Site icon Vistara News

Sharad Pawar: ಶರದ್ ಪವಾರ್ ಪಕ್ಷಕ್ಕೆ ಹೊಸ ಚಿಹ್ನೆ ನೀಡಿದ ಚುನಾವಣಾ ಆಯೋಗ; ಏನದು?

sharad pawar

sharad pawar

ನವದೆಹಲಿ: ಶರದ್ ಪವಾರ್ (Sharad Pawar) ಬಣದ ‘ನ್ಯಾಷನಲಿಸ್ಟ್​ ಕಾಂಗ್ರೆಸ್ ಪಾರ್ಟಿ– ಶರದ್ ಚಂದ್ರ ಪವಾರ್’ (Nationalist Congress Party-Sharadchandra Pawar) ಪಕ್ಷಕ್ಕೆ ಚುನಾವಣಾ ಆಯೋಗ ‘ತುತ್ತೂರಿ (ತುರ್ಹಾ) ಊದುತ್ತಿರುವ ವ್ಯಕ್ತಿ’ (Man blowing turha)ಯ ಚಿಹ್ನೆಯನ್ನು ನೀಡಿದೆ. ಈ ಚಿಹ್ನೆಯನ್ನು ಪಕ್ಷ ಮೊದಲ ಆದ್ಯತೆಯಾಗಿ ಪರಿಗಣಿಸಿತ್ತು. ಅಜಿತ್ ಪವಾರ್ ಬಣಕ್ಕೆ ‘ಗಡಿಯಾರ’ ಚಿಹ್ನೆ ಲಭಿಸಿದ ಕೆಲವು ದಿನಗಳ ನಂತರ ಇದೀಗ ಶರದ್ ಪವಾರ್ ಬಣಕ್ಕೂ ಚಿಹ್ನೆ ಸಿಕ್ಕಂತಾಗಿದೆ.

ಶರದ್ ಪವಾರ್ ನೇತೃತ್ವದ ಬಣಕ್ಕೆ ‘ಮುಕ್ತ ಚಿಹ್ನೆಗಳು’ ಅಥವಾ ಮಾನ್ಯತೆ ಪಡೆದ ಪಕ್ಷಗಳ ವಿಶೇಷ ಬಳಕೆಗಾಗಿ ಕಾಯ್ದಿರಿಸಿದ ಚಿಹ್ನೆಗಳನ್ನು ಹೊರತುಪಡಿಸಿ ಇತರ ಚಿಹ್ನೆಗಳನ್ನು ಆಯ್ಕೆ ಮಾಡಲು ಚುನಾವಣಾ ಆಯೋಗ ಸೂಚಿಸಿತ್ತು. ಅದರಂತೆ ಎನ್‌ಸಿಪಿ (ಎಸ್‌ಸಿಪಿ) ಮೂರು ಆಯ್ಕೆಗಳನ್ನು ಪಟ್ಟಿ ಮಾಡಿತ್ತು. ಅವುಗಳೆಂದರೆ: ‘ತುತ್ತೂರಿ ಊದುತ್ತಿರುವ ವ್ಯಕ್ತಿ’, ‘ಆಟೋರಿಕ್ಷಾ’ ಮತ್ತು ‘ಟಾರ್ಚ್’. ಈ ಪೈಕಿ ಇದೀಗ ‘ತುತ್ತೂರಿ ಊದುತ್ತಿರುವ ವ್ಯಕ್ತಿ’ ಚಿಹ್ನೆ ಲಭಿಸಿದೆ.

“ಮಹಾರಾಷ್ಟ್ರದ ಎಲ್ಲ ಸಂಸದೀಯ ಕ್ಷೇತ್ರಗಳಲ್ಲಿ ತುತ್ತೂರಿ ಊದುತ್ತಿರುವ ವ್ಯಕ್ತಿಯ ಚಿಹ್ನೆಯನ್ನು ಎನ್‌ಸಿಪಿ (ಎಸ್‌ಸಿಪಿ) ಪಕ್ಷಕ್ಕೆ ನಿಗದಿಪಡಿಸಲಾಗಿದೆ” ಎಂದು ಚುನಾವಣಾ ಆಯೋಗವು ಗುರುವಾರ ಶರದ್ ಪವಾರ್ ಅವರಿಗೆ ಕಳುಹಿಸಿದ ಪತ್ರದಲ್ಲಿ ತಿಳಿಸಲಾಗಿದೆ. ʼʼನಮ್ಮ ಅಭ್ಯರ್ಥಿಗಳು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇದೇ ಚಿಹ್ನೆಯ ಅಡಿಯಲ್ಲಿ ಸ್ಪರ್ಧಿಸಲಿದ್ದಾರೆʼʼ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ತುರ್ಹಾ’ ಒಂದು ಸಾಂಪ್ರದಾಯಿಕ ತುತ್ತೂರಿಯಾಗಿದ್ದು ಮತ್ತು ಇದನ್ನು ‘ತುಟಾರಿ’ ಎಂದೂ ಕರೆಯುತ್ತಾರೆ. ಛತ್ರಪತಿ ಶಿವಾಜಿ ರಾಜರ ಮಹಾನ್ ಶೌರ್ಯದ ಪ್ರತೀಕವಾದ ಈ ತುತ್ತೂರಿ ಒಮ್ಮೆ ದೆಹಲಿಯ ಚಕ್ರವರ್ತಿಯನ್ನು ಕಿವುಡಗೊಳಿಸಿತ್ತು. ನಮ್ಮ ಪಕ್ಷವು ತುತ್ತೂರಿಯನ್ನು ಚಿಹ್ನೆಯಾಗಿ ಪಡೆದಿರುವುದು ದೊಡ್ಡ ಗೌರವ ಎಂದೇ ಭಾವಿಸುತ್ತೇವೆ. ದೆಹಲಿಯ ಸಿಂಹಾಸನವನ್ನು ಮತ್ತೊಮ್ಮೆ ಅಲುಗಾಡಿಸಲು ಶರದ್‌ ಪವಾರ್ ನೇತೃತ್ವದಲ್ಲಿ ತುತ್ತೂರಿ ಸಿದ್ಧವಾಗಿದೆʼʼ ಎಂದು ಪಕ್ಷ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದೆ. ಜತೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುಸುಮಾಗ್ರಾಜ್ ಅವರ ‘ತುರ್ಹಾ’ ಕವನದ ಕೆಲವು ಸಾಲುಗಳನ್ನೂ ಉಲ್ಲೇಖಿಸಿದೆ.

ಕಳೆದ ವರ್ಷದ ಜುಲೈನಲ್ಲಿ ಎನ್‌ಸಿಪಿ ಶಾಸಕರ ಬೆಂಬಲದೊಂದಿಗೆ ಅಜಿತ್‌ ಪವಾರ್‌ ಅವರು ಮುಖ್ಯಮಂತ್ರಿ ಏಕನಾಥ್‌ ಶಿಂಧೆ ನೇತೃತ್ವದ ಬಿಜೆಪಿ-ಶಿವಸೇನೆ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದರು. ಹೆಚ್ಚಿನ ಶಾಸಕರನ್ನು ಸೆಳೆದುಕೊಂಡು, ಮೈತ್ರಿ ಸರ್ಕಾರಕ್ಕೆ ಬೆಂಬಲ ಘೋಷಿಸಿದ ಅಜಿತ್‌ ಪವಾರ್‌, ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಡಿಸಿಎಂ ಆಗಿ ಪದಗ್ರಹಣ ಮಾಡಿದ ಬಳಿಕ ಎನ್‌ಸಿಪಿ ಅಧ್ಯಕ್ಷ ಸ್ಥಾನದಿಂದ ಶರದ್‌ ಪವಾರ್‌ ಅವರನ್ನು ವಜಾಗೊಳಿಸಿದ್ದರು.

ಇದನ್ನೂ ಓದಿ: Sharad Pawar : ಶರದ್ ಪವಾರ್ ನೇತೃತ್ವದ ಎನ್​ಸಿಪಿಗೆ ಹೊಸ ಹೆಸರು ಕೊಟ್ಟ ಚುನಾವಣಾ ಆಯೋಗ

ಚುನಾವಣಾ ಆಯೋಗವು ಅಜಿತ್ ಪವಾರ್ ಬಣವನ್ನು ನಿಜವಾದ ಎನ್‌ಸಿಪಿ ಎಂದು ಗುರುತಿಸಿ ಅದಕ್ಕೆ ಪಕ್ಷದ ಹೆಸರು ಮತ್ತು ‘ಗಡಿಯಾರ’ ಚಿಹ್ನೆಯನ್ನು ನೀಡಿದ ಕೆಲವೇ ದಿನಗಳಲ್ಲಿ ಈ ನಿರ್ಧಾರ ಹೊರ ಬಿದ್ದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version