ಬೆಂಗಳೂರು: ಯಶವಂತಪುರದ ಬಿಜೆಪಿ ಶಾಸಕರಾಗಿರುವ ಎಸ್‌ಟಿ ಸೋಮಶೇಖರ್ (ST Somashekhar) ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯ (Operation Hasta) ಸುದ್ದಿ ನಿಜವಾಗುವ ಕಾಲ ಸನ್ನಿಹಿತವಾದಂತೆ ಕಾಣುತ್ತಿದೆ. ಹಂತ ಹಂತವಾಗಿ ಬಿಜೆಪಿಯಿಂದ ದೂರವಾಗುತ್ತಾ, ಕಾಂಗ್ರೆಸ್‌ಗೆ ಹತ್ತಿರವಾಗುತ್ತಿರುವ ಅವರ ನಡೆಯಲ್ಲಿ ಶನಿವಾರ ಒಂದು ನಿರ್ಣಾಯಕ ದಿನವಾಗುವ ಸಾಧ್ಯತೆ ಇದೆ.
ಜನಸ್ಪಂದನ ಕಾರ್ಯಕ್ರಮಕ್ಕೆ ಡಿಕೆ ಶಿವಕುಮಾರ್‌ಗೆ ಆಹ್ವಾನ
ಬಿಜೆಪಿ ಪಕ್ಷದ ಎಲ್ಲ ಕಾರ್ಯಕ್ರಮಗಳಿಂದ ದೂರವಾಗಿ ನಿಂತಿರುವ ಎಸ್‌ಟಿ ಸೋಮಶೇಖರ್ ಅವರು ಶನಿವಾರ ಸಂಜೆ ತಮ್ಮ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದಾರೆ. ಇದರಲ್ಲಿ ಅವರು ವೇದಿಕೆ ಹಂಚಿಕೊಳ್ಳುತ್ತಿರುವುದು ರಾಜ್ಯದ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಅವರ ಜತೆ.
ಚೇಂಜ್ ಮೇಕರ್ಸ್ ಆಫ್ ಕನಕಪುರ ನಿವಾಸಿ ಸಂಘ ಎಂಬ ಸಂಸ್ಥೆ, ಶೋಭಾ ಫಾರೆಸ್ಟ್ ವ್ಯೂ ನಿವಾಸಿ ಸಂಘ (ಎಸ್‌ಫ್‌ವಿ) ಜತೆ ಸೇರಿಕೊಂಡು ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಮ್ಮಿಗೆ ಪುರ ವಾರ್ಡ್ ಸಂಖ್ಯೆ 198ರ ನಿವಾಸಿಗಳ ಜತೆ ʻಜನಸ್ಪಂದನʼ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಅಧ್ಯಕ್ಷತೆಯನ್ನು ವಹಿಸುವವರು ಶಾಸಕ ಎಸ್.ಟಿ. ಸೋಮಶೇಖರ್. ಸಂಜೆ ನಾಲ್ಕು ಗಂಟೆಗೆ ಕಾರ್ಯಕ್ರಮ ನಡೆಯಲಿದೆ.
ಎಸ್‌ಟಿ ಸೋಮಶೇಖರ್ ಅವರು ಇತ್ತೀಚೆಗೆ ಬಿಜೆಪಿಯ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಯೋಜಿಸಿದ್ದ ಬೆಂಗಳೂರು ಶಾಸಕರ ಸಭೆಯಲ್ಲಿ ಅವರು ಗೈರು ಹಾಜರಾಗಿದ್ದರು. ಮಾತ್ರವಲ್ಲ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಾಗಲೂ ಸೋಮಶೇಖರ್ ಮಾತ್ರ ತಿರುಗಿ ನೋಡಿಲ್ಲ!
ಬಿ.ಎಸ್. ಯಡಿಯೂರಪ್ಪ ಅವರು ಸೋಮಶೇಖರ್ ಅವರ ಜತೆ ಮಾತನಾಡುವ ಹೊಣೆಯನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ವಹಿಸಿದ್ದರು. ಆದರೆ, ಬೊಮ್ಮಾಯಿ ಅವರು ಮಾತನಾಡಿಲ್ಲ. ಸಿ.ಟಿ. ರವಿ, ಆರ್. ಅಶೋಕ್ ಅವರು ಕರೆಸಿಕೊಂಡು ಮಾತನಾಡಿದರೂ ಸೋಮಶೇಖರ್ ಅವರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ ಹೊರತು ಸಾಂತ್ವನ ಸಿಕ್ಕಿಲ್ಲ ಎನ್ನಲಾಗಿದೆ.
ಇದರ ನಡುವೆ ಸೋಮಶೇಖರ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಮತ್ತು ಅವರ ಕ್ಷೇತ್ರಕ್ಕೆ ದೊಡ್ಡ ಮೊತ್ತದ ಅನುದಾನವನ್ನು ಪಡೆದುಕೊಂಡು ಬಂದಿದ್ದರು. ಇದೆಲ್ಲವೂ ಸೋಮಶೇಖರ್ ಅವರು ಕಾಂಗ್ರೆಸ್‌ಗೆ ಹೋಗುವ ಸಂದೇಶ ಎಂಬಂತೆ ವಿಶ್ಲೇಷಿಸಲಾಗುತ್ತಿದೆ.
ಇದೀಗ ತಮ್ಮ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಸಂಬಂಧಿಸಿದ ಸಂಘಟನೆಗಳು ಆಯೋಜಿಸಿರುವ ಜನಸ್ಪಂದನ ಕಾರ್ಯಕರ್ಮದಲ್ಲಿ ಎಸ್‌ಟಿ ಸೋಮಶೇಖರ್ ಭಾಗವಹಿಸುತ್ತಿರುವುದು ಭಾರಿ ಸದ್ದು ಮಾಡಿದೆ.
ಇದನ್ನೂ ಓದಿ: Operation Hasta : ಮೋದಿ ಬಂದ್ರೂ ಬರಲಿಲ್ಲ ಸೋಮಶೇಖರ್, ಸಿಎಂ ಭೇಟಿಯಾದ್ರು ಶಿವರಾಂ ಹೆಬ್ಬಾರ್! ಏನಾಗ್ತಿದೆ?
ಸಿದ್ದರಾಮಯ್ಯ ಭೇಟಿ ಮಾಡಿದ ಶಿವರಾಮ್ ಹೆಬ್ಬಾರ್
ಈ ನಡುವೆ, ಆಪರೇಷನ್ ಹಸ್ತದ ಸುಳಿಗೆ ಸಿಲುಕಿದ್ದಾರೆ ಎಂದು ಹೇಳಲಾದ ಇನ್ನೊಬ್ಬ ಶಾಸಕ ಶಿವರಾಮ ಹೆಬ್ಬಾರ್ ಅವರು ಕೂಡಾ ಶನಿವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅವರು ಬರ ಘೋಷಣೆ ಮತ್ತು ಪರಿಹಾರದ ಬೇಡಿಕೆಯನ್ನು ಇಟ್ಟುಕೊಂಡು ಹೋಗಿದ್ದಾರಾದರೂ, ನಿಜವಾದ ಉದ್ದೇಶ ಅದಲ್ಲ ಎನ್ನಲಾಗುತ್ತಿದೆ.