Site icon Vistara News

ಎಬಿವಿಪಿ-ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ ಆತಂಕ: ಬಿಜೆಪಿ ಕಚೇರಿಗೆ ಭದ್ರತೆ; ಸಿಎಂ ಗರಂ

ABVP Protest

ಬೆಂಗಳೂರು: ರಾಜ್ಯದಲ್ಲಿ ಹಿಂದು ಕಾರ್ಯಕರ್ತರ ಹತ್ಯೆ ನಂತರ ಬಿಜೆಪಿ ಕಾರ್ಯಕರ್ತರಲ್ಲಿ ಆಕ್ರೋಶ ಹೆಚ್ಚಳವಾಗಿರುವುದರಿಂದ ರಾಜ್ಯ ಬಿಜೆಪಿ ಕಚೇರಿ ಸೇರಿ ಬಿಜೆಪಿ ಜನಪ್ರತಿನಿಧಿಗಳ ಮನೆಗೂ ಭದ್ರತೆ ಹೆಚ್ಚಿಸಲಾಗಿದೆ. ಶನಿವಾರ ಬೆಳಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮನೆಗೇ ನುಗ್ಗಿ ಎಬಿವಿಪಿ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಇದರಿಂದ ರಾಜ್ಯ ಸರ್ಕಾರದಲ್ಲಿ ಆತಂಕ ಹೆಚ್ಚಾಗಿದೆ. ತಮ್ಮದೇ ಸಿದ್ಧಾಂತದ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿರುವುದು ಗಂಭೀರ ಎಂದು ಪರಿಗಣಿಸಲಾಗಿದೆ. ಸಂಸದ ಸದಾನಂದಗೌಡ ಮನೆಯೆದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ಕಾರಣಕ್ಕೆ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಭದ್ರತೆಯನ್ನು ಹೆಚ್ಚಳ ಮಾಡಲಾಗಿದೆ.

ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿ ಇದ್ದಿದ್ದರೆ ಕಲ್ಲು ಹೊಡೆಯಬಹುದಾಗಿತ್ತು ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಮನೆಯ ಬಳಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಇದಕ್ಕಾಗಿ ಅಲ್ಲಿಯೂ ಭದ್ರತೆ ಹೆಚ್ಚಳ ಮಾಡಲಾಗಿದೆ. ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ | Praveen Nettaru | ಗೃಹ ಸಚಿವರ ಮನೆಗೆ ಎಬಿವಿಪಿ ಕಾರ್ಯಕರ್ತರ ಮುತ್ತಿಗೆ, ರಾಜೀನಾಮೆಗೆ ಒತ್ತಾಯ

ರಾಜ್ಯದಲ್ಲಿ ಗುಪ್ತಚರ ಇಲಾಖೆ ಏನಾಗಿದೆ? ಸಿಎಂ ಆಕ್ರೋಶ

ಬೆಂಗಳೂರಿನ ವಿವಿಧೆಡೆ ಪ್ರತಿಭಟನೆಗಳು ನಡೆದು, ಸ್ವತಃ ಗೃಹಸಚಿವರ ಮನೆಯೊಳಕ್ಕೇ ಪ್ರತಿಭಟನಾಕಾರರು ನುಗ್ಗಿರುವುದು ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟುಮಾಡಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡಲೆ ತಮ್ಮ ನಿವಾಸದಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ಕರೆದಿದ್ದಾರೆ.

ಡಿಜಿಪಿ ಪ್ರವೀಣ್ ಸೂದ್ ಮತ್ತು ನಗರ ಪೊಲೀಸ್ ಕಮಿಷನರ್ ಪ್ರತಾಪ್‌ ರೆಡ್ಡಿ ಹಾಗು ಗುಪ್ತಚರ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಕರಾವಳಿಯಲ್ಲಿ ನಡೆದ ಸರಣಿ ಹತ್ಯೆಗಳ ತನಿಖಾ ಪ್ರಗತಿ ಬಗ್ಗೆ ಮಾಹಿತಿ ಪಡೆದ ಸಿಎಂ, ಬೆಳ್ಳಂಬೆಳಗ್ಗೆ ಗೃಹ ಸಚಿವರು ಮತ್ತು ಸದಾನಂದ ಗೌಡರ ಮನೆಗೆ ಬಿಜೆಪಿ ಹಾಗೂ ಎಬಿವಿಪಿ ಕಾರ್ಯಕರ್ತರ ಮುತ್ತಿಗೆ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಅಸಮಾಧಾನಗೊಂಡ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಗುಪ್ತಚರ ಇಲಾಖೆ ಏನಾಗಿದೆ? ಗೃಹ ಸಚಿವರ ಮನೆಗೆ ನುಗ್ಗಿ ಗಲಾಟೆ ಮಾಡುವುದರ ಮಾಹಿತಿ ಇರಲಿಲ್ಲವೇ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ನಿಮಗೆ ಮಾಹಿತಿಯೇ ಇರಲಿಲ್ಲ ಎಂದರೆ ಏನರ್ಥ? ಗೃಹ ಸಚಿವರ ಮನೆಗೆ ಭದ್ರತೆ ಇಲ್ಲ ಎಂದ ಮೇಲೆ ರಾಜ್ಯದ ಜನರನ್ನೇನು ಕಾಪಾಡುತ್ತೀರ? ಎಂದು ಪೊಲೀಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ ಎಂದು ಮೂಲಗಳೂ ಹೇಳಿವೆ.

Exit mobile version