Site icon Vistara News

Ramanagara Lawyers: ರಾಮನಗರ ವಿವಾದ; ಪಿಎಸ್‌ಐ ತನ್ವೀರ್ ಹುಸೇನ್ ಅಮಾನತು, ಚಾಂದ್‌ ಪಾಷಾ ಮೇಲೆ ಕ್ರಮ: ಪರಮೇಶ್ವರ್

Ramanagara Lawyers PSI Tanveer Hussain suspended and action against Chand Pasha G Parameshwara

ವಿಧಾನಸಭೆ: ರಾಮನಗರದಲ್ಲಿ ಜಿಲ್ಲಾ ವಕೀಲರ ಸಂಘದ (Ramanagara Lawyers) 40 ಮಂದಿ ವಕೀಲರ ವಿರುದ್ಧ ಪಿಎಸ್‌ಐ ತನ್ವೀರ್‌ ಹುಸೇನ್‌ (PSI Tanveer Husssain) ಅವರು ಪ್ರಕರಣ ದಾಖಲಿಸಿಕೊಂಡಿರುವುದನ್ನು ಆಕ್ಷೇಪಿಸಿ ಮತ್ತು ಪಿಎಸ್‌ಐ ಅಮಾನತಿಗೆ ಆದೇಶಿಸಿ ಫೆ. 22ರಂದು (ಗುರುವಾರ) ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆ (Massive Protest in Bangalore) ನಡೆಸಲು ವಕೀಲರು ನಿರ್ಧರಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಮಂಗಳವಾರ ವಿಧಾನಸಭೆಯಲ್ಲಿ ಭಾರಿ ಕೋಲಾಹಲ ಉಂಟಾಗಿತ್ತು. ವಕೀಲ ಚಾಂದ್‌ ಪಾಷಾನನ್ನು ಗಡಿಪಾರು ಮಾಡಬೇಕು, ಐಜೂರು ಠಾಣೆಯ ಪಿಎಸ್‌ಐ ತನ್ವೀರ್‌ ಹುಸೇನ್‌ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ ಸದನದಲ್ಲಿ ಬಿಜೆಪಿ – ಜೆಡಿಎಸ್‌ ಪ್ರತಿಭಟಿಸಿತ್ತು. ಈಗ ಈ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಸದನದಲ್ಲಿ ಪ್ರತಿಕ್ರಿಯೆ ನೀಡಿದ್ದು, ಪಿಎಸ್‌ಐ ತನ್ವೀರ್ ಹುಸೇನ್ ಅವರನ್ನು ಅಮಾನತು ಮಾಡುವುದಾಗಿ ಹೇಳಿದ್ದಾರೆ.

ವಿವಾದದ ಕೇಂದ್ರ ಬಿಂದುವಾಗಿರುವ ಎಸ್‌ಡಿಪಿಐ ಕಾರ್ಯಕರ್ತ, ವಕೀಲ ಚಾಂದ್‌ ಪಾಷಾನನ್ನು ಗಡಿಪಾರು ಮಾಡಬೇಕು, ಐಜೂರು ಠಾಣೆಯ ಪಿಎಸ್‌ಐ ತನ್ವೀರ್‌ ಹುಸೇನ್‌ ಅವರನ್ನು ಅಮಾನತು ಮಾಡಬೇಕು ಎಂಬ ಆಗ್ರಹದೊಂದಿಗೆ ಮಂಗಳವಾರ ವಿಧಾನಸಭೆಯಲ್ಲಿ ಭಾರಿ ಕೋಲಾಹಲ ಉಂಟಾಗಿತ್ತು. ಇತ್ತ ರಾಮನಗರ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ರಾತ್ರಿಯಿಂದ ವಕೀಲರ ಪ್ರತಿಭಟನೆ ಮುಂದುವರಿದಿತ್ತು.

ಬಿಜೆಪಿ – ಜೆಡಿಎಸ್‌ ಮಂಗಳವಾರ ಸದನದೊಳಗೆ ಪ್ರತಿಭಟನೆಯನ್ನು ತೀವ್ರಗೊಳಿಸಿ ಪಿಎಸ್‌ಐ ಅಮಾನತಿಗೆ ಪಟ್ಟು ಹಿಡಿದು ಕುಳಿತಿದ್ದವು. ಆಗ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್‌, ಪ್ರತಿಭಟನೆ ನ್ಯಾಯಾಧೀಶರ ವಿರುದ್ಧ ಪೋಸ್ಟ್‌ ಹಾಕಿದ ಚಾಂದ್‌ ಪಾಷಾ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಪಿಎಸ್‌ಐ ಸಯ್ಯದ್‌ ತನ್ವೀರ್‌ ಹುಸೇನ್‌ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ಅದಾಗ್ಯೂ, ತನಿಖೆ ನಡೆಸಿ, ವರದಿ ನೀಡುವಂತೆ ಚನ್ನಪಟ್ಟಣ ಡಿವೈಎಸ್‌ಪಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಆದರೆ, ಅಮಾನತು ಮಾಡುವವರೆಗೆ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಆಗ್ರಹಿಸಿದ್ದ ಪ್ರತಿಪಕ್ಷಗಳು ಸದನದ ಬಾವಿಗಿಳಿದು ಪ್ರತಿಭಟಿಸಿದ್ದವು. ಕೊನೆಗೆ ಸ್ಪೀಕರ್‌ ಮಧ್ಯಪ್ರವೇಶ ಮಾಡಿ ಸಂದಾನ ಮಾಡಿದ್ದರು. ಬಳಿಕ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಪ್ರತಿಕ್ರಿಯೆ ನೀಡಿ, ಬುಧವಾರ ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ಈ ಬಗ್ಗೆ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದರು.

ಐಜೂರು ಠಾಣೆಯ ಇನ್ಸ್‌ಪೆಕ್ಟರ್ ಅಮಾನತು

ಬುಧವಾರ ವಿಧಾನಸಭೆ ಕಲಾಪದ ಆರಂಭದಲ್ಲೇ ರಾಮನಗರ ವಿಚಾರವನ್ನು ವಿಪಕ್ಷ ನಾಯಕ ಆರ್. ಅಶೋಕ್‌ ಪ್ರಸ್ತಾಪ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ವಿಪಕ್ಷದವರು ನಿನ್ನೆ ಪಿಎಸ್‌ಐ ಅಮಾನತು ಮಾಡುವಂತೆ ಒತ್ತಾಯ ಮಾಡಿದ್ದಾರೆ. ವಕೀಲರು ಬೆಂಗಳೂರಿಗೆ ಬಂದು ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಂಡಿದ್ದು, ಐಜೂರು ಠಾಣೆಯ ತನ್ವೀರ್ ಹುಸೇನ್ ಅವರನ್ನು ಅಮಾನತು ಮಾಡುವುದಾಗಿ ಸದನಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಇದಕ್ಕೆ‌ ಕಾರಣವಾದ ಚಾಂದ್ ಪಾಷ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದು. ಈ ಹಿಂದೆ ಕೂಡ ಹಲವು ಪ್ರಕರಣದಲ್ಲಿ ಚಾಂದ್ ಪಾಷ ಭಾಗಿಯಾಗಿದ್ದರು. ಹಾಗಾಗಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಡಾ. ಜಿ. ಪರಮೇಶ್ವರ್‌ ಸ್ಪಷ್ಟನೆ ನೀಡಿದರು.

ಗೃಹ ಸಚಿವರ ಉತ್ತರಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದರು. ಸ್ಪೀಕರ್ ಅವರಿಗೂ ಅಭಿನಂದನೆಯನ್ನು ಸಲ್ಲಿಸಿದರು. ನಮ್ಮ‌ ಹೋರಾಟಕ್ಕೆ ಜಯ ಸಂದಿದೆ ಎಂದು ಹೇಳಿದರು.

ಇನ್ನೂ ಅಮಾನತು ಮಾಡಿಲ್ಲ: ಐಜಿಪಿ ಸ್ಪಷ್ಟನೆ

ವಕೀಲರ ಮೇಲೆ ಸುಳ್ಳು ಎಫ್ಐಆರ್ ದಾಖಲು ಆರೋಪ ಎದುರಿಸುತ್ತಿರುವ ಐಜೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ತನ್ವೀರ್ ಹುಸೇನ್ ಅವರನ್ನು ಅಮಾನತು ಮಾಡಿಲ್ಲ. ಗೃಹ ಸಚಿವರ ಸೂಚನೆ ಮೇರೆಗೆ ಈ ಬಗ್ಗೆ ಕ್ರಮ ಜರುಗಿಸಲಾಗುತ್ತದೆ ಎಂದು ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ವಿಸ್ತಾರ ನ್ಯೂಸ್‌ಗೆ ಸ್ಪಷ್ಟನೆ ನೀಡಿದ್ದಾರೆ.

Ramanagara Issue ಏನಿದು ರಾಮನಗರ ಚಾಂದ್‌ ಪಾಷಾ ಪ್ರಕರಣ?

  1. ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅಲ್ಲಿನ ಜಿಲ್ಲಾ ನ್ಯಾಯಾಲಯ ಜನವರಿ 31ರಂದು ಅವಕಾಶ ಕಲ್ಪಿಸಿ ಆದೇಶ ಮಾಡಿತ್ತು. ಇದನ್ನು ಆಕ್ಷೇಪಿಸಿ ರಾಮನಗರ ವಕೀಲರ ಸಂಘದ ಸದಸ್ಯ ಹಾಗೂ ಎಸ್‌ಡಿಪಿಐ ಮುಖಂಡ ಚಾಂದ್‌ ಪಾಷಾ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು.
  2. ಪಾಷಾ ಪೋಸ್ಟ್‌ ಗಮನಿಸಿದ ಬಿಜೆಪಿ ಮುಖಂಡ ಪಿ ಶಿವಾನಂದ ಅವರು ಪಾಷ ವಿರುದ್ಧ ರಾಮನಗರ ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದನ್ನು ಆಧರಿಸಿ ಪ್ರಕರಣ ದಾಖಲಾಗಿತ್ತು.
  3. ಪಾಷಾ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ವಕೀಲರ ಸಂಘವು ಅವರ ವಿರುದ್ಧ ಕ್ರಮ ಕೈಗೊಳ್ಳಲು ಫೆಬ್ರವರಿ 6ರಂದು ಸಂಜೆ ಸರ್ವ ಸದಸ್ಯರ ಸಭೆ ಕರೆದಿತ್ತು.
  4. ಈ ನಡುವೆ ದಲಿತ ಮತ್ತು ಪ್ರಗತಿಪರ ಮುಖಂಡರ ನಿಯೋಗವು ರಾಮನಗರ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿಯನ್ನು ಭೇಟಿ ಮಾಡಿ, ಪ್ರಕರಣವನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳುವಂತೆ ಮನವಿ ಸಲ್ಲಿಸಲು ಆಗಮಿಸಿತು.
  5. ಚಾಂದ್‌ ಪಾಷಾ ಪರವಾಗಿ ಬಂದಿದ್ದ ಮುಖಂಡರು ಮತ್ತು ವಕೀಲರ ನಡುವೆ ವಾಗ್ವಾದ ನಡೆಯಿತು. ಸೌಹಾರ್ದಯುತ ಮಾತುಕತೆ ಜಗಳವಾಯಿತು.
  6. ದಲಿತ ಮತ್ತು ಪ್ರಗತಿಪರ ಮುಖಂಡರು ನ್ಯಾಯಾಲಯದ ಆವರಣಕ್ಕೆ ಅತಿಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಆರೋಪಿಸಿ, ವಕೀಲರ ಸಂಘದ ಅಧ್ಯಕ್ಷರು ಫೆ. 6ರಂದು ರಾತ್ರಿ ಪೊಲೀಸರಿಗೆ ದೂರು ನೀಡಿದ್ದರು.
  7. ವಕೀಲರ ಸಂಘದ ದೂರಿನ ಮೇರೆಗೆ ಪಾಷಾ ಮತ್ತು 40 ಮುಖಂಡರ ವಿರುದ್ಧ ಐಜೂರು ಠಾಣೆ ಪಿಎಸ್‌ಐ ತನ್ವೀರ್ ಹುಸೇನ್ ಎಫ್‌ಐಆರ್ ದಾಖಲಿಸಿಕೊಂಡಿದ್ದರು.
  8. ಫೆ. 7ರಂದು ವಕೀಲರ ಜತೆಗೆ ಮಾತುಕತೆಗೆ ತೆರಳಿದ್ದ ದಲಿತ ಮತ್ತು ಪ್ರಗತಿಪರರ ತಂಡದಲ್ಲಿದ್ದ ರಫೀಕ್ ಖಾನ್ ಎಂಬುವರು ಐಜೂರು ಠಾಣೆಗೆ ಒಂದು ದೂರನ್ನು ನೀಡಿ ವಕೀಲರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.
  9. ರಫೀಕ್‌ ಖಾನ್‌ ನೀಡಿದ ದೂರಿನ ಮೇರೆಗೆ ಪಿಎಸ್‌ಐ ತನ್ವೀರ್‌ ಹುಸೇನ್‌ ಅವರು 40 ವಕೀಲರ ವಿರುದ್ಧ ಪ್ರಕರಣ ದಾಖಲಿಸಿದ್ದರು.
  10. ತಮ್ಮ ಮೇಲೆ ಕೇಸ್‌ ಹಾಕಿರುವುದರಿಂದ ಕೆರಳಿದ ವಕೀಲರು ಕಳೆದ 10 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ., ಸೋಮವಾರದಿಂದ ಅಹೋರಾತ್ರಿ ಧರಣಿ ನಡೆಯುತ್ತಿದೆ.
  11. ವಕೀಲರ ಈ ಹೋರಾಟಕ್ಕೆ ಬಿಜೆಪಿ ಮತ್ತು ಜೆಡಿಎಸ್‌ ಬೆಂಬಲ ನೀಡಿವೆ. ಜೆಡಿಎಸ್ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹಾಗೂ ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ವಕೀಲರನ್ನು ಭೇಟಿ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Bangalore Airport : ಟಿಕೆಟ್‌ ಇಲ್ಲದೆ ವಿಮಾನ ಹತ್ತಲು ಬಂದಿದ್ದ ಟೆರರಿಸ್ಟ್‌ ಅರೆಸ್ಟ್‌!

ದಲಿತ ಮುಖಂಡರಿಂದ ತಮಟೆ ಚಳವಳಿ

ಈ ನಡುವೆ ದಲಿತ ಮತ್ತು ಪ್ರಗತಿಪರ ಮುಖಂಡರು ಕೂಡಾ ತನ್ವೀರ್‌ ಹುಸೇನ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿ ಎಂದು ಮಾತನಾಡಲು ಫೆಬ್ರವರಿ 6ರಂದು ಜಿಲ್ಲಾ ವಕೀಲರ ಸಂಘದ ಬಳಿ ತೆರಳಿದ್ದ ದಲಿತ ಮುಖಂಡರು ವಕೀಲರ ವಿರುದ್ಧ ಜಾತಿನಿಂದನೆ ಆರೋಪ ಮಾಡಿದ್ದಾರೆ. ಪಿಎಸ್‌ಐ ಅವರು ಇದರ ಬಗ್ಗೆ ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ. ಹೀಗಾಗಿ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಮಂಗಳವಾರ ರಾಮನಗರದಲ್ಲಿ ತಮಟೆ ಚಳವಳಿ ನಡೆಸಲಾಯಿತು.

Exit mobile version