ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ವರ್ಷ ಸಂಭ್ರಮಾಚರಣೆಗೆ ದಾವಣಗೆರೆಯಲ್ಲಿ ಭರದ ಸಿದ್ಧತೆ ನಡೆಯುತ್ತಿರುವಾಗಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜಿಮ್‌ನಲ್ಲಿ ವರ್ಕೌಟ್ ಮಾಡಿದ್ದಾರೆ. ರಾಹುಲ್ ಗಾಂಧಿ ಸದಾ ಫಿಟ್‌ನೆಸ್‌ಗೆ ಮಾನ್ಯತೆ ನೀಡುವವರು. ಬೃಹತ್ ಕಾರ್ಯಕ್ರಮದ ನಡುವೆಯೂ ಬಿಡುವು ಮಾಡಿಕೊಂಡು ದೈಹಿಕ ಕಸರತ್ತು ನಡೆಸಿದ್ದಾರೆ.
52 ವರ್ಷದ ರಾಹುಲ್ ಗಾಂಧಿ ಈಗಲೂ ಫಿಟ್ ಆ್ಯಂಡ್ ಫೈನ್. ಕೇರಳಕ್ಕೆ ಭೇಟಿ ನೀಡಿದಾಗ ಸ್ಥಳೀಯ ಮೀನುಗಾರ ಯುವಕರೊಂದಿಗೆ ನೇರವಾಗಿ ಸಮುದ್ರಕ್ಕೆ ಜಿಗಿದೇಬಿಟ್ಟಿದ್ದರು. ಅನೇಕ ಹೊತ್ತಿನ ಈಜಾಟದ ನಂತರ ಮೀನುಗಾರ ಯುವಕರು ಕ್ಲಿಕ್ಕಿಸಿಕೊಂಡ ಸೆಲ್ಫಿ ವೈರಲ್ ಆಗಿತ್ತು.
ಕೇರಳದ ಸೇಂಟ್ ಜೋಸೆಫ್ಸ್ ಮೆಟ್ರಿಕ್ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಜೂಡೊ ಕ್ರೀಡಾಪಟುಗಳೊಂದಿಗೆ ಪುಷ್ ಅಪ್ ಚಾಲೆಂಜ್ ಮಾಡಿದ್ದರು. ಸರಸರನೆ ವೇದಿಕೆ ಮೇಲೆಯೇ ವಿದ್ಯಾರ್ಥಿಗಿಂತಲೂ ಹೆಚ್ಚಿನ ಪುಷ್ ಅಪ್ ಮಾಡಿ ಸೈ ಎನಿಸಿಕೊಂಡಿದ್ದರು.
ಕಾಂಗ್ರೆಸ್ ನಾಯಕ ರಣದೀಪ್‌ಸಿಂಗ್ ಸುರ್ಜೇವಾಲ ಒಂದು ಸಂದರ್ಶನದಲ್ಲಿ ತಿಳಿಸಿದಂತೆ ರಾಹುಲ್ ಗಾಂಧಿ ಫಿಟ್‌ನೆಸ್ ಬಗ್ಗೆ ಬಹಳ ಜಾಗರೂಕರಾಗಿರುತ್ತಾರೆ. ಯಾವುದೇ ಕೆಲಸವಿರಲಿ, ಎಷ್ಟೇ ಒತ್ತಡವಿರಲಿ ಪ್ರತಿದಿನ 10-12 ಕಿಲೋಮೀಟರ್ ಓಡುತ್ತಾರೆ, ವ್ಯಾಯಾಮವನ್ನು ತಪ್ಪಿಸುವುದೇ ಇಲ್ಲ.
ಇದೀಗ ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿರುವ ರಾಹುಲ್ ಗಾಂಧಿ ಹುಬ್ಬಳ್ಳಿಯ ವಿಮಾನ ನಿಲ್ದಾಣದ ಎದುರಿನ ಖಾಸಗಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ. ನಸುಕಿನ ಜಾವವೇ ಎದ್ದ ರಾಹುಲ್ ಮೊದಲಿಗೆ ವಾಕಿಂಗ್ ಮಾಡಿದ್ದಾರೆ. ನಂತರ ಹೋಟೆಲ್‌ನಲ್ಲಿರುವ ಜಿಮ್‌ನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವರ್ಕೌಟ್ ಮಾಡಿದ್ದಾರೆ.
ಚರಕ ಗಿಫ್ಟ್
ರಾಹುಲ್ ಗಾಂಧಿ ತಂಗಿದ್ದ ಹೋಟೆಲ್‌ಗೆ ಆಗಮಿಸಿದ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಚರಕ ಗಿಫ್ಟ್ ನೀಡಿದರು. ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಹಾಗೂ ತಂಡ ಹೋಟೆಲ್‌ಗೆ ತೆರಳಿ ಉಡುಗೊರೆ ನೀಡಿದೆ. ರಾಹುಲ್ ಜತೆಗೆ ಕೆಲಕಾಲ ಮಾತುಕತೆ ನಡೆಸಿದೆ.
ವರ್ಕೌಟ್ ನಂತರ ರಾಹುಲ್ ಗಾಂಧಿ ಚಿತ್ರದುರ್ಗಕ್ಕೆ ಹೊರಟಿದ್ದಾರೆ. ಚಿತ್ರದುರ್ಗದ ಮುರುಘಾ ಮಠಕ್ಕೆ ರಾಹುಲ್ ಭೇಟಿ ನೀಡಲಿದ್ದಾರೆ. ರಾಹುಲ್ ಭೇಟಿ ಹಿನ್ನೆಲೆಯಲ್ಲಿ ಈಗಾಗಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿ ಜತೆಗೆ ಮಾತುಕತೆ ನಡೆಸಿದ್ದಾರೆ.
ರಾಹುಲ್ ಜತೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹ ತೆರಳಿದ್ದಾರೆ. ಮಠದಲ್ಲಿ ಸ್ವಾಮೀಜಿಯವರನ್ನು ಭೇಟಿ ಮಾಡಿದ ನಂತರ ಸಿದ್ದರಾಮೋತ್ಸವಕ್ಕೆ ತೆರಳಲಿದ್ದಾರೆ.
ಇದನ್ನೂ ಓದಿ | ಸಿದ್ದರಾಮೋತ್ಸವ ಬೃಹತ್ ಕಟೌಟ್, ಡಿಕೆಶಿ ಔಟ್!