Site icon Vistara News

MB Patil : ಬೆಂಗಳೂರಿನಲ್ಲಿ 800 ಕೋಟಿ ರೂ. ಹೂಡಲು ಕ್ರಿಪ್ಟನ್ ಸೊಲ್ಯೂಷನ್ಸ್ ಒಲವು: ಎಂ.ಬಿ. ಪಾಟೀಲ್

MB Patil visits america

ಟೆಕ್ಸಾಸ್: ಬೆಂಗಳೂರಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ (Bommasandra Industrial Area) ನೂತನ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (ಪಿಸಿಬಿ) ಉತ್ಪಾದನಾ ಘಟಕವನ್ನು ಆರಂಭಿಸಲು ಅಮೆರಿಕದ ಮುಂಚೂಣಿ ಕಂಪನಿಯಾದ ಕ್ರಿಪ್ಟನ್ ಸೊಲ್ಯೂಷನ್ಸ್ (Krypton Solutions) ಮುಂದೆ ಬಂದಿದ್ದು, 100 ಮಿಲಿಯನ್ ಡಾಲರ್ (million dollars) (800 ಕೋಟಿ ರೂ.) ಬಂಡವಾಳ ಹೂಡಲು ಉತ್ಸಾಹ ತೋರಿದೆ. ಜತೆಗೆ ಈ ಕಂಪನಿಯು ಮೈಸೂರು ಮತ್ತು ಚಾಮರಾಜನಗರದಲ್ಲಿ ಹೂಡಿಕೆಗೆ ಇರುವ ಅವಕಾಶಗಳನ್ನು ಪರಿಶೀಲಿಸಲು ಒಪ್ಪಿಕೊಂಡಿದೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ (MB Patil) ಹೇಳಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಎಂ.ಬಿ. ಪಾಟೀಲ್, ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಸುರೇಶ್ ಪಟೇಲ್ ಮತ್ತು ಇತರ ಉನ್ನತಾಧಿಕಾರಿಗಳೊಂದಿಗೆ ಈ ಸಂಬಂಧ ಸೋಮವಾರ ಚರ್ಚಿಸಲಾಗಿದೆ. ಅದು ಸ್ಥಳೀಯ ಸಹಭಾಗಿತ್ವಕ್ಕೆ ಆಸಕ್ತಿ ಹೊಂದಿದ್ದು, ಕೌಶಲ್ಯಪೂರ್ಣ ಮಾನವ ಸಂಪನ್ಮೂಲದ ಖಾತ್ರಿಯನ್ನು ನಮ್ಮಿಂದ ಬಯಸಿದೆ ಎಂದು ಹೇಳಿದ್ದಾರೆ.

ಕಂಪನಿಯು ಟೆಕ್ಸಾಸ್‌ನಲ್ಲಿ ಹೊಂದಿರುವ 40 ಸಾವಿರ ಚದರ ಮೀಟರ್ ವಿಸ್ತೀರ್ಣದ ಉತ್ಪಾದನಾ ಘಟಕಕ್ಕೂ ಈ ಸಂದರ್ಭದಲ್ಲಿ ಭೇಟಿ ನೀಡಿದ್ದು, ಅಲ್ಲಿರುವ ಸೌಲಭ್ಯಗಳನ್ನು ವೀಕ್ಷಿಸಲಾಗಿದೆ. ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದೆಬಂದರೆ, ಅಗತ್ಯ ಸೌಲಭ್ಯಗಳನ್ನು ತ್ವರಿತ ಗತಿಯಲ್ಲಿ ಒದಗಿಸಲಾಗುವುದು. ಈ ಸಂಬಂಧದ ಪ್ರಾಥಮಿಕ ಚರ್ಚೆ ಈಗಾಗಲೇ ಮುಗಿದಿದೆ ಎಂದು ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ.

MB Patil visits america

ಇದೇ ಸಂದರ್ಭದಲ್ಲಿ, ಸೆಮಿಕಂಡಕ್ಟರ್ ಕ್ಷೇತ್ರದ ದೈತ್ಯ ಕಂಪನಿ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಜತೆಗೂ ಮಾತುಕತೆ ನಡೆಸಲಾಗಿದೆ. ಅದು ಬೆಂಗಳೂರಿನಲ್ಲಿರುವ ತನ್ನ ಆರ್ & ಡಿ ಕೇಂದ್ರದ ಚಟುವಟಿಕೆಯನ್ನು ವಿಸ್ತರಿಸುವ ಬದ್ಧತೆಯನ್ನು ತೋರಿದೆ. ಅಮೆರಿಕದ ಆಚೆಗೆ ಕಂಪನಿಯು ಹೊಂದಿರುವ ಅತಿದೊಡ್ಡ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರವಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ್‌ ಮಾಹಿತಿ ನೀಡಿದ್ದಾರೆ.

ಸಂಶೋಧನೆ ಬಗ್ಗೆ ಚರ್ಚೆ

ಈ ಸಭೆಯಲ್ಲಿ ಅನಲಾಗ್ ಮತ್ತು ಎಂಬೆಡೆಡ್ ಸೆಮಿಕಂಡಕ್ಟರ್ ಕುರಿತ ಸಂಶೋಧನೆಯನ್ನು ಕೈಗೆತ್ತಿಕೊಳ್ಳುವ ಬಗ್ಗೆಯೂ ಚರ್ಚಿಸಲಾಗಿದೆ. ಇದಕ್ಕೆ ಬೆಂಗಳೂರಿನ ವೈಟ್ ಫೀಲ್ಡಿನಲ್ಲಿರುವ ಸೆಮಿಕಂಡಕ್ಟರ್ ಸೂಕ್ತ ಸ್ಥಳವಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಜತೆಗೆ ಹೂಡಿಕೆಗೆ ಇರುವ ಅಡಚಣೆಗಳನ್ನು ನಿವಾರಿಸಲು ರಾಜ್ಯ ಸರ್ಕಾರ ಹೊಂದಿರುವ ಬದ್ಧತೆಯನ್ನು ಅವರಿಗೆ ತಿಳಿಸಲಾಗಿದೆ. ಭೇಟಿಯ ಸಂದರ್ಭದಲ್ಲಿ ಕಂಪನಿಯು ಹೊಂದಿರುವ 300 ಎಂಎಂ ವೇಫರ್ ಫ್ಯಾಬ್ ಉತ್ಪಾದನಾ ಘಟಕವನ್ನು ವೀಕ್ಷಿಸಲಾಯಿತು ಎಂದು ಸಚಿವ ಎಂ.ಬಿ. ಪಾಟೀಲ್‌ ವಿವರಿಸಿದ್ದಾರೆ.

ಮೇಲಿನ ಕಂಪನಿಗಳ ಜತೆಗೆ, ಟೆಕ್ಸಾಸ್‌ನಲ್ಲೇ ಕೇಂದ್ರ ಕಚೇರಿ ಹೊಂದಿರುವ ಇ.ಆರ್.ಪಿ. ಲಾಜಿಕ್ ಕಂಪನಿಯೊಂದಿಗೂ ಚರ್ಚಿಸಲಾಯಿತು. ಸ್ಯಾಪ್ ಕೌಶಲ್ಯದಲ್ಲಿ ಪರಿಣತಿ ಹೊಂದಿರುವ ಅದು ಬೆಂಗಳೂರಿನ ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ಕೆಲಸ ಮಾಡುವ ಉತ್ಸಾಹ ತೋರಿಸುತ್ತಿದೆ. ಈ ಕಂಪನಿಯು ಈಗಾಗಲೇ ಹೈದರಾಬಾದ್, ಚೆನ್ನೈ, ಸೇಲಂ ಮುಂತಾದ ಕಡೆ ಸಕ್ರಿಯವಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ.

ಮಾತುಕತೆಯಲ್ಲಿ ಕ್ರಿಪ್ಟನ್ ಕಂಪನಿಯ ಪರವಾಗಿ ಸಿಒಒ ದೀಪಕ್ ಪಟೇಲ್, ಸಿಎಂಒ ಮಹೇಶ್ ಪಟೇಲ್, ಉಪಾಧ್ಯಕ್ಷ ಮುಕೇಶ್ ಪಟೇಲ್, ಆನಂದ್ ಪಟೇಲ್, ಹಿತೇಶ್ ಭಕ್ತಾ, ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಕಂಪನಿಯ ಪರವಾಗಿ ಜನರಲ್ ಮ್ಯಾನೇಜರ್ ಅಮಿಚಾಯ್ ರೋನ್, ಉಪಾಧ್ಯಕ್ಷ ಸ್ಟೀವ್ ಬೋನರ್, ಇಆರ್ ಪಿಎಲ್ ಪರವಾಗಿ ಕಣ್ಣನ್ ಶ್ರೀನಿವಾಸನ್ ಭಾಗವಹಿಸಿದ್ದರು.

ಇದನ್ನೂ ಓದಿ: ST Reservation : ಎಸ್‌ಟಿಗೆ ಕುರುಬ ಸಮುದಾಯವನ್ನು ಸೇರ್ಪಡೆ ಮಾಡಬೇಕಿರುವುದು ಕೇಂದ್ರ: ಸಿಎಂ ಸಿದ್ದರಾಮಯ್ಯ

ರಾಜ್ಯ ಸರ್ಕಾರದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಐಟಿ ಇಲಾಖೆ ಕಾರ್ಯದರ್ಶಿ ಏಕ್ ರೂಪ್ ಕೌರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಇದ್ದರು.

Exit mobile version