Site icon Vistara News

Prajwal Revanna Case: ಪ್ರಜ್ವಲ್‌ಗೆ ದೇವೇಗೌಡರು ಪತ್ರ ಬರೆದಿದ್ದು ಏಕೆ? ಸೀಕ್ರೆಟ್‌ ರಿವೀಲ್‌ ಮಾಡಿದ ಎಚ್‌ಡಿಕೆ!

Prajwal Revanna Case Why did Deve Gowda write a letter to Prajwal and HD Kumaraswamy reveals secret

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದವರಿಗೆ ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಪೆನ್‌ಡ್ರೈವ್‌ ಪ್ರಕರಣವನ್ನು (Prajwal Revanna Case) ಜೀವಂತವಾಗಿ ಇಡಬೇಕು ಎಂಬುದನ್ನು ಹೊರತುಪಡಿಸಿದರೆ, ಇದರಲ್ಲಿನ ಸತ್ಯಾಂಶ ಮತ್ತು ವಾಸ್ತವಾಂಶವನ್ನು ಹೊರತರಬೇಕು ಎಂಬುದು ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸೇರಿದಂತೆ ಯಾರಿಗೂ ಆಸಕ್ತಿ ಇಲ್ಲ. ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡರನ್ನೇ (Devarajegowda) ಮುಖ್ಯಮಂತ್ರಿಗಳು ಪ್ರಶ್ನೆ ಮಾಡುತ್ತಾರೆ. ಹಾಗಾಗಿ ನಾನು ಸಹ ಸಿಎಂಗೆ ಒಂದು ಪ್ರಶ್ನೆ ಕೇಳುತ್ತೇನೆ. ಸಿದ್ದರಾಮಯ್ಯ ಅವರೇ ನಿಮ್ಮ ಮಗ ರಾಕೇಶ್‌ ವಿದೇಶಕ್ಕೆ ಹೋದಾಗ ದುರ್ಘಟನೆ ನಡೆಯಿತಲ್ಲವೇ? ಅಲ್ಲಿ ಯಾವ ಕಾರ್ಯಕ್ರಮಕ್ಕೆ ಹೋಗಿದ್ದರು? ಹಾಗೆ ಹೋಗಲು ನಿಮ್ಮ ಅನುಮತಿಯನ್ನು ಪಡೆದುಕೊಂಡಿದ್ದರಾ? ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು (HD Devegowda) ಮೊಮ್ಮಗ ಪ್ರಜ್ವಲ್‌ ರೇವಣ್ಣ ವಾಪಸ್‌ ಬರುವಂತೆ ಏಕೆ ಪತ್ರ ಬರೆದರು? ಎಂಬ ಬಗ್ಗೆಯೂ ಎಚ್‌ಡಿಕೆ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ರಾಕೇಶ್‌ ವಿದೇಶಕ್ಕೆ ಹೋಗಿದ್ದಾಗ ನಿಮ್ಮ ಮಗನ ಜತೆಗೆ ಯಾರು? ಎಷ್ಟು ಜನ ಇದ್ದರು? ಅಲ್ಲಿ ನಡೆದಿದ್ದಂತಹ ಘಟನೆ ಬಗ್ಗೆ ತನಿಖೆಯನ್ನು ಏಕೆ ಮಾಡಲಿಲ್ಲ. ಆ ವಿಷಯವನ್ನು ಏಕೆ ಮುಚ್ಚಿಟ್ಟಿರಿ? ಹಾಗಿದ್ದರೆ ನೀವೇ ಅನುಮತಿಯನ್ನು ಕೊಟ್ಟಿದ್ದೀರಾ? ಬೆಳೆದಂತಹ ಮಕ್ಕಳು ಪ್ರತಿಯೊಂದು ವಿಚಾರವನ್ನು ತಂದೆ – ತಾಯಿಯನ್ನು ಕೇಳಿ ಮಾಡುತ್ತಾರಾ? ಎಂದು ಪ್ರಶ್ನೆ ಮಾಡಿದರು.

ದೇವೇಗೌಡರು ಪತ್ರ ಬರೆದಿದ್ದು ಯಾಕೆ?

ರಾಜತಾಂತ್ರಿಕ ಪಾಸ್‌ ಪೋರ್ಟ್ ಬಗ್ಗೆ ಹೇಳುತ್ತೀರಲ್ಲವಾ? ಅದರ ಕಾನೂನು ಗೊತ್ತಾ ನಿಮಗೆ? ಈಗ ಪ್ರಜ್ವಲ್‌ನನ್ನು ಕರೆದುಕೊಂಡು ಬರುವುದಕ್ಕೆ ಪತ್ರ ಬರೆದಿದ್ದೀರಲ್ಲವೇ? ಅದು ಸದ್ಯಕ್ಕೆ ಏನೂ ಆಗಲ್ಲ. ಆದರೆ, ಈ ಪ್ರೊಸೆಸ್‌ ಸಾಕಷ್ಟು ದಿನ ಹಿಡಿಯುತ್ತದೆ ಎಂದೇ ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರ ಮೂಲಕ ಪತ್ರ ಬರೆದು ಕರೆಸುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವೆಗೌಡರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಎಷ್ಟು ವರ್ಷ ಅವರ ಜತೆ ಕೆಲಸ ಮಾಡಿದ್ದಾರಾ? ಅವರ ಯಾವ ಮಟ್ಟದಲ್ಲಿ ರಾಜಕಾರಣ ಮಾಡಿದ್ದಾರೆ ಅಂತ ಅನುಭವ ಇಲ್ವಾ? ನಿಮ್ಮ ಕುಟುಂಬದಲ್ಲಿ ನಡೆದಿರುವುದು ಏನು? ವಿದೇಶಕ್ಕೆ ನಿಮ್ಮ ಮಗನನ್ನು ನೀವೆ ಕಳಿಸಿದ್ದಿರಾ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಪ್ರಜ್ವಲ್ ರೇವಣ್ಣ ಅವರನ್ನು ವಾಪಸ್ ಕರೆಸುವ ವಿಚಾರಕ್ಕೆ ನಾನೂ ಮನವಿ ಮಾಡಿದ್ದೇನೆ. ಜತೆಗೆ ಎಚ್.ಡಿ. ದೇವೇಗೌಡರು ಸಹ ಮನವಿ ಮಾಡಿದ್ದಾರೆ. ಅದನ್ನು ಎಷ್ಟರ ಮಟ್ಟಿಗೆ ಗೌರವಿಸುತ್ತಾರೆ ಎಂಬುದರ ಬಗ್ಗೆ ನಿಮ್ಮಷ್ಟೇ ನಾನು ಸಹ ಕುತೂಹಲ ಇದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಪೆನ್‌ಡ್ರೈವ್‌ ಸೂತ್ರಧಾರಿಯನ್ನು ಬಂಧನ ಮಾಡಲಾಗಿದೆಯಾ?

ಹಾಸನದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯವುಳ್ಳ ಪೆನ್ ಡ್ರೈವ್ ಪ್ರಕರಣದಲ್ಲಿ ನಮ್ಮ ಕುಟುಂಬವನ್ನು ಸಂಪೂರ್ಣವಾಗಿ ಮುಗಿಸುವ ಹುನ್ನಾರ ನಡೆದಿದೆ. ಅದನ್ನು ಹೊರತುಪಡಿಸಿ ಬೇರೆ ಏನು ಮಾಡಲಾಗುತ್ತಿದೆ? ಪೆನ್‌ಡ್ರೈವ್‌ ಅನ್ನು ಮಾರುಕಟ್ಟೆ ಬಿಟ್ಟ ಸೂತ್ರಧಾರಿಯನ್ನು ಬಂಧನ ಮಾಡಲಾಗಿದೆಯಾ? ವಿಚಾರಣೆ ನಡೆಯುವಾಗ ಯಾರದ್ದೇ ತಪ್ಪು ಇದ್ದರೂ ಅವರಿಗೆ ಶಿಕ್ಷೆಯಾಗಬೇಕು ಎಂಬುದಾಗಿ ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ಈಗ ಪೆನ್‌ಡ್ರೈವ್‌ ವಿತರಣೆ ಮಾಡಿರುವುದು ಅಪರಾಧ ಅಲ್ಲ ಎಂದು ಅವರೇ ಹೇಳುತ್ತಿದ್ದಾರೆ. ಆ ಹೆಣ್ಣು ಮಕ್ಕಳ ಮುಖವನ್ನು ಬ್ಲರ್‌ ಮಾಡದೇ ಹೊರಗಡೆ ಬಿಟ್ಟಿದ್ದೀರಲ್ಲವೇ ಅವರಿಗೆ ಏನು ನ್ಯಾಯ ಕೊಡಿಸುತ್ತೀರಿ? ಸರ್ಕಾರದಿಂದ ಏನು ನ್ಯಾಯ ಕೊಡಲು ಸಾಧ್ಯ? ಇದನ್ನೆಲ್ಲ ಸರಿ ಮಾಡುತ್ತೀರಾ ನೀವು? ನಾಲ್ಕು ಗೋಡೆಗಳ ಮಧ್ಯೆ ನಡೆದದ್ದು ಬೇರೆ, ಆದರೆ ಇದನ್ನು ಬೀದಿಗೆ ತಂದಿದ್ದು ನೀವೆ ತಾನೇ? ಇದರಲ್ಲಿ ಏನು ಮಾಹಿತಿ ಸಿಕ್ಕಿತ್ತೋ ಅದನ್ನು ಇಟ್ಟುಕೊಂಡು ಸಂತ್ರಸ್ತೆಯ ಕುಟುಂಬಕ್ಕೆ ಸಮಸ್ಯೆ ಆಗದಂತೆ ವಿಚಾರಣೆ ನಡೆಸಬೇಕಿತ್ತು ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಕಾರ್ತಿಕ್‌ಗೆ ಎಸ್‌ಐಟಿಯಲ್ಲಿ ರಾಜಾತಿತ್ಯ

ಮಾತು ಎತ್ತಿದ್ದರೆ ಅದೇನೋ ಹೊಸ ಹೆಸರಿಟ್ಟುಕೊಂಡಿದ್ದಾರೆ, ಬ್ರದರ್‌ ಸ್ವಾಮಿ ಅಂತೆ. ನಿಮ್ಮ ಯೋಗ್ಯತೆಗೆ ಇಷ್ಟು. ನಿಮಗೆ ಮಾನ, ಮರ್ಯಾದೆ ಇದ್ದರೆ? ನೀವು ಯಾವ ರೀತಿ ನಡೆದುಕೊಂಡು ಬಂದಿದ್ದೀರಾ ಎಂಬುದನ್ನು ನೋಡಿಕೊಳ್ಳಿ. ನಿಮ್ಮ ಪಾರ್ಟಿ ಅಧ್ಯಕ್ಷ ಯಾವ ರೀತಿ ನಡೆದುಕೊಂಡು ಬಂದಿದ್ದಾರೆ ಅಂತ ಕಾಂಗ್ರೆಸ್ ಕಾರ್ಯಕರ್ತರನ್ನು ಕೇಳಲು ಬಯಸುತ್ತೇನೆ. ಮೊದಲು ನಿಮ್ಮ ಮನೆ ಸರಿ ಮಾಡಿಕೊಳ್ಳಿ. ಎಸ್‌ಐಟಿಯಲ್ಲಿ ಪ್ರಜ್ವಲ್‌ ಮಾಜಿ ಕಾರು ಚಾಲಕ ಕಾರ್ತಿಕ್‌ಗೆ ರಾಜಾತಿತ್ಯ ಸಿಗುತ್ತಿದೆ. ಎಲ್ಲಿದ್ದಾನೆ ಅವನು? ಮಾವನ ಮನೆಗೆ ಹೋದಂತೆ ಹೋಗಿ ಬರುತ್ತಾನೆ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನಿಮ್ಮ ವಿಧಾನಸೌಧದ ಒಳಗಡೆ ಕ್ಯಾಸೆಟ್ ಸರ್ಕ್ಯುಲೇಷನ್ ಮಾಡಿದವರು ಓಡಾಡಿಕೊಂಡು ಇದ್ದಾರೆ. ಏನು ತನಿಖೆ ನಡೆಸುತ್ತೀರಿ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಇದನ್ನೂ ಓದಿ: HD Kumaraswamy: ರಾಕೇಶ್‌ನನ್ನು ವಿದೇಶಿ ಪಾರ್ಟಿಗೆ ನೀವೇ ಕಳಿಸಿ ಸಾವಿಗೆ ಕಾರಣರಾದಿರಿ ಎಂದರೆ ಹೇಗೆ? ಸಿದ್ದರಾಮಯ್ಯಗೆ ಎಚ್‌ಡಿಕೆ ಪ್ರಶ್ನೆ

ಇದೊಂದು ಕಾಂಗ್ರೆಸ್ ಪಕ್ಷವಾ?

ತನಿಖೆಯ ದಾರಿ ತಪ್ಪಿಸುವ ಕೆಲಸವನ್ನು ನಾನು ಮಾಡಿದ್ದೇನಾ? ಇದೊಂದು ಕಾಂಗ್ರೆಸ್ ಪಕ್ಷವಾ? ಗೌರವ ಇದೆಯಾ? ಮಾನ, ಮರ್ಯಾದೆ ಇದೆಯಾ? ನಿಮ್ಮ ಡಿಸಿಎಂ ಡಿ.ಕೆ. ಶಿವಕುಮಾರ್, ಅದೇ ಸಿಡಿ ಶಿವು ಅವರು ಯಾಕಪ್ಪಾ ಶಿವರಾಮೇಗೌಡರ ಜತೆ ಮಾತನಾಡಿದರು? ಇವರದ್ದು ಹಸ್ತಕ್ಷೇಪ ಇಲ್ಲವೆಂದಾದರೆ ಏಕೆ ಮಾತನಾಡಬೇಕಿತ್ತು? ಇನ್ನೂ ಏನಾದರೂ ಸಾಕ್ಷಿ ಇದ್ದರೆ ಕೊಡು ಅಂತ ಕೇಳಿದ್ದು ಯಾಕೆ? ಬ್ರೋಕರ್‌, ತಲೆ ಹಿಡಿಯುವ ಕೆಲಸವನ್ನು ಮಾಡುತ್ತಿರುವವರು ಇವರು. ನನ್ನ ಬಗ್ಗೆ ಪಕ್ಷದಿಂದ ಟ್ವೀಟ್‌ ಮಾಡಿಸುತ್ತೀರಾ? ನೀವು ಯಾವ ನೈತಿಕತೆ ಇಟ್ಟುಕೊಂಡಿದ್ದೀರಿ? ಗೃಹ ಸಚಿವರೇ ನಿಜವಾದ ಅಪರಾಧಿ ವಿರುದ್ಧ ಕ್ರಮ ಕೈಗೊಳ್ಳಿ. ನಿಮಗೆ ತಂದೆ – ತಾಯಿ ಜನ್ಮ ಕೊಟ್ಟು ಭೂಮಿಗೆ ಬಂದಿದ್ದೀರಿ. ಒಡಹುಟ್ಟಿದ ಅಕ್ಕ – ತಂಗಿಯರು ಇದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಈ ಸರ್ಕಾರದ ಬಗ್ಗೆ ಅಧಿಕಾರಿಗಳಲ್ಲೂ ವಿಶ್ವಾಸವಿಲ್ಲ

ಚನ್ನಗಿರಿಯ ಪ್ರಕರಣದ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿ, ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಯಾರೂ ಗೌರವ ಕೊಡುವ ವಾತಾವರಣವಿಲ್ಲ. ಯಾವುದೇ ಪೊಲೀಸ್ ಅಧಿಕಾರಿಗಳಿಗೆ ಗೌರವವಿಲ್ಲ. ಏಕೆಂದರೆ ಸರ್ಕಾರ ಆ ರೀತಿ ಇದೆ. ಪೊಲೀಸ್ ಅಧಿಕಾರಿಗಳನ್ನು ಈ ಸರ್ಕಾರದವರು ಹಾಗೆ ಬಳಕೆ ಮಾಡಿಕೊಂಡಿದ್ದಾರೆ. ಅದರಿಂದಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿತ ಕಂಡಿದೆ. ಇದು ಸರ್ಕಾರದ ಸ್ವಯಂ ಜವಾಬ್ದಾರಿಯಾಗಿದೆ. ಅವರೇ ಮಾಡಿಕೊಂಡ ಕೆಲಸ ಇದು. ಈ ಸರ್ಕಾರದ ಬಗ್ಗೆ ಅಧಿಕಾರಿಗಳಲ್ಲೂ ವಿಶ್ವಾಸವಿಲ್ಲ, ಜನತೆಯಲ್ಲೂ ವಿಶ್ವಾಸವಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

Exit mobile version