ರಾಮಲಿಂಗಾ ರೆಡ್ಡಿ : ರಾಜ್ಯ ಕಾಂಗ್ರೆಸ್‌ನಲ್ಲಿ ರಾಮಲಿಂಗಾ ರೆಡ್ಡಿ (Ramalinga Reddy) ಅವರದು ಪ್ರಭಾವಿ ಹೆಸರು. ಅವರಿಗೀಗ 69 ವರ್ಷ. ದಶಕಗಳಿಂದ ಕಾಂಗ್ರೆಸ್‌ಗೆ ನಿಷ್ಠಾವಂತರಾಗಿ ಇರುವವರ ಕೆಲವೇ ಕೆಲವು ಮುಖಂಡರಲ್ಲಿ ರಾಮಲಿಂಗಾ ರೆಡ್ಡಿ ಪ್ರಮುಖರು. ಇವರು ಈವರೆಗೆ 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದೀಗ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿ ಸ್ಥಾನ ಪಡೆದಿದ್ದಾರೆ.
ಜಯನಗರದಿಂದ ನಾಲ್ಕು ಬಾರಿ ಮತ್ತು ಬಿಟಿಎಂ ಲೇಔಟ್‌ನಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ಇವರು ಕಾಂಗ್ರೆಸ್‌ಗೆ ಬಲ ತುಂಬಿದ್ದಾರೆ. ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ರಾಮಲಿಂಗಾ ರೆಡ್ಡಿ ಅವರ ಶಕ್ತಿ ಅಗತ್ಯವೆನಿಸಿದೆ. ಈಗ ಉಪ ಮುಖ್ಯಮಂತ್ರಿ ಹುದ್ದೆಗೆ ಏರಿರುವ ಡಿ ಕೆ ಶಿವಕುಮಾರ್ ಅವರಿಗೆ ರಾಮಲಿಂಗಾ ರೆಡ್ಡಿ ಆಪ್ತರಾಗಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ 2013ರಿಂದ 2018ರವರೆಗೆ ರಾಮಲಿಂಗಾ ರೆಡ್ಡಿ ಅವರು ಗೃಹ ಸೇರಿದಂತೆ ಹಲವು ಖಾತೆಗಳ ಜವಾಬ್ದಾರಿ ಹೊತ್ತಿದ್ದರು.
ರಾಮಲಿಂಗಾ ರೆಡ್ಡಿ ಅವರು ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷರೂ ಹೌದು. ಮೊದಲ ಬಾರಿಗೆ 1989ರಲ್ಲಿ ಜಯನಗರ ಕ್ಷೇತ್ರದಿಂದ ಇವರು ವಿಧಾನಸಭೆ ಪ್ರವೇಶಿಸಿದ್ದರು. ಅಂದಿನಿಂದ ಈವರೆಗೆ ಇವರು ಸೋಲಿನ ರುಚಿಯನ್ನೇ ಕಂಡಿಲ್ಲ. 1992ರಲ್ಲಿ ಮೊದಲ ಬಾರಿ ವೀರಪ್ಪ ಮೊಯ್ಲಿ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆ ಬಳಿಕ ಎಸ್ ಎಂ ಕೃಷ್ಣ, ಧರ್ಮ ಸಿಂಗ್, ಸಿದ್ದರಾಮಯ್ಯರಂಥ ಮುಖ್ಯಮಂತ್ರಿಗಳ ಜತೆ ಸಾರಿಗೆ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಬೆಂಗಳೂರು ನಗರ ಅಭಿವೃದ್ಧಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸೇರಿದಂತೆ ಹಲವು ಖಾತೆಗಳನ್ನು ನಿಭಾಯಿಸಿದ್ದಾರೆ.
ರಾಮಲಿಂಗಾ ರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ ಅವರು ಕೂಡ ಕಳೆದ ಬಾರಿ ಜಯನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಆದರೆ ಅವರು ಈ ಬಾರಿ ಬಿಜೆಪಿ ಅಭ್ಯರ್ಥಿ ಸಿ ಕೆ ರಾಮಮೂರ್ತಿ ಅವರ ವಿರುದ್ಧ 16 ಮತಗಳಿಂದ ಸೋತಿದ್ದಾರೆ.
ದಿ. ಇಂದಿರಾ ಗಾಂಧಿ ಮತ್ತು ದಿ. ದೇವರಾಜ ಅರಸ್ ಅವರಿಂದ ಪ್ರಭಾವಿತರಾಗಿ ರಾಮಲಿಂಗಾ ರೆಡ್ಡಿ ಅವರು 1973ರಲ್ಲಿ ಕಾಂಗ್ರೆಸ್ ಸೇರಿದ್ದರು. ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವ ಗುಣ ಬೆಳೆಸಿಕೊಂಡಿದ್ದರು. 1983ರಿಂದ 1988ರವರೆಗೆ ಬೆಂಗಳೂರು ಮಹಾ ನಗರ ಪಾಲಿಕೆ ಕಾರ್ಪೊರೇಟರ್ ಆಗಿದ್ದರು. 1989ರಿಂದ 2023ರವರೆಗೆ ಇವರು ಜಯನಗರ ಮತ್ತು ಬಿಟಿಎಂ ಲೇಔಟ್‌ನಿಂದ ನಿರಂತರವಾಗಿ ಗೆದ್ದು ಬರುತ್ತಿದ್ದಾರೆ. 2021ರಿಂದ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರ ಕುರಿತ ಮತ್ತಷ್ಟು ವಿವರ ಹೀಗಿದೆ:
ಜನುಮ ದಿನ: 12 ಜೂನ್ 1953
ತಂದೆ: ಬಿ ವೆಂಕಟ ರೆಡ್ಡಿ ತಾಯಿ: ಪಿಳ್ಳಮ್ಮ, ಮಗ: ಶ್ರೀರಾಜ್ ರೆಡ್ಡಿ
ಮಗಳು: ಸೌಮ್ಯಾ ರೆಡ್ಡಿ, ಶಿಕ್ಷಣ: ವಿಜ್ಞಾನ ಪದವಿ
ಸಚಿವ ಹುದ್ದೆಯಲ್ಲಿ …
1992-1994: ವೀರಪ್ಪ ಮೊಯ್ಲಿ ಸಂಪುಟದಲ್ಲಿ ಹಣಕಾಸು, ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆ ಸಚಿವ
2002ರಿಂದ 2004: ಎಸ್ ಎಂ ಕೃಷ್ಣ ಅವರ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ
2013ರಿಂದ 2018: ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಾರಿಗೆ ಮತ್ತು ಗೃಹ ಸಚಿವ
ಇದನ್ನೂ ಓದಿ : Priyank Kharge Profile: ಮೂರನೇ ಬಾರಿಗೆ ಸಚಿವರಾದ ಪ್ರಿಯಾಂಕ್ ಖರ್ಗೆ; ಇಲ್ಲಿದೆ ಅವರ ರಾಜಕೀಯ ಪರಿಚಯ