ಬೆಂಗಳೂರು: ಕೋಲಾರದಿಂದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಸ್ಪರ್ಧೆ ಖಚಿತವಾಗಿರುವ ಹಿನ್ನೆಲೆಯಲ್ಲಿ, ತಮ್ಮನ್ನು ಗೆಲ್ಲಿಸಿಕೊಂಡು ಬರಲು ಹಲವು ನಾಯಕರಿಗೆ ಹಲವು ಬಗೆಯ ಟಾಸ್ಕ್‌ಗಳನ್ನು ಅವರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕೋಲಾರದಲ್ಲಿ ಸಿದ್ದರಾಮಯ್ಯರಿಗೆ ರಿಸ್ಕ್ ಕೊಡಲು ಬಿಜೆಪಿ, ಜೆಡಿಎಸ್ ರೆಡಿ ಮಾಡಿಕೊಳ್ಳುತ್ತಿವೆ. ಇದನ್ನು ಅರಿತ ಸಿದ್ದು ಹೈ ಆಲರ್ಟ್ ಆಗಿದ್ದು, ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಆದ ರೀತಿಯಲ್ಲಿ ಆಗಬಾರದು ಎಂದು ತಮ್ಮ ಪಕ್ಷದ ಮುಖಂಡರಿಗೆ ತಾಕೀತು ಮಾಡಿದ್ದಾರೆ. ಹೀಗಾಗಿ ಹಲವು ಕೈ ನಾಯಕರಿಗೆ ಟಾಸ್ಕ್ ಕೊಟ್ಟಿದ್ದಾರೆ.
ನಿಮ್ಮ ಒತ್ತಡಕ್ಕೆ ಮಣಿದು ಕೋಲಾರಕ್ಕೆ ಬರುತ್ತಿದ್ದೇನೆ, ಗೆಲ್ಲಿಸುವ ಜವಾಬ್ದಾರಿ ನಿಮ್ಮದೇ. ನಿಮ್ಮ ಕ್ಷೇತ್ರದ ಜತೆಗೆ ಇಲ್ಲಿ ಕೆಲಸ ಮಾಡಿ ಎಂದಿರುವ ಸಿದ್ದು, ಆಯಾ ಸಮುದಾಯದ ನಾಯಕರಿಗೆ ಜವಾಬ್ದಾರಿ ನೀಡಿದ್ದಾರೆ. ʼ5 ಜಾತಿಗಳ ಫಾರ್ಮುಲಾʼ ಸಿದ್ಧಪಡಿಸಲಾಗಿದೆ. ಮುಸ್ಲಿಂ, ಒಕ್ಕಲಿಗ, ಕುರುಬ, ದಲಿತ, ಬ್ರಾಹ್ಮಣ ಜಾತಿ ಸಮೀಕರಣ ಲೆಕ್ಕಾಚಾರ ಹಾಕಲಾಗಿದೆ.
ಇದನ್ನೂ ಓದಿ | Siddaramaiah In Kolar | ಕೋಲಾರದಿಂದ ಗೆದ್ದು ಯಾಕೆ CM ಆಗಬಾರದು?: ಮತ್ತೊಮ್ಮೆ ಮುಖ್ಯಮಂತ್ರಿ ಕನಸು ಬಿಚ್ಚಿಟ್ಟ ಸಿದ್ದರಾಮಯ್ಯ
48 ಸಾವಿರಕ್ಕೂ ಅಧಿಕ ಮತ ಇರುವ ಮುಸ್ಲಿಂ ಸಮುದಾಯದ ಮತ ಸೆಳೆಯಲು ಪರಿಷತ್ ಸದಸ್ಯ ನಜೀರ್ ಅಹಮದ್ಗೆ ಟಾಸ್ಕ್ ನೀಡಲಾಗಿದೆ. 35 ಸಾವಿರ ಮತಗಳನ್ನು ಹೊಂದಿರುವ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯಲು ಪರಿಷತ್ ಸದಸ್ಯ ಅನಿಲ್ ಕುಮಾರ್, ಸುಧಾಕರ್ ರೆಡ್ಡಿ ಹೆಗಲಿಗೆ ಜವಾಬ್ದಾರಿ ಹೊರಿಸಲಾಗಿದೆ. 53 ಸಾವಿರ ಮತಗಳಿರುವ ಎಸ್‌ಸಿ ಸಮುದಾಯದ ಮತಗಳನ್ನು ಸೆಳೆಯಲು ನಾರಾಯಣ ಸ್ವಾಮಿ, ಕೊತ್ತೂರು ಮಂಜುನಾಥ್ಗೆ ಟಾಸ್ಕ್ ನೀಡಲಾಗಿದೆ. 3 ಸಾವಿರ ಮತ ಹೊಂದಿರುವ ಬ್ರಾಹ್ಮಣ ಸಮುದಾಯವನ್ನು ಸೆಳೆಯಲು ರಮೇಶ್ ಕುಮಾರ್‌ಗೆ ಹಾಗೂ 21 ಸಾವಿರ ಮತ ಇರುವ ಕುರುಬ ಸಮುದಾಯವನ್ನು ಸೆಳೆಯಲು ಎಚ್.ಎಂ ರೇವಣ್ಣ ಹಾಗೂ ಕರ್ನಾಟಕ ಕುರುಬರ ಸಂಘದ ಪದಾಧಿಕಾರಿಗಳಿಗೆ ಟಾಸ್ಕ್ ನೀಡಲಾಗಿದೆ.
ಒಟ್ಟು 2 ಲಕ್ಷ 70 ಸಾವಿರ ಮತಗಳಿರುವ ಕ್ಷೇತ್ರದಲ್ಲಿ ಆಯಾ ಸಮುದಾಯದ ನಾಯಕರುಗಳಿಗೆ ಸಿದ್ದರಾಮಯ್ಯ ಟಾಸ್ಕ್ ಕೊಟ್ಟಿದ್ದು, ತಮ್ಮನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಅವರ ಹೆಗಲಿಗೆ ಹಾಕಿದ್ದಾರೆ.
ಇದನ್ನೂ ಓದಿ | ವಿಸ್ತಾರ TOP 10 NEWS | ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಯಿಂದ ಡಲ್ಲಾಸ್ ಏರ್ ಶೋ ದುರಂತವರೆಗಿನ ಪ್ರಮುಖ ಸುದ್ದಿಗಳಿವು