ಬೆಂಗಳೂರು: ನಾನು ಮಂಡ್ಯ ಬಿಟ್ಟು ಎಲ್ಲಿಗೂ ಹೋಗೊಲ್ಲ (Will not leave Mandya). ಹಾಗಂತ ಸ್ವತಂತ್ರವಾಗಿ ಸ್ವರ್ಧೆ ಮಾಡುವ ಪ್ರಶ್ನೆಯೂ ಇಲ್ಲ (No Independent Contest). ಸೀಟು ಹಂಚಿಕೆ ಮಾತುಕತೆ ಇನ್ನೂ ಅಂತಿಮವಾಗಿಲ್ಲ. ಟಿಕೆಟ್ ಸಿಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ ಮಂಡ್ಯ ಲೋಕಸಭಾ ಕ್ಷೇತ್ರದ (Mandya Lokasabha Constituency) ಸ್ವತಂತ್ರ ಸಂಸದೆ ಸುಮಲತಾ ಅಂಬರೀಷ್ (Sumalatha Ambarish).
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ಮೈತ್ರಿ ಪಕ್ಷಗಳ ಒಡಂಬಡಿಕೆಯನ್ವಯ ಜೆಡಿಎಸ್‌ಗೆ ಬಿಟ್ಟು ಕೊಡಲಾಗುತ್ತದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಈ ಕ್ಷೇತದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕು ಎಂದು ಪ್ರಯತ್ನ ನಡೆಸುತ್ತಿರುವ ಸುಮಲತಾ ಅಂಬರೀಷ್ ಅವರ ನಿಲುವು ಏನಾಗಿರುತ್ತದೆ ಎಂಬ ಕುತೂಹಲ ಎಲ್ಲ ಕಡೆ ಇದೆ.
ಇದೇ ಪ್ರಮುಖ ವಿಚಾರವನ್ನು ಇಟ್ಟುಕೊಂಡು ಸುಮಲತಾ ಅಂಬರೀಷ್ ಅವರು ಭಾನುವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುಮಾರು 50 ಜನ ಆತ್ಮೀಯರ ಸಭೆಯನ್ನು ಕರೆದಿದ್ದರು. ಸುಮಲತಾ ಅವರ ಆಪ್ತ ಇಂಡವಾಳ ಸಚ್ಚಿದಾನಂದ, ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪ್ರಮುಖರು ಭಾಗಿಯಾಗಿದ್ದರು. ನಟ ದರ್ಶನ್ ಅವರು ಈ ಸಭೆಗೆ ಬೆಂಬಲ ನೀಡಿದ್ದರು. ಬಿಜೆಪಿಯ ಮಾಜಿ ಸಚಿವ ಕೆ.ಸಿ. ನಾರಾಯಣ ಗೌಡ ಅವರಿಗೂ ಸಭೆಗೆ ಆಹ್ವಾನವಿತ್ತು. ಆದರೆ, ಅವರು ಮುಂಬಯಿಯಲ್ಲಿ ಇರುವುದರಿಂದ ಭಾಗಿಯಾಗಿರಲಿಲ್ಲ. ಸುಮಾರು ಒಂದುವರೆ ಗಂಟೆಗಳ ಕಾಲ ನಡೆದ ಸಭೆಯ ಬಳಿಕ ಸುಮಲತಾ ಅಂಬರೀಷ್ ಅವರು ಸಭೆಯಲ್ಲಿ ಏನು ನಡೆಯಿತು ಎಂಬ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಮಂಡ್ಯ ಜಿಲ್ಲೆಯ ಬೆಂಬಲಿಗರ ಸಭೆ ಕರೆದಿದ್ದೆ. ಸಂಸದೆಯಾಗಿ ಐದು ವರ್ಷ ಕಳೆದಿರುವುದರಿಂದ ಮುಂದಿನ ಹೆಜ್ಜೆ ಏನು ಎಂಬ ಬಗ್ಗೆ, ನಾವು ಮಾಡಿರುವ ಕೆಲಸದ ಬಗ್ಗೆ ಅಭಿಪ್ರಾಯ ತಿಳಿಯಲು ಸಭೆ ಮಾಡಿದ್ದೆ.
ಮುಂದಿನ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಗೊಂದಲ ಇದೆ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ಆದರೆ, ಯಾವುದೇ ಗೊಂದಲ ಇಲ್ಲ. ದೃಢ ವಿಶ್ವಾಸ ಇದೆ ಎಂದು ಅವರು ಹೇಳಿದರು.
ನಟ ದರ್ಶನ್ ಈಗಲೂ ನನ್ನ ಜತೆಗಿರ್ತೇನೆ ಅಂದಿದ್ದಾರೆ
ನಟ ದರ್ಶನ್ ಅವರು ಐದು ವರ್ಷಗಳ ಹಿಂದೆ ನನ್ನ ಪರವಾಗಿ ಕೆಲಸ ಮಾಡಿದ್ದರು. ಈಗಲೂ ನಾನು ನಿಮ್ಮ ಜೊತೆ ಇರ್ತೀನಿ ಅಂತ ಹೇಳಿದ್ದಾರೆ ಎಂದು ಸುಮಲತಾ ಹೇಳಿದರು. ಆಪ್ತರಾದ ಸಚ್ಚಿದಾನಂದ ದೂರ ಸರಿದಿದ್ದಾರೆ ಎಂಬ ವಾದವನ್ನು ಅಲ್ಲಗ:ಳೆದರು. ಇದೆಲ್ಲ ವದಂತಿ ಎಂದರು.
ಮೈತ್ರಿಯಲ್ಲಿ ಹೊಂದಾಣಿಕೆ ಮುಖ್ಯ, ಆದರೆ
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಪಾಸಿಟಿವ್ ಇದೆ. ಮೊದಲು ಅಂಬರೀಶ್ ಅವರು ಒಂದು ಪಕ್ಷದಲ್ಲಿ ಗುರುತಿಸಿಕೊಂಡಿರಬಹುದು. ಆದರೆ, ಈಗ ಇಲ್ಲಿ ಬಿಜೆಪಿಗೆ ಎಲ್ಲರ ಸಪೋರ್ಟ್ ಇದೆ. ಈಗ ಮಂಡ್ಯ ಕ್ಷೇತ್ರದ ಟಿಕೆಟ್ ಕೊಡೋದು ಬಿಡೋದು ಒಮ್ಮೆಲೇ ಆಗಲ್ಲ. ಮಂಡ್ಯದಿಂದ ಹಿಂದೆ ಯಾರೂ ಬಿಜೆಪಿಯಿಂದ ಗೆದ್ದು ಹೋಗಿಲ್ಲ. ಹಾಗಾಗಿ ಬೆಂಬಲ ನೀಡಿದ್ದಾರೆ.. ಈಗ ಮೈತ್ರಿ ಇರುವಾಗ ಹೊಂದಾಣಿಕೆ ಮಾಡಿಕೊಂಡು ಹೋಗೋದು ಮುಖ್ಯ ಎಂದರು ಸುಮಲತಾ.
ಇದನ್ನೂ ಓದಿ : Mandya Elections : ಕಾಂಗ್ರೆಸ್ ಅಭ್ಯರ್ಥಿ ಪ್ರಚಾರವೇ ಶುರು, ಜೆಡಿಎಸ್‌ನಿಂದ ನಿಖಿಲ್?
ಮಂಡ್ಯ ಬಿಡಲ್ಲ, ಸ್ವತಂತ್ರ ಸ್ಪರ್ಧೆ ಇಲ್ಲ ಎಂದ ಸುಮಲತಾ
ನಮ್ಮ ಬೆಂಬಲಿಗರು ಮಂಡ್ಯ ಬಿಡಬಾರದು ಎಂದು ಹೇಳಿದ್ದಾರೆ. ಎಲ್ಲೇ ಇದ್ದರೂ ನಿಮ್ಮ ಪರವಾಗಿ ಇರ್ತೇವೆ ಎಂದು ಹೇಳಿದ್ದಾರೆ. ಈಗ ಇರುವ ಸನ್ನಿವೇಶದಲ್ಲಿ ಮಂಡ್ಯ ಕ್ಷೇತ್ರದಲ್ಲಿ ನನಗೇ ಟಿಕೆಟ್ ಕೊಡ್ತಾರೆ ಅಂತ ಭಾವಿಸಿದ್ದೇನೆ. ಮೋದಿ ಅವರು ಕೂಡಅ ನನ್ನ ಪರವಾಗಿ ಮಾತನಾಡಿದ್ದಾರೆ. ಹಾಗಾಗಿ ಬೇರೆ ಯಾರಿಗೋ ಟಿಕೆಟ್ ಕೊಡ್ತಾರೆ ಅಂತ ಭಾವಿಸೋಕಾಗಲ್ಲ ಎಂದು ಹೇಳಿದ ಸುಮಲತಾ ಅವರು, ಈ ಬಾರಿ ಸ್ವತಂತ್ರ ಸ್ಪರ್ಧೆ ಇಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರೇ ಮಂಡ್ಯದಿಂದ ಕಣಕ್ಕೆ ಇಳಿಯುತ್ತಾರೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ಅವರೆಲ್ಲೂ ಸ್ಪರ್ಧೆ ಮಾಡ್ತೀನಿ ಅಂತ ಹೇಳಿಲ್ಲ. ಸೀಟು ಹಂಚಿಕೆಯ ಮಾತುಕತೆ ನಡೆಯುತ್ತಿದೆ ಅಷ್ಟೆ. ಏನಾಗಲಿದೆ ಎಂದು ನೋಡೋಣ ಎಂದರು. ಸೀಟು ಹಂಚಿಕೆ ಪಾಸಿಟಿವ್ ಆಗಿ ಇರಲಿದೆ ಅಂತ ಭಾವಿಸಿದ್ದೇನೆ ಎಂದರು.
ಈ ಸಭೆಯೂ ಹೈಕಮಾಂಡ್ ಗಮನಕ್ಕೆ ಹೋಗೇ ಹೋಗುತ್ತದೆ
ನಾನು ಇಂದಿನ ಸಭೆಯನ್ನು ಕದ್ದು ಮುಚ್ಚಿ ಮಾಡಿಲ್ಲ. ಎಲ್ಲರ ಮುಂದೆ ನಡೆದಿರುವ ಸಭೆ. ಈ ಸಭೆ ನಡೆದಿದ್ದು ಹೈಕಮಾಂಡ್ ಗಮನಕ್ಕೆ ಬಂದೇ ಬರಲಿದೆ. ಮಾಧ್ಯಮದ ಮುಲಕ ಅಥವಾ ನನ್ನ ಮೂಲಕ ಮಾಹಿತಿ ಸಿಗಲಿದೆ ಎಂದು ಹೇಳಿದ ಸುಮಲತಾ, ಈ ಸಭೆ ಹೈಕಮಾಂಡ್ ಗೆ ತಿಳಿಯಬೇಕು ಎಂಬ ಅಭಿಪ್ರಾಯವನ್ನೇ ಪ್ರಕಟಿಸಿದರು.
ಒಂದು ವೇಳೆ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾದರೆ ನಿಮ್ಮ ನಡೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಸುಮಲತಾ ಅವರು, ನನಗೆ ಅದರ ಬಗ್ಗೆ ಗೊತ್ತಿಲ್ಲ. ನಾನು ಪಕ್ಷ ಅಲ್ಲ. ಅವರಿಗೆ ಕೇವಲ ಮಂಡ್ಯ ಅಲ್ಲ. ಬೇರೆ ಕ್ಷೇತ್ರಗಳೂ ಇಲ್ಲ. ಅವರು ಯಾವ ರೀತಿ ಅಲಯನ್ಸ್ ಮಾಡಿಕೊಳ್ತಾರೋ ಗೊತ್ತಿಲ್ಲ. ಅವರ ನಿರ್ಧಾರ ಏನಾಗಲಿದೆ ಎಂದು ನೋಡಬೇಕು ಎಂದು ಸುಮಲತಾ ಹೇಳಿದರು.
ʻʻಈಗಾಗಲೇ ಬಿಜೆಪಿ-ಜೆಡಿಎಸ್ ಮೈತ್ರಿ ಕೂಡ ಫಿಕ್ಸ್ ಇದೆ. 400+ ಸೀಟು ಗೆಲ್ಲುವ ಟಾರ್ಗೆಟ್ ಇದೆ. ಗೆಲ್ಲಬೇಕು ಅಂದಾಗ ಎಲ್ಲರ ನಿರ್ಧಾರ ಮುಖ್ಯ. ಈ ವಿಚಾರದಲ್ಲಿ ಫೈನಲ್ ಆಗಿಲ್ಲ ಎಂದೇ ಎಲ್ಲರೂ ಹೇಳಿದ್ದಾರೆ. ಪ್ರಾಥಮಿಕ ಹಂತದ ಚರ್ಚೆ ಮಾತ್ರ ಆಗಿದೆ. ಯಾವ ಪಕ್ಷದ ಅಭ್ಯರ್ಥಿ ಅನ್ನೋದು ನಿರ್ಧಾರ ಆಗಿಲ್ಲʼʼ ಎಂದರು ಸುಮಲತಾ.
ರಾಜ್ಯಸಭೆಗೆ ಹೋಗಲ್ಲ, ಮಂಡ್ಯವನ್ನೂ ಬಿಡಲ್ಲ
ನನ್ನ ಚುನಾವಣಾ ತಯಾರಿಯ ಭಾಗವಾಗಿ ಈ ಸಭೆ ನಡೆದಿದೆ. ನಾನು ರಾಜಕೀಯಕ್ಕೆ ಬಂದಿರೋದು ಮಂಡ್ಯ ಜನತೆ ವಿಶ್ವಾಸ ಕಳೆದುಕೊಳ್ಳಲು ಅಲ್ಲ. ನಾನು ಬೆಂಗಳೂರು ಉತ್ತರದಲ್ಲಿ ಸ್ಪರ್ಧೆ ಮಾಡಬೇಕು ಅಂದರೆ ನನಗೆ ತುಂಬ ಯೋಜನೆ ಮಾಡಬೇಕಾಗಿಲ್ಲ. ನಿರ್ಧಾರ ಮಾಡಲು ಒಂದು ಕ್ಷಣ ಸಾಕು. ಆದರೆ ಮಂಡ್ಯ ಬಿಟ್ಟು ಬರಲು ನನಗೆ ಇಷ್ಟ ಇಲ್ಲ.ʼʼ ಎಂದು ಖಡಕ್ಕಾಗಿ ಹೇಳಿದರು ಸುಮಲತಾ ಅಂಬರೀಷ್. ರಾಜ್ಯಸಭೆಗೆ ಹೋಗುವ ಪ್ರಶ್ನೆಯೂ ಇಲ್ಲ ಎಂದರು ಸುಮಲತಾ.