ಮಂಡ್ಯ: ಲೋಕಸಭಾ ಚುನಾವಣೆ (Lok Sabha Election 2024) ಸಮೀಪವಾಗುತ್ತಿದ್ದಂತೆ ಚುನಾವಣಾ ಕಣ ಸಿದ್ಧಗೊಳ್ಳುತ್ತಲಿದೆ. ಹಾಲಿ ಸಂಸದೆ ಸುಮಲತಾ ಅಂಬರೀಷ್ (Sumalatha Ambareesh) ಅವರ ನಡೆಯೂ ಕುತೂಹಲ ಕೆರಳಿಸಿದೆ. ಅವರು ಈಗ ಮಂಡ್ಯದಿಂದಲೇ ಸ್ಪರ್ಧೆ ಮಾಡುವುದಾಗಿ ಪರೋಕ್ಷ ಸಂದೇಶವನ್ನು ರವಾನೆ ಮಾಡಿದ್ದಾರೆ. ಹಾಗಾಗಿ ಅವರು ಬಿಜೆಪಿಯಿಂದ ಟಿಕೆಟ್ ಸಿಗದೇ ಇದ್ದರೆ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತಾರಾ ಎಂಬ ಪ್ರಶ್ನೆ ಮೂಡಿದೆ.
ಲೋಕಸಭಾ ಚುನಾವಣೆ ಸಂಬಂಧ ಈಗಾಗಲೇ ಬಿಜೆಪಿ-ಜೆಡಿಎಸ್ ಮೈತ್ರಿ (BJP JDS Alliance) ಹೋರಾಟಕ್ಕೆ ಸಜ್ಜಾಗಿದ್ದರೆ, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ “ಗ್ಯಾರಂಟಿ ಯೋಜನೆ”ಗಳ (Congress Guarantee) ಮೂಲಕ ಕಣಕ್ಕಿಳಿಯಲು ರಣತಂತ್ರಗಳನ್ನು ರೂಪಿಸುತ್ತಿದೆ. ಇನ್ನು ಮಂಡ್ಯ ಲೋಕಸಭಾ ಕ್ಷೇತ್ರದ (Mandya Lok Sabha constituency) ಮೇಲೆ ಎಲ್ಲರ ಕಣ್ಣು ನೆಟ್ಟಿದ್ದು, ಇಲ್ಲಿ ಯಾವ ಪಕ್ಷದಿಂದ ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬ ಕುತೂಹಲ ಇದೆ. ಹಾಲಿ ಸಂಸದೆ ಸುಮಲತಾ ಅಂಬರೀಷ್ ಅವರು ಬಿಜೆಪಿಯಿಂದ ಇಲ್ಲಿಂದಲೇ ಸ್ಪರ್ಧೆಗಿಳಿಯಲು ಸಜ್ಜಾಗಿದ್ದಾರೆ. ಆದರೆ, ಈ ಕ್ಷೇತ್ರವನ್ನು ಜೆಡಿಎಸ್ ಕೇಳುತ್ತಿರುವುದರಿಂದ ಸುಮಲತಾ ಅವರ ನಡೆ ಏನೆಂಬುದು ಅಸ್ಪಷ್ಟವಾಗಿತ್ತು. ಆದರೆ, ಈಗ ಕಾರ್ಯಕ್ರಮವೊಂದರಲ್ಲಿ ನೀಡಿರುವ ಹೇಳಿಕೆಯು ಅವರು ಮಂಡ್ಯದಿಂದಲೇ ಸ್ಪರ್ಧೆ ಮಾಡುತ್ತಾರಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ನಟ ದರ್ಶನ್ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸುಮಲತಾ ಅಂಬರೀಷ್, ನಾನು ಈ ಮಣ್ಣಿನ ಋಣದಲ್ಲಿದ್ದೇನೆ. ಈ ಮಣ್ಣನ್ನು ನಾನು ಎಂದೂ ಬಿಡಲ್ಲ, ಮರೆಯಲ್ಲ. ನಿಮ್ಮ ಸುಮಲತಾ ಅಂಬರೀಷ್ ಎಂದೆಂದೂ ನಿಮ್ಮವಳೇ ಆಗಿದ್ದಾಳೆ. ಕಳೆದ ಚುನಾವಣೆಯಲ್ಲಿ ನಾನು ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದೆ. ಆಗ ನನ್ನ ಜತೆಗೆ ನಟರಾದ ದರ್ಶನ್ ಹಾಗೂ ಯಶ್ ನಿಂತರು. ಯಾರು ಏನೇ ಹೇಳಿದರೂ ಅವರು ಜಗ್ಗದೆ ನನ್ನ ಬೆನ್ನಿಗೆ ನಿಂತರು ಎಂದು ಹೇಳಿದ್ದಾರೆ.
ಇಂದು ಅಂಬರೀಷ್ ನಮ್ಮೆಲ್ಲರ ಜತೆಗೆ ಇಲ್ಲದಿದ್ದರೂ ದರ್ಶನ್ ನನೊಟ್ಟಿಗೆ ಇದ್ದಾರೆ. ಚುನಾವಣೆ ಸಂದರ್ಭದಲ್ಲಿ ಜತೆಯಾಗಿದ್ದರು. ಅಂದು ನನಗೆ ದರ್ಶನ್, ಯಶ್ ಧೈರ್ಯ ತುಂಬಿದರು. ನನಗಿಂತ ಹೆಚ್ಚು ಶ್ರಮ ಪಟ್ಟಿದ್ದರು. ಅಂಬರೀಷ್ ಅವರ ಜತೆ ಎಷ್ಟೋ ಜನ ಇದ್ದರು. ಆದರೆ, ಕೊನೆಗೆ ಅವರು ಯಾರೂ ಉಳಿದಿಲ್ಲ. ದರ್ಶನ್ ಅವರಲ್ಲಿ ಒಳ್ಳೆಯ ಗುಣ ಇದೆ. ಸಿನಿಮಾ, ರಾಜಕಾರಣದಲ್ಲಿ ಯಶಸ್ಸು, ಹೆಸರು ಬರುತ್ತದೆ. ಅದು ಮುಖ್ಯವಲ್ಲ. ನಾವು ಯಾವ ರೀತಿ ನಡೆದುಕೊಂಡಿರುತ್ತೇವೋ ಅದು ಮುಖ್ಯ. ಅಭಿಷೇಕ್ ಅವರನ್ನು ಚುನಾವಣೆಗೆ ಸ್ಪರ್ಧೆ ಮಾಡಿಸುತ್ತೀರಾ ಎಂದು ಕೇಳಲಾಗುತ್ತಿದೆ. ಸಚ್ಚಿದಾನಂದ ಅಥವಾ ಅಭಿ ಇಬ್ಬರಲ್ಲಿ ಯಾರಿಗೆ ಟಿಕೆಟ್ ಕೇಳುತ್ತೀರಿ ಎಂಬ ಪ್ರಶ್ನೆ ಬಂದರೆ, ನಾನು ಸಚ್ಚಿದಾನಂದ ಅವರಿಗೆ ಕೇಳುತ್ತೇನೆ. ಚುನಾವಣೆ ವೇಳೆ ನನ್ನ ಕೈ ಹಿಡಿದಿದ್ದು ಸಚ್ಚಿದಾನಂದ. ನಾನಂತೂ ಈ ಮಣ್ಣನ್ನು ಬಿಡುವುದಿಲ್ಲ. ಈ ಮಣ್ಣಿನ ಋಣ ನನ್ನ ಮೇಲಿದೆ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ.
ಬಿಜೆಪಿಯಿಂದಲೋ? ಪಕ್ಷೇತರವಾಗಿ ಸ್ಪರ್ಧೆಯೋ?
ಶತಾಯಗತಾಯ ಬಿಜೆಪಿಯಿಂದ ಮಂಡ್ಯ ಟಿಕೆಟ್ ಅನ್ನು ಪಡೆಯಬೇಕೆಂಬ ನಿಟ್ಟಿನಲ್ಲಿ ಅವಿರತ ಪ್ರಯತ್ನ ಪಡುತ್ತಿರುವ ಸಂಸದೆ ಸುಮಲತಾ ಅಂಬರೀಷ್ ಅವರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರನ್ನು ಈಗಾಗಲೇ ಭೇಟಿ ಮಾಡಿ ಬಂದಿದ್ದಾರೆ. ಈ ಮೂಲಕ ತಾವೂ ಸಹ ಪ್ರಬಲ ಆಕಾಂಕ್ಷಿ ಎಂಬುದನ್ನು ಹೇಳಿದ್ದರು. ಹೀಗಾಗಿ ಬಿಜೆಪಿಯಿಂದ ಟಿಕೆಟ್ ಸಿಕ್ಕರೆ ಒಳ್ಳೆಯದು, ಇಲ್ಲದಿದ್ದರೆ ಪಕ್ಷೇತರವಾಗಿ ಸ್ಪರ್ಧೆ ಮಾಡಿ ಠಕ್ಕರ್ ಕೊಡಲು ಮುಂದಾಗಿದ್ದಾರಾ ಎಂಬ ಚರ್ಚೆಗಳು ಆರಂಭವಾಗಿವೆ.
ಕಾಂಗ್ರೆಸ್‌ಗೆ ಹೋಗುತ್ತಾರಾ?
ಈಚೆಗೆ ಮಾಜಿ ಸಚಿವ, ಜೆಡಿಎಸ್ ನಾಯಕ ಜಿ.ಟಿ. ದೇವೇಗೌಡ, ರಾಜ್ಯಾದ್ಯಂತ 28 ಕ್ಷೇತ್ರಗಳಲ್ಲಿ ಗೆಲ್ಲಲು ಬಿಜೆಪಿ ಜತೆ ಸೇರಿ ಕಾರ್ಯತಂತ್ರ ಮಾಡುತ್ತಿದ್ದೇವೆ. ಎಚ್.ಡಿ. ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿ ಅವರಿಗೆ ಆರು ಕ್ಷೇತ್ರಗಳನ್ನು ಕೇಳುವಂತೆ ಹೇಳಿದ್ದೇವೆ. ಹಾಸನ, ತುಮಕೂರು, ಮಂಡ್ಯ, ಮೈಸೂರು, ಕೋಲಾರ, ಬೆಂಗಳೂರು ಉತ್ತರದಿಂದ ಜೆಡಿಎಸ್‌ಗೆ ಟಿಕೆಟ್ ಕೇಳಲು ಹೇಳಿದ್ದೇವೆ. ಸುಮಲತಾ ಅಂಬರೀಷ್ ಅವರು ಮಂಡ್ಯದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರೆ ಸ್ವಾಗತ ಮಾಡುತ್ತೇವೆ. ಆದರೆ, ಸುಮಲತಾ ಅವರು ಕಾಂಗ್ರೆಸ್‌ಗೆ ಹೋದರೆ ಅಚ್ಚರಿ ಪಡಬೇಕಿಲ್ಲ. ಮಾಜಿ ಸಚಿವ ನಾರಾಯಣಗೌಡ ಅವರ ಜತೆ ಸೇರಿ ಸುಮಲತಾ ಕಾಂಗ್ರೆಸ್‌ಗೆ ಹೋಗಬಹುದು ಎಂದು ಹೇಳಿದ್ದರು. ಆದರೆ, ಸುಮಲತಾ ಕಾಂಗ್ರೆಸ್ ಸೇರ್ಪಡೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ವಿರೋಧವೇ ಇದೆ ಎನ್ನಲಾಗಿದೆ.
ಇದನ್ನೂ ಓದಿ: Daali Dhananjay: ಮೈಸೂರು ಲೋಕಸಭೆಗೆ ಡಾಲಿ ಧನಂಜಯ್ ಕಾಂಗ್ರೆಸ್ ಅಭ್ಯರ್ಥಿ; ಚರ್ಚೆ ಬಗ್ಗೆ ಸಿಎಂ ಹೇಳಿದ್ದೇನು?
ಆದರೆ, ಈ ನಿಟ್ಟಿನಲ್ಲಿ ಸುಮಲತಾ ಅವರಿಗೆ ಪರ್ಯಾಯ ಅವಕಾಶಗಳನ್ನು ಕೊಡುವ ಬಗ್ಗೆ ಬಿಜೆಪಿಯಿಂದ ಚರ್ಚೆಗೆಳು ನಡೆಯುತ್ತಿವೆ. ಅದನ್ನು ಸುಮಲತಾ ಒಪ್ಪಿಕೊಳ್ಳದೇ ಇದ್ದರೆ ಪುನಃ ಪಕ್ಷೇತರವಾಗಿಯಾದರೂ ಸ್ಪರ್ಧೆ ಮಾಡುವ ಲೆಕ್ಕಾಚಾರಗಳನ್ನು ಹಾಕಿಕೊಂಡಿದ್ದಾರಾ ಎಂಬುದು ಸದ್ಯದ ಪ್ರಶ್ನೆಯಾಗಿದೆ.