ಬೆಂಗಳೂರು: ಅತಿ ಭದ್ರತೆಯ ನೂತನ ಸಂಸತ್ ಭವನದಲ್ಲಿ (New Parliament Building) ಲೋಕಸಭಾ ಕಲಾಪ ನಡೆಯುತ್ತಿರುವಾಗಲೇ ಭದ್ರತೆಯನ್ನು ಭೇದಿಸಿ ಇಬ್ಬರು ಒಳಪ್ರವೇಶಿಸಿದ್ದಲ್ಲದೆ (Security breach in Loksabha), ಕಲರ್ ಬಾಂಬ್ ಸಿಡಿಸಿದ ಘಟನೆಯ ಬಳಿಕ ದೇಶದಲ್ಲಿ ಎರಡು ವಿಚಾರಗಳು ಗಂಭೀರವಾಗಿ ಚರ್ಚೆಗೆ ಒಳಗಾಗಿವೆ. ಒಂದು ಗ್ಯಾಲರಿಯಿಂದ ಕಲಾಪ ಪ್ರದೇಶಕ್ಕೆ ಜಿಗಿದು ಮೇಜುಗಳ ಮೇಲೆ ಜಿಗಿಯುತ್ತಾ ಸಾಗಿದ ಸಾಗರ್ ಶರ್ಮಾ ಎಂಬ ಹರ್ಯಾಣದ ದುಷ್ಕರ್ಮಿಗೆ ಸಂಸತ್ ಪ್ರವೇಶಕ್ಕೆ ಪಾಸ್ ನೀಡಿದ ಮೈಸೂರಿನ ಸಂಸದ ಪ್ರತಾಪ್ ಸಿಂಹ (MP Pratapsimha) ಅವರ ಬಗ್ಗೆ, ಇನ್ನೊಂದು ಲೋಕಸಭೆಯಲ್ಲಿ ಸಂಸದರಿಗೇ ಭದ್ರತೆ ನೀಡಲಾಗದು ಚೌಕಿದಾರರು ದೇಶ ಕಾಯುವರೇ ಎಂಬ ಪ್ರಶ್ನೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಚುಚ್ಚುವ ಪ್ರಯತ್ನ.
ದೇಶಾದ್ಯಂತ ಮಾಧ್ಯಮಗಳು ದುಷ್ಕರ್ಮಿಯ ಸಂಸತ್ ಪ್ರವೇಶಕ್ಕೆ ಪಾಸ್ ನೀಡಿದ ಪ್ರತಾಪ್ ಸಿಂಹ ಅಂದರೆ ಯಾರು ಎಂದು ಜಾಲಾಡುತ್ತಾ ಮಾಹಿತಿ ಒದಗಿಸುತ್ತಿವೆ. ಆ ಮಟ್ಟಿಗೆ ಪ್ರತಾಪ್ ಸಿಂಹ ಅವರು ಚರ್ಚೆಯ ವಸ್ತುವಾಗಿದ್ದಾರೆ. ಶಶಿ ತರೂರ್ ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರಂತೂ ಪ್ರತಾಪ್ ಸಿಂಹ ಅವರನ್ನು ಸಂಸತ್ ಸದಸ್ಯತ್ವದಿಂದ ಪದಚ್ಯುತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಮಧ್ಯ ಕರ್ನಾಟಕ ಕಾಂಗ್ರೆಸ್ ಮೋದಿ ಮತ್ತು ಪ್ರತಾಪ್ ಸಿಂಹ ಅವರನ್ನು ಟಾರ್ಗೆಟ್ ಮಾಡಿಕೊಂಡು ಸರಣಿ ಪೋಸ್ಟ್ಗಳನ್ನು ಹಾಕಿದೆ. ಇದರಲ್ಲಿ ಪುಲ್ವಾಮಾ ಉಗ್ರದಾಳಿಯೂ ಸೇರಿದಂತೆ ಹಲವು ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಮತ್ತು 2001ರಲ್ಲಿ ಉಗ್ರ ದಾಳಿ ನಡೆದಾಗಲೂ ಬಿಜೆಪಿ ಸರ್ಕಾರವಿತ್ತು, ಈಗಲೂ ಬಿಜೆಪಿ ಸರ್ಕಾರವಿರುವಾಗಲೇ ಈ ರೀತಿಯ ದಾಳಿ ನಡೆದಿದೆ ಎಂದು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Security breach in Lok Sabha: ಲೋಕಸಭೆಗೆ ನುಗ್ಗಿದವರನ್ನು ಹಿಗ್ಗಾಮುಗ್ಗಾ ಥಳಿಸಿದ ಸಂಸದರು!
ಕಾಂಗ್ರೆಸ್ ತನ್ನ ಪೋಸ್ಟ್ಗಳಲ್ಲಿ ಹೇಳಿದ್ದೇನು?
- 1300 ಕೆಜಿ RDX ಯಾವುದೇ ಅಡೆತಡೆ ಇಲ್ಲದೆ ಕಾಶ್ಮೀರದೊಳಗೆ ಬರುತ್ತದೆ.
- ಸ್ಪೋಟಕ ವಸ್ತು ಯಾವುದೇ ಅಡೆತಡೆ ಇಲ್ಲದೆ ಸಂಸತ್ತಿನೊಳಗೆ ಬರುತ್ತದೆ.
- ಸಂಸತ್ತನ್ನೇ ಕಾಯಲಾಗದ ಚೌಕಿದಾರ್ ನಿಗೆ ದೇಶ ಕಾಯಲು ಸಾಧ್ಯವೇ?
- ಈ ಮಟ್ಟಿಗೆ ಭದ್ರತಾ ಲೋಪವಾಗಿದ್ದು ಹೇಗೆ? ಯಾಕೆ?
- ಈ ಸಂಸತ್ ದಾಳಿಯ ಹಿಂದೆ ಪ್ರತಾಪ್ ಸಿಂಹರದ್ದು ಪ್ರಮುಖ ಪಾತ್ರವಿದೆ.
- ಹಿಂದೆ 2001ರಲ್ಲಿ ಇದೇ ದಿನ ಸಂಸತ್ ಭವನದ ಮೇಲೆ ಉಗ್ರರ ದಾಳಿಯಾಗಿತ್ತು, ಆಗಲೂ ಬಿಜೆಪಿ ಆಡಳಿತವಿತ್ತು. ಈಗ ಸಂಸತ್ ಭವನದ ಒಳಗೆಯೇ ಭದ್ರತಾ ಲೋಪವಾಗಿದೆ.
- ಪುಲ್ವಾಮದಲ್ಲಿ ಯೋಧರನ್ನು ರಕ್ಷಿಸಲಾಗಲಿಲ್ಲ, ಸಂಸತ್ತಿನಲ್ಲಿ ಸಂಸದರನ್ನೂ ರಕ್ಷಿಸಲು ವಿಫಲವಾಗಿದೆ.
- ಈ ದಾಳಿಯಲ್ಲಿ ಪ್ರತಾಪ್ ಸಿಂಹರ ಹೆಸರು ಮೇಲ್ನೋಟದಲ್ಲೇ ಕಂಡುಬಂದಿದೆ. ಸ್ಪೀಕರ್ Om Birla ಅವರು ಸಂಸದ ಪ್ರತಾಪ್ ಸಿಂಹ ಅವರನ್ನು ಈ ಕೂಡಲೇ ಸಂಸತ್ ಸದಸ್ಯ ಸ್ಥಾನದಿಂದ ವಜಾಗೊಳಿಸಿ, ತನಿಖೆ ನಡೆಸಬೇಕು.
- ಸಂಸತ್ತಿಗೆ ನುಗ್ಗಿದ ಘಾತುಕರು ಪಾಸ್ ಪಡೆದಿದ್ದು ಪ್ರತಾಪ್ ಸಿಂಹ ಅವರಿಂದ.
- ಈ ದಾಳಿಕೊರರು ಪ್ರತಾಪ್ ಸಿಂಹ ಅವರ ಆಪ್ತ ವಲಯದವರೇ?
- ಪ್ರತಾಪ್ ಸಿಂಹರಿಂದಲೂ ಈ ದಾಳಿಯ ಷಡ್ಯಂತ್ರ ನಡೆದಿತ್ತೇ?
ಈ ಎಲ್ಲಾ ಸಂಗತಿಗಳ ತನಿಖೆ ನಡೆಸಲು ಇದುವರೆಗೂ ಪ್ರತಾಪ್ ಸಿಂಹ ಅವರನ್ನು ವಶಕ್ಕೆ ಪಡೆದಿಲ್ಲವೇಕೆ?
ದೇಶದಲ್ಲಿ ಭದ್ರತಾ ಲೋಪವಷ್ಟೇ ಅಲ್ಲ, ತನಿಖೆಯ ಲೋಪವೂ ನಡೆಯುತ್ತಿರುವುದೇಕೆ?
ಹೀಗೆ ಕಾಂಗ್ರೆಸ್ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದೆ.