Site icon Vistara News

Prajwal Revanna Case: ಕಾಂಗ್ರೆಸ್‌ ಸರ್ಕಾರದಿಂದ ಪ್ರಜ್ವಲ್‌ ಕೇಸ್‌ ನಿಯಂತ್ರಣ; ಡೈವರ್ಟ್‌ ಮಾಡಲು ಬಿಜೆಪಿಗರ ಮೇಲೆ ದಾಳಿ ಎಂದ ಅಶೋಕ್‌!

Valmiki Development Corporation Scam Opposition party leader R Ashok has demanded that CM Siddaramaiah should resign

ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ (Absence video) ಪ್ರಕರಣವನ್ನು ಕಾಂಗ್ರೆಸ್‌ ನಿಯಂತ್ರಣ ಮಾಡುತ್ತಿದೆ. ಇದೆಲ್ಲವೂ ಕಾಂಗ್ರೆಸ್‌ ಸರ್ಕಾರದ ಪ್ರೀ ಪ್ಲ್ಯಾನ್‌ ಆಗಿದೆ. ಈ ಪೆನ್‌ಡ್ರೈವ್‌ ಹಂಚಿಕೆಯಲ್ಲಿ ಮಹಾ ನಾಯಕನ ಕೈವಾಡ ಇದೆ ಎಂಬುದಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನೀಡಿದ್ದ ಹೇಳಿಕೆಯಿಂದ ಮುಜುಗರವಾಗಿ ಈಗ ಇಡೀ ಕೇಸ್‌ ಅನ್ನು ಬಿಜೆಪಿ ಕಡೆ ತಿರುಗಿಸಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತರ ಮೊಬೈಲ್‌ನಲ್ಲಿ ಈ ಕೇಸ್‌ಗೆ ಸಂಬಂಧಿಸಿದ ವಿಡಿಯೊಗಳಿಲ್ಲವಾ? ಅಲ್ಲದೇ, ಪ್ರಜ್ವಲ್‌ ಮಾಜಿ ಡ್ರೈವರ್‌ ಕಾರ್ತಿಕ್‌ನನ್ನು ಏಕೆ ಬಂಧಿಸಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭಾ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್.‌ ಅಶೋಕ್‌, ಎಚ್‌.ಡಿ. ಕುಮಾರಸ್ವಾಮಿಯವರು ಮಹಾನಾಯಕನ ಹೆಸರು ಹೇಳಿರುವ ಕಾರಣಕ್ಕಾಗಿಯೇ ಈಗ ಪ್ರಕರಣವನ್ನು ಬಿಜೆಪಿ ಕಡೆಗೆ ತಿರುಗಿಸಲಾಗುತ್ತಿದೆ. ಏಕೆಂದರೆ ಕಾಂಗ್ರೆಸ್‌ನವರಿಗೆ ಈಗ ಇದರಿಂದ ಮುಜುಗರವಾಗತೊಡಗಿದೆ. ಹೀಗಾಗಿ ಪ್ರಕರಣವನ್ನು ತಮ್ಮ ಕಂಟ್ರೋಲ್‌ಗೆ ತೆಗೆದುಕೊಂಡಿದ್ದಾರೆ. ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ ಜಾಮೀನು ನಿರಾಕರಣೆ ಆದ ಕೂಡಲೇ ಬಂಧಿಸಲಾಗುತ್ತದೆ. ಆದರೆ, ಅದೇ ಪೆನ್‌ಡ್ರೈವ್‌ ಅನ್ನು ಹರಿಬಿಟ್ಟ ಪ್ರಜ್ವಲ್‌ ಮಾಜಿ ಕಾರು ಚಾಲಕ ಕಾರ್ತಿಕ್‌ನನ್ನು ಮಾತ್ರ ಈವರೆಗೆ ಏಕೆ ಬಂಧಿಸಿಲ್ಲ? ಈಗ ಹಾಸನದಲ್ಲಿ ಆಗಿರುವ ಎಸ್ಐಟಿ ದಾಳಿ ಉದ್ದೇಶವೇನೆಂದರೆ ಇಡೀ ಪ್ರಕರಣವನ್ನು ಬೇರೆ ಕಡೆ ಡೈವರ್ಟ್ ಮಾಡುವುದಾಗಿದೆ ಎಂದು ಕಿಡಿಕಾರಿದರು.

ಸಿಬಿಐಗೆ ಪ್ರಕರಣ ವಹಿಸಿ

ಎಸ್ಐಟಿ ನಡೆಸುವ ತನಿಖೆಯ ಪಿನ್ ಟು ಪಿನ್ ಮಾಹಿತಿ‌ ಕಾಂಗ್ರೆಸ್ ಸರ್ಕಾರಕ್ಕೆ ಹೋಗುತ್ತಿದೆ. ಅದಕ್ಕಾಗಿಯೇ ಇಡೀ ಕೇಸ್‌ ಅನ್ನು ಬಿಜೆಪಿ ಕಡೆ ತಿರುಗಿಸುತ್ತಿದ್ದಾರೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕಾದರೆ ಸಿಬಿಐಗೆ ತನಿಖೆಯನ್ನು ವಹಿಸಬೇಕು. ಪ್ರಜ್ವಲ್ ವಾಪಸ್ ಬಂದಿಲ್ಲ ಎಂದರೆ ಅದು ಸರ್ಕಾರದ ವೈಫಲ್ಯ. ಎಸ್ಐಟಿ ಟೀಂನವರು ಅವರನ್ನು ಬಂಧಿಸಿ ಕರೆ ತಂದಿಲ್ಲ. ಅದೇ ಈ ಕೇಸ್‌ ಅನ್ನು ಸಿಬಿಐಗೆ ವಹಿಸಿದರೆ ಅವರು ಬಂಧಿಸಿ ಕರೆತರುತ್ತಾರೆ ಎಂದು ಆರ್.‌ ಅಶೋಕ್‌ ಹೇಳಿದರು.

ಇದೆಲ್ಲ ಪ್ರೀ ಪ್ಲ್ಯಾನ್‌

ಹಾಸನದಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಈಗ ಎಸ್‌ಐಟಿ ತಂಡದವರು ದಾಳಿ ಮಾಡುತ್ತಿದ್ದಾರೆ. ಇದು ಬೇಕೆಂದೇ ಮಾಡುತ್ತಿರುವ ಕೃತ್ಯವಾಗಿದೆ. ಹಾಗಾದರೆ, ಹಾಸನ ಕಾಂಗ್ರೆಸ್ ಕಾರ್ಯಕರ್ತರ ಬಳಿ ವಿಡಿಯೊಗಳು ಇಲ್ಲವೇ? ಅವರ ಮೊಬೈಲ್‌ಗಳನ್ನು ಚೆಕ್‌ ಮಾಡಲಿ. ಅವರ ಬಳಿ ಇದಕ್ಕಿಂತಲೂ ಹೆಚ್ಚು ವಿಡಿಯೊ ಮತ್ತು ಪೆನ್‌ಡ್ರೈವ್ ಇದೆ. ಕಾಂಗ್ರೆಸ್‌ನ ಯಾವೊಬ್ಬ ಕಾರ್ಯಕರ್ತನ ವಿಚಾರಣೆಯನ್ನು ಇದುವರೆಗೆ ಏಕೆ ಮಾಡಿಲ್ಲ? ಇದೆಲ್ಲ ಪ್ರೀ ಪ್ಲ್ಯಾನ್‌ ಆಗಿದೆ ಎಂದು ಆರ್.‌ ಅಶೋಕ್‌ ದೂರಿದರು.

ಗೌಡರ ಕುಟುಂಬದ ಬಗ್ಗೆ ಡಿಕೆಶಿ ಕಿಂಡಲ್‌

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬ ಮೇಲೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಅನುಕಂಪ ತೋರಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಆರ್.‌ ಅಶೋಕ್, ಡಿ.ಕೆ. ಶಿವಕುಮಾರ್‌ ಅವರು ಕಿಂಡಲ್‌ ಮಾಡುತ್ತಿದ್ದಾರೆ. ಅವರು ದೇವೇಗೌಡರ ಕುಟುಂಬಕ್ಕೆ ಈ ಹೇಳಿಕೆ ಮೂಲಕ ಲೇವಡಿ ಮಾಡಿದ್ದಾರೆ ಎಂದು ವ್ಯಾಖ್ಯಾನಿಸಿದರು.

ತಿಮಿಂಗಿಲ ಬಗ್ಗೆ ಗೊತ್ತಾಗುತ್ತೆ

ಎಚ್.ಡಿ. ಕುಮಾರಸ್ವಾಮಿ ಅವರು ಡಿಕೆಶಿಗೆ ಪರೋಕ್ಷವಾಗಿ ತಿಮಿಂಗಿಲ ಎಂದಿರುವ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡ ಆರ್.‌ ಅಶೋಕ್‌, ಪ್ರಕರಣದಲ್ಲಿ ತಿಮಿಂಗಿಲ ಯಾರು ಅಂತ ಗೊತ್ತಾಗಲೇಬೇಕು. ಸಮುದ್ರದಲ್ಲಿರುವ ತಿಮಿಂಗಿಲ ಆಮ್ಲಜನಕಕ್ಕಾಗಿ ನೀರಿಂದ ಹೊರಗೆ ಬರಲೇಬೇಕು. ಆಗ ಆ ತಿಮಿಂಗಿಲ ಕಾಂಗ್ರೆಸ್‌ದಾ? ಜೆಡಿಎಸ್‌ದಾ ಅಂತ ಗೊತ್ತಾಗುತ್ತದೆ ಎಂದು ಹೇಳಿದರು.

ಹಗಲು ಕನಸು ಕಾಣುತ್ತಿರುವ ಸಿದ್ದರಾಮಯ್ಯ

ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಹೇಳಿಕೆಯನ್ನು ನಿರಾಕರಣೆ ಮಾಡಿರುವ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಆರ್.‌ ಅಶೋಕ್‌, ಬಿಜೆಪಿಯವರು ಭ್ರಮೆಯಲ್ಲಿದ್ದಾರೆಂದು ಅವರು ಹೇಳುತ್ತಿರಬಹುದು. ಆದರೆ, ಭ್ರಮೆಯಲ್ಲಿರುವುದು ನಾವಲ್ಲ. ಹಗಲು ಕನಸು ಕಾಣುತ್ತಿರುವುದು ನಾವಲ್ಲ, ಸಿದ್ದರಾಮಯ್ಯ ಅವರಾಗಿದ್ದಾರೆ. ಈ ಹಿಂದೆ 17 ಶಾಸಕರು ಹೋಗ್ತಾರಾ? ಸಾಧ್ಯವಿಲ್ಲ ಅಂದಿದ್ದರು. ಆದರೆ, ಅದು ಸಾಧ್ಯವಾಗಿಲ್ಲವಾ? 17 ಶಾಸಕರು ಬಂದರಲ್ಲವೇ? ಮಹಾರಾಷ್ಟ್ರದಲ್ಲೂ 90 ಜನ ಶಾಸಕರು ಆಚೆ ಹೋದರಲ್ಲ. ಇದೆಲ್ಲವೂ ಹೇಗಾಯ್ತು? ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

ಕಾಂಗ್ರೆಸ್‌ ಮೊದಲು ಬಿಡುವವರು ಇವರೇ

ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಿ ಚುನಾಯಿತರಾದರೆ ಕಾಂಗ್ರೆಸ್‌ನವರಿಗೆ ಗಂಟು ಮೂಟೆ ಕಟ್ಟೋದಷ್ಟೇ ಬಾಕಿ. ಯಾರು ನಾನಲ್ಲ, ನಾನಲ್ಲ ಅಂತ ಹೇಳುತ್ತಿದ್ದಾರೋ, ಅವರೇ ಮೊದಲು ಕಾಂಗ್ರೆಸ್ ಬಿಡುತ್ತಾರೆ. ಆ ರೀತಿಯ ಸನ್ನಿವೇಶ ನಿರ್ಮಾಣವಾದರೆ ಅವರೇ ಬಿಜೆಪಿಗೆ ಬರಲು ಮೊದಲು ನಿಂತುಕೊಳ್ಳುತ್ತಾರೆ ಎಂದು ಆರ್.‌ ಅಶೋಕ್‌ ಹೇಳಿದರು.

Exit mobile version