Site icon Vistara News

Sedition case: FSL ವರದಿ ಬಂದಿದೆ, ಪಾಕ್‌ ಪರ ಘೋಷಣೆ ದೃಢಗೊಂಡಿದೆ! ಸರ್ಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ

Sedition case FSL report arrives pro Pakistan slogans confirmed BJP accuses Congress

ಬೆಂಗಳೂರು: ವಿಧಾನಸೌಧದೊಳಗೆ ನೂತನ ರಾಜ್ಯಸಭಾ ಸದಸ್ಯ ನಾಸಿರ್‌ ಹುಸೇನ್‌ ಬೆಂಬಲಿಗರು ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗಿ 60 ಗಂಟೆ ದಾಟಿದರೂ ರಾಜ್ಯ ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ. ದೇಶದ್ರೋಹದ ಪ್ರಕರಣದ (Sedition case) ಬಗ್ಗೆ ಏಕೆ ಈ ನಿರ್ಲಕ್ಷ್ಯ? ಈಗಾಗಲೇ ರಾಜ್ಯ ಸರ್ಕಾರಕ್ಕೆ ಎಫ್‌ಎಸ್‌ಎಲ್‌ ವರದಿ ಇವರ ಕೈಸೇರಿದೆ. ಪಾಕ್ ಪರ ಘೋಷಣೆಯ ವಿಚಾರವೂ ದೃಢೀಕರಣಗೊಂಡಿದೆ ಎಂಬ ಮಾಹಿತಿ ನಮಗೆ ಲಭಿಸಿದೆ. ಅಷ್ಟಾದರೂ ಬಂಧನ ನಡೆದಿಲ್ಲ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯದ ಜನರನ್ನು ತಪ್ಪು ದಾರಿಗೆ ಎಳೆಯಲು ಮತ್ತು ಜನತೆಗೆ ಸುಳ್ಳು ಮಾಹಿತಿ ನೀಡಲು ಇಡೀ ಸದನವನ್ನು ಸರ್ಕಾರ ಬಳಸಿಕೊಂಡಿತ್ತು. ಕೆಂಗಲ್ ಹನುಮಂತಯ್ಯ ಅವರು ನಿರ್ಮಿಸಿದ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ. ಕನಿಷ್ಠ 48 ಗಂಟೆ ದಾಟಿ ಈಗ 60 ಗಂಟೆ ಆಗಿದ್ದರೂ ಕೂಡ ಅಧಿಕೃತವಾಗಿ ಬಂಧನವಾದ ಬಗ್ಗೆ ಸರ್ಕಾರ ಒಂದು ಮಾಹಿತಿಯನ್ನೂ ಕೊಟ್ಟಿಲ್ಲ ಎಂದು ಟೀಕಿಸಿದರು.

ಇದನ್ನೂ ಓದಿ: Caste Census Report: ಜಾತಿಗಣತಿ ವರದಿಗೆ ಶಾಮನೂರು ಕೆಂಡಾಮಂಡಲ; ಖಾಸಗಿ ಸರ್ವೇ ಮಾಡಿಸುವ ಎಚ್ಚರಿಕೆ!

ದೇಶದ್ರೋಹಿಗಳಿಗೆ ಸರ್ಕಾರದ ಬೆಂಬಲ

ಅದರ ಬದಲಾಗಿ ಆ ದೇಶದ್ರೋಹಿಗಳಿಗೆ ಪರೋಕ್ಷವಾಗಿ ಬೆಂಬಲ ಕೊಡುವ ಎಲ್ಲ ಕೆಲಸಗಳನ್ನು ಸಿಎಂ ಸಿದ್ದರಾಮಯ್ಯ, ಗೃಹ ಸಚಿವರು ಮತ್ತು ಇಡೀ ಸಚಿವ ಸಂಪುಟ ಮಾಡುತ್ತಿದೆ. ಇದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.

ಈ ರಾಷ್ಟ್ರ ವಿರೋಧಿ ಕೃತ್ಯಗಳ ಕುರಿತು ನಿಮ್ಮ ಕ್ರಮ ಏನು ಎಂದು ಪ್ರಶ್ನಿಸಿದರೆ, ದೇಶ ಮೊದಲು ಎಂಬುದನ್ನು ನೀವು ಅರ್ಥ ಮಾಡಿಕೊಳ್ಳುತ್ತಿಲ್ಲ. ಪಾಕಿಸ್ತಾನ ನಮ್ಮ ನೆರೆರಾಷ್ಟ್ರ, ಶತ್ರು ರಾಷ್ಟ್ರವಲ್ಲ ಎಂದು ಹೇಳುತ್ತಾರೆ. ಪಾಕಿಸ್ತಾನ ನಮ್ಮ ನೆರೆರಾಷ್ಟ್ರ ಹೌದು. ಆದರೆ, ಇಲ್ಲಿನವರೆಗೆ ಭಯೋತ್ಪಾದನೆಯನ್ನು ಬೆಂಬಲಿಸಿ ನಮ್ಮ ರಾಷ್ಟ್ರದ ಒಟ್ಟು ಅಭಿವೃದ್ಧಿಯನ್ನು ಮತ್ತು ದೇಶದ ಕಾನೂನು- ಸುವ್ಯವಸ್ಥೆಯನ್ನು ಹಾಳು ಮಾಡುವ ಹಾಗೂ ರಾಷ್ಟ್ರಭಕ್ತರನ್ನು ಹತ್ಯೆ ಮಾಡುವ ಪಾಕಿಸ್ತಾನಕ್ಕೆ ಪರೋಕ್ಷ ಬೆಂಬಲ ನೀಡುವುದು ಸರಿಯೇ? ಪಾಕ್ ಪರ ಘೋಷಣೆ ಕೂಗಿರುವವರನ್ನು ರಕ್ಷಿಸುವ ಸಿದ್ದರಾಮಯ್ಯ ಅವರ ಸರ್ಕಾರದ ಕ್ರಮವನ್ನು ಖಂಡಿಸಿದ್ದೇವೆ. ಇದರ ವಿರುದ್ಧ ರಾಜ್ಯಪಾಲರ ಬಳಿ ತೆರಳಿ ದೂರು ಕೊಟ್ಟಿದ್ದೇವೆ ಎಂದು ಕೋಟ ಶ್ರೀನಿವಾಸ್‌ ಪೂಜಾರಿ ಹೇಳಿದರು.

ರಾಜ್ಯಪಾಲರಿಂದ ಕ್ರಮದ ಭರವಸೆ

ಘನತೆವೆತ್ತ ರಾಜ್ಯಪಾಲರು ಬಹಳ ಸಹಾನುಭೂತಿಯಿಂದ ಮಾತುಗಳನ್ನು ಕೇಳಿದ್ದಾರೆ. ವಿಧಾನಸೌಧದಲ್ಲೇ ಭಾರತ ವಿರೋಧಿ ಘೋಷಣೆ ಕೂಗಿದ್ದರ ಕುರಿತು ಅಚ್ಚರಿ ವ್ಯಕ್ತಪಡಿಸಿದ್ದಾರೆ. ತನಿಖೆ ಮಾಡಿ ಕ್ರಮ ಕೈಗೊಳ್ಳುವ ಕುರಿತು ಪರಿಶೀಲಿಸುವುದಾಗಿ ವಿಶ್ವಾಸದ ಮಾತನ್ನಾಡಿದ್ದು ನಮಗೆ ತೃಪ್ತಿ ತಂದಿದೆ ಎಂದು ಕೋಟ ಶ್ರೀನಿವಾಸ್‌ ಪೂಜಾರಿ ವಿವರಿಸಿದರು.

ಏಕೆ ಬಂಧಿಸಿಲ್ಲ

ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಸರ್ಕಾರದ ಕೈಸೇರಿದೆ. ಪಾಕ್ ಪರ ಘೋಷಣೆಯ ವಿಚಾರವೂ ದೃಢೀಕರಣಗೊಂಡಿದೆ ಎಂಬ ಮಾಹಿತಿ ಲಭಿಸಿದೆ. ಅಷ್ಟಾದರೂ ಬಂಧನ ನಡೆದಿಲ್ಲ. ರಾಜ್ಯಸಭಾ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಗೆಲುವನ್ನು ಕಂಡ ನಾಸಿರ್ ಹುಸೇನ್ ಎಂಬ ಸದಸ್ಯರು ಮಾಧ್ಯಮದವರಿಗೆ ಬೆದರಿಕೆ ಹಾಕುವ ಮಟ್ಟಕ್ಕೆ ಬಂದಾಗಲೂ ಕೂಡ ಸರ್ಕಾರ ನಿಷ್ಕ್ರಿಯವಾಗಿತ್ತು. ಇದನ್ನು ನೋಡಿದರೆ, ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ಜತೆ ಪತ್ರಿಕಾರಂಗವನ್ನು ಕೂಡ ದಬ್ಬಾಳಿಕೆ ಮೂಲಕ ಪ್ರತಿಬಂಧಿಸುವ, ತುರ್ತು ಪರಿಸ್ಥಿತಿಯ ಆಡಳಿತ ಮತ್ತೊಮ್ಮೆ ಕರ್ನಾಟಕದಲ್ಲಿ ಬರುವ ವಾತಾವರಣ ನಿರ್ಮಾಣವಾಗಿದೆ ಎಂದು ಕೋಟ ಶ್ರೀನಿವಾಸ್‌ ಪೂಜಾರಿ ವಿಶ್ಲೇಷಿಸಿದರು.

ಮುಖ್ಯಮಂತ್ರಿಯವರು ನಿನ್ನೆ ಅಕ್ಕಿ ಮಾರಾಟಗಾರರು ಮತ್ತು ಅನ್ನಭಾಗ್ಯ ಪ್ರಯೋಜನದಾರರ ಸಭೆ ನಡೆಸಿದ್ದಾರೆ. ಕರ್ನಾಟಕಕ್ಕೆ ಕೇಂದ್ರ ಬಿಜೆಪಿ ಸರ್ಕಾರದಿಂದ ಪ್ರತಿ ತಿಂಗಳು 22 ಲಕ್ಷ ಕ್ವಿಂಟಾಲ್ ಅಕ್ಕಿ ಬರುತ್ತದೆ. ಬಿಪಿಎಲ್ ಪಡಿತರ ಚೀಟಿಯವರಿಗೆ 5 ಕೆಜಿಯಂತೆ ಇದನ್ನು ನೀಡಲಾಗುತ್ತಿದೆ. ಮೊದಲು ಗೋಣಿಚೀಲದ ವೆಚ್ಚವನ್ನು ಇವರು ಕೊಡಬೇಕಿತ್ತು. ಈಗ ಸಾಗಾಟ ಸೇರಿ ಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಕೊಡುತ್ತಿದೆ. ಸದನದಲ್ಲಿ ಕೇಂದ್ರದ ಅಕ್ಕಿ ಎಂದರೂ ಅದನ್ನು ಜನತೆಗೆ ಹೇಳುತ್ತಿಲ್ಲ. ಪಡಿತರ ಅಕ್ಕಿಯ ಹಣ ಕೇವಲ ಶೇ. 50 ಜನರಿಗಷ್ಟೇ ಸಿಗುತ್ತಿದೆ ಎಂದು ಕೋಟ ಶ್ರೀನಿವಾಸ್‌ ಪೂಜಾರಿ ಆಕ್ಷೇಪ ಸೂಚಿಸಿದರು.

ಪರೋಕ್ಷವಾಗಿ ಸಂವಿಧಾನ ಉಲ್ಲಂಘಿಸಿ ಅಪಚಾರ: ರವಿಕುಮಾರ್

ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್ ಮಾತನಾಡಿ, ಸರ್ಕಾರದ ಕಾರ್ಯವೈಖರಿ ನೋಡಿದರೆ ರಾಜ್ಯದಲ್ಲಿ ಬರಗಾಲ ಇಲ್ಲ ಎನಿಸುತ್ತಿದೆ. ಆದರೆ, ಈಗ ಲಭಿಸಿದ ಕ್ಯಾಬಿನೆಟ್ ದರ್ಜೆಗಳು 84-85 ಜನರಿಗೆ ಇದೆ. ಈ ಮೂಲಕ ಸಂವಿಧಾನವನ್ನು ಸರ್ಕಾರ ಸಂಪೂರ್ಣವಾಗಿ ಉಲ್ಲಂಘಿಸಿದೆ. ಪರೋಕ್ಷವಾಗಿ ಸಂವಿಧಾನ ಉಲ್ಲಂಘಿಸಿ ಅಪಚಾರ ಮಾಡಿದೆ ಎಂದು ಟೀಕಿಸಿದರು.

ಗ್ಯಾರಂಟಿಯಲ್ಲೂ ಹಣ ಕೊಳ್ಳೆ

ಕ್ಯಾಬಿನೆಟ್ ದರ್ಜೆಯನ್ನು ಸಚಿವರಿಗಷ್ಟೇ ಕೊಡಬಹುದು. ಸೋತಿರುವಂಥರನ್ನೆಲ್ಲ ಕರಕೊಂಡು ಬಂದು ಗ್ಯಾರಂಟಿ ಯೋಜನೆಯಡಿ ಮಂತ್ರಿ ದರ್ಜೆ ಕೊಡುತ್ತಿರುವುದು ಯಾವ ನ್ಯಾಯ?‌ ಗ್ಯಾರಂಟಿಯಲ್ಲೂ ಪಕ್ಷದ ಮೂಲಕ ಹಣ ಹೊಡೆಯುವ ಕೆಲಸವನ್ನು ಮತ್ತು ಅಧಿಕಾರ ಪಡೆಯುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ ಎಂದು‌ ಎನ್. ರವಿಕುಮಾರ್ ಟೀಕಿಸಿದರು.

ಇದನ್ನೂ ಓದಿ: Organ donors: ಅಂಗಾಂಗ ದಾನಿ ಕುಟುಂಬಗಳ ಕಣ್ಣೀರ ಕಥೆ ಕೇಳಿದ ಸಿಎಂ ಸಿದ್ದರಾಮಯ್ಯ

ಶಾಸಕರಿಗೆ ಅನುದಾನವೇ ಇಲ್ಲ

ಗ್ಯಾರಂಟಿ ಎಂಬುದು ಪಕ್ಷದ ಕಾರ್ಯಕರ್ತರ ಹುಲ್ಲುಗಾವಲಾಗಿದೆ. ಶಾಸಕರಿಗೆ ಅನುದಾನ ಇಲ್ಲ. ಅಭಿವೃದ್ಧಿಗೆ, ಕುಡಿಯುವ ನೀರು, ದೇವಸ್ಥಾನ, ರಸ್ತೆಗೆ ಹಣ ಕೇಳುತ್ತಾರೆಂಬ ಕಾರಣಕ್ಕೆ ಕಾಂಗ್ರೆಸ್ ಸಚಿವರು, ಶಾಸಕರು ಪ್ರವಾಸ ಮಾಡುತ್ತಿಲ್ಲ. ಶಾಸಕರಿಗೆ ರಾಜ್ಯದಲ್ಲಿ ಗೌರವ ಸಿಗುತ್ತಿಲ್ಲ ಎಂದು ಎನ್. ರವಿಕುಮಾರ್ ವಿವರಿಸಿದರು.

Exit mobile version