ಮೈಸೂರು: ರಾಜ್ಯ ರಾಜಕೀಯದಲ್ಲಿ (Karnataka Politics) ಈಗ ಕಾಂಗ್ರೆಸ್ ಸರ್ಕಾರದ (Congress Government) ಆಂತರಿಕ ಕಚ್ಚಾಟವೇ ಹೆಚ್ಚು ಸುದ್ದಿಯಲ್ಲಿದೆ. ಇದುವರೆಗೆ ಪೂರ್ಣಾವಧಿ ಸಿಎಂ ಇಲ್ಲವೇ ಸಿಎಂ ಹುದ್ದೆಯ ಅಧಿಕಾರ ಹಂಚಿಕೆಯ ಬಗ್ಗೆ ಚರ್ಚೆ ನಡೆಯುತ್ತಿತ್ತು, ಆದರೆ, ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಹಂಪಿಯಲ್ಲಿ “ನಾನೇ ಇನ್ನು ಐದು ವರ್ಷ ಸಿಎಂ” ಎಂದು ಹೇಳಿಕೆ ನೀಡುವ ಮೂಲಕ ಮತ್ತೊಂದು ಸುತ್ತಿನ ರಾಜಕೀಯ ದಾಳವನ್ನು ಉರುಳಿಸಿದ್ದರು. ಅಲ್ಲದೆ, ಮುಂದಿನ ಸಿಎಂ (Next CM), ಅಧಿಕಾರ ಹಂಚಿಕೆ ಸೇರಿದಂತೆ ಯಾವುದೇ ರೀತಿಯಾದಂತಹ ವಿವಾದಿತ ಹೇಳಿಕೆಯನ್ನು ಪಕ್ಷದ ಯಾವೊಬ್ಬ ಸಚಿವರು ಹಾಗೂ ಶಾಸಕರು ನೀಡುವಂತಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿಕೆ ನೀಡಿತ್ತು. ಈಗ ಸಿಎಂ ಹುದ್ದೆ ಬಗ್ಗೆ ಮತ್ತೊಬ್ಬ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿಕೆ ನೀಡಿದ್ದು, ಸಿಎಂ ಆಗಲು ತಾವು ಸಿದ್ಧ ಎಂದು ಘೋಷಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಹೈಕಮಾಂಡ್ ಹೇಳಿದರೆ ನಾನು ಮುಖ್ಯಮಂತ್ರಿಯಾಗಲು ಸಿದ್ಧನಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: CM Siddaramaiah : ಬೇಡ ಬೇಡ ಎನ್ನುತ್ತಲೇ ಬಂದು ಕುಣಿದ ಸಿದ್ದರಾಮಯ್ಯ; ಡ್ಯಾನ್ಸ್ ಮಾಡಲು ಕಾರಣ ಇವರು!
ತಾವೇ ಮುಂದಿನ ಐದು ವರ್ಷ ಮುಖ್ಯಂಮತ್ರಿಯಾಗಿ ಮುಂದುವರಿಯುತ್ತೇನೆ ಎಂದು ಹೇಳಿರುವುದು ಸಿದ್ದರಾಮಯ್ಯ ಅವರದ್ದು ವೈಯುಕ್ತಿಕ ಹೇಳಿಕೆಯಾಗಿದೆ. ಸಿಎಂ ಯಾರಾಗಬೇಕು? ಯಾರು ಮುಂದುವರಿಯಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಒಂದು ವೇಳೆ ಹೈಕಮಾಂಡ್ ನೀನು ಸಿಎಂ ಆಗು ಅಂದರೆ ನಾನೂ ಸಿದ್ಧನಿದ್ದೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಸಿಎಂ ಅಧಿಕಾರ ಹಂಚಿಕೆ ವಿಚಾರದ ಬಗ್ಗೆ ನವ ದೆಹಲಿಯಲ್ಲಿ ನಾಲ್ಕು ಜನ ಕುಳಿತು ಮಾತನಾಡಿದ್ದಾರೆ. ಅವರಿಗೆ ಮಾತ್ರ ಈ ವಿಚಾರದ ಬಗ್ಗೆ ಸ್ಪಷ್ಟತೆ ಇದೆ. ಈಗ ಸಿಎಂ ಸಿದ್ದರಾಮಯ್ಯ ಅವರು ಮುಂದಿನ ಐದು ವರ್ಷ ನಾನೇ ಸಿಎಂ ಎಂದು ನೀಡಿರುವ ಹೇಳಿಕೆಯು ಅವರ ವೈಯುಕ್ತಿಕ ಅಭಿಪ್ರಾಯವಾಗಿದೆ. ಜಿಲ್ಲಾ ಪಂಚಾಯಿತಿ ಸದಸ್ಯರಿಂದ ಹಿಡಿದು ಶಾಸಕರವರೆಗೆ ಎಲ್ಲರಿಗೂ ತಮ್ಮ ಅಭಿಪ್ರಾಯ ಹೇಳಲು ಸ್ವಾತಂತ್ರ್ಯವಿದೆ. ಇದರಲ್ಲಿ ತಪ್ಪು ಏನೂ ಇಲ್ಲ. ಆದರೆ, ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಕಲ್ಲಿನಲ್ಲಿ ಕೆತ್ತಿದ ಶಾಸನವಲ್ಲ. ಎಲ್ಲವೂ ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಬಾಂಬ್ ಸಿಡಿಸಿದ್ದಾರೆ.
ಈಗ ಹುಟ್ಟಿದ ಹಲವು ಪ್ರಶ್ನೆಗಳು!
ಪ್ರಿಯಾಂಕ್ ಖರ್ಗೆ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಕೇವಲ ಒಬ್ಬ ಸಚಿವ ಮಾತ್ರವಲ್ಲ. ಅವರು ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಕೂಡ. ಇನ್ನು ದಲಿತ ಸಮುದಾಯದ ನಾಯಕರಾಗಿದ್ದಾರೆ. ಅಲ್ಲದೆ, ಸಹಜವಾಗಿ ಪಕ್ಷದ ಬೆಳವಣಿಗೆ ಬಗ್ಗೆ ಅವರಿಗೆ ಉಳಿದವರಿಗಿಂತ ಹೆಚ್ಚಿನ ಮಾಹಿತಿ ಇರುತ್ತದೆ ಎಂದು ಸಹಜವಾಗಿ ಎಲ್ಲರಿಗೂ ಅನ್ನಿಸುತ್ತದೆ. ಇನ್ನು ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಪ್ರಿಯಾಂಕ್ ಖರ್ಗೆ ಪ್ರಸ್ತಾಪ ಮಾಡುತ್ತಾ, ಅದು ಅವರ ವೈಯಕ್ತಿಕ ಹೇಳಿಕೆ ಅಷ್ಟೇ ಎಂದು ಉತ್ತರಿಸಿದ್ದಾರೆ. ಎಲ್ಲರಿಗೂ ಅವರವರ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು ಇದೆ ಎಂದು ಹೇಳುವ ಪ್ರಿಯಾಂಕ್, ಎಲ್ಲವೂ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.
ಅಡ್ಡ ಗೋಡೆಯ ಮೇಲೆ ದೀಪ ಇಟ್ಟಿದ್ದರ ಹಿಂದಿನ ಅರ್ಥವೇನು?
ಸಿಎಂ ಯಾರು ಆಗಬೇಕು? ಯಾರು ಮುಂದುವರಿಯಬೇಕು ಎಂಬ ಎಲ್ಲ ತೀರ್ಮಾನವನ್ನೂ ಹೈಕಮಾಂಡ್ ಮಾಡುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಯ ಹಿಂದೆ ಬದಲಾವಣೆ ಆದರೂ ಆಗಬಹುದು ಎಂಬ ಅರ್ಥ ಬರುತ್ತದೆ. ಆದರೆ, ಈ ಸರ್ಕಾರಕ್ಕೆ ಎರಡೂವರೆ ವರ್ಷ ಆಗುವ ಹೊತ್ತಿಗೆ ಕಾಂಗ್ರೆಸ್ ಹೈಕಮಾಂಡ್ ಎಷ್ಟು ಪ್ರಬಲವಾಗಿ ಇರಲಿದೆ ಎಂಬುದರ ಮೇಲೆ ಈ ಎಲ್ಲವೂ ಅವಲಂಬಿತವಾಗಿರುತ್ತದೆ ಎಂಬ ಚರ್ಚೆ ಸಹ ಹುಟ್ಟುಕೊಂಡಿದೆ.
ಹೈಕಮಾಂಡ್ ಸೂಚಿಸಿದರೆ ಸಿಎಂ ಆಗುವೆ!
“ಹೈಕಮಾಂಡ್ ಸೂಚಿಸಿದರೆ ಸಿಎಂ ಆಗುವೆ” ಎಂಬ ಪ್ರಿಯಾಂಕ್ ಖರ್ಗೆ ಅವರ ಇನ್ನೊಂದು ಹೇಳಿಕೆ ಬಗ್ಗೆ ನೋಡುವುದಾದರೆ, ಎಲ್ಲ ತೀರ್ಮಾನವೂ ಹೈಕಮಾಂಡ್‌ನದ್ದಾಗಿದೆ. ಅದು ಸೂಚನೆ ನೀಡಿದರೆ ತಾವು ಹಿಂಜರಿಯುವುದಿಲ್ಲ ಮುಖ್ಯಮಂತ್ರಿ ಗಾದಿಯನ್ನು ಸ್ವೀಕರಿಸುತ್ತೇನೆ ಎಂದು ಪರೋಕ್ಷವಾಗಿ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಇದನ್ನೂ ಓದಿ: Karnataka Politics : ಪರಮೇಶ್ವರ್ ಮುಖ್ಯಮಂತ್ರಿ ಆಗಬೇಕು; ನಾನು ಎಐಸಿಸಿಗೂ ಹೆದರಲ್ಲವೆಂದ ಕೆ.ಎನ್. ರಾಜಣ್ಣ
ರಾಜ್ಯದಲ್ಲಿ ಪ್ರತಿಪಕ್ಷ ಎಲ್ಲಿದೆ ?
ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಪ್ರತಿಪಕ್ಷ ಎಲ್ಲಿದೆ? ಬಿಜೆಪಿ ಲೀಡರ್ ಲೆಸ್, ಜೆಡಿಎಸ್ ಪೀಪಲ್ ಲೆಸ್ ಪಾರ್ಟಿಯಾಗಿದೆ. ಬಿಜೆಪಿ ನಾಯಕರಿಗೆ ರಾಜ್ಯದಲ್ಲಿ ಧ್ವನಿ ಇಲ್ಲದಂತಾಗಿದೆ. ಇಲ್ಲಿ ಕಾಂಗ್ರೆಸ್ ವಿರುದ್ಧ ಘರ್ಜಿಸುವ ಬದಲು ಕೇಂದ್ರ ನಾಯಕರ ಬಳಿ ಘರ್ಜಿಸಿದರೆ ವಿಪಕ್ಷ ಸ್ಥಾನವಾದರೂ ಸಿಗುತ್ತಿತ್ತು ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯ ಮಾಡಿದ್ದಾರೆ.