Site icon Vistara News

Satish Jarkiholi Profile : ಪ್ರಗತಿಪರ ರಾಜಕಾರಣಿ ಸತೀಶ್‌ ಜಾರಕಿಹೊಳಿ

profile of new cabinet ministers of karnataka Satish Jarkiholi in kannada

#image_title

ಸತೀಶ್‌ ಜಾರಕಿಹೊಳಿ : ಇವರ ಪೂರ್ಣ ಹೆಸರು ಸತೀಶ್ ಲಕ್ಷ್ಮಣರಾವ್ ಜಾರಕಿಹೊಳಿ. ಬೆಳಗಾವಿಯ ಅತ್ಯಂತ ಪ್ರಭಾವಶಾಲಿ ರಾಜಕೀಯ ಕುಟುಂಬವಾಗಿರುವ ಜಾರಕಿಹೊಳಿ ಕುಟುಂಬದ ಸದಸ್ಯರಾಗಿರುವ ಸತೀಶ್‌ ಜಾರಕಿಹೊಳಿ (Satish Jarkiholi) ಪ್ರಗತಿಪರ ರಾಜಕಾರಣಿ. ಬೆಳಗಾವಿ ಜಿಲ್ಲೆಯ ಯಮಕನಮರಡಿ ಇವರ ಕಾರ್ಯಕ್ಷೇತ್ರ. ಸದ್ಯ ಕೆಪಿಸಿಸಿಯ ಕಾರ್ಯಾಧ್ಯಕ್ಷರಾಗಿ ಪಕ್ಷವನ್ನು ಮುನ್ನೆಡೆಸುತ್ತಿದ್ದಾರೆ. ವಾಲ್ಮೀಕಿ ಸಮಾಜದ ನಾಯಕರೂ ಆಗಿರುವ ಇವರು ಸದಾ ಹಿಂದುಳಿದ ಜಾತಿಗಳ ಪರವಾಗಿ ದನಿ ಎತ್ತುತ್ತಾ ಬಂದವರು.

ಬೆಳಗಾವಿಯ ಸತೀಶ್‌ ಶುಗರ್ಸ್‌ ಕಂಪನಿ ಮಾಲೀಕರಾಗಿರುವ, 60ನೇ ವರ್ಷದ ಸತೀಶ್‌ ಸತೀಶ್‌ ಜಾರಕಿಹೊಳಿ ಜನತಾ ದಳದ ಮೂಲಕ ರಾಜಕೀಯ ಪ್ರವೇಶಿಸಿದವರು ಮೂಢನಂಬಿಕೆ, ಮೌಢ್ಯಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿಕೊಂಡೇ ಬಂದಿರುವ ಇವರು ಮಾಧ್ಯಮ ಲೋಕದಲ್ಲಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ದ್ವಿತೀಯ ಪಿಯುಸಿ ಓದಿರುವ ಸತೀಶ್‌ ಜಾರಕಿಹೊಳಿಗೆ ಪುಸ್ತಕಗಳೆಂದರೆ ಬಲು ಪ್ರೀತಿ. ಓದಿನಲ್ಲಿ ತಮ್ಮನ್ನು ಸದಾ ತೊಡಗಿಸಿಕೊಂಡಿರುತ್ತಾರೆ.

ಇತ್ತೀಚೆಗೆ ʻಹಿಂದೂʼ ಪದದ ಮೂಲದ ಕುರಿತು ಇವರು ನೀಡಿದ್ದ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯರ ಬೆಂಬಲಿಗರೆಂದೇ ಗುರುತಿಸಿಕೊಂಡಿರುವ ಇವರು ಸಿದ್ದರಾಮಯ್ಯ ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಸೇರಿದಾಗ ಅವರ ಜತೆ ಇವರೂ ‘ಕೈ’ ಹಿಡಿದಿದ್ದರು! ಗೋಕಾಕ್‌ನಲ್ಲಿ ನೆಲೆಸಿರುವ ಇವರು ಹುಟ್ಟಿದ್ದು 1962ರಲ್ಲಿ. ತಂದೆ ಲಕ್ಷ್ಮಣರಾವ ಜಾರಕಿಹೊಳಿ ಹಾಗೂ ತಾಯಿ ಬೀಮವ್ವ ಜಾರಕಿಹೊಳಿ. ಇವರ ಮೂಲ ವೃತ್ತಿ ಕೃಷಿ ಹಾಗೂ ಉದ್ಯಮ. ಶಕುಂತಲಾ ಅವರನ್ನು ಮದುವೆಯಾಗಿರುವ ಇವರು ಓರ್ವಪುತ್ರ ಮತ್ತು ಓರ್ವ ಪುತ್ರಿಯನ್ನು ಹೊಂದಿದ್ದಾರೆ. ಇವರ ಸಹೋದರರಾದ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಲಖನ್‌ ಜಾರಕಿಹೊಳಿ ಸಕ್ರೀಯ ರಾಜಕಾರಣದಲ್ಲಿದ್ದಾರೆ.

ರಾಜಕೀಯ ಬದುಕಿನ ಹಿನ್ನೋಟ…
1999 ರ ವರೆಗೆ ಜೆಡಿಎಸ್‌, ಜನತಾ ದಳದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು.
1998 ರಿಂದ 2008ರ ತನಕ ವಿಧಾನ ಪರಿಷತ್ ಸದಸ್ಯರಾಗಿದ್ದರು.
2004ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಎನ್‌. ಧರಂ ಸಿಂಗ್ ಸಂಪುಟದಲ್ಲಿ ಜವಳಿ ಖಾತೆ ಸಚಿವರಾಗಿದ್ದರು.
2008ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು.
2013 ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಅಬಕಾರಿ, ಸಣ್ಣ ಕೈಗಾರಿಕಾ ಖಾತೆ ಸಚಿವರಾಗಿದ್ದರು.
2018 ರಲ್ಲಿ ಮತ್ತೆ ಗೆಲುವು. ಮೈತ್ರಿ ಸರ್ಕಾರದಲ್ಲಿ ಅರಣ್ಯ ಮತ್ತು ಪರಿಸರ ಖಾತೆ ನಿರ್ವಹಣೆ.
2021 ರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕ.

ಇದನ್ನೂ ಓದಿ : Siddaramaiah Profile : ಹಲವು ಏಳು-ಬೀಳು ಕಂಡ ಜನಪರ ನಾಯಕ ಸಿದ್ದರಾಮಯ್ಯ; ಇಲ್ಲಿದೆ ಅವರ ಜೀವನಚಿತ್ರ

Exit mobile version