ಬೆಂಗಳೂರು: ವಿಧಾನಸೌಧದೊಳಗೆ ಪಾಕಿಸ್ತಾನ ಜಿಂದಾಬಾದ್ (Pakistan Zindabad slogans) ಘೋಷಣೆ ಸಂಬಂಧ ಸ್ವತಂತ್ರವಾಗಿ ತನಿಖೆ ನಡೆಸಲು ಪೊಲೀಸರಿಗೆ ಅಧಿಕಾರವನ್ನು ಕೊಟ್ಟಿದ್ದೇವೆ. ಅವರು ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ದೇಶದ್ರೋಹದ ಕೇಸ್ (Sedition Case) ಇದಾಗಿರುವುದರಿಂದ ಇನ್ನೂ ತನಿಖೆ ನಡೆಯುತ್ತಿದೆ. ಧ್ವನಿ ಇನ್ನೂ ವಿಭಿನ್ನವಾಗಿ ಕೇಳಿಸುತ್ತಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಯುತ್ತಿದೆ. ಅವರ ಧ್ವನಿ ಮಾದರಿಯನ್ನು ಸಹ ಪಡೆಯಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.
ನಾಸಿರ್ ಹುಸೇನ್ ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ವೇಳೆ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ (Pakistan Zindabad slogans) ಘೋಷಣೆ ಕೂಗಿದ್ದ ದೇಶದ್ರೋಹದ ಪ್ರಕರಣಕ್ಕೆ (Sedition Case) ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಈ ಪ್ರಕರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಈಗಾಗಲೇ ನಾನು ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪೊಲೀಸರಿಗೆ ಸೂಚನೆ ಕೊಟ್ಟಿದ್ದೇವೆ. ಧ್ವನಿಯು ಒಮ್ಮೊಮ್ಮೆ ವಿಭಿನ್ನವಾಗಿ ಕೇಳಿಸುತ್ತಿದೆ. ಬಿಜೆಪಿಯವರು ಯಾರಿಗೋ ಕೊಟ್ಟು ಖಾಸಗಿಯಾಗಿ ವರದಿ ತರಿಸಿದರೆ ಒಪ್ಪಲು ಆಗುತ್ತದೆಯಾ? ಅಧಿಕೃತವಾಗಿ ವರದಿ ನಮಗೆ ಬರಬೇಕು. ಮಾಧ್ಯಮಗಳಿಂದ ಸಿಕ್ಕ ವಿಡಿಯೊ ಕ್ಲಿಪ್ಪಿಂಗ್‌ಗಳನ್ನು ಇಟ್ಟುಕೊಂಡೇ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
ನೂತನ ರಾಜ್ಯಸಭಾ ಸದಸ್ಯರಾದ ನಾಸಿರ್ ಹುಸೇನ್ ಸಹ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಘಟನೆ ನಡೆದ ದಿನವೇ ಹೇಳಿದ್ದಾರೆ. ಒಂದು ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದೇ ಆದಲ್ಲಿ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆಂದು ಡಿ.ಕೆ. ಶಿವಕುಮಾರ್ ಹೇಳಿದರು.
ಧ್ವನಿಯ ಸ್ಯಾಂಪಲ್ ಪಡೆಯಲಾಗಿದೆ
ಈ ಕೇಸ್ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದೆ. ಸುತ್ತಮುತ್ತಲು ಯಾರು ಇದ್ದರು? ಯಾರು ಕೂಗಿರಬಹುದು? ಎಲ್ಲ ಆಯಾಮದಲ್ಲೂ ತನಿಖೆ ನಡೆಯುತ್ತದೆ. ನಾವು ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಪೊಲೀಸರು ನಡೆಸುವ ತನಿಖೆಯನ್ನು ನಾವು ನಂಬುತ್ತೇವೆ. ಮೂವರು ಆರೋಪಿಗಳನ್ನು ಸೋಮವಾರ ಮಧ್ಯಾಹ್ನ ವಶಕ್ಕೆ ಪಡೆದು ಧ್ವನಿ ಮಾದರಿಯನ್ನು ಪಡೆಯಲಾಗಿತ್ತು. ಕಾರಣ, ಇವರೇ ಘೋಷಣೆ ಕೂಗಿದ್ದಾರೆಯೇ? ಧ್ವನಿಯ ಫ್ರೀಕ್ವೆನ್ಸಿ ಏನು? ಅವರು ನಾಸಿರ್ ಹುಸೇನ್ ಜಿಂದಾಬಾದ್ ಎಂದು ಹೇಳಿದ್ದಾರೋ? ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿದ್ದಾರೋ? ಎಂಬಿತ್ಯಾದಿ ವಿಷಯಗಳ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಬಿಜೆಪಿ ಘಟನೆಯೂ ತನಿಖೆ ಆಗುತ್ತಿದೆ
ಮಂಡ್ಯದಲ್ಲಿ ಬಿಜೆಪಿ ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತ ಬಾಯಿತಪ್ಪಿ ಘೋಷಣೆ ಕೂಗಿದ್ದರ ಬಗ್ಗೆಯೂ ತನಿಖೆ ಆಗುತ್ತಿದೆ. ಈಗ ಬಿಜೆಪಿಯವರು ಮಂಡ್ಯ ಘಟನೆ ಬಗ್ಗೆ ಮಾತನಾಡಲಿ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.