Site icon Vistara News

ST Somashekhar : ಸೋಮಶೇಖರ್‌ಗೆ ಅತೃಪ್ತಿ ಇದೆ, ಆದರೆ ಪಕ್ಷ ಬಿಟ್ಟು ಹೋಗುವಷ್ಟಲ್ಲ ಎಂದ ಸಿ.ಟಿ. ರವಿ

SomaShekhar Meets CT Ravi

ಬೆಂಗಳೂರು: ಆಪರೇಷನ್‌ ಹಸ್ತಕ್ಕೆ (0peration Hasta) ಸಿಲುಕಿದ್ದಾರೆ, ಸದ್ಯವೇ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಲಿದ್ದಾರೆ ಎಂದು ಹೇಳಲಾಗುತ್ತಿದ್ದ ಯಶವಂತಪುರ ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್‌ (ST Somashekhar) ಅವರು ಶನಿವಾರ ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ (CT Ravi) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಮಾತುಕತೆಯ ವೇಳೆ ಸೋಮಶೇಖರ್‌ ಅವರು ತಮಗಾಗುತ್ತಿರುವ ಸಮಸ್ಯೆಯನ್ನು ತೋಡಿಕೊಂಡಿದ್ದಾರೆ. ಮಾತುಕತೆಯ ಬಳಿಕ ಮಾತನಾಡಿದ ಸಿ.ಟಿ. ರವಿ ಅವರು ಸೋಮಶೇಖರ್‌ ಅವರಿಗೆ ಪಕ್ಷದ ವಿಚಾರದಲ್ಲಿ ಅತೃಪ್ತಿ ಇರುವುದು ನಿಜ. ಆದರೆ, ಪಕ್ಷ ಬಿಟ್ಟು ಹೋಗುವಷ್ಟಲ್ಲ ಎಂದರು.

ರಾಜ್ಯದಲ್ಲಿ ಆಪರೇಷನ್‌ ಹಸ್ತ ಚಟುವಟಿಕೆಗಳು ನಡೆಯುತ್ತಿರುವ ನಡುವೆಯೇ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಶುಕ್ರವಾರ ತಮ್ಮದೇ ಮುತುವರ್ಜಿಯಿಂದ ಬೆಂಗಳೂರಿನ ಬಿಜೆಪಿ ಸಂಸದರು ಮತ್ತು ಶಾಸಕರ ಸಭೆಯನ್ನು ಕರೆದಿದ್ದರು. ಅದಕ್ಕೆ ಸೋಮಶೇಖರ್‌ ಬಂದಿರಲಿಲ್ಲ. ಈ ಸಭೆಯಲ್ಲಿ ಯಾರಿಗೆ ಅತೃಪ್ತಿ ಇದೆಯೋ ಅವರ ಜತೆ ಮಾತುಕತೆ ನಡೆಸಬೇಕು ಎಂದು ಯಡಿಯೂರಪ್ಪ ಸೂಚಿಸಿದ್ದರು. ಸೋಮಶೇಖರ್‌ ಅವರ ಹೊಣೆಗಾರಿಕೆಯನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ವಹಿಸಿದ್ದರು.

ಈ ನಡುವೆ, ಬಿ.ಎಸ್‌. ಯಡಿಯೂರಪ್ಪ ಅವರ ಸಾರಥ್ಯ ಸಿಗುತ್ತಿದ್ದಂತೆಯೇ ಇನ್ನೂ ಕೆಲವು ಬಿಜೆಪಿ ನಾಯಕರಿಗೆ ಧೈರ್ಯ ಬಂದಂತಾಗಿದೆ. ಇದರ ಬಲದಿಂದಲೇ ಎಂಬಂತೆ ಸಿ.ಟಿ. ರವಿ ಅವರು ಸೋಮಶೇಖರ್‌ ಅವರನ್ನು ಕರೆಸಿ ಮಾತನಾಡಿದರು.

ಸಭೆಯ ಬಳಿಕ ಮಾತನಾಡಿದ ಸಿ.ಟಿ. ರವಿ ಅವರು, ಸೋಮಶೇಖರ್‌ ಅವರ ವಿಚಾರದಲ್ಲಿ ಕಳೆದ ಮೂರ್ನಾಲ್ಕು ದಿನದಿಂದ ಚರ್ಚೆ ನಡೆಯುತ್ತಿದೆ. ಅವರಿಗೆ ಸಣ್ಣಪುಟ್ಟ‌ ವಿಚಾರದಲ್ಲಿ ಅಸಮಾಧಾನ ಇರುವುದು ನಿಜ. ಆದರೆ ಅದು ಪಕ್ಷ‌ಬಿಡುವಷ್ಟು ದೊಡ್ಡದಲ್ಲ. ಸಮಸ್ಯೆ ಸರಿಪಡಿಸಲು ನಾಯಕತ್ವ ವಿಫಲವಾಗಿದೆ ಎನ್ನುವುದೂ ಸರಿಯಲ್ಲ. ಪಕ್ಷ ಸೋತ ಸಂದರ್ಭದಲ್ಲಿ ಕೆಲಕಾಲ ಆಘಾತ ಇರುತ್ತದೆ. ಆದರೆ ನಾಯಕತ್ವವೇ ಇಲ್ಲದ ಸ್ಥಿತಿಯಲ್ಲಿ ನಾವಿಲ್ಲ. ಪರಿಸ್ಥಿತಿ ಸುಧಾರಿಸಲು ನಮ್ಮಿಂದ ಆಗುತ್ತದೆʼʼ ಎಂದರು.

ಇದನ್ನೂ ಓದಿ : CT Ravi: ಓವರಾಗಿ ಆಡಿದ್ರೆ ಹಸ್ತಕ್ಕೇ ಆಪರೇಷನ್‌ ಮಾಡ್ತೀವಿ ಹುಷಾರ್‌; ಸಿ.ಟಿ ರವಿ ಎಚ್ಚರಿಕೆ

ಎಸ್‌ಟಿ‌ ಸೋಮಶೇಖರ್ ಜತೆ ಮಾತಾಡಿದ್ದೇನೆ. ಅವರಲ್ಲಿ ಪಕ್ಷ ಬಿಡುವ ಭಾವನೆ ಇಲ್ಲ. ಕೆಲವು ಬೆಂಬಲಿಗರನ್ನು ಸೆಳೆಯಲು ಆಸೆ ತೋರಿಸಿದ್ದಾರೆ. ಪಕ್ಷ ಬಿಡುವ ಉದ್ದೇಶ ಸೋಮಶೇಖರ್‌ಗೆ ಇಲ್ಲ ಎಂದರು ರವಿ.

ರವಿ ಭೇಟಿ ಬಳಿಕ ಸೋಮಶೇಖರ್‌ ಹೇಳಿದ್ದೇನು?

ಸಿ.ಟಿ. ರವಿ ಅವರನ್ನು ಭೇಟಿಯಾದ ಬಳಿಕ ಬಿಜೆಪಿ ಮಾತನಾಡಿದ ಎಸ್ ಟಿ ಸೋಮಶೇಖರ್ ಅವರು, ಸಿ.ಟಿ ರವಿಯವರು ಬನ್ನಿ ಎಂದಿದ್ದರು. ಹಾಗಾಗಿ ಭೇಟಿ ಮಾಡಿದೆ. ಇತ್ತೀಚಿನ ಮಾಹಿತಿಯನ್ನು ಕೊಡುವ ಕೆಲಸ ಮಾಡಿದ್ದೇನೆ. ಕ್ಷೇತ್ರದಲ್ಲಿ ಏನು ಸಮಸ್ಯೆ ಆಯ್ತು,ಏನೇನು ತೊಂದರೆ ಆಯ್ತು ಅಂತ ಮಾಹಿತಿ ಹೇಳಿದ್ದೇನೆ ಎಂದರು.

ಯಡಿಯೂರಪ್ಪನವರ ಸಭೆ ಬಗ್ಗೆ ತಡವಾಗಿ ಗೊತ್ತಾಯಿತು. ಕ್ಷೇತ್ರದಲ್ಲಿ ಕಾರ್ಯಕ್ರಮ ಇದ್ದಿದ್ದರಿಂದ ನಾನು ಸಭೆಗೆ ಹೋಗೊಕೆ ಆಗಿರಲಿಲ್ಲ. ಆರ್ ಅಶೋಕ್ ಮತ್ತು ಬೊಮ್ಮಾಯಿ ಅವರು ಭೇಟಿ ಮಾಡಲು ಹೇಳಿದ್ದಾರೆ. ಭೇಟಿ ಮಾಡುತ್ತೇನೆ. ನಾನು ಮಾನಸಿಕವಾಗಿ ಮತ್ತು ದೈಹಿಕವಾಗಿ ಈಗ ಬಿಜೆಪಿಯಲ್ಲಿದ್ದೇನೆ ಎಂದು ಹೇಳಿದರು ಸೋಮಶೇಖರ್‌.

Exit mobile version