ಮೈಸೂರು: ರಾಜ್ಯಸಭೆ ಚುನಾವಣೆಯಲ್ಲಿ (Rajyasabha Election) ನಾಲ್ಕನೇ ಅಭ್ಯರ್ಥಿಯನ್ನು ಗೆಲ್ಲಿಸುವ ಕುರಿತಾಗಿ ಕಾಂಗ್ರೆಸ್ ಹಾಗೂ ಜಾತ್ಯತೀತ ಜನತಾದಳ(ಜೆಡಿಎಸ್) ನಡುವೆ ಆತ್ಮಸಾಕ್ಷಿ ಜಗಳ ನಡೆಯುತ್ತಿದೆ. ಎದುರಾಳಿ ಪಕ್ಷದ ಶಾಸಕರು ತಮ್ಮ ʼಆತ್ಮಸಾಕ್ಷಿʼ ಮತಗಳನ್ನು ತಮಗೆ ನೀಡಬೇಕು ಎಂದು ಹಕ್ಕುಮಂಡನೆ ನಡೆಯುತ್ತಿದೆ.
ರಾಜ್ಯಸಭೆ ಚುನಾವಣೆ ಜೂನ್ 10ರಂದು ನಡೆಯಲಿದೆ. ರಾಜ್ಯದಿಂದ ನಾಲ್ಕು ಸ್ಥಾನಗಳನ್ನು ಆಯ್ಕೆ ಮಾಡಬೇಕಿದೆ. ಶಾಸಕರ ಸಂಖ್ಯೆಗೆ ಅನುಗುಣವಾಗಿ ಬಿಜೆಪಿಗೆ ಎರಡು, ಕಾಂಗ್ರೆಸ್‌ಗೆ ಒಂದು ಸ್ಥಾನ ಸುಲಭವಾಗಿ ಲಭಿಸುತ್ತದೆ. ಉಳಿದಂತೆ ಒಂದು ಸ್ಥಾನ ಪಡೆಯಲು ಮೂರೂ ಪಕ್ಷಗಳಿಗೆ ಸಂಖ್ಯೆ ಇಲ್ಲ. ಯಾವುದೇ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡು ಅಥವಾ ಅಕ್ರಮವಾಗಿ ಶಾಸಕರ ಮತ ಪಡೆದರಷ್ಟೆ ಗೆಲುವು ಸಾಧ್ಯ.
ಇದನ್ನೂ ಓದಿ | ರಾಜ್ಯಸಭೆ ಚುನಾವಣೆ | ದೇಶದ ವಿತ್ತ ಸಚಿವೆಗಿಂತ JDS ಅಭ್ಯರ್ಥಿ 230 ಪಟ್ಟು ಶ್ರೀಮಂತ!
ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಬೆಂಬಲ ಪಡೆದು ಜಯಗಳಿಸುವುದು ಉದ್ಯಮಿ ಕುಪೇಂದ್ರ ರೆಡ್ಡಿ ಆಸೆಯಾಗಿತ್ತು. ಇದಕ್ಕೆ ದೊಡ್ಡಗೌಡರೂ ಸಪೋರ್ಟ್ ಮಾಡಿದ್ದರು. ಸ್ವತಃ ಗೌಡರೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಹತ್ತಿರ ಮಾತನಾಡಿದ್ದರು ಎನ್ನುವುದು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಸಾಕ್ಷಿ. ಈ ಮಾತನ್ನು ಸೋನಿಯಾ ಗಾಂಧಿಯವರಿಗೆ ಗೌಡರು ಹೇಳುವಾಗ ಸ್ವತಃ ತಾನೇ ಇದ್ದೆ ಎಂದು ಎರಡು ದಿನದ ಹಿಂದೆ ಸುದ್ದಿಗೋಷ್ಠಿಯಲ್ಲಿ ರೇವಣ್ಣ ಹೇಳಿದ್ದಾರೆ. ಆದರೆ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸುವುದು ಖಚಿತವಾದ ಬೆನ್ನಲ್ಲೆ ಕಾಂಗ್ರೆಸ್‌ನಿಂದ ಹಿರಿಯ ನಾಯಕ ರೆಹಮಾನ್ ಖಾನ್ ಪುತ್ರ ಮನ್ಸೂರ್ ಖಾನ್ ಅವರನ್ನು ಸ್ಪರ್ಧೆಗೆ ಇಳಿಸಲಾಯಿತು.
ಇಲ್ಲಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ವಾಗ್ವಾದ ಆರಂಭವಾಗಿದೆ. ಈಗ ಎರಡೂ ಪಕ್ಷಗಳು ಮತ್ತೊಬ್ಬರ ಪಕ್ಷದ ಶಾಸಕರ ಆತ್ಮಸಾಕ್ಷಿ ಮತಗಳ ಮೇಲೆ ಕಣ್ಣಿಟ್ಟಿವೆ. ಕಾಂಗ್ರೆಸ್ ತಾನು ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಜೆಡಿಎಸ್‌ಗೆ ನಿಜವಾಗಲೂ ಅಲ್ಪಸಂಖ್ಯಾತರ ಮೇಲೆ ಪ್ರೀತಿ ಇದ್ದರೆ ಮನ್ಸೂರ್ ಖಾನ್‌ಗೆ ಮತ ನೀಡಬೇಕು ಎನ್ನುತ್ತದೆ. ಅದೇ ಜೆಡಿಎಸ್ ರಾಜ್ಯ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತಿನಲ್ಲೆ ಹೇಳುವುದಾದರೆ, ʼಕಾಂಗ್ರೆಸ್‌ಗೆ ಅಲ್ಪಸಂಖ್ಯಾತರ ಮೇಲೆ ಅಷ್ಟೊಂದು ಅಭಿಮಾನ ಇದ್ದಿದ್ದರೆ ಮೊದಲನೇ ಕ್ಯಾಂಡಿಡೇಟ್ ಮಾಡಬೇಕಿತ್ತು. ಆದರೆ ಅವರಿಗೆ ಇಲ್ಲ. ಗೆಲ್ಲುವುದಕ್ಕೆ ಜೈರಾಮ್ ರಮೇಶ್. ಸೋಲೋದಕ್ಕೆ ಸಾಬರಾ?ʼ ಎಂದು ಇಬ್ರಾಹಿಂ ತಮ್ಮದೇ ಶೈಲಿಯಲ್ಲಿ ಪ್ರಶ್ನಿಸಿದ್ದಾರೆ. ಕೋಮುವಾದಿ ಬಿಜೆಪಿಯನ್ನು ಗೆಲ್ಲದಂತೆ ತಡೆಯಬೇಕೆಂದರೆ ಜೆಡಿಎಸ್‌ಗೆ ಮತ ನೀಡಿ ಎಂದು ಜೆಡಿಎಸ್ ಹೇಳುತ್ತಿದೆ.
ಈ ಎಲ್ಲ ಬೆಳವಣಿಗೆಗಳ ಕುರಿತು ಮೈಸೂರಿನಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಅಲ್ಪಸಂಖ್ಯಾತ ಅಭ್ಯರ್ಥಿ ಗೆಲ್ಲಿಸಲು ಜೆಡಿಎಸ್ ತನ್ನ ಅಭ್ಯರ್ಥಿಯ ನಿವೃತ್ತಿ ಘೋಷಿಸಲಿ ಎಂದು ಜೆಡಿಎಸ್‌ಗೆ ಪುಕ್ಕಟ್ಟೆ ಸಲಹೆ ನೀಡಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿಯ ಕೆಲ ಆತ್ಮಸಾಕ್ಷಿಯ ಮತಗಳು ಕಾಂಗ್ರೆಸ್‌ಗೆ ಬರುತ್ತವೆ. ನಮ್ಮ ಗೆಲುವಿಗೆ ಎಷ್ಟು ಮತ ಬೇಕೋ ಅಷ್ಟು ಮತಗಳು ಈ ಎರಡೂ ಪಕ್ಷಗಳಿಂದ ಬಂದೇ ಸಿಗುತ್ತವೆ. ಬಿಜೆಪಿ ಗೆಲ್ಲಬಾರದು ಎಂಬ ಇಚ್ಚೆ ಜೆಡಿಎಸ್‌ಗೆ ಈಗಲೂ ಇದ್ದರೆ ಅವರ ಅಭ್ಯರ್ಥಿಯನ್ನು ಕಣದಿಂದ ನಿವೃತ್ತಿ ಮಾಡಿಸಲಿ. ನಾವು ಈ ಹಿಂದೆ ಅನೇಕ ಬಾರಿ ಜೆಡಿಎಸ್‌ಗೆ ನೆರವು ನೀಡಿಲ್ವ ? ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸುವಾಗ ನಾವು ಬೆಂಬಲಿಸಲಿಲ್ವ? ಮೂವತ್ತೇಳು ಸ್ಥಾನ ಇದ್ದ ಜೆಡಿಎಸ್‌ಗೆ ನಾವು ಸಿಎಂ ಸ್ಥಾನ ಕೊಡಲಿಲ್ವ? ಹೀಗೆ ಹಲವು ಬಾರಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ನಾವು ಜೆಡಿಎಸ್‌ಗೆ ಸಹಕಾರ ಕೊಟ್ಟಿದ್ದೇವೆ. ಪ್ರತಿ ಬಾರಿಯೂ ಜೆಡಿಎಸ್ ಯಾಕೆ ಗೆಲ್ಲಬೇಕು.? ಎಂದಿದ್ದಾರೆ.
ಈ ಮಾತಿಗೆ ಮೈಸೂರಿನಲ್ಲೆ ಎಚ್.ಡಿ. ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅವರೊಬ್ಬರಿಗೇ ಆತ್ಮಸಾಕ್ಷಿ ಇರೋದು, ನಮಗ್ಯಾರಿಗೂ ಇಲ್ವಾ.? ಆತ್ಮಸಾಕ್ಷಿಯನ್ನು ಅವರೊಬ್ಬರಿಗೆ ಗುತ್ತಿಗೆ ಕೊಟ್ಟಿದ್ದೇವ? 10ನೇ ತಾರೀಖು ಬರುವ ಫಲಿತಾಂಶವೇ ಎಲ್ಲದಕ್ಕೂ ಉತ್ತರ ಕೊಡಲಿದೆ. ಜಿ.ಟಿ. ದೇವೇಗೌಡರು ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತ ನೀಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಬೇರೆ ಯಾರೋ ಹೇಳುವ ಮಾತುಗಳಿಗೆ ಉತ್ತರ ಕೊಡಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಧ್ರುವನಾರಾಯಣ್ ಆಡಿರುವ ಮಾತುಗಳನ್ನೆಲ್ಲ ಕೇಳಿದ್ದೇನೆ. ಎಲ್ಲದಕ್ಕೂ ಮಂಗಳವಾರ ವಿಸ್ತಾರವಾಗಿ ಉತ್ತರ ಕೊಡುತ್ತೇನೆ. ಎಲ್ಲ ವಿಷಯಗಳ ಬಗ್ಗೆ ಚರ್ಚೆ ಮಾಡಲು ಸಿದ್ಧವಾಗಿಯೇ ಇದ್ದೇನೆ.
ಕಳೆದ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೇ ಅಲ್ಲ, ಬಿಜೆಪಿಯೂ ಕೂಡ ದೇವೇಗೌಡರ ವಿರುದ್ಧ ಅಭ್ಯರ್ಥಿ ಹಾಕಿರಲಿಲ್ಲ. ಈ ಸಂಬಂಧ ಮೊದಲೇ ಬಿಜೆಪಿ ತೀರ್ಮಾನ ಕೈಗೊಂಡಿತ್ತು. ಬಿಜೆಪಿ ತೀರ್ಮಾನದ ಬಳಿಕ ಕಾಂಗ್ರೆಸ್ ಕೂಡ ಅಭ್ಯರ್ಥಿ ಹಾಕಲಿಲ್ಲ. ದೇವೇಗೌಡರನ್ನು ರಾಜ್ಯಸಭೆಗೆ ಕಳಿಸುವುದರಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ಕೇಂದ್ರದ ಮುಖಂಡರ ನಿರ್ಧಾರ ಇದೆ. ಇದರಲ್ಲಿ ರಾಜ್ಯ ಕಾಂಗ್ರೆಸ್ ಪಾತ್ರ ಏನೂ ಇಲ್ಲ.
ರಾಜ್ಯಸದಭೆ ಚುನಾವಣೆಯಲ್ಲಿ ನಮಗೆ 32 ಮತಗಳಿವೆ. ಕೊರತೆ ಮತಗಳನ್ನು ತುಂಬಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇದಕ್ಕಾಗಿ ಯಾವುದೇ ಆಪರೇಷನ್ ಮಾಡಲ್ಲ. ಸಿದ್ದರಾಮಯ್ಯ ಹೇಳಿರುವಂತೆ ನಮ್ಮದೂ ಆತ್ಮಸಾಕ್ಷಿಯೇ ಎಂದು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಸಾಮಾನ್ಯವಾಗಿ ಚುನಾವಣೆ ಹಿಂದಿನ ದಿನ ವಿಪ್ ಹೊರಡಿಸಲಾಗುತ್ತದೆ. ಆದರೆ ಸಿದ್ದರಾಮಯ್ಯ ಇದೀಗ ಏಳು ದಿನ ಮೊದಲೇ ವಿಪ್ ಹೊರಡಿಸುವಂತೆ ಮಾಡಿದ್ದಾರೆ. ಈ ಮೂಲಕ, ಅಭ್ಯರ್ಥಿಯ ನಾಮಪತ್ರ ಹಿಂಪಡೆಯದಂತೆ ಕಾಂಗ್ರೆಸ್ ಹೈಕಮಾಂಡ್ ಮೇಲೆಯೇ ಒತ್ತಡ ತಂತ್ರ ಅನುಸರಿಸಿದ್ದಾರೆ. ಜೂನ್ 9ರಂದು ಶಾಸಕಾಂಗ ಪಕ್ಷದ ಸಭೆಯನ್ನೂ ಕರೆದಿದ್ದಾರೆ. ಈ ಮೂಲಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಮಾತಿಗೆ ಮಣಿದು ಕಾಂಗ್ರೆಸ್ ಹೈಕಮಾಂಡ್ ತನ್ನ ಅಭ್ಯರ್ಥಿಯನ್ನು ಹಿಂಪಡೆಯದಂತೆ ʼಲಾಕ್ʼ ಮಾಡಲು ಪ್ರಯತ್ನಿಸಿದ್ದಾರೆ. ಇಲ್ಲಿಯವರೆಗೆ ಬಹುತೇಕ ಸಫಲವೂ ಆಗಿದ್ದಾರೆ.
ಇದೆಲ್ಲದರ ನಡುವೆ ಬಿಜೆಪಿ ಅಭ್ಯರ್ಥಿ ಲೆಹರ್ ಸಿಂಗ್ ಸಿರೋಯಾ ಗೆಲುವಿನ ಕನಸು ಕಾಣುತ್ತಿದ್ದಾರೆ. ಗಣೇಶ ಬಂದ ಕಾಯಿ ಕಡುಬು ತಿಂದ ಚಿಕ್ಕ ಕೆರೇಲಿ ಬಿದ್ದ ದೊಡ್ಡ ಕೆರೇಲಿ ಎದ್ದ ಎನ್ನುವಂತೆ, ರಾಜ್ಯದ ಮೇಲ್ಮನೆ ವಿಧಾನ ಪರಿಷತ್ತಿನ ಅವಧಿ ಮುಗಿಯುತ್ತಿದ್ದಂತೆಯೇ ನೇರವಾಗಿ ಕೇಂದ್ರದ ಮೇಲ್ಮನೆ ರಾಜ್ಯಸಭೆಯಲ್ಲಿ ಪ್ರತ್ಯಕ್ಷವಾಗುವ ಉಪಾಯ ಹೂಡಿದ್ದಾರೆ. ಚುನಾವಣೆಗೆ ಇನ್ನು ಮೂರು ದಿನ ಮಾತ್ರವೇ ಉಳಿದಿದ್ದು, ಕಾಲವೇ ಎಲ್ಲಕ್ಕೂ ಉತ್ತರ ನೀಡಲಿದೆ.
ಇದನ್ನೂ ಓದಿ | ನವರಸನಾಯಕನಿಗೆ ಒಲಿದ ರಾಜ್ಯಸಭೆ: ನಿರ್ಮಲಾ ಸೀತಾರಾಮನ್ ಜತೆಗೆ ಜಗ್ಗೇಶ್‌ಗೆ ಬಿಜೆಪಿ ಟಿಕೆಟ್