ಮಾರುತಿ ಪಾವಗಡ, ಬೆಂಗಳೂರು
ಸುಮಾರು 140 ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್ ಪಕ್ಷಕ್ಕೆ ಈಗ ಸಂಕಷ್ಟದ ಪರಿಸ್ಥಿತಿ ಬಂದೊದಗಿದೆ. ಸ್ವಾತಂತ್ರ್ಯ ಹೋರಾಟದ ಭಾಗವಾಗಿ 1885ರಲ್ಲಿ ರೂಪುಗೊಂಡ ಕಾಂಗ್ರೆಸ್, 1947ರಲ್ಲಿ ದೇಶಕ್ಕೆ ಸ್ವಾತಂತ್ರ ಸಿಕ್ಕ ಬಳಿಕ ಪ್ರಮುಖ ರಾಜಕೀಯ ಪಕ್ಷವಾಗಿ ಮುಂದುವರಿಯಿತು. ಒಂದು ಕಾಲದಲ್ಲಿ, ಕಾಂಗ್ರೆಸ್‌ನ ಹಸ್ತದ ಚಿಹ್ನೆ ತೋರಿಸಿ ಕತ್ತೆಯನ್ನು ನಿಲ್ಲಿಸಿದರೂ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂಬ ಮಾತಿತ್ತು. ಆದರೆ ಈಗ ಸತತವಾಗಿ ಗೆಲ್ಲುವ ಕುದುರೆಯನ್ನು ನಿಲ್ಲಿಸಿದರೂ ಮುಗ್ಗರಿಸಿ ಬೀಳುವ ದಯನೀಯ ಪರಿಸ್ಥಿತಿ ಕಾಂಗ್ರೆಸ್‌ದಾಗಿದೆ!
ರೇಷ್ಮೆ ಹುಳುವಿಗಿಂತಲೂ ಭಿನ್ನವಾಗಿಲ್ಲ ಕಾಂಗ್ರೆಸ್ ಸ್ಥಿತಿ!
ರೇಷ್ಮೆ ಹುಳು ತಾನು ಸುರಕ್ಷಿತವಾಗಿರಬೇಕು ಎನ್ನುವ ಕಾರಣಕ್ಕೆ ತನ್ನ ಸುತ್ತಲೂ ತಾನೇ ಗೂಡು ಕಟ್ಟಿಕೊಂಡು ಪ್ರಾಣ ಬಿಡುವಂತೆ ಕಾಂಗ್ರೆಸ್ ಸಹ ಕುಟುಂಬ ರಾಜಕಾರಣದಿಂದ ಹೊರಬಾರದೇ ತಾನೇ ಹೆಣೆದುಕೊಂಡ ಗೂಡಿನೊಳಗೆ ಸಿಲುಕಿ ಒದ್ದಾಡುತ್ತಿದೆ.
ಕಾಂಗ್ರೆಸ್ 2004ರಿಂದ 2014ರವರೆಗೆ ಸತತ ಹತ್ತು ವರ್ಷ ಕಾಲ ಯುಪಿಎ ಸರ್ಕಾರ ಆಡಳಿತ ನಡೆಸಿ 2014ರಲ್ಲಿ ನರೇಂದ್ರ ಮೋದಿ ಅಬ್ಬರದ ಎದುರು ಅಧಿಕಾರ ಕಳೆದುಕೊಂಡಿತು. ಆ ಬಳಿಕ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಗೆಲುವಿನ ತಕ್ಕಡಿ ಮತ್ತೆ ಮೇಲೇರಲೇ ಇಲ್ಲ. ಕೆಲವು ರಾಜ್ಯಗಳಲ್ಲಿ ಅಧಿಕಾರ ಸಿಕ್ಕಿದರೂ ಉಳಿಸಿಕೊಳ್ಳಲು ಆಗಲಿಲ್ಲ. ಅದಕ್ಕೆ ಕಾರಣ ಆ ರಾಜ್ಯಗಳಲ್ಲಿ ಇದ್ದ ಆಂತರಿಕ ಕಚ್ಚಾಟ ಮೂಲ ಕಾರಣ. ಅದಕ್ಕೆ ಕಾಂಗ್ರೆಸ್ ಹೈಕಮಾಂಡ್ ಪರಿಹಾರ ಹುಡುಕುವಲ್ಲಿ ವಿಫಲವಾಯಿತು. ಅಲ್ಲದೆ ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಂಡ ಹಲವು ತಪ್ಪು ನಿರ್ಧಾರಗಳು ಹಾಗೂ ರಾಜ್ಯಗಳ ನಾಯಕರ ಮೇಲಿನ ಹಿಡಿತ ಕೈ ತಪ್ಪಿದ್ದು ಇತ್ಯಾದಿ ಸಂಗತಿಗಳು ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಕಾರಣ ಎನ್ನಬಹುದು.
ಕಾಂಗ್ರೆಸ್‌ಗೆ ಮರುಹುಟ್ಟು ಸಿಕ್ಕೀತೆ?
ಸೊರಗಿ ಸುಣ್ಣ ಆಗಿರುವ ಕಾಂಗ್ರೆಸ್‌ಗೆ ಮರು ಜೀವ ನೀಡುವುದರ ಭಾಗವಾಗಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಲು ಮುಂದಾಗಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ ಜೋಡೋ ಯಾತ್ರೆ ಹಮ್ಮಿಕೊಂಡಿದ್ದಾರೆ. ಈಗಾಗಲೇ ನೂರಾರು ಕಿ.ಮೀ ಪಾದಯಾತ್ರೆ ಯಶಸ್ವಿಯಾಗಿ ಮುಗಿದಿದೆ. ಇಂತಹ ಸಮಯದಲ್ಲೂ ಕಾಂಗ್ರೆಸ್ ಹೈಕಮಾಂಡ್‌ಗೆ ರಾಜಸ್ಥಾನದಲ್ಲಿ ಬಂಡಾಯದ ಬಿಸಿ ಶುರುವಾಗಿದೆ.
ರಾಹುಲ್ ಹೇಳಿಕೆಯೇ ಗೆಹ್ಲೋಟ್ ಕೋಪಕ್ಕೆ ಕಾರಣ!
ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಎಐಸಿಸಿ ಅಧ್ಯಕ್ಷರ ಚುನಾವಣೆಗೆ ಅಶೋಕ್ ಗೆಹ್ಲೋಟ್ ಹೆಸರು ಚರ್ಚೆ ಆಗಿದ್ದೇ ತಡ, “ನಾನು ಅಧ್ಯಕ್ಷ ಸ್ಥಾನದ ಎಲೆಕ್ಷನ್‌ಗೆ ರೆಡಿ. ಆದರೆ ಸಿಎಂ ಹುದ್ದೆ ಬಿಟ್ಟು ಕೊಡಲಾರೆʼʼ ಎಂದು ಗೆಹ್ಲೋಟ್ ಖಡಕ್ ಆಗಿಯೇ ಹೇಳಿಬಿಟ್ಟರು. ಈ ನಡುವೆ, ಒಬ್ಬರಿಗೆ ಒಂದೇ ಹುದ್ದೆ ಎಂದು ರಾಹುಲ್ ಗಾಂಧಿ ನೀಡಿದ ಹೇಳಿಕೆಯಿಂದ ಗೆಹ್ಲೋಟ್ ಕೆರಳಿದಂತಿದೆ. ಯುವ ನಾಯಕ ಸಚಿನ್ ಪೈಲಟ್‌ರನ್ನು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಲು ಮುಂದಾಗಿದ್ದು ಗೆಹ್ಲೋಟ್ ಉರಿದು ಬೀಳಲು ಕಾರಣವಾಗಿದೆ.
ರಾಹುಲ್, ಪ್ರಿಯಾಂಕಾರನ್ನು ನಂಬಿ ಕೆಟ್ಟ ಪೈಲಟ್!
ಇದೇ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯವರನ್ನು ನಂಬಿಕೊಂಡು ಈ ಹಿಂದೆ ಗೆಹ್ಲೋಟ್‌ಗೆ ರಾಜಕೀಯ ಚೆಕ್‌ಮೆಟ್ ಕೊಡಲು ಮುಂದಾಗಿ ಸಚಿನ್ ಪೈಲೆಟ್ ವಿಫಲರಾಗಿದ್ದರು. ಕಾಂಗ್ರೆಸ್ ಆಂತರಿಕ ಕುರುಕ್ಷೇತ್ರದಲ್ಲಿ ಪೈಲಟ್‌ರನ್ನು ಮಣಿಸಿ ಸಿಎಂ ಪದವಿ ಭದ್ರ ಮಾಡಿಕೊಂಡಿದ್ದ ಗೆಹ್ಲೋಟ್‌ಗೆ ಸಿಎಂ ಪದವಿಯನ್ನು ಅದೇ ಪೈಲಟ್‌ಗೆ ನೀಡಲು ಇಷ್ಟವಿಲ್ಲ. ಹೀಗಾಗಿಯೇ ತಮ್ಮ ಬೆಂಬಲಿಗ 92 ಶಾಸಕರಿಂದ ರಾಜೀನಾಮೆಯ ಪ್ರಹಸನ ಮಾಡಿಸಿದರು. ಕುರುಕ್ಷೇತ್ರ ಯುದ್ಧದಲ್ಲಿ ಕರ್ಣನ ರಥ ಭೂಮಿಯೊಳಗೆ ಸಿಕ್ಕಿ ಹಾಕಿಕೊಂಡು ಅರ್ಜುನನ ಮುಂದೆ ಶರಣಾಗತನಾದಂತೆ ಮತ್ತೊಮ್ಮೆ ಗೆಹ್ಲೋಟ್ ಮುಂದೆ ಪೈಲಟ್ ಶರಣಾಗುವಂತಾಗಿದೆ.
ಹಳೆಯ ಸಮಸ್ಯೆ ಪರಿಹರಿಸಿಕೊಳ್ಳುವಲ್ಲಿ ವಿಫಲ
ಕಾಂಗ್ರೆಸ್ ಹೈಕಮಾಂಡ್‌ಗೆ ಇದು ಹೊಸ ಸಮಸ್ಯೆ ಅಲ್ಲ. ಪ್ರತಿ ಮೂರು, ಆರು ತಿಂಗಳಿಗೊಮ್ಮೆ ಇಂತಹ ಸಮಸ್ಯೆಗಳು ಎದುರಾಗುತ್ತವೆ. ಇದನ್ನು ನಿಭಾಯಿಸುವ ಚಾಣಾಕ್ಷತನ ಹೈಕಮಾಂಡ್‌ಗೆ ಇಲ್ಲದಿರುವುದುದೇ ನಿಜವಾದ ಸಮಸ್ಯೆ! ಕೇಂದ್ರದಲ್ಲಿ ಅಧಿಕಾರ ಇಲ್ಲದೆ ಸೊರಗುತ್ತಿರುವ ಕಾಂಗ್ರೆಸ್ ಹೈಕಮಾಂಡ್ ಈಗ ರಾಜ್ಯ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯುವುದು ಅನಿವಾರ್ಯವಾಗಿದೆ.
2014ರ ಬಳಿಕ ಕಾಂಗ್ರೆಸ್ ದುರ್ಬಲ ಆಗಿದ್ದೇಕೆ?
ಕಾಂಗ್ರೆಸ್ ಹೈಕಮಾಂಡ್ 2014ರ ಬಳಿಕದ ಚುನಾವಣೆಗಳ ಶೇ.90ರಷ್ಟು ಪರೀಕ್ಷೆಗಳಲ್ಲಿ ಫೇಲ್ ಆಗಿದೆ. ಬಿಜೆಪಿ ನಾಯಕರು ಪದೇಪದೇ ಹೇಳುವ ಕಾಂಗ್ರೆಸ್ ಮುಕ್ತ ಭಾರತಕ್ಕೆ ಕಾಂಗ್ರೆಸ್ ನಾಯಕರೇ ರೆಡ್ ಕಾರ್ಪೆಟ್ ಹಾಕುತ್ತಿರುವಂತೆ ಕಾಣಿಸುತ್ತಿದೆ. ಕರ್ನಾಟಕದ ಸಮ್ಮಿಶ್ರ ಸರ್ಕಾರ ಉದುರಿ ಬೀಳುವುದನ್ನು ತಡೆಯಲೂ ಕಾಂಗ್ರೆಸ್ ಹೈಕಮಾಂಡ್ ವಿಫಲವಾಯಿತು. ಅತೃಪ್ತ ಶಾಸಕರನ್ನ ಮೊದಲೇ ಕರೆಸಿ ಮಾತನಾಡಿ ಸಮಸ್ಯೆ ಬಗೆಹರಿಸಲು ಹೈಕಮಾಂಡ್ ಯತ್ನಿಸಲಿಲ್ಲ. ಅದಕ್ಕಿಂತ ಹೆಚ್ಚಾಗಿ, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಒಂದೇ ಕಾರಣಕ್ಕಾಗಿ 37 ಶಾಸಕರ ಬಲದ ಜೆಡಿಎಸ್‌ಗೆ ಸಿಎಂ ಸ್ಥಾನವನ್ನು ಐದು ವರ್ಷಗಳ ಅವಧಿಗೆ ಬೇಷರತ್ತಾಗಿ ಬಿಟ್ಟುಕೊಟ್ಟಿದ್ದೂ ಹೈಕಮಾಂಡ್‌ನ ಪ್ರಮಾದವಾಗಿತ್ತು. ಅಂದೇ ಹಲವು ಕಾಂಗ್ರೆಸ್ ಶಾಸಕರು, ಈ ಸಮ್ಮಿಶ್ರ ಸರ್ಕಾರದ್ದು ಒಂದು ವರ್ಷದ ಅಗ್ರಿಮೆಂಟ್ ಮ್ಯಾರೇಜ್ ಅಷ್ಟೆ ಎಂದು ಹೇಳಿಕೊಂಡು ಓಡಾಡುತ್ತಿದ್ದರು! ಕೊನೆಗೆ ಅದು ನಿಜವೂ ಆಯಿತು.
ಪಂಜಾಬ್‌ನಲ್ಲಿ ಅಧಿಕಾರ ಕಳೆದುಕೊಳ್ಳಲೂ ಹೈಕಮಾಂಡ್ ಕಾರಣ
ಪಂಜಾಬ್‌ನಲ್ಲಿ ಎಎಪಿ ಅಧಿಕಾರ ಹಿಡಿಯುವುದಕ್ಕೆ ಕಾರಣವೂ ಕಾಂಗ್ರೆಸ್ ಹೈಕಮಾಂಡ್. ನವಜೋತ್ ಸಿಂಗ್ ಸಿಧು ಒತ್ತಡಕ್ಕೆ ಮಣಿದು ಕ್ಯಾಪ್ಟನ್ ಅಮರಿಂದರ್ ಸಿಂಗ್ ನಾಯಕತ್ವ ಬದಲಿಸಿದ್ದರ ಪರಿಣಾಮ ಅಲ್ಲಿ ಎಎಪಿ ಕಾಂಗ್ರೆಸ್ ವಿಭಜನೆಯ ಲಾಭ ಪಡೆದುಕೊಂಡಿತು.
ಈಗ ಕಾಂಗ್ರೆಸ್ ವರಿಷ್ಠರ ಮುಂದೆ ರಾಜಸ್ಥಾನದ ಸವಾಲಿದೆ. ಅಧಿಕಾರ ಹಿಡಿಯಲು ಬಿಜೆಪಿಗೆ 20 ಶಾಸಕರ ಕೊರತೆ ಇದೆ. ಬಿಜೆಪಿ ಯಾವುದೇ ಕ್ಷಣದಲ್ಲಿ ಕಾಂಗ್ರೆಸ್ ಬಿಕ್ಕಟ್ಟಿನ ಲಾಭ ಬಾಚಿಕೊಳ್ಳಬಹುದು. ಕಾಂಗ್ರೆಸ್ ಈಗ ಅಧಿಕಾರದಲ್ಲಿ ಇರುವ ದೊಡ್ಡ ರಾಜ್ಯವೆಂದರೆ ಅದು ರಾಜಸ್ಥಾನ ಮಾತ್ರ. ಹಾಗಾಗಿ ರಾಜಸ್ಥಾನದ ಕಗ್ಗಂಟು ಬಿಡಿಸಲು ಕಾಂಗ್ರೆಸ್ ಹೈಕಮಾಂಡ್ ಎಷ್ಟು ಯಶಸ್ವಿಯಾಗುತ್ತದೆ ಎನ್ನುವುದರ ಮೇಲೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಈ ಪಕ್ಷದ ಯಶಸ್ಸಿನ ಮಟ್ಟವನ್ನು ಗ್ರಹಿಸಬಹುದಾಗಿದೆ.
ರಾಹುಲ್ ಗಾಂಧಿ 12 ರಾಜ್ಯಗಳಲ್ಲಿ 150 ದಿನ 3,700 ಕಿ.ಮೀ ನಡೆದು ಪಕ್ಷ ಬಲವರ್ಧನೆ ಮಾಡಲು ಶ್ರಮಿಸುತ್ತಿದ್ದಾರೆ. ರಾಜಸ್ಥಾನದ ಕಚ್ಚಾಟದಿಂದಾಗಿ, ನಡೆದು ದಣಿಯುವುದಕ್ಕಿಂತ ಯೋಚನೆ ಮಾಡಿಯೇ ರಾಹುಲ್ ಗಾಂಧಿ ಹೆಚ್ಚು ಹೈರಾಣಾಗುವಂತಾಗಿದೆ!
ಇದನ್ನೂ ಓದಿ | ರಾಜಕೀಯದಲ್ಲಿ QR ಕೋಡ್ ಕದನ: ಕಾಂಗ್ರೆಸ್‌ನ ʼPay CMʼಗೆ ಉತ್ತರವಾಗಿ ಭಾರತ್ ಜೋಡೊ ಪೋಸ್ಟರ್ ಹರಿಬಿಟ್ಟ BJP