ಬೆಳಗಾವಿ: ನಾವೇನು ತಾಲಿಬಾನ್ (Taliban rule) ಆಡಳಿತದಲ್ಲಿದ್ದೇವಾ? ಇದೇನು ಕರ್ನಾಟಕವೋ? ಅಫ್ಘಾನಿಸ್ತಾನವೋ? ಈ ಸರ್ಕಾರದಲ್ಲಿ ನೈತಿಕ ಪೊಲೀಸ್‌ಗಿರಿ (Moral policing) ಕಾನೂನು ಎನ್ನುವುದು ಎಲ್ಲರಿಗೂ ಅಪ್ಲೈ ಆಗುತ್ತದೆಯೋ? ನೀವು ಹೇಳುವ ಸಂವಿಧಾನದ ರಕ್ಷಣೆ (Protection of the Constitution), ಸೆಕ್ಯುಲರಿಸಂ ಇದೇನಾ? ನೈತಿಕ ಪೊಲೀಸ್‌ಗಿರಿ ತಡೆ ಕಾಯ್ದೆ ಇರುವುದು ಹಿಂದು ಯುವಕರಿಗೆ ಮಾತ್ರವೇ? ದಾಳಿಕೋರ ಮುಸ್ಲಿಂ ಪಡೆ ಮೇಲೆ ಕ್ರಮ ಇಲ್ಲವೇ ಎಂದು ಬಿಜೆಪಿ ವಕ್ತಾರರಾದ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅವರು ರಾಜ್ಯ ಸರ್ಕಾರವನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.
ಮುಸ್ಲಿಂ ಗುಂಪಿನಿಂದ ದಾಳಿಗೊಳಗಾಗಿ ಬೀಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೆಳಗಾವಿಯ ಯಮನಾಪುರದ ನಿವಾಸಿಗಳಾದ ಸಚಿನ್ ಮತ್ತು ಮುಸ್ಕಾನ್ ಅವರ ಆರೋಗ್ಯ ವಿಚಾರಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಹರಿಪ್ರಕಾಶ್ ಕೋಣೆಮನೆ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ನೈತಿಕ ಪೊಲೀಸ್‌ಗಿರಿ ತಡೆ ಕಾನೂನು ತರುತ್ತೇವೆ ಎಂದು ಹೇಳಿದ್ದರು. ಹಾಗಾದರೆ ಈ ಕಾನೂನು ಯಾರನ್ನು ರಕ್ಷಣೆ ಮಾಡಲು ಎಂಬುದು ಗೊತ್ತಾಗುತ್ತಿಲ್ಲ. ಈ ನೈತಿಕ ಪೊಲೀಸ್‌ಗಿರಿ ಕಾನೂನು ಎನ್ನುವುದು ಎಲ್ಲರಿಗೂ ಅಪ್ಲೈ ಆಗುತ್ತದೆಯೇ? ಕೇವಲ ಹಿಂದು ಯುವಕರಿಗೆ ಮಾತ್ರವೇ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: Hariprakash Konemane: ಇಲ್ಲಿಯ ರಾಮ, ಅಲ್ಲಿಯ ರಾಮ ಎಂಬ ಭೇದವೇಕೆ? ಸಿಎಂಗೆ ಹರಿಪ್ರಕಾಶ್ ಕೋಣೆಮನೆ ಪ್ರಶ್ನೆ
ಮುಸ್ಲಿಂ ಹುಡುಗಿ, ಹಿಂದು ಹುಡುಗ ಒಂದು ಕಡೆ ಇದ್ದಾಗ ಮುಸ್ಲಿಂ ಗೂಂಡಾಗಳ ಪಡೆ ಅವರ ಮೇಲೆ ದಾಳಿ ಮಾಡುತ್ತದೆ. ರಾಡ್‌ನಿಂದ ಹಲ್ಲೆ ಮಾಡಿ ಗಾಯಗೊಳಿಸುತ್ತದೆ. ಆ ತಂಡದಲ್ಲಿ ಇಬ್ಬರು ಮಹಿಳೆಯರೂ ಸೇರಿದಂತೆ 15 ಜನ ಇದ್ದರು ಎಂಬ ಮಾಹಿತಿ ಇದೆ. ಅವರೆಲ್ಲರೂ ಸೇರಿ ಈ ಯುವಕ-ಯುವತಿಯನ್ನು ರೂಮ್‌ವೊಂದರಲ್ಲಿ ಕೂಡಿ ಹಾಕಿ ಬೂಟುಗಾಲಿನಿಂದ ಒದ್ದಿದ್ದಾರೆ. ಹುಡುಗನ ಹಣೆಯ ಮೇಲೆ ಇದ್ದ ತಿಲಕವನ್ನು ನೋಡಿ ಹಿಂದು ಎಂದು ಗುರುತು ಮಾಡಿದ್ದಾರೆ. ಇಂಥ ಹೀನ ಕೃತ್ಯ ಕರ್ನಾಟಕದಲ್ಲಿ ನಡೆದಿದೆ. ನೀವು ಹೇಳುವ ಸಂವಿಧಾನದ ರಕ್ಷಣೆ, ಸೆಕ್ಯುಲರಿಸಂ ಇದೇನಾ? ಎಂದು ಹರಿಪ್ರಕಾಶ್ ಕೋಣೆಮನೆ ಆಕ್ರೋಶ ವ್ಯಕ್ತಪಡಿಸಿದರು.
ಇದು ಕರ್ನಾಟಕವಾ? ಅಫ್ಘಾನಿಸ್ತಾನವಾ?
ಹುಡುಗಿಯ ಕುಟುಂಬದಲ್ಲಿ ಮುಸ್ಲಿಂ ಆಗಿ ಅರ್ಧ ಜನ ಮತಾಂತರವಾಗಿದ್ದಾರೆ. ಇನ್ನರ್ಧ ಜನ ಆಗಿಲ್ಲ. ಹುಡುಗನ ಕಡೆಯವರು ಹಿಂದುಗಳಾಗಿಯೇ ಇದ್ದಾರೆ. ಅವರು ಅಣ್ಣ – ತಂಗಿ ಎನ್ನುವುದನ್ನು ನೋಡದೆ ದಾಳಿ ಮಾಡಲಾಗಿದೆ. ನಾವೇನು ತಾಲಿಬಾನ್ ಆಡಳಿತದಲ್ಲಿದ್ದೇವಾ? ಇದು ಕರ್ನಾಟಕವಾ? ಅಫ್ಘಾನಿಸ್ತಾನವಾ? ಎಂದು ರಾಜ್ಯ ಸರ್ಕಾರವನ್ನು ಹರಿಪ್ರಕಾಶ್ ಕೋಣೆಮನೆ ಪ್ರಶ್ನೆ ಮಾಡಿದರು.
ಯಾವ ಕ್ರಮ ಕೈಗೊಂಡಿದ್ದೀರಿ? ಬಹಿರಂಗ ಮಾಡಲು ಆಗ್ರಹ
ಈ ಯುವಕ- ಯುವತಿಯ ಮೇಲೆ ದಾಳಿ ಮಾಡಿದ ಮುಸ್ಲಿಂ ಪಡೆಗೆ ನೈತಿಕ ಪೊಲೀಸ್‌ಗಿರಿ ಕಾನೂನು ಅಪ್ಲೈ ಆಗುವುದಿಲ್ಲವೇ? ಸರ್ಕಾರ ಯಾಕೆ ಈ ಬಗ್ಗೆ ಗಮನ ಹರಿಸುತ್ತಿಲ್ಲ. ನಾವು ಅರೆಸ್ಟ್ ಮಾಡಿದ್ದೇವೆ ಎಂದು ಹೇಳುತ್ತಾರೆ. ಅರೆಸ್ಟ್ ಮಾಡಿದವರ ಮೇಲೆ ಯಾವ ಕ್ರಮ ಕೈಗೊಂಡಿದ್ದೀರಿ ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ಹರಿಪ್ರಕಾಶ್ ಕೋಣೆಮನೆ ಆಗ್ರಹಿಸಿದರು.
ನಿಮ್ಮ ಸಂವಿಧಾನ, ಸೆಕ್ಯುಲರಿಸಂ ಮತ್ತು ಬದುಕುವ ಹಕ್ಕು ಎಲ್ಲಿಗೆ ಹೋಯಿತು?
ಈ ದಾಳಿ ಹಿಂದೆ ಒಂದು ತಂಡ, ಗೂಂಡಾಗಳ ಪಡೆಯೇ ಇದೆ. ಇದೊಂದು ವ್ಯವಸ್ಥಿತ ಜಾಲ ಎಂದು ಅನ್ನಿಸುತ್ತಿದೆ. ಇದನ್ನು ತಡೆಯುವ ಸರ್ಕಾರದ ಕಾಯ್ದೆ ಏನಾಗಿದೆ? ಈಗ ದಾಳಿ ಮಾಡಿದ ಮುಸ್ಲಿಂ ಪಡೆಗೆ ಇದು ಅನ್ವಯ ಆಗುವುದಿಲ್ಲವಾ? ಹಿಂದು ಹುಡುಗರ ಮೇಲೆ ಕ್ರಮ ತೆಗೆದುಕೊಳ್ಳಲು ಮಾತ್ರ ಈ ಕಾನೂನು ಇದೆಯಾ? ನಿಮ್ಮ ಸಂವಿಧಾನ, ಸೆಕ್ಯುಲರಿಸಂ ಮತ್ತು ಬದುಕುವ ಹಕ್ಕು ಎಲ್ಲಿಗೆ ಹೋಯಿತು? ಎಂದು ಹರಿಪ್ರಕಾಶ್ ಕೋಣೆಮನೆ ಪ್ರಶ್ನೆ ಮಾಡಿದರು.
ಇದನ್ನೂ ಓದಿ: BK Hariprasad: ಬಿ.ಕೆ. ಹರಿಪ್ರಸಾದ್ ವಿರುದ್ಧ ಪುನೀತ್ ಕೆರೆಹಳ್ಳಿ ಕಂಪ್ಲೇಂಟ್; ಕಾಂಗ್ರೆಸ್‌ನಿಂದ ಪ್ರತಿ ದೂರು
ಸಂತ್ರಸ್ತ ಯುವಕ-ಯುವತಿಗೆ ಕಾನೂನು ನೆರವು
ವಿಷಯ ಗೊತ್ತಾದ ತಕ್ಷಣ ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಬಂದು ಭೇಟಿ ಮಾಡಿದ್ದಾರೆ. ಯುವಕ – ಯುವತಿಯ ಕುಟುಂಬಕ್ಕೆ ಧನಸಹಾಯವನ್ನೂ ಮಾಡಿದ್ದಾರೆ. ನಾವು ಈ ಸಂತ್ರಸ್ತ ಹುಡುಗ – ಹುಡುಗಿಗೆ ಕಾನೂನು ನೆರವು ಹಾಗೂ ರಕ್ಷಣೆಯನ್ನು ಬೆಳಗಾವಿ ತಂಡದಿಂದ ಕೊಡಿಸುತ್ತೇವೆ ಎಂದು ಹೇಳಿದ ಹರಿಪ್ರಕಾಶ್ ಕೋಣೆಮನೆ ಅವರು, ಮಾಧ್ಯಮಗಳಿಗೆ ಧನ್ಯವಾದ ಅರ್ಪಿಸುವುದಾಗಿ ಹೇಳಿದರು. ಅಲ್ಲದೆ, ಈ ವಿಷಯವನ್ನು ಹೊರಜಗತ್ತಿಗೆ ಹೆಚ್ಚಿನ ಮಟ್ಟದಲ್ಲಿ ಗೊತ್ತುಪಡಿಸುವಂತೆಯೂ ಮನವಿ ಮಾಡಿದರು.