Site icon Vistara News

Zameer Ahmed Profile : ಸದಾ ಸುದ್ದಿಯಲ್ಲಿರುವ ರಾಜಕಾರಣಿ ಜಮೀರ್ ಅಹ್ಮದ್ ಖಾನ್

profile of new cabinet ministers of karnataka Zameer Ahmed Khan in kannada

#image_title

ಜಮೀರ್ ಅಹ್ಮದ್: ಇವರ ಪೂರ್ಣ ಹೆಸರು ಬಿ.ಝೆಡ್‌. ಜಮೀರ್ ಅಹ್ಮದ್ ಖಾನ್. ಇತ್ತೀಚಿನ ವರ್ಷದಲ್ಲಿ ರಾಜ್ಯ ರಾಜಕಾರಣದಲ್ಲಿ ಸದಾ ಸುದ್ದಿಯಲ್ಲಿರುವ ನಾಯಕ. ಜೆಡಿಎಸ್‌-ಬಿಜೆಪಿ ಮೈತ್ರಿ ಸರ್ಕಾರವನ್ನು ಅಸ್ತಿತ್ವಕ್ಕೆ ತರುವಲ್ಲಿ ಮಹತ್ತರ ಪಾತ್ರವಹಿಸಿ ರಾಜ್ಯದ ಗಮನ ಸೆಳೆದಿದ್ದ ಜಮೀರ್‌ ಅಹ್ಮದ್‌ ಖಾನ್‌ (Zameer Ahmed Khan) ಜೆಡಿಎಸ್‌ನಲ್ಲಿದ್ದರು. ನಂತರ ಕಾಂಗ್ರೆಸ್‌ ಸೇರಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಆಪ್ತ ಸಚಿವರೆಂದು ಗುರುತಿಸಿಕೊಂಡವರು. ಬೆಂಗಳೂರಿನ ಹೃದಯಭಾಗದಲ್ಲಿರುವ ಚಾಮರಾಜಪೇಟೆ ಇವರ ಕಾರ್ಯಕ್ಷೇತ್ರ.

ರಾಜ್ಯದ ಪ್ರಭಾವಶಾಲಿ ಮುಸ್ಲೀಂ ರಾಜಕಾರಣಿಯಾಗಿ ಹೊರಹೊಮ್ಮಿರುವ ಜಮೀರ್‌ ಅಹ್ಮದ್‌ ಈಗಾಗಲೇ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದವರು. ಜೆಡಿಎಸ್‌ನಲ್ಲಿದ್ದಾಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆಪ್ತರಾಗಿದ್ದವರು. ಬೆಂಗಳೂರಿನಲ್ಲಿ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಇವರ ಭರ್ಜರಿ ಮನೆ ಸದಾ ಕುತೂಹಲಕ್ಕೆ ಕಾರಣವಾಗುತ್ತಲೇ ಬಂದಿದೆ. ರಾಜಕೀಯಕ್ಕೂ ಬರುವ ಮೊದಲು ಇವರ ಕುಟುಂಬ 1927 ರಲ್ಲಿ ಅರಂಭಿಸಿದ್ದ ನ್ಯಾಷನಲ್ ಟ್ರಾವೆಲ್ಸ್ ಪಾಲುದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಮೂರನೇ ತಲೆಮಾರಿನ ಉದ್ಯಮಿಯಾಗಿದ್ದಾರೆ. ಇವರ ಕುಟುಂಬದ ಮೂಲ ತುಮಕೂರು ಜಿಲ್ಲೆಯ ಕುಣಿಗಲ್. ತುಮಕೂರಿನ ಸಿದ್ಧಾರ್ಥ ಪ್ರೌಢಶಾಲೆಯಲ್ಲಿ ಓದುತ್ತಿರುವಾಗಲೇ ಇವರು ಹತ್ತನೇ ತರಗತಿಯಲ್ಲಿರುವಾಗಲೇ ಶಾಲೆಯನ್ನು ಬಿಟ್ಟು ಉದ್ಯಮದಲ್ಲಿ ತೊಡಗಿಸಿಕೊಂಡವರು.

ಪ್ರಮಾಣ ವಚನ ಸ್ವೀಕರಿಸುತ್ತಿರುವ ಜಮೀರ್‌ ಅಹ್ಮದ್‌ ಖಾನ್‌

ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದ ಜಮೀರ್‌ ಅಹ್ಮದ್‌ ಖಾನ್‌ ಅವರನ್ನು 2005 ರಲ್ಲಿ ಚಾಮರಾಜಪೇಟೆಯ ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಕಣಕ್ಕಿಳಿಸಿದ್ದರು. ಕಾಂಗ್ರೆಸ್‌ನ ಆರ್‌.ವಿ. ದೇವರಾಜ್‌ ಅವರನ್ನು ಸೋಲಿಸಿ, ವಿಧಾನಸೌಧ ಪ್ರವೇಶಿಸಿದ ಜಮೀರ್‌ ಅಹ್ಮದ್‌ ಮತ್ತೆ ಹಿಂದಿರುಗಿ ನೋಡಲಿಲ್ಲ. ಕಳೆದ 18 ವರ್ಷಗಳಲ್ಲಿ ಸುದ್ದಿಯಲ್ಲಿರುತ್ತಲೇ ಪ್ರಬಲ ರಾಜಕೀಯ ನಾಯಕರಾಗಿ ಹೊರಹೊಮ್ಮಿದ್ದಾರೆ.

55 ವರ್ಷದ ಜಮೀರ್‌ ಅಹ್ಮದ್‌ ಜೆಡಿಎಸ್‌ನಾಯಕರೊಂದಿಗೆ ಮುನಿಸಿಕೊಂಡು, 2018 ರಲ್ಲಿ ಕಾಂಗ್ರೆಸ್‌ ಸೇರಿ ಚುನಾವಣೆಯಲ್ಲಿ ಗೆದ್ದಿದ್ದರು. ಸಿದ್ದರಾಮಯ್ಯರ ಬೆಂಬಲಿಗರಾಗಿರುವ ಅವರು ಈಗ ಸಚಿವ ಸಂಪುಟ ಸೇರಿದ್ದಾರೆ. ಇವರ ಮಗ ಝೈದ್ ಖಾನ್ ಕನ್ನಡ ಚಿತ್ರರಂಗದಲ್ಲಿ ನಾಯಕನಟನಾಗಿ ಗುರುತಿಸಿಕೊಂಡಿದ್ದಾರೆ.

ರಾಜಕೀಯ ಬದುಕಿನ ಹಿನ್ನೋಟ…
2005 ರಲ್ಲಿ ಚಾಮರಾಜಪೇಟೆ ಉಪ ಚುನಾವಣೆಯಲ್ಲಿ ಗೆಲುವು. ನಂತರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಂಪುಟದಲ್ಲಿ ಹಜ್ ಮತ್ತು ವಕ್ಫ್ ಇಲಾಖೆ ಸಚಿವರಾಗಿದ್ದರು.
2008 ರಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು.
2013 ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಮತ್ತೊಮ್ಮೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು.
2016ರಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘನೆ ಮಾಡಿ ಕಾಂಗ್ರೆಸ್ ಅಭ್ಯರ್ಥಿಗೆ ಮತದಾನ. ಪಕ್ಷದಿಂದ ಅಮಾನತು.
2018ರ ಮಾರ್ಚ್ 25 ರಂದು ಕಾಂಗ್ರೆಸ್ ಸೇರ್ಪಡೆ. ಚಾಮರಾಜಪೇಟೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು.

ಇದನ್ನೂ ಓದಿ: K J George Profile : ರಾಜ್ಯ ಕಾಂಗ್ರೆಸ್‌ನ ಮುಂಚೂಣಿ ನಾಯಕರಲ್ಲೊಬ್ಬರು ಕೆ ಜೆ ಜಾರ್ಜ್‌

Exit mobile version