ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ನಾಲ್ಕನೇ ಅಭ್ಯರ್ಥಿ ಕುರಿತು ಕಾಂಗ್ರೆಸ್ ಗೊಂದಲದ ಹಾಗೂ ಒಡೆದ ಮನೆಯಾಗಿದೆ. ಈಗಾಗಲೆ ಕಾಂಗ್ರೆಸ್ ಕಣಕ್ಕಿಳಿಸಿರುವ ಮನ್ಸೂರ್ ಖಾನ್ ನಾಮಪತ್ರವನ್ನು ಹಿಂಪಡೆಯುವ ಪ್ರಯತ್ನ ಬಹುತೇಕ ವಿಫಲವಾಗುತ್ತಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತ ಚಲಾಯಿಸುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿಪ್ ನೀಡಿದ್ದಾರೆ.
ರಾಜ್ಯಸಭೆಯಿಂದ ಆಯ್ಕೆಯಾಗಲು ಒಬ್ಬ ಅಭ್ಯರ್ಥಿಗೆ 45 ಮತಗಳ ಅವಶ್ಯಕತೆ ಇದೆ. ಆಡಳಿತ ಪಕ್ಷ ಬಿಜೆಪಿ ಬಳಿ ಸ್ಪೀಕರ್ ಸೇರಿ 120 ಮತಗಳಿವೆ. ಬಿಎಸ್‌ಪಿಯಿಂದ ಆಯ್ಕೆಯಾಗಿ ಬಿಜೆಪಿ ಸೇರಿರುವ ಎನ್. ಮಹೇಶ್, ಪಕ್ಷೇತರ ಶಾಸಕ ನಾಗೇಶ್ ಸೇರಿಸಿಕೊಂಡರೆ ಇಬ್ಬರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ನಂತರ ಮೂರನೇ ಅಭ್ಯರ್ಥಿ ಆಯ್ಕೆ ಮಾಡಲು 13 ಮತಗಳ ಕೊರತೆ ಆಗುತ್ತದೆ. ಅದೇ ರೀತಿ ಕಾಂಗ್ರೆಸ್ ಬಳಿ 69 ಮತಗಳಲ್ಲಿ ಒಬ್ಬ ಅಭ್ಯರ್ಥಿ ನಿರಾತಂಕವಾಗಿ ಆಯ್ಕೆ ಅಗಬಹುದು. ನಂತರ 24 ಮತಗಳು ಉಳಿಯುತ್ತವೆ, ಇನ್ನೂ 21 ಮತಗಳ ಕೊರತೆ ಆಗುತ್ತದೆ. ಒಂದು ಸ್ಥಾನಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಇದನ್ನೂ ಓದಿ | ರಾಜ್ಯಸಭೆ ಚುನಾವಣೆ | ಕೇಂದ್ರ ಸಚಿವ ಕಿಶನ್ ರೆಡ್ಡಿ ಉಸ್ತುವಾರಿ: ಎಲ್ಲರ ಅರ್ಜಿ ಊರ್ಜಿತ
ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಜೆಡಿಎಸ್ ಅಭ್ಯರ್ಥಿಗೆ ಹೆಚ್ಚುವರಿ ಮತಗಳನ್ನು ನೀಡುವ ಚಿಂತನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇದ್ದರು ಎನ್ನಲಾಗಿತ್ತು. ಜೆಡಿಎಸ್‌ನಿಂದ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿದ್ದ ಉದ್ಯಮಿ ಕುಪೇಂದ್ರ ರೆಡ್ಡಿ ಸಹ ಡಿ.ಕೆ. ಶಿವಕುಮಾರ್ ಜತೆ ಮಾತುಕತೆ ನಡೆಸಿದ್ದರು. ಆದರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇರವಾಗಿ ದೆಹಲಿ ಹೈಕಮಾಂಡ್ ಸಂಪರ್ಕಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಘೊಷಿಸುವಂತೆ ಮಾಡಿದರು. ರೆಹಮಾನ್ ಖಾನ್ ಪುತ್ರ ಮನ್ಸೂರ್ ಖಾನ್ ಈಗಾಗಲೆ ನಾಮಪತ್ರ ಸಲ್ಲಿಸಿದ್ದಾರೆ.
ನಾಮೊತ್ರವನ್ನು ಹೇಗಾದರೂ ಹಿಂಪಡೆಯಬೇಕು ಎಂದು ದೆಹಲಿಯಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಯತ್ನಿಸುತ್ತಿದ್ದಾರೆ. ಎಚ್.ಡಿ. ದೇವೇಗೌಡರ ಕೋರಿಕೆ ಮೇರೆಗೆ ದೆಹಲಿಯಲ್ಲಿ ಪ್ರಯತ್ನ ನಡೆಸುತ್ತಿದ್ದು, ಬೆಂಗಳೂರಿನಲ್ಲಿ ನಡೆಯುತ್ತಿರುವ ಚಿಂತನಾ ಶಿಬಿರಕ್ಕೂ ಗೈರಾಗಿದ್ದಾರೆ. ನಾಮಪತ್ರ ಹಿಂಪಡೆಯಲು ಶುಕ್ರವಾರ ಕೊನೆಯ ದಿನವಾಗಿದೆ.
ಆದರೆ ಚುನಾವಣೆಗೆ ಇನ್ನೂ ಏಳು ದಿನವಿರುವಾಗಲೇ ಸಿದ್ದರಾಮಯ್ಯ ವಿಪ್ ಹೊರಡಿಸಿದ್ದಾರೆ. ವಿಧಾನಸಭೆ ಪ್ರತಿಪಕ್ಷ ಮುಖ್ಯಸಚೇತಕ ಡಾ. ಅಜಯ್ ಧರ್ಮಸಿಂಗ್ ವಿಪ್ ಹೊರಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ಚಲಾಯಿಸಬೇಕು ಎಂದು ಸೂಚಿಸಿದ್ದಾರೆ.
ಸಾಮಾನ್ಯವಾಗಿ ಚುನಾವಣೆ ಹಿಂದಿನ ದಿನ ವಿಪ್ ಹೊರಡಿಸಲಾಗುತ್ತದೆ. ಆದರೆ ಸಿದ್ದರಾಮಯ್ಯ ಇದೀಗ ಏಳು ದಿನ ಮೊದಲೇ ವಿಪ್ ಹೊರಡಿಸುವಂತೆ ಮಾಡಿದ್ದಾರೆ. ಈ ಮೂಲಕ, ಅಭ್ಯರ್ಥಿಯ ನಾಮಪತ್ರ ಹಿಂಪಡೆಯದಂತೆ ಕಾಂಗ್ರೆಸ್ ಹೈಕಮಾಂಡ್ ಮೇಲೆಯೇ ಒತ್ತಡ ತಂತ್ರ ಅನುಸರಿಸಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಈದೀಗ ಕಾಂಗ್ರೆಸ್ ಒಡೆದ ಮನೆಯಾಗಿದೆ. ಮೇಲ್ನೋಟಕ್ಕೆ ಸಿದ್ದರಾಮಯ್ಯ ವರ್ಸಸ್ ಡಿ.ಕೆ. ಶಿವಕುಮಾರ್ ಎನ್ನುವಂತಿದ್ದರೂ ಮೂಲ ವರ್ಸಸ್ ವಲಸಿಗ ಕಾಂಗ್ರೆಸ್ ಎನ್ನುವಂತೆಯೇ ಕಾಣುತ್ತಿದೆ. ಒಟ್ಟಿನಲ್ಲಿ ಕಾಂಗ್ರೆಸ್ ಒಳಜಗಳದಿಂದಾಗಿ ಬಿಜೆಪಿ ಅಭ್ಯರ್ಥಿ ಲೆಹರ್‌ಸಿಂಗ್ ಸಿರೋಯಾ ಅನಾಯಾಸವಾಗಿ ಗೆದ್ದುವರುವ ಅವಕಾಶ ಪಡೆಯಲಿದ್ದಾರೆ.
ಇದನ್ನೂ ಓದಿ | ರಾಜ್ಯಸಭೆ ಚುನಾವಣೆ | ದೇಶದ ವಿತ್ತ ಸಚಿವೆಗಿಂತ JDS ಅಭ್ಯರ್ಥಿ 230 ಪಟ್ಟು ಶ್ರೀಮಂತ!