Site icon Vistara News

ಬಿಜೆಪಿ ʻಜೋಡೆತ್ತುಗಳುʼ ಈಗ ಒಂದೇ ಕಡೆ: ಈಗಲಾದರೂ ಸರಿಯಾಗುವುದೇ ನಡೆ?

bs yeddyurappa and santosh

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಕಳೆದ ಒಂದು ದಶಕದಿಂದೀಚೆಗೆ ಕೇಳಿಬರುವ ಸಾಮಾನ್ಯ ಮಾತು, ಬಿ.ಎಸ್‌. ಯಡಿಯೂರಪ್ಪ ವರ್ಸಸ್‌ ಸಂತೋಷ್‌ ಎಂಬುದು. ಯಾವುದೇ ಚುನಾವಣೆ ನಡೆಯಲಿ, ಟಿಕೆಟ್‌ ಹಂಚಿಕೆ ಆಗಲಿ, ಒಂದು ವಿಧಾನ ಪರಿಷತ್‌ ಸ್ಥಾನಕ್ಕೆ ಆಯ್ಕೆಯಾಗಲಿ, ಇದರಲ್ಲಿ ಸಂತೋಷ್‌ ಕೈ ಮೇಲಾಯಿತೇ? ಯಡಿಯೂರಪ್ಪ ಕೈ ಮೇಲಾಯಿತೇ ಎಂಬುದೇ ಬಿಜೆಪಿ ಕಾರ್ಯಕರ್ತರ ನಡುವೆ ನಡೆಯುವ ಚರ್ಚೆ.

ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ೨೦೦೬ರಲ್ಲಿ ಬಿ.ಎಲ್‌. ಸಂತೋಷ್ ನೇಮಕವಾದರು. ಅದಕ್ಕೂ ಮೊದಲೇ ರಾಜ್ಯ ಬಿಜೆಪಿ ಜೋಡೆತ್ತುಗಳೆಂದು ಗುರುತಿಸಿಕೊಂಡಿದ್ದವರು ಅನಂತಕುಮಾರ್‌ ಹಾಗೂ ಯಡಿಯೂರಪ್ಪ ಜೋಡಿ. ಇಬ್ಬರೂ ಆಗಿಂದಾಗ್ಗೆ ಪರಸ್ಪರರ ವಿರುದ್ಧ ಒಳಗೊಳಗೆ ತಂತ್ರ ಹೂಡುವುದು ನಡೆದಿತ್ತಾದರೂ ಇಬ್ಬರಿಗೂ ಪಕ್ಷದಲ್ಲಿ ತಮ್ಮದೇ ಹಿಡಿತ ಇತ್ತು.

2006ರ ಸಮಯದಲ್ಲಿ ಇಬ್ಬರ ನಡುವಿನ ಜಗಳ ತಾರಕಕ್ಕೇರಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಯಾರ ಕಡೆ ನೋಡುವುದು ಎಂಬಂತಾಗಿತ್ತು. ಈ ಸಮಯದಲ್ಲಿ ನೇಮಕವಾದ ಸಂತೋಷ್, ಇಬ್ಬರ ಜತೆಗೂ ಸಮಾನ ಅಂತರ ಕಾಯ್ದುಕೊಳ್ಳುತ್ತ ಸಂಘಟನೆಯತ್ತ ಗಮನ ಹರಿಸಿದರು. ಸಮಯ ಕಳೆದಂತೆ ಮೂರನೇ ಕೇಂದ್ರವಾಗಿ ಬೆಳೆದರು.

೨೦೦೮ರ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಜತೆಗೆ ತಂತ್ರಗಾರಿಕೆ ಹೆಣೆದು, ದಕ್ಷಿಣ ಭಾರತದಲ್ಲಿ ಬಿಜೆಪಿ ಮೊದಲ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರ ಹಿಡಿದರು. ಈ ಸರ್ಕಾರ ನಡೆಯುತ್ತಿರುವಾಗಲೇ, ಪಕ್ಷದ ಕೆಲವರು ಮಸಲತ್ತು ನಡೆಸಿ ತಮ್ಮನ್ನು ಜೈಲಿಗಟ್ಟಿದರು ಎಂದು ಬಿ.ಎಸ್‌. ಯಡಿಯೂರಪ್ಪ ಸಿಟ್ಟಾದರು. ಪ್ರಮುಖವಾಗಿ ಅನಂತಕುಮಾರ್‌ ವಿರುದ್ಧ ಅಸಮಾಧಾನ ಹೊಂದಿದ್ದರು. ಪಕ್ಷವನ್ನು ತೊರೆದು ಕೆಜೆಪಿ ಕಟ್ಟಿ, ಬಿಜೆಪಿ ವಿರುದ್ಧವೇ ಸ್ಪರ್ಧಿಸಿದರು. ಈ ಸಮಯದಲ್ಲಿ ಪಕ್ಷ ಸಂಪೂರ್ಣವಾಗಿ ಬಿ.ಎಲ್‌. ಸಂತೋಷ್‌ ಕೈಗೆ ಸಿಕ್ಕಿತು.

ಕೆಜೆಪಿಯಲ್ಲಿ ನಿರೀಕ್ಷಿತ ಯಶಸ್ಸು ಕಾಣದೆ ಯಡಿಯೂರಪ್ಪ ಪಕ್ಷಕ್ಕೆ ವಾಪಸಾಗುವ ವೇಳೆಗೆ ಬಿಜೆಪಿಯ ಮೊದಲ ಸಾಲಿನ ನಾಯಕರಾಗಿ ಸಂತೋಷ್‌ ಗುರುತಿಸಿಕೊಂಡಿದ್ದರು. ಯಡಿಯೂರಪ್ಪ ಅವರ ಜತೆಗೆ ಕೆಜೆಪಿಗೆ ಹೋದವರು ಹಾಗೂ ಬಿಜೆಪಿಯಲ್ಲೆ ಇದ್ದ ಅನೇಕರು ಯಡಿಯೂರಪ್ಪ ಬಣದೊಂದಿಗೆ ಗುರುತಿಸಿಕೊಳ್ಳಲು ಮುಂದಾದರು.

ಸಂಘಟನೆಯ ಕಾರಣಕ್ಕೆ ಹಾಗೂ ವಿವಿಧ ರಾಜಕೀಯ ಕಾರಣಕ್ಕೆ ಅನೇಕರು ಸಂತೋಷ್‌ ಜತೆಗೆ ಗುರುತಿಸಿಕೊಳ್ಳಲು ಮುಂದಾದರು. ಇದು ನಿಧಾನವಾಗಿ ಸಂತೋಷ್‌ ಬಣ, ಯಡಿಯೂರಪ್ಪ ಬಣ ಎಂಬಂತೆ ಸ್ಪಷ್ಟತೆ ಪಡೆಯುತ್ತ ಸಾಗಿತು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿಗಮ ಮಂಡಳಿಗಳಿಗೆ ನೇಮಕ ಮಾಡಿದರೆ ಅದರಲ್ಲಿ ಸಾಮಾಜಿಕ, ಆರ್ಥಿಕ, ಲಿಂಗ ಸಮಾನತೆ ನೋಡುವುದಕ್ಕಿಂತಲೂ ಬಿಎಸ್‌ವೈ-ಸಂತೋಷ್‌ ಬಣದ ನಡುವೆ ಸಮತೋಲನ ಆಗಿದೆಯೇ ಎಂಬ ಚರ್ಚೆಗಳು ಪಕ್ಷದಲ್ಲಿ ಇಂದಿಗೂ ನಡೆಯುತ್ತಿವೆ.

ಅದರಲ್ಲೂ ಬಿ.ಎಲ್‌. ಸಂತೋಷ್‌ ಅವರು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆದ ನಂತರ, ಎಂಎಲ್‌ಸಿಯಿಂದ ರಾಜ್ಯಸಭೆ ಚುನಾವಣೆವರೆಗೆ ಯಾವುದೇ ಸಂದರ್ಭದಲ್ಲಿ ಟಿಕೆಟ್‌ ನೀಡುವಾಗ ಸಂತೋಷ್‌ ಮೇಲುಗೈ ಎಂಬ ಮಾತುಗಳೇ ಕೇಳಿಬರುತ್ತಿದ್ದವು.

ಇದೀಗ ರಾಷ್ಟ್ರೀಯ ಸಂಸದೀಯ ಮಂಡಳಿಗೆ ಹಾಗೂ ಅದರ ಮೂಲಕ ಚುನಾವಣಾ ಸಮಿತಿಗೂ ಬಿ.ಎಸ್‌. ಯಡಿಯೂರಪ್ಪ ನೇಮಕ ಆಗಿದ್ದಾರೆ. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ಬಿ.ಎಲ್‌. ಸಂತೋಷ್‌ ಅವರು ಈ ಎರಡೂ ಸಮಿತಿಗಳ ಕಾರ್ಯದರ್ಶಿಯಾಗಿರಲಿದ್ದಾರೆ.

ರಾಜ್ಯ ಕೋರ್‌ ಕಮಿಟಿಯಲ್ಲಿ ಒಟ್ಟಿಗೆ ಇದ್ದ ಇಬ್ಬರೂ ನಾಯಕರು ಇದೀಗ ಕೇಂದ್ರ ಬಿಜೆಪಿಯ ಕೋರ್‌ ಕಮಿಟಿ ಎನ್ನಬಹುದಾದ ಸಂಸದೀಯ ಮಂಡಳಿಯಲ್ಲಿ ಒಟ್ಟಾಗಲಿದ್ದಾರೆ. ಪಕ್ಷದ ಪದಾಧಿಕಾರಿಗಳ ನೇಮಕಾತಿ ವಿಚಾರದಲ್ಲಿ ಸಂಸದೀಯ ಮಂಡಳಿ ನಿರ್ಧಾರ ಮಾಡುತ್ತದೆ. ಯಾವುದೇ ರಾಜ್ಯದ ಹಾಗೂ ಲೋಕಸಭೆ ವಿಚಾರದಲ್ಲಿಯೂ ಕೇಂದ್ರ ಚುನಾವಣಾ ಸಮಿತಿ ನಿರ್ಧಾರವೇ ಅಂತಿಮವಾಗಿರುತ್ತದೆ.

ಇಬ್ಬರೂ ಪಕ್ಷದ ಅತ್ಯುನ್ನತ ಸಮಿತಿಯಲ್ಲಿ ಇರುವುದರಿಂದಾಗಿ, ಟಿಕೆಟ್‌ ಹಂಚಿಕೆ, ಪದಾಧಿಕಾರಿಗಳ ನೇಮಕ ವಿಚಾರದಲ್ಲಿ ಇನ್ನಾದರೂ ʻಯಾರ ಕೈ ಮೇಲೆʼ ಎಂಬ ಚರ್ಚೆಗಳು ಇಲ್ಲವಾಗುತ್ತವೆಯೇ? ಅಥವಾ ಈ ಸಮಿತಿ ಸಭೆಗಳಲ್ಲೂ ಭಿನ್ನಾಭಿಪ್ರಾಯದ ಮಾತುಗಳು ಪಕ್ಷದಲ್ಲಿ ಕೇಳಿಬರುತ್ತವೆಯೇ? ಕಾದುನೋಡಬೇಕಿದೆ.

ಇದನ್ನೂ ಓದಿ | ವಿಸ್ತಾರ TOP 10 NEWS | ಯಡಿಯೂರಪ್ಪ ಪುನರಾಗಮನದಿಂದ ಸೆನ್ಸೆಕ್ಸ್‌ ಸಂಭ್ರಮದವರೆಗಿನ ಪ್ರಮುಖ ಸುದ್ದಿಗಳಿವು

Exit mobile version