ದಾವಣಗೆರೆ: ರಾಜ್ಯದಲ್ಲಿ ಕೋಮುವಾದಿ ಸರ್ಕಾರವಿದೆ ಎಂದು ಆರೋಪಿಸುತ್ತಲೇ, ಆರ್‌ಎಸ್ಎಸ್ ಹಾಗೂ ಹಿಟ್ಲರ್ ಸಿದ್ಧಾಂತಗಳು ಸಮಾನವಾದವು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನೇರ ವಾಗ್ದಾಳಿ ನಡೆಸಿದರು.
ತಮ್ಮ 75ನೇ ವರ್ಷದ ಪ್ರಯುಕ್ತ ದಾವಣಗೆರೆಯಲ್ಲಿ ಆಯೋಜನೆ ಮಾಡಲಾಗಿದ್ದ ಬೃಹತ್ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ನೆರೆದಿದ್ದ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದರು.
ಸಂವಿಧಾನ ಉಳಿದರೆ ಮಾತ್ರವೇ ನಾವೆಲ್ಲರೂ, ದಲಿತರು, ಹಿಂದುಳಿದವರು, ರೈತರು ಉಳಿಯಲು ಸಾಧ್ಯವಾಗುತ್ತದೆ. ಆದ್ಧರಿಂದ, ಸಂವಿಧಾನವನ್ನು ಉಳಿಸುವುದು ಕಾಂಗ್ರೆಸಿಗರ ಕರ್ತವ್ಯ. ಸೋನಿಯಾ ಗಾಂಧಿಯವರು ತಮಗೆ ಪ್ರಧಾನಮಂತ್ರಿ ಪಟ್ಟ ಬೇಡ ಎಂದು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಮನಮೋಹನ್ ಸಿಂಗ್ ಅವರಂತಹ ಆರ್ಥಿಕ ತಜ್ಞರನ್ನು ಪ್ರಧಾನಿ ಮಾಡಿದ್ದಾರೆ. ಈ ಸಮಯದಲ್ಲಿ ಅನೇಕ ಉತ್ತಮ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ. ನಮ್ಮ ದೇಶದಲ್ಲಿ ಶಿಕ್ಷಣ ಆಹಾರ ಹಕ್ಕುಗಳು ಜಾರಿಯಾಗಲು ಕಾಂಗ್ರೆಸ್ ಕಾರಣ.
ಬಿಜೆಪಿ ಸರ್ಕಾರ ಮೂರು ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದು, ಚಳವಳಿ ನಂತರ ಅನಿವಾರ್ಯವಾಗಿ ಹಿಂಪಡೆಯಿತು. ನಮ್ಮ ಸರ್ಕಾರದಲ್ಲಿ ಕರ್ನಾಟಕ ಸರ್ಕಾರ ಆರ್ಥಿಕವಾಗಿ ಸದೃಢವಾಗಿತ್ತು. ಆದರೆ ಬಿಜೆಪಿ ಆಡಳಿತದಲ್ಲಿ ಸಾಲ ಹೆಚ್ಚಾಗಿದೆ.
ಇದನ್ನೂ ಓದಿ | Video | ಸಿದ್ದರಾಮಯ್ಯ @75: ಸಿದ್ದರಾಮೋತ್ಸವಕ್ಕೂ ಮುನ್ನ ಒಂದು ಸಿಪ್ ಬಿಯರ್
ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟಿದ್ದರಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಪಾತ್ರ ಏನೂ ಇಲ್ಲ ಎಂದು ಪುನರುಚ್ಛರಿಸಿದ ಸಿದ್ದರಾಮಯ್ಯ, ಅವರು ಅಧಿಕಾರಕ್ಕೆ ಬಂದಿರುವುದು ಹಿಂದು ರಾಷ್ಟ್ರ ನಿರ್ಮಾಣ ಮಾಡಬೇಕು, ಲೂಟಿ ಮಾಡಬೇಕು, ದೇಶದ ಸಂವಿಧಾನವನ್ನು ಬುಡಮೇಲು ಮಾಡಬೇಕು, ಸರ್ವಾಧಿಕಾರವನ್ನು ತರಬೇಕು ಎಂಬ ಉದ್ದೇಶದಿಂದ. ನರೇಂದ್ರ ಮೋದಿ ಹಾಗೂ ಬಿಜೆಪಿಯವರೇ ಕೇಳಿ. ನೀವು ಎಂದೆಂದಿಗೂ ಕಾಂಗ್ರೆಸನ್ನು ಮುಗಿಸಲು ಸಾಧ್ಯವಿಲ್ಲ. ನಿಮ್ಮ ಕನಸು ಎಂದಿಗೂ ನನಸಾಗುವುದಿಲ್ಲ ಎಂದರು.
ಆರ್‌ಎಸ್‌ಎಸ್‌ನವರು ಒಂದು ನಾಯಕತ್ವ, ಒಂದು ಚಿಹ್ನೆ, ಒಂದು ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿರುವವರು. ಇದನ್ನೇ ಹಿಟ್ಲರ್ ಕೂಡ ನಂಬಿಕೊಂಡಿದ್ದ. ಇಂದು ಅದೇ ರೀತಿಯ ಹಿಟ್ಲರ್ ಅಧಿಕಾರವನ್ನು ಜಾರಿ ಮಾಡಲು ಬಿಜೆಪಿಯವರು ಮುಂದಾಗಿದ್ದಾರೆ.
ನನ್ನ 44ವರ್ಷದ ಸಕ್ರಿಯ ರಾಜಕಾರಣದಲ್ಲಿ, ಈಗಿರುವಂತಹ ಬಿಜೆಪಿ ಸರ್ಕಾರದಷ್ಟು ಭ್ರಷ್ಟ, ಕೋಮುವಾದಿ ಸರ್ಕಾವನ್ನು ನೋಡಿರಲಿಲ್ಲ. ನನಗೆ ಹುಟ್ಟುಹಬ್ಬದ ಶುಭ ಕೋರುವುದರ ಮೂಲಕ, ಈ ಕೋಮುವಾದಿ ಸರ್ಕಾರವನ್ನು ಕಿತ್ತೊಗೆಯುತ್ತೇವೆ ಎಂದು ಶಪಥ ಮಾಡಬೇಕು. ಇವತ್ತು ನಮ್ಮ ಮುಂದಿರುವ ಸವಾಲು ಎಂದರೆ, ಕರ್ನಾಟಕದಲ್ಲಿರುವ ಭ್ರಷ್ಟ, ಜನಪೀಡಕ ಹಾಗೂ ಕೋಮುವಾದಿ ಸರ್ಕಾರವನ್ನು ಕಿತ್ತೊಗೆದು ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಅದಕ್ಕೆ ಕರ್ನಾಟಕದ ಜನರ ಆಶೀರ್ವಾದ ಬೇಕು ಎಂದು ಕೋರಿದರು.
ಇದನ್ನೂ ಓದಿ | ಕಾಂಗ್ರೆಸ್ ಮುಕ್ತ ಭಾರತ ಸಾಧ್ಯವಿಲ್ಲ: ಬಿಜೆಪಿ, ನರೇಂದ್ರ ಮೋದಿಗೆ ಸಿದ್ದರಾಮಯ್ಯ ನೇರ ಸವಾಲು