಳ ನಡುವೆ ನಡೆಯುತ್ತಿದೆ. ಇದಕ್ಕೆ ರಾಜ್ಯದ ಜನರನ್ನು ಎಳೆದು ತರುವುದು ಬೇಡ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಬಗೆಹರಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಅಲ್ಲದೆ, ಇದರಿಂದ ಮೈತ್ರಿಗೆ ಧಕ್ಕೆ ಆಗಲ್ಲ ಎಂದು ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಆರ್.‌ ಅಶೋಕ್‌, ಅಭಿವೃದ್ಧಿ ವಿಚಾರ ಚರ್ಚೆ ಮಾಡುವುದನ್ನು ಬಿಟ್ಟು ಬರೀ ಇದನ್ನು ಚರ್ಚೆ ಮಾಡುತ್ತಿದ್ದಾರೆ. ಬಿಜೆಪಿ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಯಾರೇ ಆಗಲಿ ಈ ಕೃತ್ಯದಲ್ಲಿ ಭಾಗವಹಿಸಿದವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲಿ. ಅವರವ ಡೋಂಕು ಅವರವರು ತಿದ್ದುಕೊಳ್ಳಲಿ ಎಂದು ಹೇಳಿದರು.

ಪ್ರತಿ ದಿನ ಕಾಂಗ್ರೆಸ್ – ಜೆಡಿಎಸ್ ಪಕ್ಷದ ವಾರ್ ಟಾಕ್ ನಡೆಯುತ್ತಿದೆ. ಅದು ಏನು ಏನು ಆಗುತ್ತದೋ? ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬುದು ನನಗೂ ಗೊತ್ತಿಲ್ಲ. ಇದೊಂದು ವೈಯಕ್ತಿಕವಾಗಿ ಹೋಗಿಬಿಟ್ಟಿದೆ. ಜನಗಳ ಅಭಿವೃದ್ಧಿ ಕಾರ್ಯದ ಚರ್ಚೆ ನಡೆಯುತ್ತಿಲ್ಲ. ಬರಗಾಲ ಇದೆ, ಇಲ್ಲೇನಾಗಿದೆ ಅನ್ನೊದು ಮುಖ್ಯ, ಜನ ಅಭಿವೃದ್ಧಿಯನ್ನು ಕೇಳುತ್ತಿದ್ದಾರೆ. ಕಾಂಗ್ರೆಸ್‌ಗೆ ಅಭಿವೃದ್ಧಿ ಬೇಕಿಲ್ಲ. ಇದೇ ನಡೆಯುತ್ತಿರಲಿ ಎಂದು ಅಂತ ಕಾಂಗ್ರೆಸ್ ಬಯಸುತ್ತಿದೆ. ನಮಗೆ ಈ ಸುದ್ದಿ ಬೇಡ, ರಾಜ್ಯದ ಜನರ ಒಳಿತು ಬೇಕು. ಡಿಕೆಶಿ ಮತ್ತು ಕುಮಾರಸ್ವಾಮಿ ಕುಟುಂಬದ ನಡುವಿನ ವೈಯಕ್ತಿಕ ಜಗಳ ಇದು. ಇಬ್ಬರ ಕೌಟುಂಬಿಕ, ವೈಯಕ್ತಿಕ ಜಗಳದಿಂದ ರಾಜ್ಯ ಜನರಿಗೆ ಅನ್ಯಾಯ ಆಗುತ್ತಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ, ಇದರಲ್ಲಿ ಎರಡು ಮಾತಿಲ್ಲ. ಆದರೆ, ಇವರ ಕುಟುಂಬದ ಜಗಳದಲ್ಲಿ ಬಿಜೆಪಿ ಎಂಟ್ರಿ ಆಗಲ್ಲ. ಪ್ರಜ್ವಲ್ ಪ್ರಕರಣದಿಂದ ಮೈತ್ರಿ ಮೇಲೆ ಪರಿಣಾಮ ಆಗಲ್ಲ. ಮೈತ್ರಿ ಮುಂದುವರಿದುಕೊಂಡು ಹೋಗುತ್ತದೆ. ಮುಂದೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಮತ್ತು ವರಿಷ್ಠರು ಚರ್ಚೆ ಮಾಡುತ್ತಾರೆ ಎಂದು ಆರ್.‌ ಅಶೋಕ್‌ ಹೇಳಿದರು.

ಕಾಂಗ್ರೆಸ್‌ ಸರ್ಕಾರ ಪತನ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಭವಿಷ್ಯ ಇಲ್ಲ. ಇದು ಅಲುಗಾಡುತ್ತಿದೆ. ಇದನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಶಾಸಕರು ಅಸಮಾಧಾನಗೊಂಡಿದ್ದಾರೆ. ಅಭಿವೃದ್ಧಿಗೆ ಅನುದಾನ ಕೊಡದಿರುವುದಕ್ಕೆ ಅಸಮಾಧಾನಗೊಂಡಿದ್ದಾರೆ. ಚುನಾವಣೆ ಬಳಿಕ ಈ ಸರ್ಕಾರ ಪತನ ಗ್ಯಾರಂಟಿ. ಹೀಗಾಗಿ ಅಧಿಕಾರ ಇದೆ ಅಂತ ದರ್ಪ ಮಾಡಿ ಬಿಜೆಪಿ ಕಾರ್ಯಕರ್ತರನ್ನು ಎದುರಿಸುವುದು ಬೇಡ ಎಂದು ಹೇಳುವ ಮೂಲಕ, ಸಾಮಾಜಿಕ ಜಾಲತಾಣದ ಪ್ರಶಾಂತ್ ಬಂಧಿಸಿದ್ದಕ್ಕೆ ಆರ್.‌ ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವದಲ್ಲಿ ಟೀಕೆ ಟಿಪ್ಪಣಿ ಸಾಮಾನ್ಯ. ಬರೀ ಹಾರ ತೂರಾಯಿ ಹಾಕಿಸಿಕೊಳ್ಳುವುದಕ್ಕೆ ಅಲ್ಲ. ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲೂ ನಮ್ಮನ್ನು ಟೀಕೆ ಮಾಡಿದ್ದಾರೆ. 40% ಕಮಿಷನ್ ಸರ್ಕಾರ ಅಂತ ಪ್ರಚಾರ ಮಾಡಿದಿರಿ. ನಾವು ಟಾರ್ಗೆಟ್ ಮಾಡುವ ಕೆಲಸ ಮಾಡಿದೆವಾ? ಮಹಾರಾಷ್ಟ್ರ ಸರ್ಕಾರದಂತೆ ಇಲ್ಲೂ ಸರ್ಕಾರ ಬೀಳೋದು ಪಕ್ಕಾ ಎಂದು ಆರ್.‌ ಅಶೋಕ್‌ ಕಿಡಿಕಾರಿದರು.

ಸುಳ್ಳು ಹೇಳುವುದರಲ್ಲಿ ಕಾಂಗ್ರೆಸಿಗರು ನಿಸ್ಸೀಮರು

ಬಿಜೆಪಿ ಸಾಮಾಜಿಕ ಜಾಲತಾಣ ಮುಖ್ಯಸ್ಥ ಪ್ರಶಾಂತ್ ಮಾಕನೂರು ಬಂಧನದ ಬಗ್ಗೆ ಪ್ರತಿಕ್ರಿಯೆ ನೀಡಿದ ಆರ್. ಅಶೋಕ್‌, ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಸಹ ನೂರಾರು ಟ್ವೀಟ್ ಮಾಡಿದ್ದಾರೆ. ಸಾಕಷ್ಟು ಆಪದಾನೆಗಳನ್ನು ಮಾಡಿದ್ದಾರೆ. 40% ಸರ್ಕಾರ ಅಂತೆಲ್ಲ ಆರೋಪ ಮಾಡಿದರು. ತನಿಖೆ ಮಾಡಿದ್ದೇವೆ ಅಂದರು. ಆದರೆ, ಏನೂ ಬರಲಿಲ್ಲ. ಕಾಂಗ್ರೆಸ್ ಅಂದ್ರೆ ಸುಳ್ಳು. ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು. ನಮ್ಮ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಪ್ರಶಾಂತರನ್ನು ಬಂಧಿಸಿ ವಿಚಾರಣೆಗೆ ಕರೆದಿರೋದು ತಪ್ಪು. ಇದನ್ನು ಮಾಡಬಾರದಿತ್ತು. ಅವರು ಸಾಕಷ್ಟು ಟ್ವೀಟ್, ಹೇಳಿಕೆಗಳನ್ನು ಕೊಟ್ಟಿದ್ದಾರೆ. ಸರ್ಕಾರ ಇದೆ ಅಂತ ಕಾಂಗ್ರೆಸ್‌ನವರು ದುರಹಂಕಾರದಿಂದ ಮಾಡುತ್ತಿದ್ದಾರೆ. ಇದು ಅವರಿಗೆ ತಿರುಗುಬಾಣ ಆಗುತ್ತದೆ. ಬಹಳ ದಿನ ನೀವು ಇರೋದಿಲ್ಲ, ಬಹಳ ದಿನ ಉಳಿಯೋದಿಲ್ಲ. ನಿಮ್ಮ ಸರ್ಕಾರದ ಅವಧಿ ಮುಗಿಯುತ್ತಿದೆ. ಸರ್ಕಾರದ ಆಯುಷ್ಯ ಮುಗಿಯುತ್ತಿದೆ. ಇನ್ನೇನು ದಿನಗಳನ್ನು ಎಣಿಸುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

ಬಹಳಷ್ಟು ಶಾಸಕರು ಸಂಪರ್ಕದಲ್ಲಿದ್ದಾರೆ

ಬರಗಾಲ ಪರಿಹಾರವನ್ನು ನ್ಯಾಯವಾಗಿ ಬಿಡುಗಡೆ ಮಾಡಿಲ್ಲ. ಕೇಂದ್ರ ಕೊಟ್ಟಿದ್ದು ಬಿಟ್ಟರೆ ರಾಜ್ಯ ಸರ್ಕಾರದ ಒಂದೇ ಒಂದು ನಯಾ ಪೈಸೆಯನ್ನು ಕೊಟ್ಟಿಲ್ಲ. ಇವರ ಯೋಗ್ಯತೆ ಏನು? ಮಾನ ಮರ್ಯಾದೆ ಇದೆಯಾ? ಸರ್ಕಾರ ಬೀಳುವ ಹಂತಕ್ಕೆ ತಯಾರಾಗಿ ನಿಂತಿದ್ದಾರೆ. ಅವರ ಸರ್ಕಾರವನ್ನು ಅವರೇ ಬೀಳಿಸುತ್ತಾರೆ. ಮುಂದೆ ನೋಡಿ ಪಿಕ್ಚರ್ ಇದೆ. ಹೇಗಿರಲಿದೆ ಎಂದು ನೀವೇ ನೋಡಿ. ರಾಜಕಾರಣದಲ್ಲಿ ಏನಾದರೂ ಆಗಬಹುದು. ಮಹಾರಾಷ್ಟ್ರದಲ್ಲಿ, ಮಧ್ಯ ಪ್ರದೇಶದಲ್ಲಿ ಅಷ್ಟೇ ಏಕೆ ನಮ್ಮ‌ ಕರ್ನಾಟಕದಲ್ಲೇ ಆಗಿದ್ದನ್ನು ನೋಡಿದ್ದೇವೆ. ಬಹಳಷ್ಟು ಜನ ಸಂಪರ್ಕದಲ್ಲಿದ್ದಾರೆ. ಇಲ್ಲ ಅಂತ ಯಾರು ಹೇಳುತ್ತಾರೆ. ನಮ್ಮ ಜತೆ ಸಂಪರ್ಕದಲ್ಲಿದ್ದಾರೆ. ಈ ಕಾಂಗ್ರೆಸ್ ಸರ್ಕಾರಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಗ್ಯಾರಂಟಿಯಾಗಿ ಬದಲಾವಣೆ ಆಗುತ್ತದೆ ಎಂದು ಜನರೇ ಹೇಳುತ್ತಿದ್ದಾರೆ.

Exit mobile version