ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷದ ಭಾರತ್ ಜೋಡೊ ಯಾತ್ರೆ ಜಮ್ಮು- ಕಾಶ್ಮೀರದ ಶ್ರೀನಗರದಲ್ಲಿ ಮುಕ್ತಾಯಗೊಂಡಿದೆ. ಹಲವು ಕಾಂಗ್ರೆಸಿಗರನ್ನೂ ಸೇರಿಸಿಕೊಂಡು ರಾಹುಲ್ ಗಾಂಧಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸುಮಾರು 3,500 ಕಿ.ಮೀ ದೂರ ನಡೆದಿದ್ದಾರೆ. ಮಳೆಯಲ್ಲಿ, ಮಂಜಿನಲ್ಲಿ ನಿಂತು ಮಾತಾಡಿದ್ದಾರೆ. ಪ್ರತಿ ಚುನಾವಣೆ ಸೋಲಿನ ಸಂದರ್ಭದಲ್ಲೆಲ್ಲ ಹೊಣೆರಹಿತ ನಾಯಕ, ಪ್ರಬುದ್ಧತೆ ಇಲ್ಲದ ಮುಖಂಡ ಎಂದೆಲ್ಲ ಟೀಕೆಗೆ ತುತ್ತಾಗುವ ರಾಹುಲ್ ಗಾಂಧಿ ಈ ಬಾರಿ ಬಹಳ ಶ್ರದ್ಧೆಯಿಂದ, ಪರಿಶ್ರಮದಿಂದ ಭಾರತ್ ಜೋಡೊ ಯಾತ್ರೆಯನ್ನು ಆರಂಭದಿಂದ ಕೊನೆಯವರೆಗೆ ಮುನ್ನಡೆಸಿ ಭಾಗವಹಿಸಿದ್ದಾರೆ. ಅವರ ಸಹೋದರಿ ಪ್ರಿಯಾಂಕಾ ಮತ್ತು ತಾಯಿ ಸೋನಿಯಾ ಗಾಂಧಿ ಕೂಡ ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ಕಳೆದ ಎಂಟು ವರ್ಷಗಳಿಂದ ಸರಣಿ ಸೋಲಿನಿಂದ ಕಂಗೆಟ್ಟ ಕಾಂಗ್ರೆಸ್ ಪಕ್ಷಕ್ಕೆ, ಗೆಲುವೇ ಕಾಣದೆ ಸ್ಥೈರ್ಯ ಕಳೆದುಕೊಂಡಿರುವ ಪಕ್ಷದ ಕಾರ್ಯಕರ್ತರಿಗೆ ಇಂಥದೊಂದು ದೊಡ್ಡ ಮಟ್ಟದ ಯಾತ್ರೆಯ ಅವಶ್ಯಕತೆ ಇತ್ತು. ʼʼನಮ್ಮ ಯಾತ್ರೆ ಪಕ್ಷಕ್ಕಾಗಿಯೋ, ನನಗಾಗಿಯೋ ಅಲ್ಲ. ಈ ದೇಶದ ಜನತೆಗಾಗಿʼʼ ಎಂದು ರಾಹುಲ್ ಹೇಳಿದ್ದಾರೆ. ʼʼದೇಶದ ಉದಾರ ಮತ್ತು ಜಾತ್ಯತೀತ ತತ್ವಗಳನ್ನು ಕಾಪಾಡುವುದೇ ಈ ಯಾತ್ರೆಯ ಉದ್ದೇಶʼʼ ಎಂದಿದ್ದಾರೆ. ಯಾತ್ರೆಯು ಜಾತ್ಯತೀತ ತತ್ವಗಳನ್ನು ಕಾಪಾಡುತ್ತದೋ ಇಲ್ಲವೋ ತಿಳಿಯದು. ಆದರೆ ಜನಸಾಮಾನ್ಯರೊಂದಿಗೆ ಬೆರೆಯುವ ಮೂಲಕ ರಾಹುಲ್ ಗಾಂಧಿ ಅವರು ವಾಸ್ತವ ಭಾರತದ ನಾಡಿಮಿಡಿತ ಅರಿಯುವಂತಾಗಿದೆ. ನಾನಾ ರಾಜ್ಯಗಳ ಪ್ರಾದೇಶಿಕ ವೈವಿಧ್ಯತೆ, ರಾಜಕೀಯ ವಿಭಿನ್ನತೆ, ಜನರ ಆದ್ಯತೆಯಲ್ಲಿನ ಬದಲಾವಣೆ ಇತ್ಯಾದಿಗಳನ್ನು ರಾಹುಲ್ ಗಾಂಧಿ ಕಣ್ಣಾರೆ ನೋಡುವಂತಾಗಿದೆ. ಹಿಂದೆ ಎಂದೂ ನೆಹರೂ ಕುಟುಂಬ ಉತ್ತರ ಭಾರತದಿಂದ ಈಚೆಗೆ ಬಂದು ದಕ್ಷಿಣ ಭಾರತವನ್ನೂ ಅರಿಯುವ ಯತ್ನ ಮಾಡಿರಲಿಲ್ಲ. ಆದರೆ ರಾಹುಲ್ ಇಡೀ ಭಾರತದಲ್ಲಿ ನಡೆದಿರುವುದು, ದಕ್ಷಿಣದ ಕೇರಳದಿಂದಲೇ ಅವರ ಸಂಸದ ಸ್ಥಾನ ಇರುವುದು ಕೂಡ ಮಹತ್ವದ್ದು.
ಸ್ವತಂತ್ರ ಭಾರತದ ಬಹುತೇಕ ಅವಧಿಯಲ್ಲಿ ದೇಶವನ್ನು ಆಳಿ, ಈಗ ಪ್ರತಿಪಕ್ಷ ಸ್ಥಾನ ಪಡೆಯಲೂ ತಿಣುಕಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಭಾರತ್ ಜೋಡೋ ಯಾತ್ರೆ ಖಂಡಿತವಾಗಿಯೂ ಪುಷ್ಟಿ ತುಂಬಲಿದೆ. ಪ್ರಜಾಪ್ರಭುತ್ವ ಬಲವಾಗಬೇಕಿದ್ದರೆ ಪ್ರತಿಪಕ್ಷ ಬಲಿಷ್ಠವಾಗಿರಬೇಕು. ಆದರೆ ಪ್ರಬಲವಾಗಿರುವ ನರೇಂದ್ರ ಮೋದಿ ಅವರ ಸರ್ಕಾರದ ವಿರುದ್ಧ ಶಕ್ತ ಪ್ರತಿಪಕ್ಷವೇ ಇಲ್ಲದಂತಾಗಿದೆ. ಕಾಂಗ್ರೆಸ್ ದಿನೇದಿನೆ ಕ್ಷೀಣಿಸುತ್ತಿದೆ. ಇಂಥ ಹೊತ್ತಿನಲ್ಲಿ ಕಾಂಗ್ರೆಸ್ಸನ್ನು ಬಲಿಷ್ಠಗೊಳಿಸಬೇಕಾದರೆ ಅಷ್ಟೇ ಬಲಿಷ್ಠವಾದ ನಾಯಕತ್ವದ ಅಗತ್ಯವೂ ಇದೆ. ನಾಯಕತ್ವ ಇಲ್ಲ ಎಂಬ ಕಾರಣಕ್ಕಾಗಿಯೇ ಕಾಂಗ್ರೆಸ್ಸನ್ನು ಬಿಜೆಪಿಗೆ ಪರ್ಯಾಯ ಅಥವಾ ಪ್ರತಿಪಕ್ಷ ಎಂದು ನೋಡಲು ಈ ದೇಶದ ಮತದಾರನಿಂದ ಸಾಧ್ಯವಾಗುತ್ತಿಲ್ಲ. ಭಾರತ್ ಜೋಡೋ ಯಾತ್ರೆಯ ಮೂಲಕ ಕಾಂಗ್ರೆಸ್ ಬಲವಾದರೆ, ಈ ಯಾತ್ರೆ ರಾಹುಲ್ ಗಾಂಧಿಯನ್ನು ಪ್ರಬಲ ನಾಯಕನನ್ನಾಗಿ ಬೆಳೆಸಿದರೆ ಅದರಿಂದ ಕಾಂಗ್ರೆಸ್‌ಗೆ ಮಾತ್ರವಲ್ಲ, ಈ ದೇಶದ ಪ್ರಜಾಪ್ರಭುತ್ವಕ್ಕೇ ಪ್ರಯೋಜನವಿದೆ. ಕನಿಷ್ಠ ಪಕ್ಷ, ರಾಹುಲ್ ಅವರತ್ತ ಮತದಾರರು ಒಂದು ಬಗೆಯ ಅಚ್ಚರಿಯಿಂದಲಂತೂ ನೋಡುತ್ತಿದ್ದಾರೆ. ಈ ಅಚ್ಚರಿ ವಿಶ್ವಾಸವಾಗಿ ಪರಿವರ್ತನೆಯಾಗಲು ಅವರಿನ್ನೂ ಮುಂದೆ ನಡೆಯಬೇಕಿದೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಮುಸ್ಲಿಂ ದೇಶಗಳಿಂದಲೇ ಬುದ್ಧಿಮಾತು!
ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ನಡೆಸಿರುವ ಕೆಲವು ಮಕ್ಕಳಾಟದಂಥ ಪ್ರಸಂಗಗಳು ಟ್ರೋಲ್‌ಗೆ ಒಳಗಾಗಿದ್ದುಂಟು. ಇದು ರಾಹುಲ್ ಗಾಂಧಿಯಲ್ಲಿನ ಲವಲವಿಕೆಯ ದ್ಯೋತಕ ಎಂದೂ ಸಮರ್ಥಿಸಿಕೊಳ್ಳಬಹುದು. ಆದರೆ ಯಾತ್ರೆ ಮುಗಿದ ತಕ್ಷಣ ರಾಹುಲ್ ಗಾಂಧಿ ರಾಜಕಾರಣವನ್ನು ತೀರಾ ಲಘುವಾಗಿ ತೆಗೆದುಕೊಳ್ಳಬಾರದಷ್ಟೆ. ಮುಂದಿನ ಲೋಕಸಭೆ ಚುನಾವಣೆ ಗುರಿಯತ್ತ ಅವರ ರಾಜಕೀಯ ತಂತ್ರಗಾರಿಕೆಯ ಯಾತ್ರೆ ಮುಂದುವರಿಯಬೇಕು. ಅವರು ಹೀಗೆ ಮಾಡದೆ ರಾಜಕಾರಣವನ್ನು ಲಘುವಾಗಿ, ಉಡಾಫೆಯಾಗಿ ತೆಗೆದುಕೊಂಡರೆ, 136 ದಿನಗಳ ಭಾರತ್ ಜೋಡೋ ಯಾತ್ರೆ ಎನ್ನುವುದು ನೀರಿನಲ್ಲಿ ಮಾಡಿದ ಹೋಮದಂತಾದೀತು!
ತಾನು ನಾಯಕತ್ವದ ಹೊಣೆಯನ್ನು ಹೊರಬಲ್ಲೆ ಎಂಬುದನ್ನು ಸಾಬೀತು ಮಾಡುವ ಹಾದಿಯಲ್ಲಿ ಅವರು ಇನ್ನೂ ಬಹಳ ದೂರ ಸಾಗಬೇಕಿದೆ. ಈ ಹಿಂದೆ ಸುದೀರ್ಘ ಯಾತ್ರೆಗಳನ್ನು ಮಾಡಿದವರು ರಾಜಕೀಯದಲ್ಲಿ ದೊಡ್ಡ ಎತ್ತರಕ್ಕೆ ಏರಿದ ನಿದರ್ಶನಗಳಿವೆ. ಆದರೆ ಅವರು ಜನತೆಯ ನಾಡಿಮಿಡಿತದೊಂದಿಗೆ ಎಷ್ಟು ಮಿಳಿತವಾಗಿದ್ದಾರೆ ಎಂಬುದೂ ಮುಖ್ಯವಾಗುತ್ತದೆ.